×
Ad

ಯಾದಗಿರಿ | ಗುರಮಠಕಲ್‌ನಲ್ಲಿ ಆರೆಸ್ಸೆಸ್‌ ಪಥ ಸಂಚಲನಕ್ಕೆ ಜಿಲ್ಲಾಡಳಿತದಿಂದ ಅನುಮತಿ ನಿರಾಕರಣೆ

Update: 2025-10-25 10:32 IST

ಯಾದಗಿರಿ: ಚಿತ್ತಾಪುರದ ನಂತರ ಇದೀಗ ಗುರಮಠಕಲ್ ಪಟ್ಟಣದಲ್ಲಿಯೂ ಆರೆಸ್ಸೆಸ್‌ ಪಥ ಸಂಚಲನಕ್ಕೆ ಜಿಲ್ಲಾಡಳಿತದಿಂದ ಅನುಮತಿ ನಿರಾಕರಿಸಲಾಗಿದೆ.

ಇಂದು (ಅ.25) ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲು ಯೋಜಿಸಲಾಗಿದ್ದರೂ, ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಅನುಮತಿ ನಿರಾಕರಿಸಿದ್ದಾರೆ.

ಡಿಸಿ ಹರ್ಷಲ್ ಬೋಯರ್ ನೀಡಿದ ಮಾಹಿತಿಯ ಪ್ರಕಾರ, ಸರ್ಕಾರದ ನಡಾವಳಿಯ ಪ್ರಕಾರ ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಕನಿಷ್ಠ ಮೂರು ದಿನಗಳ ಮುಂಚಿತವಾಗಿ ಲಿಖಿತ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ, ಆರೆಸ್ಸೆಸ್‌ ಈ ನಿಯಮ ಪಾಲಿಸದ ಕಾರಣ ಅನುಮತಿ ನೀಡಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಆರೆಸ್ಸೆಸ್‌ ಯಾದಗಿರಿ ಜಿಲ್ಲಾ ಪ್ರಚಾರ ಪ್ರಮುಖ ಬಸಪ್ಪ ಸಂಜನೋಳ್ ಅವರು ಅ.21ರಂದು ಗುರಮಠಕಲ್ ತಹಶೀಲ್ದಾರ್ ಶಾಂತಗೌಡ ಬಿರಾದಾರ್ ಅವರಿಗೆ ಪಥ ಸಂಚಲನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ಅವರು ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆಯುವಂತೆ ಸೂಚಿಸಿದ್ದರು.

ನಂತರ ಅ.23ರಂದು ಜಿಲ್ಲಾಡಳಿತಕ್ಕೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೂ, ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸದ ಕಾರಣ ಅನುಮತಿ ನಿರಾಕರಿಸಲಾಗಿದೆ.

ಜಿಲ್ಲಾಡಳಿತದ ನಿಲುವಿನ ಪ್ರಕಾರ, ಸಾರ್ವಜನಿಕ ಆಸ್ತಿಗಳು ಮತ್ತು ಸರ್ಕಾರದ ಆವರಣಗಳನ್ನು ಬಳಸಲು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವಿದೆ. ಈ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪಥ ಸಂಚಲನಕ್ಕೆ ಅನುಮತಿ ನೀಡಲಾಗಿಲ್ಲ. ಹೀಗಾಗಿ, ಚಿತ್ತಾಪುರದ ಬಳಿಕ ಗುರಮಠಕಲ್‌ನಲ್ಲೂ ಆರೆಸ್ಸೆಸ್‌ ಪಥ ಸಂಚಲನ ಸ್ಥಗಿತಗೊಂಡಿದೆ.

ಸರ್ಕಾರದ ನಡಾವಳಿ ಪ್ರಕಾರ ಮೂರು ದಿನ ಮೊದಲು ಅರ್ಜಿ ಸಲ್ಲಿಸದೇ ಇರುವ ಕಾರಣ ಅನುಮತಿ ನೀಡಲು ಸಾಧ್ಯವಾಗಲಿಲ್ಲ ಎಂದು ಡಿಸಿ ಹರ್ಷಲ್ ಬೋಯರ್ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News