ಯಾದಗಿರಿ | ನ.3 ರಿಂದ ಡಿ.2 ರವರೆಗೆ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ
ಜಾನುವಾರುಗಳಿಗೆ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಿ : ಡಿಸಿ ಹರ್ಷಲ್ ಭೋಯರ್
ಯಾದಗಿರಿ: ರೈತರಿಗೆ ಆರ್ಥಿಕ ಸಂಕಷ್ಟ ಉಂಟು ಮಾಡುವ ಎತ್ತು, ಹೋರಿ, ಹಸು ಹಾಗೂ ಎಮ್ಮೆಗಳಿಗೆ ತಗಲುವ ಮಾರಕ ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಎಂಟನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮ-2025 ಕುರಿತು ಪಶುಸಂಗೋಪನೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದ ಅಂಗವಾಗಿ 2025ನೇ ಸಾಲಿನ ಎಂಟನೇ ಸುತ್ತಿನ ಕಾಲು ಬಾಯಿ ರೋಗ ನಿಯಂತ್ರಣಕ್ಕಾಗಿ ಜಾನುವಾರುಗಳಿಗೆ ನ.3 ರಿಂದ ಡಿ.2 ರವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಗುರುತಿಸಿದ 2.19 ಲಕ್ಷ ದನಕರು, ಎಮ್ಮೆ, ಹಸುಗಳಿಗೆ ಲಸಿಕೆ ಹಾಕಿಸುವಂತೆ ಸೂಚನೆ ನೀಡಿದರು.
ರೈತರು ಹಾಗೂ ಹೈನುಗಾರರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದ ಅಂಗವಾಗಿ ತಾಲೂಕುವಾರು ಪ್ರತಿ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಅವಶ್ಯಕ ಔಷಧಿ ಇಟ್ಟುಕೊಳ್ಳಬೇಕು. ಪಶುವೈದ್ಯರು, ಪಶುಸಖಿಯರು ಕಾಳಜಿಯಿಂದ ಕಾರ್ಯನಿರ್ವಹಿಸಿ ಜಾನುವಾರುಗಳಿಗೆ ಲಸಿಕೆ ಹಾಕಲು ಅವರು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ರಾಜು ದೇಶಮುಖ ಅವರು, ಜಿಲ್ಲೆಯ 2.19 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 2.25 ಲಸಿಕೆ ಸರಬರಾಜು ಮಾಡಲಾಗುತ್ತಿದ್ದು, 265 ಲಸಿಕೆ ದಾರರನ್ನು ನೇಮಿಸಲಾಗಿದೆ. ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. 8 ನೇ ಸುತ್ತಿನಲ್ಲಿರುವುದು ರಾಷ್ಟ್ರ ದ ಏಕೈಕ ರಾಜ್ಯ ಕರ್ನಾಟಕ ಮಾತ್ರ. ಗ್ರಾಮಗಳಲ್ಲಿ ಲಸಿಕೆ ಮಾಡುವ ವೇಳಾಪಟ್ಟಿ ನೀಡಲಾಗುತ್ತದೆ.
ಕಾಲು ಬಾಯಿ ರೋಗದಿಂದ ಜಾನುವಾರು ಗುಣ ಮುಖವಾದರೂ ಮುಂದೆ ಗರ್ಭ ಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ಮತ್ತು ಇಳುವರಿಯಲ್ಲಿ ಇಳಿಮುಖವಾಗುವುದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ.
ಮೂರು ತಿಂಗಳು ಮೇಲ್ಪಟ್ಟ ಎತ್ತು, ಹೋರಿ, ಹಸು, ಎಮ್ಮೆಗಳಿಗೆ ಉಚಿತ ಲಸಿಕೆ ಹಾಕಲಾಗುತ್ತದೆ. ಸುರಕ್ಷತೆಗೆ ಕನಿಷ್ಠ ಎರಡು ಬಾರಿ ಲಸಿಕೆ ಹಾಕಿಸಬೇಕು. ಜಾತ್ರೆ ಅಥವಾ ಸಂತೆಗಳಲ್ಲಿ ಜಾನುವಾರುಗಳಿಗೆ ಕನಿಷ್ಠ 21ದಿನಗಳ ಹಿಂದೆ ಲಸಿಕೆ ಮಾಡಿದ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಅವರು ರೈತರಲ್ಲಿ ಕೋರಿದರು.
ಸಭೆಯಲ್ಲಿ ಪಶುವೈದ್ಯರು, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.