×
Ad

ಯಾದಗಿರಿ | ಕಳಪೆ ರಸ್ತೆ ಕಾಮಗಾರಿ : ಭತ್ತ ನಾಟಿ ಮಾಡಿ ಗ್ರಾಮಸ್ಥರಿಂದ ಪ್ರತಿಭಟನೆ

Update: 2025-11-05 16:09 IST

ಯಾದಗಿರಿ: ಗ್ರಾಮೀಣ ಭಾಗದಲ್ಲಿ ಜನರ ಹಿತಾಸಕ್ತಿಗೋಸ್ಕರ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲೂ ಮುಖ್ಯವಾಗಿ ಸುಗಮ ಸಂಚಾರದ ಅನುಕೂಲಕ್ಕೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತದೆ. ಆದರೆ ಕೆಲವೊಂದು ಗುತ್ತಿಗೆದಾರರು, ಹಾಗೂ ಅಧಿಕಾರಿಗಳು ಕಾಮಗಾರಿಯನ್ನು ಕಳಪೆ ಮಟ್ಟಕರಿಸಿ ಜನರಿಗೆ ಅನಾನುಕೂಲದ ವ್ಯವಸ್ಥೆ ಮಾಡುವ ಮೂಲಕ ಸರಕಾರಕ್ಕೆ ಕಪ್ಪು ಚುಕ್ಕೆ ತರುವ ಕಾರ್ಯ ಮಾಡುತ್ತಾರೆ ಎನ್ನುವುದಕ್ಕೆ ತಾಜಾ ಉದಾಹರಣೆ ಯಾದಗಿರಿ ಮತ ಕ್ಷೇತ್ರದ ತಂಗಡಗಿ ಹಬ್ಬಳ್ಳಿ ಹುರಸುಗುಂಡಿಗಿ ಗ್ರಾಮಕ್ಕೆ ತೆರಳುವ ಮಾರ್ಗದ ರಸ್ತೆಯಾಗಿದೆ .

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಫೆ.2ರ, 2024ರಂದು ಈ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ನಿಯಮಾನುಸಾರ 2028ರವರೆಗೆ ನಿರ್ವಹಣೆ ಮತ್ತು 2029ರವರೆಗೆ ಮರುಡಾಂಬರೀಕರಣ ಜವಾಬ್ದಾರಿ ಗುತ್ತಿಗೆದಾರರ ಮೇಲಿದೆ. ಆದರೆ, ಯಾವುದೇ ದುರಸ್ತಿ ಕಾರ್ಯ ಮಾಡದಿರುವುದರಿಂದ ರಸ್ತೆ ಒಂದೇ ವರ್ಷದಲ್ಲಿ ಸಂಪೂರ್ಣ ಹಾಳಾಗಿದ್ದು, ಮಂಗಳವಾರ ಗ್ರಾಮಸ್ಥರು ಹಬ್ಬಳ್ಳಿ ರಸ್ತೆ ಮೇಲೆ ನಿಂತ ನೀರಿನಲ್ಲಿ ಭತ್ತ ನಾಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಸುಮಾರು ಮೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಾಮಗಾರಿಗೆ 4.73 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆರು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗಿದ್ದ ರಸ್ತೆ ಒಂದೇ ವರ್ಷದಲ್ಲಿ ತಗ್ಗು-ಗುಂಡಿಗಳಿಂದ ತುಂಬಿ, ವಾಹನ ಸವಾರರು ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹಲವಾರು ಬಾರಿ ಅಪಘಾತಕ್ಕೊಳಗಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೂಡಲೇ ಗುತ್ತಿಗೆದಾರ ಸಿದ್ದಪ್ಪ ಗೌಡರ ವಿರುದ್ಧ ಕ್ರಮ ಜರುಗಿಸಿ ರಸ್ತೆ ಮರುಡಾಂಬರೀಕರಣ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರ ಸಿದ್ದಪ್ಪ ಗೌಡ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ರಸ್ತೆ ಮರು ಡಾಂಬಿರೀಕರಣ ಮಾಡಬೇಕು. ಇಲ್ಲವಾದರೆ ಮೂರು ಗ್ರಾಮದ ಜನರು ರಸ್ತೆ ತಡೆದು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ರಾಜು ಹಬ್ಬಳ್ಳಿ, ಚಂದಪ್ಪ ಗೌಡ ಹಬ್ಬಳ್ಳಿ, ಮಲಿಂಗಪ್ಪ ಪೂಜಾರಿ, ಮಲ್ಲಿಕಾರ್ಜುನ್, ಸಿದ್ದಪ್ಪ, ದೇವಪ್ಪ ಪೂಜಾರಿ, ರವಿ, ನಾಗಪ್ಪ, ಅಬ್ದುಲ್ ನಾಗರಬಂಡಿ, ಶರಣಗೌಡ ಸಾಹುಕಾರ, ಭೀಮಶಂಕರ್, ಸೋಮರಾಯ, ಹಸೇನ್ ಸಾಬ್ ರಾಜೇಸಾಬ್, ಗುಂಡನಗೌಡ ರಸ್ತೆಪುರ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News