ಯಾದಗಿರಿ: ಹುಳು ಹಿಡಿದ ಶಾಲಾ ಬಿಸಿಯೂಟದ ಧಾನ್ಯಗಳನ್ನು ಸ್ವಚ್ಛಗೊಳಿಸಿದ ಶಿಕ್ಷಕರು
ಯಾದಗಿರಿ: ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಮೀಸಲಿರಿಸಿದ್ದ ಧಾನ್ಯಗಳಿಗೆ ನುಸಿ ಹುಳು ತಗುಲಿದ್ದು, ಶಿಕ್ಷಕರೇ ಸ್ವಚ್ಛಗೊಳಿಸಿದ್ದಾರೆ.
ಬಹು ದಿನಗಳಿಂದ ಸಂಗ್ರಹಿಸಿಟ್ಟಿದ್ದ ಅಕ್ಕಿ, ಗೋಧಿ, ತೊಗರಿಬೇಳೆಗೆ ಶಾಲೆಗೆ ರಜೆ ಘೋಷಿಸಿದ ಬಳಿಕ ನುಸಿ ಹುಳು ಹತ್ತಿದ ಪರಿಣಾಮ ಧಾನ್ಯ ಹಾಳಾಗಿತ್ತು. ಹೀಗಾಗಿ ಶಿಕ್ಷಕರು ರಾಶಿ ಯಂತ್ರದ ಸಹಾಯದಿಂದ 7 ಕ್ವಿಂಟಲ್ ಅಕ್ಕಿ, 6 ಕ್ವಿಂಟಲ್ ಗೋಧಿ, 1 ಕ್ವಿಂಟಲ್ ತೊಗರಿ ಬೇಳೆ ಸ್ವಚ್ಛಗೊಳಿಸಿದ್ದಾರೆ.
“ಹತ್ತಾರು ಕ್ವಿಂಟಲ್ ಧಾನ್ಯವನ್ನು ಸಿಬ್ಬಂದಿ ಮೂಲಕ ಶುದ್ಧಗೊಳಿಸುವುದು ಕಷ್ಟವಾಗಿದ್ದರಿಂದ ರಾಶಿ ಯಂತ್ರದ ಮೊರೆ ಹೋಗಿದ್ದೇವೆ. ಯಂತ್ರದ ಮಾಲೀಕರು ಯಾವುದೇ ಹಣ ತೆಗೆದುಕೊಳ್ಳದೆ ಸಹಕರಿಸಿದ್ದು, ಇಂಧನ ಖರ್ಚು ಶಿಕ್ಷಕರೇ ಭರಿಸಿದ್ದಾರೆ,” ಎಂದು ಶಿಕ್ಷಕ ಶಂಕರ್ ರಾಠೋಡ ಹೇಳಿದರು.
ಸ್ವಚ್ಛತಾ ಕಾರ್ಯದಲ್ಲಿ ಮುಖ್ಯಶಿಕ್ಷಕ ಚಂದ್ರನಾಯಕ್ ಹಾಗೂ ಶಿಕ್ಷಕರಾದ ಸಾಬಣ್ಣ, ಕಾಶಪ್ಪ, ರೇಣುಕಾ, ನರಸಮ್ಮ, ವಿದ್ಯಾಶ್ರೀ, ಅನುರಾಧ, ಭೀಮಬಾಯಿ ಸೇರಿದಂತೆ ಅಡುಗೆ ಸಿಬ್ಬಂದಿಯೂ ಪಾಲ್ಗೊಂಡಿದ್ದರು.