ಯಾದಗಿರಿ | ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಅಳವಡಿಸಿಕೊಳ್ಳಲು ಸಚಿವ ದರ್ಶನಾಪುರ ಕರೆ
ಯಾದಗಿರಿ: ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಬೆಳಕು ಮೂಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ಬರೆದು ಸನ್ಮಾರ್ಗದ ದಾರಿ ತೋರಿಸಿದ್ದಾರೆ. ಅವರ ಆದರ್ಶಗಳು ವಿದ್ಯಾರ್ಥಿ ಹಾಗೂ ಯುವಕರಿಗೆ ಪ್ರೇರಣೆ ನೀಡಬೇಕು. ಜೀವನದಲ್ಲಿ ಬೆಳೆಯಲು ಮುಖ್ಯವಾಗಿ ಶಿಕ್ಷಣ ಪಡೆಯುವುದು ಅಗತ್ಯ ಎಂದು ಹೇಳಿದರು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಮತ್ತು ಸಾಹಿತಿ ತಿಪ್ಪಣ್ಣ ನಾಯಕ್ ವಿಶೇಷ ಉಪನ್ಯಾಸ ನೀಡಿದರು.
ಡಿಸಿ ಹರ್ಷಲ್ ಭೋಯರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಎಸ್.ಪಿ. ಪ್ರಥ್ವಿಕ್ ಶಂಕರ್, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ್, ಹೆಚ್ಚುವರಿ ಡಿಸಿ ರಮೇಶ ಕೊಲಾರ, ಎಸಿ ಶ್ರೀಧರ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ್ ಸೇರಿದಂತೆ ಇತರರಿದ್ದರು.
ಸಚಿವರು, ಶಾಸಕರು, ಗಣ್ಯರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಿದ್ದಣ್ಣ ಅಣಬಿ ಸ್ವಾಗತಿಸಿದರು. ಚಂದ್ರಶೇಖರ ಗೋಗಿ, ಸಂಗಡಿಗರಿಂದ ಸ್ವಾಗತ ಗೀತೆ, ನಾಡ ಗೀತೆ ಜರುಗಿತು, ವಾಣಿಶ್ರೀ ನಿರೂಪಿಸಿದರು.
ಇಂದು ಬೆಳಿಗ್ಗೆ ಇಲ್ಲಿನ ತಹಶೀಲ್ ಕಚೇರಿಯಿಂದ ಆರಂಭವಾದ ಶ್ರೀ ವಾಲ್ಮೀಕಿ ನಾಯಕ ಅವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಚಾಲನೆ ನೀಡಿದರು. ಎಸ್ಪಿ ಪೃಥ್ವಿಕ್ ಶಂಕರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದಣ್ಣ ಇತರರು ಉಪಸ್ಥಿತರಿದ್ದರು.
ಶಾಸ್ತ್ರಿ ಚೌಕ್, ನೇತಾಜಿ ಸರ್ಕಲ್, ಡಿಗ್ರಿ ಕಾಲೇಜು ಮಾರ್ಗವಾಗಿ ವಾಲ್ಮೀಕಿ ಭವನದವರೆಗೂ ಭಾರಿ ಭವ್ಯವಾಗಿ ನಡೆಯಿತು. ದಾರಿಯುದ್ದಕ್ಕೂ ಶಾಲಾ ಮಕ್ಕಳು, ಕುಂಭಹೊತ್ತು ಸಾಗಿದ ದೃಶ್ಯ ಮನಮೋಹಕವಾಗಿತ್ತು.