×
Ad

ಯಾದಗಿರಿ | ಪ್ರಿಯಾಂಕ್ ಖರ್ಗೆ ಪರ, ರಮೇಶ್ ಕತ್ತಿ ವಿರುದ್ಧ ದಲಿತ, ವಾಲ್ಮೀಕಿ ಸಮುದಾಯಗಳಿಂದ ಪ್ರತಿಭಟನೆ

Update: 2025-10-23 19:23 IST

ಯಾದಗಿರಿ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಹಾಗೂ ಅವರ ಕುಟುಂಬದ ವಿರುದ್ಧ ಅವಾಚ್ಯ ನಿಂದನೆ ನಡೆದಿರುವುದನ್ನು ಖಂಡಿಸಿ, ಜೊತೆಗೆ ವಾಲ್ಮೀಕಿ ಸಮಾಜವನ್ನು ಅವಮಾನಿಸಿದ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಹಾಗೂ ವಾಲ್ಮೀಕಿ ನಾಯಕ ಸಂಘದ ನೇತೃತ್ವದಲ್ಲಿ ಗುರುವಾರ ನಗರದ ಬೀದಿಗಳಲ್ಲಿ ಭಾರೀ ಪ್ರತಿಭಟನೆ ನಡೆಯಿತು.

ನೇತಾಜಿ ಸರ್ಕಲ್‌ನಿಂದ ಪ್ರಾರಂಭವಾದ ಪ್ರತಿಭಟನೆ ಡಿಸಿ ಕಚೇರಿವರೆಗೆ ಮೆರವಣಿಗೆ ರೂಪದಲ್ಲಿ ಸಾಗಿತು. ಪ್ರತಿಭಟನಾಕಾರರು “ಪ್ರಿಯಾಂಕ್ ಖರ್ಗೆ ಪರ ನಾವಿದ್ದೇವೆ”, “ರಮೇಶ್ ಕತ್ತಿ ತಕ್ಷಣ ಗಡಿಪಾರು ಮಾಡಲಿ” ಎಂಬ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರು ಸಚಿವರಿಗೆ ಬರುತ್ತಿರುವ ಜೀವ ಬೆದರಿಕೆ ಕರೆ ಹಾಗೂ ಕುಟುಂಬದ ವಿರುದ್ಧ ನಡೆಯುತ್ತಿರುವ ನಿಂದನೆ ಘಟನೆಗಳನ್ನು ತೀವ್ರವಾಗಿ ಖಂಡಿಸಿ, ಸರ್ಕಾರವು ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೈಸೂರಿನ ಜ್ಞಾನ ಪ್ರಕಾಶ ಸ್ವಾಮಿಗಳು ಈ ಜಂಟಿ ಹೋರಾಟಕ್ಕೆ ಪ್ರೇರಣೆ ನೀಡಿದ್ದು, ಸಭೆಯಲ್ಲಿ ಪ್ರತಿಭಟನಾಕಾರರಿಗೆ ಉತ್ಸಾಹ ತುಂಬಿದರು. ಕೈಯಲ್ಲಿ ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಹಿಡಿದು ನೂರಾರು ಜನರು ಬೀದಿಗಿಳಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಡಿಸಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿ, ಸಚಿವರ ಕುಟುಂಬಕ್ಕೆ ನಿಂದನೆ ಮಾಡಿದವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ವಾಲ್ಮೀಕಿ ಸಮಾಜವನ್ನು ಅವಮಾನಿಸಿದ ರಮೇಶ್ ಕತ್ತಿಯನ್ನು ತಕ್ಷಣ ಗಡಿಪಾರು ಮಾಡಬೇಕು. ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಹೋರಾಟಕ್ಕೂ ಸಿದ್ಧರಾಗುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಯಾದಗಿರಿ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪೂರ, ಕಾಂಗ್ರೆಸ್ ಮುಖಂಡರು ಭೀಮಣ್ಣ ಮೇಟಿ, ದಲಿತ ಮುಖಂಡರು ಮರೆಪ್ಪ ಚಟ್ಟೇರಕರ್, ಹನುಮೇಗೌಡ ಬೀರನಕಲ್, ಮರೆಪ್ಪ ಮಗದಂಪೂರ್, ರಾಘವೇಂದ್ರ ಮಾನಸಗಲ್, ಸುದರ್ಶನ ನಾಯಕ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಬಸ್ಸುಗೌಡ ಬಿಳ್ಹಾರ್, ಶ್ಯಾಮಸನ್ ಮಾಳಿಕೇರಿ, ಹಣಮೇಗೌಡ ಮರಕಲ್, ನೀಲಕಂಠ ಬಡಿಗೇರ, ಮಾನಪ್ಪ ಕಟ್ಟಿಮನಿ, ಡಾ.ಭಗವಂತ ಅನ್ವಾರ್, ಗೋಪಾಲ ತೆಳಗೇರಿ, ಭೀಮರಾಯ ಹೊಸ್ಮನಿ, ಲಕ್ಷ್ಮಣ ರಾಠೋಡ್, ಪರಶುರಾಮ ಒಡೆಯರ್, ಸಾಹೇಬಗೌಡ ನಾಯಕ, ಸಾಬಣ್ಣ ಬಗ್ಲಿ, ರೋಹಿತ್ ಹುಲಿನಾಯಕ, ಭೀಮರಾಯ ಠಾಣಗುಂದಿ, ಸೈದಪ್ಪ ಕೂಲೂರ, ರಾಯಪ್ಪ ಸಾಲಿಮನಿ, ಸಂತೋಷ ನಿರ್ಮಲಕರ್, ರಾಹುಲ್ ಹತ್ತಿಕುಣಿ, ಮಹಾದೇವ ದಿಗ್ಗಿ, ಪ್ರಭು ಬುಕ್ಕಲ್, ಮಲ್ಲಿಕಾರ್ಜುನ ಹತ್ತಿಕುಣಿ, ಸಂಪತ್ತಕುಮಾರ ಚಿನ್ನಾಕರ್, ವಸಂತಕುಮಾರ ಸುಂಗಲಕರ್, ಬಸವರಾಜ ಬೋಳ್ಹಾರಿ, ಮರಲಿಂಗ ಕುರಕುಂಬಳಕರ್, ಭೀಮರಾಯ (ಡ್ಯಾನಿ) ಸುಂಗಲಕರ್ ಸೇರಿದಂತೆ ನೂರಾರು ದಲಿತ ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News