×
Ad

ಯಾದಗಿರಿ | ಪ್ರಿಯಾಂಕ್‌ ಖರ್ಗೆ ಅವರು ಯಾವ ವಿಷಯವನ್ನಾದರೂ ವಾಸ್ತವ ಆಧಾರಿತವಾಗಿ ಮಾತನಾಡುತ್ತಾರೆ : ಕಾಶಿನಾಥ ನಾಟೇಕಾರ್

Update: 2025-10-14 20:02 IST

ಯಾದಗಿರಿ: ರಾಜ್ಯ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸರಕಾರಿ ಶಾಲೆಗಳ ಆವರಣ, ದೇವಸ್ಥಾನಗಳು ಹಾಗೂ ಜನಸಂಚಾರ ಪ್ರದೇಶಗಳಲ್ಲಿ ಆರೆಸ್ಸೆಸ್‌ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ಸಂವಿಧಾನಾತ್ಮಕವಾಗಿ ಸರಿಯಾದ ಹೆಜ್ಜೆಯಾಗಿದೆ ಎಂದು ಅಂಬೇಡ್ಕರ್ ಸ್ವಾಭಿಮಾನ ಸೇನೆಯ ರಾಜ್ಯ ಕಾರ್ಯದರ್ಶಿ ಕಾಶಿನಾಥ ನಾಟೇಕಾರ್ ಹೇಳಿದ್ದಾರೆ.

ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಸಚಿವ ಪ್ರಿಯಾಂಕ್‌ ಖರ್ಗೆ ಅವರು ಯಾವ ವಿಷಯವನ್ನಾದರೂ ವಾಸ್ತವ ಆಧಾರಿತವಾಗಿ, ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಮಾತನಾಡುತ್ತಾರೆ. ಆದರೆ ಕೆಲವರು ಅವರ ಪತ್ರದ ಅರ್ಥವನ್ನು ತಪ್ಪಾಗಿ ತಿರುಗಿಸಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇದು ರಾಜಕೀಯ ಅಸಹಿಷ್ಣುತೆಯ ಸ್ಪಷ್ಟ ಉದಾಹರಣೆ ಎಂದು ಟೀಕಿಸಿದರು.

ನೂರು ವರ್ಷಗಳ ಸಂಭ್ರಮ ಆಚರಿಸುತ್ತಿರುವ ಆರೆಸ್ಸೆಸ್‌ ಸಂಘಟನೆಯು ದೇಶದ ಪ್ರತಿಯೊಂದು ಸಾಮಾಜಿಕ ಪ್ರಶ್ನೆಯ ಬಗ್ಗೆ ಧ್ವನಿ ಎತ್ತುವ ನೈತಿಕ ಹೊಣೆಗಾರಿಕೆ ಹೊಂದಿದೆ. ಆದರೆ ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಲೈಂಗಿಕ ಹಿಂಸೆ ಅಥವಾ ಇತ್ತೀಚೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗೌರವಾನ್ವಿತ ಗವಾಯಿ ಅವರ ಮೇಲಾದ ಶೂ ಎಸೆತದಂತಹ ಘಟನೆಗಳ ಕುರಿತು ಸಂಘದಿಂದ ಒಂದು ದಿನವಾದರೂ ಧ್ವನಿ ಕೇಳಿಬಂದಿಲ್ಲ. ಇದು ನಾಚಿಕೆಗೇಡಿತನವಾಗಿದೆ ಎಂದು ಆರೋಪಿಸಿದರು.

ಸಂವಿಧಾನದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಇಂತಹ ಕ್ರಮಗಳಿಗೆ ಬೆಂಬಲ ನೀಡಬೇಕು. ಸರ್ಕಾರದ ಸ್ವಾಮ್ಯದಲ್ಲಿರುವ ಸ್ಥಳಗಳು ಯಾವುದೇ ಧಾರ್ಮಿಕ ಅಥವಾ ಸಂಘಟನಾ ಚಟುವಟಿಕೆಗಳ ವೇದಿಕೆಯಾಗಿ ಪರಿಣಮಿಸುವುದು ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಎಂದರು.

ಸಂವಿಧಾನ, ಧರ್ಮನಿರಪೇಕ್ಷತೆ ಹಾಗೂ ಸಾಮಾಜಿಕ ಸೌಹಾರ್ದ ಕಾಪಾಡುವ ಹೋರಾಟದಲ್ಲಿ ನಾವು ಅವರೊಂದಿಗಿದ್ದೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News