ಯಾದಗಿರಿ | ನಾರಾಯಣಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಚಿವ ಶರಣಬಸಪ್ಪ ದರ್ಶನಾಪುರ
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬುಧವಾರದಂದು ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಬಾಗಿನ ಅರ್ಪಣೆ ಸ್ವಲ್ಪ ತಡವಾಗಿದೆ. ರೈತರು ಇದೀಗ ತೊಂಬತ್ತು ದಿನಗಳಲ್ಲಿ ಬರುವ ಎರಡನೇ ಬೆಳೆಯನ್ನು ಬೆಳೆಸುವತ್ತ ಗಮನಹರಿಸಬೇಕು. ರೈತರು ಹಾಳಾದರೆ ದೇಶ ಹಾಳಾಗುತ್ತದೆ ಎಂದು ಹೇಳಿದರು.
ಈ ಬಾರಿ ಜಲಾಶಯದ ನೀರಿನ ಮಟ್ಟ ತೃಪ್ತಿಕರವಾಗಿದ್ದು, ಕೆಲವು ಸಣ್ಣಪುಟ್ಟ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು. ರಾಜ್ಯದ ಹಲವೆಡೆ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ, ಈ ವಿಷಯವನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. “ಮುಂದಿನ ನಾಲ್ಕು-ಐದು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಮತ್ತು ಎನ್‌ಡಿಆರ್‌ಎಫ್ ಯೋಜನೆಯಡಿ ರೈತರಿಗೆ ಪರಿಹಾರ ನೀಡುವ ಕಾರ್ಯ ನಡೆಯಲಿದೆ ಎಂದರು.
ರೈತರು ಸದೃಢವಾಗಬೇಕೆಂಬ ಆಶಯ ವ್ಯಕ್ತಪಡಿಸಿದ ಅವರು, ಬಿಜಾಪುರ ಮತ್ತು ಯಾದಗಿರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆರೆ ತುಂಬುವ ಕಾರ್ಯ ಆರಂಭವಾಗಿದೆ. ಮಾರ್ಚ್ ಎರಡನೇ ವಾರದೊಳಗೆ ಕೈ ಸೇರುವ ಬೆಳೆಗಳನ್ನು ಬೆಳೆಸಬೇಕು. ಈ ಕುರಿತು ಮುಂಜಾಗ್ರತಾ ಕ್ರಮಗಳನ್ನು ರೈತರು ವಹಿಸಬೇಕು ಎಂದು ಸಲಹೆ ನೀಡಿದರು.
ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಜಲಧಾರ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು. ಬೂದಿಹಾಳ ಏತ ನೀರಾವರಿ ಯೋಜನೆಯಡಿ ಪೈಪ್ ಲೈನ್ ಕೆಲಸಗಳು ಪ್ರಗತಿಯಲ್ಲಿ ಇದ್ದು, ಯೋಜನೆ ನೀರಿನಿಂದ ಸುಮಾರು 20–30 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತದೆ ಎಂದರು.
ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ಹೊಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ನಮ್ಮ ಸರ್ಕಾರದ ವಾಗ್ದಾನವಾಗಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಿ, ನಮ್ಮ ಪಾಲಿನ ನೀರಿನ ಸದ್ಬಳಕೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಅದ್ದೂರಿ ಮೆರವಣಿಗೆ :
ಬಾಗಿನ ಅರ್ಪಣೆಗೆ ಮುನ್ನ ಸಚಿವರು ಗೇಜ್ ರೂಮ್‌ನಲ್ಲಿ ಶಕ್ತಿ ಮಾತೆಯ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಲ್ಲಿಂದ ಶಾಸಕರು ಹಾಗೂ ದೇಶಮುಖ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯರು ಬಾಗಿನ ಅರ್ಪಿಸುವ ಸ್ಥಳದವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಅವರನ್ನು ಕರೆದೊಯ್ದರು. ಈ ವೇಳೆ ಅರ್ಚಕ ರಾಘವೇಂದ್ರ ಜೋಷಿ ಪೂಜಾ ಕಾರ್ಯ ನೆರವೇರಿಸಿದರು.
ನಾರಾಯಣಪುರ ಬಸವಸಾಗರ ಜಲಾಶಯವು 33.313 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಸಂಪೂರ್ಣ ಸಾಮರ್ಥ್ಯಕ್ಕೆ ನೀರು ತುಂಬಿಕೊಂಡಿದೆ. ಇದಕ್ಕೂ ಮೊದಲು ವಾದ್ಯಮೇಳ ಮತ್ತು ಕುಂಭಕಳಸ ಮೆರವಣಿಗೆ ಮೂಲಕ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಭವ್ಯ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ಸುರಪುರ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ, ಯಾದಗಿರಿ ಕ್ಷೇತ್ರದ ಶಾಸಕರಾದ ಚನ್ನರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಡ್ಯಾಂ ಮುಖ್ಯ ಎಂಜಿನಿಯರ್ ರಮೇಶ ಜಿ.ರಾಠೋಡ, ಇಇ ಹನಮಂತಪ್ಪ ಕನ್ನೂರು, ಎಇಇಗಳಾದ ವಿದ್ಯಾಧರ್, ರಾಘವೇಂದ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.