×
Ad

ಕಲ್ಯಾಣ ಕರ್ನಾಟಕದಲ್ಲಿ ತಾಯಿ–ಶಿಶು ಮರಣ, ರಕ್ತಹೀನತೆಯ ವಿರುದ್ಧ ಮಹಿಳಾ ಒಕ್ಕೂಟದ ಧರಣಿ

Update: 2025-10-06 19:09 IST

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರಲ್ಲಿ ಹೆಚ್ಚುತ್ತಿರುವ ರಕ್ತಹೀನತೆ ಹಾಗೂ ತಾಯಿ–ಶಿಶು ಮರಣ ಪ್ರಕರಣಗಳನ್ನು ಖಂಡಿಸಿ ರಾಜ್ಯ ಮಹಿಳಾ ಒಕ್ಕೂಟ (ಕುಟುಂಬ ಬಲವರ್ಧನೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಚಳವಳಿ) ವತಿಯಿಂದ ಸೋಮವಾರ ನಗರದಲ್ಲಿರುವ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.

ಪ್ರತಿಭಟನೆಯಲ್ಲಿ ಅಣಕು ಗರ್ಭಿಣಿ ಮತ್ತು ನವಜಾತ ಶಿಶುವಿನ ಪ್ರತಿಕೃತಿಗೆ ಹೂವಿನ ಹಾರ ಹಾಕಿ, ಸತ್ತಂತೆ ಬಿಂಬಿಸಿ ಶೋಕಾಚರಣೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಲಿಂಗಸುಗೂರು, ರಾಯಚೂರು ಹಾಗೂ ಮಾನ್ವಿ ತಾಲೂಕು ಸೇರಿದಂತೆ ವಿವಿಧ ಪ್ರದೇಶಗಳಿಂದ ಬಾಣಂತಿಯರು ಮತ್ತು ನವಜಾತ ಶಿಶುಗಳನ್ನು ಕಳೆದುಕೊಂಡ ಕುಟುಂಬಸ್ಥರು ಭಾಗವಹಿಸಿ ಸರ್ಕಾರದ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಅಳುತ್ತಾ ತಮ್ಮ ಅಳಲನ್ನು ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರು ಮಾತನಾಡಿ, ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಿಶೋರಿಯರು ಹಾಗೂ ಗರ್ಭಿಣಿಯರಲ್ಲಿ ರಕ್ತಹೀನತೆ ಹೆಚ್ಚಾಗಿದ್ದು, ಅದರ ಪರಿಣಾಮವಾಗಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಏರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಈ ಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ರಕ್ತಹೀನತೆ ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ರಾಯಚೂರಿನಲ್ಲಿ ಶಿಶುಮರಣ ಮತ್ತು ತಾಯಿ ಮರಣ ಪ್ರಮಾಣ ರಾಜ್ಯದಲ್ಲೇ ಅತಿ ಹೆಚ್ಚು. ಈ ಕುರಿತು 2025ರ ಜನವರಿ 25ರಂದು ಜಿಲ್ಲೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಧರಣಿಯಲ್ಲಿ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು “ಅಪೌಷ್ಟಿಕತೆ ನಿವಾರಣೆಗೆ ಪ್ರಯೋಗಾತ್ಮಕ ಯೋಜನೆ ಹಮ್ಮಿಕೊಳ್ಳುತ್ತೇವೆ” ಎಂದು ಭರವಸೆ ನೀಡಿದ್ದರೂ, ಯಾವುದೇ ಕ್ರಮ ಜಾರಿಯಾಗಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

“ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸಚಿವರು ಮತ್ತು ಶಾಸಕರು ನೀಡಿದ ಭರವಸೆಗಳು ಕಾಗದದ ಮಟ್ಟದಲ್ಲೇ ಉಳಿದಿವೆ. ತಾಯಿ ಮತ್ತು ಶಿಶು ಮರಣ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರ ತಕ್ಷಣವೇ ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು” ಎಂದು ಬೇಡಿಕೆ ಇಟ್ಟರು.

ಧರಣಿಯಲ್ಲಿ ವಿದ್ಯಾ ಪಾಟೀಲ್, ಮೋಕ್ಷಮ್ಮ, ವಿರುಪಮ್ಮ, ಶಾಂಭವಿ, ರೇಣುಕಾ, ಗುರುರಾಜ, ಮಾರೆಮ್ಮ, ಬಸವರಾಜ, ಗಿರಿಜಮ್ಮ, ಉಮವ್ವ, ಪಾರ್ವತಿ ಸಿರವಾರ, ಲಕ್ಷ್ಮೀ ಹಲ್ಕಾವಾಟಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News