×
Ad

ಯಾದಗಿರಿ | ನಾಯ್ಕಲ್ ಗ್ರಾಮದ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ಭೇಟಿ

Update: 2025-09-24 16:45 IST

ಯಾದಗಿರಿ : ಭೀಮಾನದಿ ನೀರು ಜಮೀನಿಗೆ ನುಗ್ಗಿ ಭತ್ತ ಹಾಗೂ ಹತ್ತಿ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ, ಕಂದಾಯ ಅಧಿಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡುವಂತೆ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಸೂಚಿಸಿದರು.

ಮಂಗಳವಾರ ಸಂಜೆ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬೆಳೆಯ ಮೇಲೆ ನೀರು ನಿಂತಿರುವಾಗಲೇ ಸಮೀಕ್ಷೆ ಮಾಡಬೇಕು. ಅಧಿಕಾರಿಗಳು ವಿಳಂಬ ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದರು.

ಉಜನಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಿದ ಪರಿಣಾಮ, ಭೀಮಾನದಿ ತೀರದ ನಾಯ್ಕಲ್ ಸೇರಿದಂತೆ ಅನೇಕ ಗ್ರಾಮಗಳ ಜಮೀನಿಗೆ ನೀರು ನುಗ್ಗಿ ಭತ್ತ–ಹತ್ತಿ ಬೆಳೆ ಹಾನಿಯಾಗಿದೆ. ಖುದ್ದು ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ರೈತರ ನೋವು ಆಲಿಸಿದರು.

ಪ್ರತಿ ವರ್ಷ ಪ್ರವಾಹದಿಂದ ನಮ್ಮ ಬೆಳೆ ನಾಶವಾಗುತ್ತಿದೆ. ಎಕರೆಗಟ್ಟಲೆ ಜಮೀನಿಗೆ ಬೀಜ–ಗೊಬ್ಬರ ಹಾಕಿ ದುಡ್ಡು ಹೂಡಿದ್ದೇವೆ. ಈಗ ಬೆಳೆ ಕೊಯ್ಯುವ ಹೊತ್ತಿಗೆ ನೀರು ನುಗ್ಗಿ ಹಾನಿಯಾಗಿದೆ. ಸರ್ಕಾರ ಸಹಾಯ ಮಾಡಬೇಕು ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಗುರುಸಣಗಿ ಸೇತುವೆ ಬಳಿಯ ಬ್ಯಾರೇಜ್‌ನಲ್ಲಿ ಹಳೆಯ ಗೇಟ್ ತೆಗೆದಿಲ್ಲ. ಅದರಿಂದ ಹಿನ್ನೀರು ಜಮೀನಿಗೆ ನೀರು ಹರಿಯುತ್ತಿದೆ. ದಯವಿಟ್ಟು ಗೇಟ್ ತೆಗೆಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಅವರು, ಬೆಳೆ ಹಾನಿಗೆ ಶೀಘ್ರ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ. ರೈತರು ಕೂಡ ತಮ್ಮ ಹಾನಿಯ ಮಾಹಿತಿ ಸರಿಯಾಗಿ ಅಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದರು.

ವಡಗೇರಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಖಾಜಾ ಮೈನೊದ್ದಿನ್ ಮಿರ್ಚಿ, ಭಾಷುಮೀಯಾ ಹೊಸಳ್ಳಿ, ಶೇಕಪ್ಪಗೌಡ ಮಾಹಿ, ಮಲ್ಲಿಕಾರ್ಜುನ ಅನಕಸೂಗುರು, ಮರೇಪ್ಪ, ಶರಣಪ್ಪ, ಶಿವರಾಯ ನಾಟೇಕರ್, ಅಬ್ಬಾಸಲಿ ಬಂದಗಿ, ಖದೀರ್ ಸಾಬ್, ತಿಮ್ಮಯ್ಯ, ಬಸವರಾಜ, ಪ್ರವೀಣ್ ನಾಯ್ಕಲ್, ಭೀಮರಾಯ ತುಮಕೂರು, ಅಬ್ದುಲ್, ಮಲ್ಲಿಕಾರ್ಜುನರೆಡ್ಡಿ, ಸುಭಾಷ್ ರೆಡ್ಡಿ ಹಾಗೂ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News