ಯಾದಗಿರಿ | ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ
ಯಾದಗಿರಿ: 35.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಹಾಗೂ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಬಾರ್ ಅಸೋಸಿಯೇಶನ್ ಕಟ್ಟಡವನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ನ್ಯಾಯ ಕೋರಿ ಬರುವ ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ದೊರಕಿಸುವಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಅತ್ಯಂತ ಉಪಯುಕ್ತವಾಗಲಿದೆ. ಆಧುನಿಕ ಸೌಲಭ್ಯಗಳಿಂದ ಕೂಡಿರುವ ಈ ಕಟ್ಟಡವು ವೇಗವಾಗಿ ಬೆಳೆಯುತ್ತಿರುವ ಯಾದಗಿರಿ ಜಿಲ್ಲೆಯ ಜನತೆಗೆ ಸಂತಸದ ಕ್ಷಣ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರು, ಹೊಸ ಕಟ್ಟಡ ನಿರ್ಮಾಣವು ನ್ಯಾಯಾಂಗದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಸಮಾಜ ಮತ್ತು ನಾಗರಿಕರಿಗೆ ನ್ಯಾಯದಾನ ಹಾಗೂ ಪಾರದರ್ಶಕ ಸೇವೆ ಕಲ್ಪಿಸಲು ಸಹಾಯಕ” ಎಂದು ಅಭಿಪ್ರಾಯಪಟ್ಟರು.
10 ಎಕರೆ ಜಾಗದಲ್ಲಿ ನಿರ್ಮಿಸಲಾದ ಈ ಸಂಕೀರ್ಣದಲ್ಲಿ:
• 8 ನ್ಯಾಯಾಲಯ ಸಭಾಂಗಣಗಳು (ಪ್ರಧಾನ ಜಿಲ್ಲಾ ನ್ಯಾಯಾಲಯ ಸೇರಿದಂತೆ)
• ಹೆಚ್ಚುವರಿ ನ್ಯಾಯಾಧೀಶರಿಗಾಗಿ ಸಭಾಂಗಣಗಳು
• ಬಾರ್ ಅಸೋಸಿಯೇಷನ್ ಕಟ್ಟಡ
• ವಾಹನ ಪಾರ್ಕಿಂಗ್
• ಕ್ಯಾಂಟೀನ್, ಉದ್ಯಾನ
• ಪುರುಷ-ಮಹಿಳೆಯರ ಶೌಚಾಲಯಗಳ ಸೌಲಭ್ಯಗಳನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಎಚ್.ಪಿ. ಸಂದೇಶ್, ಅಶೋಕ್ ಕಿಣಗಿ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಮರುಳಸಿದ್ದಾರಾಧ್ಯ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಸಿಇಒ ಲವಿಶ್ ಓರಡಿಯಾ, ಬಾರ್ ಅಸೋಸಿಯೇಶನ್ ಅಧ್ಯಕ್ಷ ಆರ್.ಎಸ್. ಪಾಟೀಲ್ ಮತ್ತು ಇತರರು ಉಪಸ್ಥಿತರಿದ್ದರು.