ಯಾದಗಿರಿ | ಅನೈತಿಕ ಸಂಬಂಧ ಆರೋಪ ; ಮಹಿಳೆಯ ತಲೆಬೋಳಿಸಿ, ಖಾರದ ಪುಡಿ ಎರಚಿ ದೌರ್ಜನ್ಯ
11 ಮಂದಿ ವಿರುದ್ಧ ಪ್ರಕರಣ ದಾಖಲು, ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
ಯಾದಗಿರಿ : ಅನೈತಿಕ ಸಂಬಂಧದ ಆರೋಪದಲ್ಲಿ ಮಹಿಳೆಯೊರ್ವರ ತಲೆಬೋಳಿಸಿ, ಸುಣ್ಣ ಹಚ್ಚಿ, ಖಾರದ ಪುಡಿ ಎರಚಿ ದೌರ್ಜನ್ಯ ಎಸಗಿರುವ ಘಟನೆ ಅ.16 ರಂದು ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ತಾಂಡಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯು ಆರೋಗ್ಯ ಸಮಸ್ಯೆಯಿಂದಾಗಿ ಕಲಬುರಗಿಯಲ್ಲಿರುವ ಚಿಕ್ಕಮ್ಮನ ಮನೆಗೆ ಆಗಾಗ ತೆರಳುತ್ತಿದ್ದಳು. ಈ ವೇಳೆ ಅಳಿಯ ಅನೀಲ್ ರಾಠೋಡ್ ಕೆಲವೊಮ್ಮೆ ಆವರನ್ನು ಕರೆದುಕೊಂಡು ಹೋಗುತ್ತಿದ್ದರು. ಇದೇ ವಿಷಯವನ್ನು ನೆಪ ಮಾಡಿಕೊಂಡು ಅನೈತಿಕ ಸಂಬಂಧದ ಆರೋಪ ಮಾಡಿ ಸುಮಾರು 11 ಮಂದಿ ಸೇರಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.
ಆರೋಪಿಗಳು ಮಹಿಳೆಯನ್ನು ನೆಲಕ್ಕೊಡ್ಡಿ ಕತ್ತರಿಯಿಂದ ಕೂದಲು ಕತ್ತರಿಸಿ, ತಲೆಗೆ ಸುಣ್ಣ ಹಚ್ಚಿ, ಖಾರದ ಪುಡಿ ಎರಚಿ, ಮಹಿಳೆಗೆ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಸ್ತೂರಿಭಾಯಿ ಮತ್ತು ಡಾಕಪ್ಪ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಉಳಿದ ಆರೋಪಿಗಳಾದ ವಿಜಯಕುಮಾರ್, ತಿಪ್ಪಣ್ಣ, ರಮೇಶ, ದೇವಿಭಾಯಿ, ತಿಪ್ಪಿಭಾಯಿ, ರೂಪ್ಲಿಭಾಯಿ, ಅನುಸೂಯಾ, ಚಾವಳಿಭಾಯಿ ಹಾಗೂ ತಿಪ್ಪಣ್ಣ ನಾಯ್ಕ್ ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.