ಯಾದಗಿರಿ | ವಸತಿರಹಿತರ ಆಶ್ರಯ ಕೇಂದ್ರ ಶ್ಲಾಘನೀಯ : ಪೌರಾಯುಕ್ತ ಉಮೇಶ ಚವ್ಹಾಣ್
ವಿಶ್ವ ವಸತಿ ರಹಿತರ ದಿನಾಚರಣೆ
ಯಾದಗಿರಿ : ನಗರದಲ್ಲಿ ನಿರಾಶ್ರಿತರ ಬಳಕೆಗೆ ಆರಂಭಗೊಂಡಿರುವ ಉಚಿತ ವಸತಿರಹಿತರ ಆಶ್ರಯ ಕೇಂದ್ರವು ನಿರಾಶ್ರಿತರಿಗೆ ಬಹು ಉಪಯುಕ್ತವಾಗಿದ್ದು, ಶ್ಲಾಘನೀಯ ಕಾರ್ಯವಾಗಿದೆ ಎಂದು ಪೌರಾಯುಕ್ತ ಉಮೇಶ ಚವ್ಹಾಣ್ ಪ್ರಶಂಸಿಸಿದರು.
ನಗರಸಭೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ದೀನದಯಾಳ್ ಜನ ಅಜೀವಿಕ ಯೋಜನೆ (ಶಹರಿ) ಮತ್ತು ಭಾರತಾಂಬೆ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ವಸತಿರಹಿತರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವೇಳೆ ಅವರು ಸಸಿ ನೆಟ್ಟು ನೀರೆರೆದು, ಆಶ್ರಯ ಕೇಂದ್ರದ ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆಗೊಳಿಸಿ, ಯೋಗ ಧ್ಯಾನ ಶಿಬಿರ ಮತ್ತು ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು.
ದೇಶದಲ್ಲಿ ಸಾವಿರಾರು ಜನರು ಮನೆಯಿಲ್ಲದೆ, ಬೀದಿಗಳಲ್ಲಿ ರಾತ್ರಿಯನ್ನು ಕಳೆಯುತ್ತಿದ್ದಾರೆ. ಇಂತಹ ವಸತಿರಹಿತರಿಗೆ ಆಶ್ರಯ ನೀಡುವುದು ಸರ್ಕಾರದ ಜೊತೆಗೆ ನಮ್ಮ ಸಾಮಾಜಿಕ ಕರ್ತವ್ಯವೂ ಆಗಿದೆ ಎಂದು ಪೌರಾಯುಕ್ತರು ಹೇಳಿದರು.
ನಗರದ ಕಾರ್ಮಿಕ ವರ್ಗದ ನಿರಾಶ್ರಿತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಆಶ್ರಯ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ ಮಾತನಾಡಿ, ವಸತಿ ಇಲ್ಲದ ನಗರ ಕಾರ್ಮಿಕರಿಗೆ ತಾತ್ಕಾಲಿಕ ಆಶ್ರಯ ನೀಡುವ ಉದ್ದೇಶದಿಂದ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಊಟದ ವ್ಯವಸ್ಥೆ ಇಲ್ಲದಿದ್ದರೂ ಸಂಸ್ಥೆಯೇ ತನ್ನ ಖರ್ಚಿನಲ್ಲಿ ದಿನನಿತ್ಯ ಆಹಾರ ಒದಗಿಸುತ್ತಿದೆ. ಆಶ್ರಯ ಕೇಂದ್ರದಲ್ಲಿರುವವರಿಗೆ ಸರ್ಕಾರದ ಸ್ವಯಂ ಉದ್ಯೋಗ ಯೋಜನೆಗಳ ಸದುಪಯೋಗ ಪಡೆಯಲು ಇಲಾಖೆಯಿಂದ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.
ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ವೈದ್ಯ ಮಾತನಾಡಿ, ವಸತಿರಹಿತರ ರಾತ್ರಿಯ ಸಂಕಷ್ಟ ತಪ್ಪಿಸಲು ತಂಗುದಾಣಗಳನ್ನು ನಿರ್ಮಿಸಲು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಆಶ್ರಯ ಕೇಂದ್ರಗಳು ಕಾರ್ಯಾರಂಭಿಸಿವೆ ಎಂದು ಹೇಳಿದರು.
ಭಾರತಾಂಬೆ ಸಂಸ್ಥೆಯ ಕಾರ್ಯದರ್ಶಿ ಭೀಮಶಂಕರ ಬೆನಕನಹಳ್ಳಿ ಮಾತನಾಡಿ, ಕೊರೊನಾ ಸಮಯದಲ್ಲಿ ಹಲವಾರು ಸವಾಲುಗಳ ನಡುವೆಯೂ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. 2019ರಿಂದ ಯಾದಗಿರಿ, ಶಹಾಪುರ ಮತ್ತು ಸುರಪುರದಲ್ಲಿನ ಆಶ್ರಯ ಕೇಂದ್ರಗಳ ಮೂಲಕ ಸುಮಾರು ಐದು ಸಾವಿರ ಜನರು ಉಪಯೋಗ ಪಡೆದಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಶರಣಪ್ಪ, ಸಿಆರ್ಪಿಗಳಾದ ಅವ್ವಮ್ಮಾ, ಸಾಬಮ್ಮ, ಎಸ್.ಎಂ. ಬಿರಾದರ್, ಆಸ್ಪತ್ರೆ ಸಿಬ್ಬಂದಿ ಗಂಗಾ, ಸಂಸ್ಥೆಯ ವ್ಯವಸ್ಥಾಪಕ ಬೀರಲಿಂಗಪ್ಪ ಕಿಲ್ಲನಕೇರಾ, ಕೇರ್‌ಟೇಕರ್ ಕೃಷ್ಣಾ, ಸಿದ್ರಾಮ್ ಎದ್ದೇರಿ ಕಿಲ್ಲನಕೇರಾ, ದೇವಮ್ಮ ಹಾಗೂ ಅನೇಕ ವಸತಿರಹಿತರು ಉಪಸ್ಥಿತರಿದ್ದರು.