×
Ad

ಯಾದಗಿರಿ | LOCF ಕರಡು ಕೈಬಿಟ್ಟು, ಅತಿಥಿ ಉಪನ್ಯಾಸಕರನ್ನು ನೇಮಿಸಲು ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ

Update: 2025-09-22 17:04 IST

ಯಾದಗಿರಿ: ಯುಜಿಸಿ ಬಿಡುಗಡೆ ಮಾಡಿದ ಫಲಿತಾಂಶ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF) ಕರಡನ್ನು ಕೈಬಿಡುವಂತೆ ಹಾಗೂ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ತಕ್ಷಣ ನೇಮಕ ಮಾಡುವಂತೆ ಆಗ್ರಹಿಸಿ, ಭಾನುವಾರ ನಗರದಲ್ಲಿ ಎಸ್‌ಎಫ್‌ಐ ಶಹಾಪುರ ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಸರಕಾರಿ ಡಿಗ್ರಿ ಕಾಲೇಜು ಆವರಣದಲ್ಲಿ ನಡೆದ ಪ್ರತಿಭಟನೆಯ ಬಳಿಕ, ಎರಡನೇ ದರ್ಜೆಯ ತಹಶೀಲ್ದಾರ್‌ ಪ್ರಶಾಂತ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಮಾತನಾಡಿ, LOCF ಕರಡು ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣ ಮಾಡುವ ಉದ್ದೇಶದಿಂದ ತಯಾರಿಸಲಾಗಿದೆ. ಇದರಲ್ಲಿ ರಸಾಯನಶಾಸ್ತ್ರ ಪಾಠವನ್ನು ಸರಸ್ವತಿಗೆ ನಮಸ್ಕಾರದಿಂದ ಪ್ರಾರಂಭಿಸುವುದು, ವಾಣಿಜ್ಯ ಪಠ್ಯಕ್ರಮದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಸೇರಿಸುವುದು, ಸ್ವಾತಂತ್ರ್ಯ ಹೋರಾಟದ ಪಾಠದಲ್ಲಿ ಸಾವರ್ಕರ್ ಅವರ ಪುಸ್ತಕವನ್ನು ಸೇರಿಸಿರುವುದು ನೈಜ ಇತಿಹಾಸವನ್ನು ಮರೆಮಾಚುವ ಪ್ರಯತ್ನವಾಗಿದೆ. ಇದು ಸಂವಿಧಾನದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದರು.

ಜಿಲ್ಲಾ ಸಂಚಾಲಕ ಇಮಾಮ್ ಸಾಬ್ ಮಾತನಾಡಿ, ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿಲ್ಲ. ಸರ್ಕಾರಿ ಕಾಲೇಜುಗಳಲ್ಲಿ 70% ಕ್ಕಿಂತ ಹೆಚ್ಚು ಬೋಧನೆ ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದೆ. ಸುಮಾರು 10,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ UGC ಮತ್ತು Non-UGC ಎಂಬ ಗೊಂದಲದಿಂದ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಿನ್ನಡೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರನ್ನು ಸೇವಾ ಹಿರಿತನದ ಆಧಾರದ ಮೇಲೆ ನೇಮಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಆಯೋಗವನ್ನು ಸರ್ಕಾರ ತಕ್ಷಣ ರಚಿಸಬೇಕೆಂದು ಅವರು ಒತ್ತಾಯಿಸಿದರು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವಿಶ್ವಾನಂದ, ಮಂಜುನಾಥ, ರೇಣುಕಾ, ನಾಗರಾಜ್, ದೇವಾನಂದ್, ಶಿವು, ಭೀಮರೆಡ್ಡಿ, ಅಭಿಲಾಷ, ಮಲ್ಲಿಕಾರ್ಜುನ, ರಾಜು, ಸಂಗೀತಾ, ಭಾಗ್ಯಶ್ರೀ, ಐಶ್ವರ್ಯ, ಉಮಾಶ್ರೀ, ಪ್ರೇಮಾ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News