ಯಾದಗಿರಿ | ಜಿಲ್ಲೆಯಲ್ಲಿ ಮಿತಿಮೀರಿದ ಕುರಿಕಳ್ಳತನ : ಕ್ರಮ ವಹಿಸಲು ಕುರುಬರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ
ಯಾದಗಿರಿ: ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದಲ್ಲಿ ಕಳೆದ ಒಂದೇ ವರ್ಷದಲ್ಲಿ 400 ಕ್ಕೂ ಹೆಚ್ಚು ಕುರಿಗಳು ಕಳ್ಳತನವಾಗಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಬಡ ಕುರಿಗಾಹಿಗಳಿಗೆ ನ್ಯಾಯ ದೊರಕಿಸಲು ಹಾಗೂ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯಮಟ್ಟ ಕುರುಬ ಸಂಘದ ಜಿಲ್ಲಾ ಸಮಿತಿ ಮನವಿ ಸಲ್ಲಿಸಿದೆ.
ಕುರುಬ ಸಂಘದ ಪ್ರತಿನಿಧಿಗಳ ಪ್ರಕಾರ, ಕುರಿಗಾಹಿಗಳು ಪೊಲೀಸರಿಗೆ ದೂರು ನೀಡಲು ಹೋದಾಗ, ಅವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ದಿನನಿತ್ಯ ಠಾಣೆ ಗೆಳೆಯಿಸುವ ರೀತಿಯ ಅನ್ಯಾಯ ನಡೆಯುತ್ತಿರುವುದು ಕಂಡುಬರುತ್ತಿದೆ. ಕೆಲ ಅಧಿಕಾರಿಗಳು ಸಹ ಇದರಲ್ಲೇ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕುರಿಗಾಹಿಗಳ ಬದುಕು ಹೀನಾಯ ಸ್ಥಿತಿಯಲ್ಲಿ ಸಿಲುಕಿರುವ ಕಾರಣ, ಈ ಕಳ್ಳತನಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಕಳ್ಳರನ್ನು ಪತ್ತೆಹಚ್ಚಿ, ಕಳವಾದ ಕುರಿಗಳನ್ನು ಹಿಂತಿರುಗಿಸಲು ಕ್ರಮ ಕೈಗೊಳ್ಳಬೇಕೆಂದು ಸಂಘ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಮಟ್ಟ ಕುರುಬ ಸಂಘದ ಜಿಲ್ಲಾ ಅಧ್ಯಕ್ಷ ಶಿವುಕುಮಾರ ಮುನಗಲ್, ಸದಸ್ಯರುಗಳಾದ ಗೋಪಾಲ ಎಂ.ಪಿ.ಬೀದರ್, ನಿಜಲಿಂಗಪ್ಪ ವಂಕಸಂಬ್ರ, ರಾಯಪ್ಪ ಪೂಜಾರಿ ಕೊಲ್ಲೂರು, ಮಹಾದೇವಪ್ಪ ಕಾಡಂನೋರ್ ಕಣೆಕಲ್, ತಾಯಪ್ಪ ಕರ್ಣಿನಿಗಿ, ಶೇಖರಪ್ಪ, ಚಂದ್ರಪ್ಪ, ಮಾಳಪ್ಪ, ಭೀಮಪ್ಪ, ಬೀರಪ್ಪ ನಸಲವಾಯಿ, ಕತಾಲಪ್ಪ, ಮೊಗಲಪ್ಪ, ಶ್ರೀನಿವಾಸ ಸೇರಿದಂತೆ ಸೈದಾಪೂರ ಮತ್ತು ಬಳಿಚಕ್ರ ಹೋಬಳಿಯ ಗ್ರಾಮಗಳ ಮುಖಂಡರು ಕುರಿಗಾಹಿಗಳು ಉಪಸ್ಥಿತರಿದ್ದರು.