ಯಾದಗಿರಿ | ಗುರುಮಠಕಲ್‌ನಲ್ಲಿ ಆರೆಸ್ಸೆಸ್ ಪಥ ಸಂಚಲನ
ಗುರುಮಠಕಲ್‌ನಲ್ಲಿ ನೂರಾರು ಸ್ವಯಂಸೇವಕರ ಭಾಗಿ- ಪೊಲೀಸ್ ಬಂದೋಬಸ್ತ್‌ನಲ್ಲೇ ಶಾಂತಿಯುತವಾಗಿ ಆಯೋಜನೆ
ಯಾದಗಿರಿ: ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಜನ್ಮಭೂಮಿಯಾದ ಗುರುಮಠಕಲ್ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ವತಿಯಿಂದ ನೂರು ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಪಥಸಂಚಲನ ಶುಕ್ರವಾರ ನಡೆಯಿತು.
ಪಟ್ಟಣದ ಲಕ್ಷ್ಮೀಭಾಯಿ ನರೇಂದ್ರ ರಾಠೋಡ್ ಲೇಔಟ್‌ನಿಂದ ಆರಂಭವಾದ ಪಥಸಂಚಲನವು ಸುಮಾರು ನಾಲ್ಕು ಕಿಲೋಮೀಟರ್ ವರೆಗೆ ಸಾಗಿತು. ಶಿಸ್ತಿನ ಉಡುಪು (ಗಣವೇಷ) ಧರಿಸಿದ ನೂರಾರು ಸ್ವಯಂಸೇವಕರು ದಂಡ ಹಿಡಿದು ಪಥಸಂಚಲನದಲ್ಲಿ ಪಾಲ್ಗೊಂಡರು.
ಜಿಲ್ಲಾಡಳಿತ ನೀಡಿದ ಷರತ್ತುಬದ್ಧ ಅನುಮತಿಯಡಿ ಪಥಸಂಚಲನ ನಡೆಸಲಾಗಿದ್ದು, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತು. ಪಥಸಂಚಲನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ಖರ್ಗೆ ಕೋಟೆಯ ರಾಜಕೀಯ ಮಹತ್ವದ ಹಿನ್ನೆಲೆ, ಈ ಪಥಸಂಚಲನವು ಸ್ಥಳೀಯವಾಗಿ ಕುತೂಹಲ ಕೆರಳಿಸಿತ್ತು. ಅದೆಲ್ಲವೂ ತಾಲ್ಲೂಕಿನಲ್ಲಿ ಶಾಂತಿಯುತವಾಗಿ ಜರಗಿತ್ತು.