×
Ad

ಯಾದಗಿರಿ | 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

ಕರ್ನಾಟಕದ ನೆಲ, ಜಲ, ಕನ್ನಡ ಭಾಷೆ, ಸಂಸ್ಕೃತಿ ರಕ್ಷಣೆಗೆ ಸರಕಾರ ಬದ್ಧ : ಸಚಿವ ಶರಣಬಸಪ್ಪ ದರ್ಶನಾಪುರ

Update: 2025-11-01 18:11 IST

ಯಾದಗಿರಿ: ಕರ್ನಾಟಕದ ನೆಲ,ಜಲ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರವು ನಮ್ಮ ನಾಡು- ನುಡಿಯ ರಕ್ಷಣೆಗೆ ಹಾಗೂ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಕಾರ್ಯಪ್ರವೃತ್ತವಾಗಿದೆ. ಕನ್ನಡಿಗರ ಏಳ್ಗೆಗಾಗಿ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ದೇಶದ ಭಾಷೆ ಮತ್ತು ಸಾಹಿತ್ಯ ಪರಂಪರೆಯಲ್ಲಿ ಕನ್ನಡ ನಾಡು ಮತ್ತು ನುಡಿಗೆ ಉನ್ನತವಾದ ಸ್ಥಾನವಿದೆ ಮತ್ತು 2,000 ವರ್ಷಗಳಿಗೂ ಮೀರಿದ ಇತಿಹಾಸವಿದೆ. “ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡು ಹಬ್ಬಿದೆ “ಎಂದು ಕನ್ನಡದ ಮೊದಲ ಕೃತಿ “ಕವಿರಾಜಮಾರ್ಗ”ದಲ್ಲಿ ಉಲ್ಲೇಖಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ .ಕನ್ನಡ ನಾಡನ್ನು ಆಳಿದ ಅನೇಕ ರಾಜ ಮನೆತನಗಳಾದ ಕದಂಬರು, ರಾಷ್ಟ್ರಕೂಟರು, ವಿಜಯನಗರ ರಾಜರು, ಚಾಲುಕ್ಯರು , ಗಂಗರು, ಟಿಪ್ಪು, ಮೈಸೂರ್ ಒಡೆಯರ್, ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಇಂಗ್ಲಿಷ್ ಗೆ ಸ್ವಂತ ಲಿಪಿ ಇಲ್ಲ ಅದು ರೋಮನ್ ಭಾಷೆಯಿಂದ ಎರವಲು ಪಡೆದಿದೆ. ಅದೇ ರೀತಿ ಹಿಂದಿ ಭಾಷೆಯು ಸಹ ದೇವನಾಗರಿ ಲಿಪಿಯಿಂದ ಎರವಲು ಪಡೆದುಕೊಂಡಿದೆ ಆದರೆ ಸ್ವಂತ ಲಿಪಿಯನ್ನು ಹೊಂದಿದ ಸಮೃದ್ಧ ಸಾಹಿತ್ಯವನ್ನು ಸೃಷ್ಟಿಸಿದ ಶ್ರೀಮಂತ ಭಾಷೆಯಾದ ಕನ್ನಡವನ್ನು” ಲಿಪಿಗಳ ರಾಣಿ “ಎಂದೇ ಕರೆಯಲಾಗುತ್ತದೆ ಎಂದು ಹೇಳಿದರು. 

ಕನ್ನಡ ರಾಜ್ಯೋತ್ಸವ ದಿನದಂದು ಮಾತ್ರ ನಾವು ಕನ್ನಡ ಪ್ರೀತಿಯನ್ನು ತೋರಿಸಿದರೆ ಸಾಲದು. ವರ್ಷಪೂರ್ತಿ ಕನ್ನಡದ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಬೇಕಾದದ್ದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ :

ರಾಜ್ಯ ಸರ್ಕಾರವು ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಗೆ ಒತ್ತು ನೀಡುತ್ತಿದೆ.ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಬೆಂಗಳೂರನ್ನು ರಾಷ್ಟ್ರದ ಮಾದರಿ ನಗರವನ್ನಾಗಿಸಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ನಂಜುಂಡಪ್ಪ ವರದಿ ಅನ್ವಯ ಹೆಚ್ಚಿನ ಅನುದಾನ ಒದಗಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂವಿಧಾನ ತಿದ್ದುಪಡಿ ಕಲಂ 371(ಜೆ) ಜಾರಿಗೊಳಿಸಿ ಯುವಜನಾಂಗದ ಅನುಕೂಲಕ್ಕಾಗಿ ಶೈಕ್ಷಣಿಕ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಗಮನ ನೀಡಿ ಬಲ ತುಂಬುವ ಕೆಲಸ ಮಾಡಿದೆ. ಪ್ರತಿ ವರ್ಷ 5000 ಕೋ ರೂ. ಗಳನ್ನು ಒದಗಿಸಿ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಪ್ರತಿ ಸಮಾಜದ ಬಡ ಕುಟುಂಬಗಳ ನೆರವಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಎಲ್ಲರೂ ಜಾತಿ ,ಮತ, ಪಂಥ, ಭೇದಭಾವ ಮರೆತು ಈ ರಾಜ್ಯದ ಏಳ್ಗೆಗಾಗಿ ಶ್ರಮಿಸೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ್ ಚಿಂಚನಸೂರ್, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದ್ ಪುರ್, ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ನಗರಸಭೆ ಅಧ್ಯಕ್ಷ ಲಲಿತಾ ಅನಪುರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್,ಅಪರ್ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

ಸಮಾಜ ಸೇವೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸತ್ಕರಿಸಲಾಯಿತು. ಕರ್ನಾಟಕ, ನೆಲ, ಜಲ, ಭಾಷೆ, ಇತಿಹಾಸ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಾಧನೆ ಕುರಿತ ಸ್ತಬ್ಧ ಚಿತ್ರಗಳು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು‌ ಎಲ್ಲರ ಗಮನ ಸೆಳೆದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News