ಯಾದಗಿರಿ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಯಾದಗಿರಿ : ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆದ ಘಟನೆ ಖಂಡಿಸಿ ಯಾದಗಿರಿ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನಾಕಾರರು ಈ ಕೃತ್ಯವನ್ನು ದೇಶದ್ರೋಹಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಖಂಡಿಸಿದರು.
ಪ್ರತಿಭಟನಾಕಾರರು ರಾಜ್ಯ ಮತ್ತು ಜಿಲ್ಲಾಅಧಿಕಾರಿಗಳ ಮೂಲಕ ಗೌರವಾನ್ವಿತ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, “ಈ ಕೃತ್ಯವು ಭಾರತ ಸಂವಿಧಾನ, ಭಾರತ ಮಾತೆ ಮತ್ತು 146 ಕೋಟಿ ಭಾರತೀಯರ ಗೌರವಕ್ಕೆ ತೀವ್ರ ಧಕ್ಕೆ ತಂದಿದೆ. ನ್ಯಾಯಾಂಗದ ಮಾನವನ್ನು ಕುಂದಿಸುವ ಈ ಕೃತ್ಯ ದೇಶದ ಪ್ರಜಾಪ್ರಭುತ್ವದ ಮೇಲೆ ನಡೆದ ನೇರ ದಾಳಿ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಪತ್ರದಲ್ಲಿ ರಾಕೇಶ್ ಕಿಶೋರ್ ಹಾಗೂ ಈ ಘಟನೆಯ ಹಿಂದೆ ಇರುವ ಕಾಣದ ಕೈಗಳ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಈ ದೇಶದಲ್ಲಿ ಕೆಲ ಕೋಮವಾದಿಗಳು ನಡೆಸುತ್ತಿರುವ ಹೀನಾಯ ಕೃತ್ಯಗಳು ಹೃದಯ ತಗ್ಗಿಸುವಂತಿವೆ. ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸುವಂತಹ ಕೃತ್ಯವು ಕೇವಲ ವ್ಯಕ್ತಿಯ ಅಜ್ಞಾನವನ್ನು ಮಾತ್ರ ತೋರಿಸುವುದಿಲ್ಲ, ಇದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೆ ಅಪಮಾನವಾಗಿದೆ. ನ್ಯಾಯಮೂರ್ತಿಗಳು, ದೇಶದ ನ್ಯಾಯವ್ಯವಸ್ಥೆಯ ಅಸ್ತಂಭಗಳು, ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತಿರುವವರಾಗಿದ್ದಾರೆ. ಅವರ ಮೇಲಿನ ಇಂತಹ ಹೀನಾಯ ಕೃತ್ಯವು ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುತ್ತದೆ ಮತ್ತು ದೇಶದ ಶಾಂತಿಯ ಮೇಲೂ ಪ್ರತ್ಯೇಕ ಧಕ್ಕೆ ಕೊಡುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು, ಆದರೆ ಕಾನೂನಿನ ವ್ಯಾಪ್ತಿಯೊಳಗೆ, ಮಾನವೀಯ ಗೌರವ ಮತ್ತು ಸಂವಿಧಾನದ ಮೌಲ್ಯಗಳಿಗೆ ಸಮ್ಮುಖವಾಗಿ ಇರಬೇಕು. ನಾವು ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಅಗತ್ಯವೆಂದು ಬಲವಾಗಿ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ಮರೆಪ್ಪ ಚಟ್ಟೇರಕರ್, ಮಾನಪ್ಪ ಕಟ್ಟಿಮನಿ, ಗೋಪಾಲ ತೆಳಗೇರಿ, ಬಸವರಾಜ ಗುಡಿಮನಿ, ಡಾ. ಭಗವಂತ ಅನ್ವಾರ, ನಿಂಗಪ್ಪ ಕೊಲ್ಲೂರಕರ್, ಭೀಮರಾಯ ಹೊಸ್ಮನಿ, ಸೈದಪ್ಪ ಕೂಲೂರ್, ಲಾಲಪ್ಪ ತಲಾರಿ, ಹೊನ್ನಪ್ಪ ನಾಟೇಕಾರ್, ಶ್ರೀಕಾಂತ್ ತಲಾರಿ, ಹಣಮಂತ ಮೀಲ್ರ್ಟಿ, ನಿಂಗಣ್ಣ ತಿಪ್ಪನಳ್ಳಿ, ಶಿವಕುಮಾರ ಬಂದಳ್ಳಿ, ಗೌತಮ ಕ್ರಾಂತಿ, ಬಸ್ಸು ಬೋಳಾರಿ, ಸೇರಿದಂತೆ ದಲಿತ ಸಂಘರ್ಷ ಸಮಿತಿ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಮತ್ತು ಅನೇಕ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.