ಯಾದಗಿರಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತು ಜಾಗೃತಿ ಸಭೆ
ಯಾದಗಿರಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ/ಶೈಕ್ಷಣಿಕ ಸಮೀಕ್ಷೆ ಸೆ.22ರಿಂದ ಅ.7ರವರೆಗೆ ನಡೆಯಲಿದ್ದು, ಈ ಸಮೀಕ್ಷೆಯ ಕುರಿತು ಮುಸ್ಲಿಂ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸಚಿವ ಝಮೀರ್ ಅಹ್ಮದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಧರ್ಮಗುರುಗಳು, ಸಮುದಾಯ ಮುಖಂಡರು ಹಾಗೂ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸ್ಸಾರ್ ಅಹ್ಮದ್ ಭಾಗವಹಿಸಿದ್ದರು.
ಈ ಹಿನ್ನೆಲೆಯಲ್ಲಿ, ಯಾದಗಿರಿಯ ತಂಜಿಮುಲ್ ಮುಸ್ಲಿಮೀನ್ ಮತ್ತು ಬೈತುಲ್ ಮಾಲ್ ಯಾದಗಿರಿ ವತಿಯಿಂದ ನಗರದ ಬೈತುಲ್ ಮಾಲ್ ಫಂಕ್ಷನ್ ಹಾಲ್‌ನಲ್ಲಿ ಧಾರ್ಮಿಕ ಮುಖಂಡರು ಹಾಗೂ ಗಣ್ಯರ ಸಭೆ ಆಯೋಜಿಸಲಾಯಿತು.
ಸಭೆಯಲ್ಲಿ ಪ್ರಶ್ನಾವಳಿ (1ರಿಂದ 60ರವರೆಗೆ) ಕುರಿತು ಪ್ರೊಜೆಕ್ಟರ್ ಮುಖಾಂತರ ವಿವರ ನೀಡಲಾಯಿತು. ಮುಸ್ಲಿಂ ಸಮುದಾಯದ ಜನತೆಗೆ ಸಮೀಕ್ಷೆಯ ಮಹತ್ವ ತಿಳಿಸಲು ಮಸೀದಿಗಳಲ್ಲಿ ಶುಕ್ರವಾರ ನಮಾಜಿನ ನಂತರ ಮಾಹಿತಿ ಹಂಚಿಕೊಳ್ಳಲು ನಿರ್ಧರಿಸಲಾಯಿತು.
ಅದೇ ರೀತಿ, ನಗರದ ವಿದ್ಯಾವಂತ ಯುವಕರು ಹಾಗೂ ಗ್ರಾಮಾಂತರ ಯುವಕರ ತಂಡ ರಚಿಸಿ, ಸಮೀಕ್ಷೆಯ ವೇಳೆಯಲ್ಲಿ ಜನತೆಗೆ ನೆರವಾಗಲು ಸೂಚಿಸಲಾಯಿತು.
ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ತಂಜಿಮುಲ್ ಮುಸ್ಲಿಮೀನ್ ಉಪಾಧ್ಯಕ್ಷ ವಹೀದ್ ಮಿಯಾ, ಬೈತುಲ್ ಮಾಲ್ ಯಾದಗಿರಿ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.