ಯಾದಗಿರಿ | ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
ಯಾದಗಿರಿ : ಮಹಾತ್ಮ ಗಾಂಧೀಜಿಯವರ ಸರ್ವಧರ್ಮ ಸಹಿಷ್ಣುತೆ ಮತ್ತು ಭ್ರಾತೃತ್ವ ಭಾವನೆಗಳು ಭಾರತದ ಸಂವಿಧಾನದ ಪೀಠಿಕೆಯಲ್ಲಿ ಅಳವಡಿಸಲ್ಪಟ್ಟಿವೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
ನಗರದ ಪದವಿ ಮಹಾವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ 156ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಗಾಂಧೀಜಿ ಅಹಿಂಸೆಯ ಮಾರ್ಗದಲ್ಲಿ ಶಾಂತಿಯುತ ಹೋರಾಟ ನಡೆಸಿದರು. ತಮ್ಮ ಜೀವನವನ್ನೇ ದೇಶಕ್ಕಾಗಿ ತ್ಯಾಗ ಮಾಡಿ, ಜೈಲು ಶಿಕ್ಷೆ ಅನುಭವಿಸಿ, ಸ್ವಾತಂತ್ರ್ಯವನ್ನು ನಮಗೆ ತಂದುಕೊಟ್ಟರು ಎಂದರು.
ದಕ್ಷಿಣ ಆಫ್ರಿಕಾದಲ್ಲಿಯೇ ಜನಾಂಗೀಯ ಭೇದಭಾವ ವಿರುದ್ಧ ಹೋರಾಡಿದ ಗಾಂಧೀಜಿಯ ಆದರ್ಶಗಳು ನೆಲ್ಸನ್ ಮಂಡೇಲಾ ಸೇರಿದಂತೆ ಜಗತ್ತಿನ ಅನೇಕ ನಾಯಕರ ಮೇಲೆ ಪ್ರಭಾವ ಬೀರಿವೆ. ಸತ್ಯ, ಅಹಿಂಸಾ, ಶಾಂತಿ ಎಂಬ ಅವರ ತತ್ವಗಳು ಎಲ್ಲರಿಗೂ ದಾರಿದೀಪ ಎಂದರು.
ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಸುಭಾಷ್ ಚಂದ್ರ ಕೌಲಗಿ ಮಾತನಾಡಿ, ಅಸ್ಪೃಶ್ಯತೆ ನಿವಾರಣೆ ಮತ್ತು ಧಾರ್ಮಿಕ ಸಾಮರಸ್ಯ ಕಾಪಾಡಲು ಗಾಂಧೀಜಿ ಶ್ರಮಿಸಿದರು. ಶಾಂತಿಯ ಮಾರ್ಗದ ಮೂಲಕ ಸ್ವಾತಂತ್ರ್ಯ ದೊರಕಿಸಿಕೊಟ್ಟ ವಿಶ್ವದ ಮೇರು ವ್ಯಕ್ತಿತ್ವ ಅವರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಗೋಗಿ ಗಾಂಧೀ ಪ್ರಿಯ ಭಜನೆ ಹಾಡಿದರು. ಇಸ್ಲಾಂ ಧರ್ಮದ ಮೌಲಾನಾ ಚಾಂದ್ ಪಾಷಾ, ಕ್ರೈಸ್ತ ಧರ್ಮದ ಫಾದರ್ ವಿವೇಕ, ಜೈನ್ ಧರ್ಮದ ಸುರೇಶ್ ಜೈನ್, ಹಿಂದೂ ಧರ್ಮದ ಶ್ರೀ ನಾಗೇಶ ಪುರೋಹಿತ್ ಸರ್ವಧರ್ಮ ಪ್ರಾರ್ಥನೆ ನೆರವೇರಿಸಿದರು.
ವಿದ್ಯಾರ್ಥಿಗಳಿಗೆ ಬಹುಮಾನ:
ಗಾಂಧೀಜಿ ಕುರಿತು ನಡೆದ ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದಕ್ಕೂ ಮುನ್ನ ನಗರ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಪ್ರೊ.ಗುರು ಪ್ರಸಾದ್ ವೈದ್ಯ ನಿರೂಪಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ ಸ್ವಾಗತಿಸಿದರು. ಕೊನೆಯಲ್ಲಿ ವಂದನೆ ಸಲ್ಲಿಸಲಾಯಿತು. ಬೆಳಿಗ್ಗೆ ಜಿಲ್ಲೆಯಾದ್ಯಂತ ಶ್ರಮದಾನ ಕಾರ್ಯಕ್ರಮವೂ ಜರುಗಿತು.