ಯಾದಗಿರಿ | ಜಾತಿ ಸರ್ವೆಯಲ್ಲಿ ಕಾಲಂ 9ರಲ್ಲಿ ಬೇಡರ ಎಂದು ನಮೂದಿಸಿ : ಆಲ್ದಾಳ ಮನವಿ
ಯಾದಗಿರಿ: ವೇದಕಾಲದಿಂದಲೂ ನಮ್ಮ ಜನಾಂಗವನ್ನು ‘ವ್ಯಾಧ’ (ಸಂಸ್ಕೃತ ಪದ), ‘ಬೇಡ’ ಅಥವಾ ‘ಬೇಡರ’ (ಕನ್ನಡ ಪದ) ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ರಾಜ್ಯಾದ್ಯಂತ ನಡೆಯುತ್ತಿರುವ ಜಾತಿ ಸರ್ವೆಯಲ್ಲಿ, ಕಾಲಂ 9ರಲ್ಲಿ ‘ಬೇಡರ’ ಎಂದು ದಾಖಲಿಸಬೇಕು ಎಂದು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ ಸಮಾಜದ ಭಾಂದವರಿಗೆ ಮನವಿ ಮಾಡಿದರು.
ಪತ್ರಿಕಾ ಹೇಳಿಕೆ ನೀಡಿದ ಅವರು, ಪ್ರತಿ ಪ್ರದೇಶದಲ್ಲಿ ಪ್ರಚಲಿತವಾಗಿರುವ ಪರ್ಯಾಯ ಪದಗಳನ್ನು ಕಾಲಂ 11ರಲ್ಲಿ ‘ಬೇಡ’, ‘ವಾಲ್ಮೀಕಿ’, ‘ನಾಯಕ’ ಎಂದು ದಾಖಲಿಸಬೇಕು. ಮೂಲ ಉದ್ಯೋಗವನ್ನು ‘ಬೇಟೆಯಾಡುವುದು’ ಎಂದು, ಹಾಲಿ ಉದ್ಯೋಗವನ್ನು ‘ಕೂಲಿ’, ‘ಕೃಷಿಕೂಲಿ’, ‘ಸಣ್ಣ ರೈತ’, ‘ನೌಕರಿ’ ಎಂದು ನಮೂದಿಸಬೇಕು. ಇದರಿಂದ ರಾಜ್ಯದಲ್ಲಿನ ನಮ್ಮ ನಿಖರ ಜನಸಂಖ್ಯೆ ಹೊರಬರುವುದಲ್ಲದೇ, ಶಾಲಾ ದಾಖಲೆಯಂತೆ ಜಾತಿ ಪ್ರಮಾಣಪತ್ರ ಸಿಗಲು ಸಹಕಾರಿ ಆಗುತ್ತದೆ. ನಕಲಿ ದಾಖಲೆಗಳನ್ನು ತಡೆಯಲು ಸಹ ಇದು ನೆರವಾಗುತ್ತದೆ. ಈ ವಿಷಯವನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷರಾದ ಮಾರೆಪ್ಪ ನಾಯಕ (ಮಗದಂಪುರ್) ಅವರು, ಉತ್ತರ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ಜನರು ಕಾಲಂ 9ರಲ್ಲಿ ‘ಬೇಡರ’ ಎಂದು ಬರೆಸಬೇಕು ಎಂದು ಹೇಳಿದರು.
ಸಮಾಜದ ಮುಖಂಡರಾದ ಶ್ರವಣಕುಮಾರ ನಾಯಕ ಇಜೇರಿ (ರಾಜ್ಯ ಪ್ರಧಾನ ಕಾರ್ಯದರ್ಶಿ, ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜ, ಕಲಬುರಗಿ), ಸಿದ್ದಲಿಂಗಪ್ಪ ನಾಯಕ ದೊಡ್ಡಯ್ಯ ಹಳಿಗೇರ, ಶರಣಪ್ಪ ಜಾಕನಳ್ಳಿ, ಹಣಮಂತ ದೊರೆ ಟೋಕಾಪುರ ಸೇರಿದಂತೆ ಅನೇಕರು ಮನವಿ ಮಾಡಿದರು.