×
Ad

ಯಾದಗಿರಿ | ರಸ್ತೆ ದುಸ್ಥಿತಿ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

Update: 2025-09-24 18:13 IST

ಯಾದಗಿರಿ :ರಾಜ್ಯದಲ್ಲಿ ಅತಿ ಭ್ರಷ್ಟ ಶಾಸಕ-ಸಚಿವರು ಯಾದಗಿರಿ ಜಿಲ್ಲೆಯಿಂದಲೇ ಸಿಗುತ್ತಾರೆ. ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸಿದರೂ ದುಸ್ಥಿತಿ ಕಾಣದಷ್ಟು ಕುರುಡುತನ ಅವರಿಗೆ ಬಂದಿದೆ. ಈ ಸರ್ಕಾರದಲ್ಲಿ ಎಲ್ಲರೂ ಗಂಟುಗಳ್ಳರೇ ಆಗಿದ್ದಾರೆ. ಈ ರಸ್ತೆ ಕೇವಲ ಶಹಾಪುರ-ಯಾದಗಿರಿಗೆ ಸೀಮಿತವಲ್ಲ, ಕೊಡಂಗಲ್–ಸಿಂದಗಿ ಸಂಪರ್ಕಿಸುವ ರಾಜ್ಯ ಹೆದ್ದಾರಿ. ಅಭಿವೃದ್ದಿ ಪದದ ಅರ್ಥವೇ ಇವರಿಗೆ ಗೊತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅವರು ಟೀಕಿಸಿದರು.

ಬುಧವಾರ ಬೆಳಗ್ಗೆ ದೋರನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ರಸ್ತೆ ದುಸ್ಥಿತಿ ಖಂಡಿಸಿ ಪ್ರತಿಭಟನೆ ನಡೆಯಿತು. ಈ ವೇಳೆ ಅವರು ಮಾತನಾಡಿದರು.

ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ ಅವರು, ಪಂಚ ಗ್ಯಾರಂಟಿ ನೆಪದಲ್ಲಿ ರಾಜ್ಯದ ಅಭಿವೃದ್ಧಿ ಮರೆತು ಸರ್ಕಾರ ಜನರ ಜೀವ ಹಿಂಡುತ್ತಿದೆ . ಉಚಿತ ಬಸ್‌ ಪ್ರಯಾಣ ಕೊಟ್ಟು, ರಸ್ತೆಗಳನ್ನು ದುಸ್ಥಿತಿಯಲ್ಲೇ ಬಿಟ್ಟು ಬಸ್ ಬಾರದಂತೆ ಮಾಡಿದೆ. ಇದು ಒಣ ಜಂಭ ಪ್ರದರ್ಶನವಷ್ಟೇ ಎಂದು ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಎಂದು ಘೋಷಿಸಿ, ಎಕರೆಗೆ 50,000 ರೂ. ಪರಿಹಾರ ನೀಡಬೇಕು. 2023-24ನೇ ಸಾಲಿನ 291 ಕೋಟಿ ರೂ. ಹಾಗೂ 2024-25ನೇ ಸಾಲಿನ 326 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕು. ವಿಮೆ ಇಲ್ಲದ ರೈತರನ್ನು ವಿಮಾ ವ್ಯಾಪ್ತಿಗೆ ತಂದು, ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಮೀನರಡ್ಡಿ ಯಾಳಗಿ ಅವರು ಮಾತನಾಡಿದರು.

ನಂತರ ಡಿಟಿ ಸಂಗಮೇಶ ನಾಯಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಪ್ರಭುರಾಯ ಮಲಗೊಂಡ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ, ಶಿವಕುಮಾರ ಕೊಂಕಲ್, ಶರಣಗೌಡ ಹಬ್ಬಳ್ಳಿ, ಗೋವಿಂದಪ್ಪ ಕೊಂಚೆಟ್ಟಿ, ನಿಂಗಣ್ಣಗೌಡ ಪಾಟೀಲ್, ಕಲ್ಲಪ್ಪ ಖಾನಾಪುರ, ಶಿವಾನಂದ ಗೋಲಗೇರಿ, ಖಾದರ್ ಜಮಾದಾರ, ಬಸವರಾಜ ಅನವಾರ, ಗುರುನಾಥ ಕಶೇಟ್ಟಿ, ಬಸವರಾಜ ಹುಡೇದ್, ಸಾಯಬಣ್ಣ ಹಲಗಿ, ಮಂಜುನಾಥ ಕಂಚಗಾರ, ವೆಂಕಟೇಶ ಕಶೇಟ್ಟಿ, ವಿರೇಶ ಕಂಬಾರ, ರವಿ ಪಾಲ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News