×
Ad

ಯಾದಗಿರಿ | ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಚುರುಕುಗೊಳಿಸಲು ಜಹೀರಾ ನಸೀಮ್ ಸೂಚನೆ

Update: 2025-10-27 19:18 IST

ಯಾದಗಿರಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಾಚರಣೆಯನ್ನು ಇನ್ನಷ್ಟು ವೇಗಗೊಳಿಸುವಂತೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕ್ಷೇತ್ರದ ಚುನಾವಣಾಧಿಕಾರಿಗಳಾದ ಜಹೀರಾ ನಸೀಮ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, 1 ನವೆಂಬರ್ 2025 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಜಿಲ್ಲೆಯಾದ್ಯಂತ ಸುಮಾರು 1,961 ಮತದಾರರಿದ್ದಾರೆ ಎಂದು ಹೇಳಿದರು.

ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ಅಕ್ಟೋಬರ್ 27 ರಿಂದ 30 ರವರೆಗೆ ಹಾಗೂ ನವೆಂಬರ್ 3 ರಂದು ನಡೆಸಲಾಗುತ್ತದೆ. ಬರುವ ನವೆಂಬರ್ 6ರೊಳಗೆ ಪ್ರತಿಯೊಬ್ಬ ಅರ್ಹ ಶಿಕ್ಷಕರನ್ನೂ ಮತದಾರರಾಗಿ ನೋಂದಾಯಿಸಬೇಕು ಎಂದು ಸೂಚಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಬಯಸುವವರು ಕನಿಷ್ಠ ಮೂರು ವರ್ಷಗಳ ನಿರಂತರ ಸೇವೆಯೊಂದಿಗೆ ಪೂರ್ಣಾವಧಿ ಶಿಕ್ಷಕರಾಗಿರಬೇಕು. ಅರ್ಜಿದಾರರು ನಮೂನೆ-19 ಹಾಗೂ ಅನುಬಂಧ-2ರ ಪ್ರಮಾಣಪತ್ರಗಳನ್ನು ಸಂಬಂಧಿಸಿದ ಸಂಸ್ಥೆಗಳಿಂದ ಸಲ್ಲಿಸಬೇಕೆಂದು ಹೇಳಿದರು.

ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು, ಪಿಯು ಕಾಲೇಜುಗಳು, ಪದವಿ ಕಾಲೇಜುಗಳು, ವೈದ್ಯಕೀಯ, ನರ್ಸಿಂಗ್, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಹಾಗೂ ಆಯುರ್ವೇದ ಕಾಲೇಜುಗಳಂತಹ ಎಲ್ಲಾ ಶಿಕ್ಷಣ ಸಂಸ್ಥೆಗಳ ಅರ್ಹ ಶಿಕ್ಷಕರನ್ನು ಮತದಾರರ ಪಟ್ಟಿಯಲ್ಲಿ ತಪ್ಪದೆ ಸೇರಿಸಬೇಕೆಂದು ಅವರು ನಿರ್ದೇಶಿಸಿದರು.

ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದರೆ ಪ್ರಜಾಪ್ರಾತಿನಿಧ್ಯ ಅಧಿನಿಯಮ 1950ರ 31ನೇ ವಿಧಿಯ ಪ್ರಕಾರ ಶಿಕ್ಷೆ ವಿಧಿಸಲಾಗುವುದೆಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಅಪರ್ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News