12 ಗಂಟೆಗಳಲ್ಲಿ 13 ಸೆಂಟಿಮೀಟರ್ ಮಳೆ: ಬೆಂಗಳೂರಿನಲ್ಲಿ ವ್ಯಾಪಕ ಹಾನಿ

PC: x.com/firstpost
ಬೆಂಗಳೂರು: ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೂ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆಯಿಂದಾಗಿರುವ ಹಾನಿಯನ್ನು ಅಂದಾಜಿಸುವ ಕಾರ್ಯ ಮುಂದುವರಿದಿದೆ. 12 ಗಂಟೆ ಅವಧಿಯಲ್ಲಿ 13 ಸೆಂಟಿಮೀಟರ್ ಮಳೆಯಾಗಿದ್ದು, ಮಳೆಸಂಬಂಧಿ ಅನಾಹುತಗಳಲ್ಲಿ ಮೂವರು ಜೀವ ಕಳೆದುಕೊಂಡಿದ್ದಾರೆ.
ಸುಮಾರು 500 ಮನೆಗಳಿಗೆ ನೀರು ನುಗ್ಗಿದ್ದು, 20ಕ್ಕೂ ಹೆಚ್ಚು ಕೆರೆಗಳು ತುಂಬಿಹರಿದಿವೆ. ತಗ್ಗು ಪ್ರದೇಶಗಳ ಹಲವು ರಸ್ತೆಗಳು ಜಲಮಾರ್ಗಗಳಾಗಿ ಪರಿವರ್ತನೆಯಾಗಿದ್ದು, ಹಲವು ಗಂಟೆಗಳ ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಳಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.
ಎರಡು ವಾಯುಭಾರ ಕುಸಿತ ವ್ಯವಸ್ಥೆಗಳ ಸಂಯೋಗದಿಂದಾಗಿ ನಗರದ ದಕ್ಷಿಣ, ಉತ್ತರ ಮತ್ತು ಪೂರ್ವ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯ ನಿರೀಕ್ಷೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಇದು ಎರಡನೇ ಗರಿಷ್ಠ ಪ್ರಮಾಣದ ಮಳೆ ಎಂದು ಗ್ರೇಟರ್ ಬೆಂಗಳೂರು ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯ ಕಮಿಷನರ್ ಮಹೇಶ್ವರ ರಾವ್ ಹೇಳಿದ್ದಾರೆ. ದುರಸ್ತಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆದಿದ್ದು, ಕೆಲವೆಡೆ ಪರಿಸ್ಥಿತಿ ಕೈಮೀರಿದೆ ಎಂದು ಅವರು ವಿವರಿಸಿದ್ದಾರೆ.
ಕೋರಮಂಗಲ, ಬಿಟಿಎಂ ಲೇಔಟ್, ಎಚ್ಎಸ್ಆರ್ ಲೇಔಟ್ ಮತ್ತು ಮಾರತ್ ಹಳ್ಳಿ ಸೇರಿದಂತೆ ದಕ್ಷಿಣ ಬೆಂಗಳೂರಿನ ಹಲವು ಟೆಕ್ ಕಾರಿಡಾರ್ ಗಳು ಪ್ರವಾಹ ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿವೆ.
"ಮಳೆಹಾನಿಯಿಂದ ಆಗಿರುವ ಅನಾಹುತಗಳ ಬಗ್ಗೆ ಭಾರಿ ಆತಂಕವಿದೆ. ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಹಲವು ವರ್ಷಗಳ ಕಾಲ ಸರ್ಕಾರಗಳು ಹಾಗೂ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ನಾವು ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಆದರೆ ಈಗ ಅದನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಕೇವಲ ತಾತ್ಕಾಲಿಕ ಪರಿಹಾರವಾಗಿರದೇ ದೀರ್ಘಾವಧಿ ಮತ್ತು ಸುಸ್ಥಿರ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇವೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.







