ಯಾದಗಿರಿ | ಸಮೀಕ್ಷೆಯಲ್ಲಿ ಬೌದ್ಧ ಧರ್ಮ, ಹೊಲೆಯ-ಚಲಾವಾದಿ ಎಂದು ದಾಖಲಿಸಿ : ದಲಿತ ಮುಖಂಡರ ಮನವಿ
ಯಾದಗಿರಿ: ಮುಂದಿನ ದಿನಗಳಲ್ಲಿ ನಡೆಯಲಿರುವ ಸಾಮಾಜಿಕ ಹಾಗೂ ಆರ್ಥಿಕ ಜಾತಿ ಸಮೀಕ್ಷೆಯಲ್ಲಿ ನಮ್ಮ ಸಮುದಾಯದವರು ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಮತ್ತು ಜಾತಿ ಕಾಲಂನಲ್ಲಿ ಹೊಲೆಯ, ಚಲಾವಾದಿ ಎಂದು ದಾಖಲಿಸಬೇಕು ಎಂದು ದಲಿತ ಮುಖಂಡರು ಮನವಿ ಮಾಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ಹೊಸ್ಮನಿ ಮಾತನಾಡಿ, ಅಂಬೇಡ್ಕರ್ ಅವರ ಅನುಯಾಯಿಗಳಾಗಿ ನಾವು ನಮ್ಮ ಮೂಲ ಧರ್ಮವಾದ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದೇವೆ. ಹೀಗಾಗಿ ಸಮೀಕ್ಷೆಯಲ್ಲಿ ಧರ್ಮ ಕಾಲಂ 6ರಲ್ಲಿ ಬೌದ್ಧ ಧರ್ಮ ಹಾಗೂ ಜಾತಿ ಕಾಲಂನಲ್ಲಿ ಹೊಲೆಯ ಎಂದು ದಾಖಲಿಸಬೇಕು. ಹಿಂದಿನ ಸಮೀಕ್ಷೆಯಲ್ಲಿ ಗೊಂದಲ ಉಂಟಾಗಿದ್ದರಿಂದ ಈ ಬಾರಿ ಜಾಗೃತಿ ಮೂಡಿಸಿ ನಿಖರ ದಾಖಲೆ ಮಾಡಬೇಕು ಎಂದು ಹೇಳಿದರು.
ಹಿರಿಯ ದಲಿತ ಮುಖಂಡ ಮರೆಪ್ಪ ಚಟ್ಟೇರಕರ್ ಅವರು, ಹಿಂದಿನ ಸಮೀಕ್ಷೆಯಲ್ಲಿ ಬಲಗೈ ಸಮುದಾಯದ ಜನರು ತಮ್ಮ ಜಾತಿ ತಿಳಿಸಲು ಹಿಂಜರಿದ ಕಾರಣ ಅನ್ಯಾಯ ಸಂಭವಿಸಿತ್ತು. ಈ ಬಾರಿ ಅದು ಪುನರಾವರ್ತನೆ ಆಗಬಾರದು. ಧರ್ಮದ ಕಾಲಂನಲ್ಲಿ ಬೌದ್ಧ ಎಂದು ದಾಖಲಿಸಿದರೆ ಯಾವುದೇ ಸೌಲಭ್ಯ ಅಥವಾ ಮೀಸಲಾತಿ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಭೀಮಣ್ದ ಹೊಸ್ಮನಿ, ವೆಂಕಟೇಶ ಹೊಸ್ಮನಿ, ಗೋಪಾಲ, ಮರೆಪ್ಪ, ಬುಕ್ಜಲ್ ನಾಗಣ್ಣ ಕಲ್ಲದೇವನಹಳಿ, ಡಾ. ಗಾಳೆಪ್ಪ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ, ಡಾ. ಭಗವಂತ ಅನ್ವಾರ, ನಾಗಣ್ಣ ಬಡಿಗೇರ, ಶರಣು ಎಸ್. ನಾಟೇಕಾರ್, ಹೊನ್ನಪ್ಪ ಗಂಗನಾಳ, ಶಿವಕುಮಾರ ತಳವಾರ, ಸೈದಪ್ಪ ಕೂಯಿಲೂರ್, ಕಾಶಿನಾಥ ನಾಟೇಕಾರ್, ಸುರೇಶ್ ಬೊಮ್ಮನ್, ಚಂದ್ರಕಾಂತ ಚಲವಾದಿ ಸೇರಿದಂತೆ ಅನೇಕ ದಲಿತ ಮುಖಂಡರು ಉಪಸ್ಥಿತರಿದ್ದರು.