Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  4. ಮಕ್ಕಳ ಸಾಹಿತ್ಯ ವರ್ತಮಾನದ ಸವಾಲುಗಳು

ಮಕ್ಕಳ ಸಾಹಿತ್ಯ ವರ್ತಮಾನದ ಸವಾಲುಗಳು

ವಿಜಯಶ್ರೀ ಎಂ.ಹಾಲಾಡಿವಿಜಯಶ್ರೀ ಎಂ.ಹಾಲಾಡಿ3 Jan 2024 12:42 PM IST
share
ಮಕ್ಕಳ ಸಾಹಿತ್ಯ ವರ್ತಮಾನದ ಸವಾಲುಗಳು
ಕವಯಿತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ಎಂ.ಎ., ಬಿ.ಎಡ್. ಪದವೀಧರರು. ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ಹಿರಿದಾದುದು.‘ಬೀಜ ಹಸಿರಾಗುವ ಗಳಿಗೆ’ ಇವರ ಕವನ ಸಂಕಲನ. ‘ಪಪ್ಪು ನಾಯಿಯ ಪ್ರೀತಿ’ ಕೃತಿಗೆ ಮಕ್ಕಳ ಸಾಹಿತ್ಯ ವಿಭಾಗಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡಮಿಯ ೨೦೧೫ರ ಪುಸ್ತಕ ಬಹುಮಾನ ದೊರಕಿದೆ. ‘ಸೂರಕ್ಕಿ ಗೇಟ್’ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಬಾಲ ಸಾಹಿತ್ಯ ಪುರಸ್ಕಾರ ದೊರಕಿದೆ. ಕನ್ನಡದಲ್ಲಿ ನಿರ್ಲಕ್ಷ್ಯಕ್ಕೀಡಾಗುತ್ತಿರುವ ಮಕ್ಕಳ ಸಾಹಿತ್ಯ ಮತ್ತು ಮಕ್ಕಳನ್ನು ತಲುಪುವಲ್ಲಿ ಸಾಹಿತಿಗಳ ಸಮಸ್ಯೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಮಕ್ಕಳಿಗಾಗಿ ದೊಡ್ಡವರು ಬರೆಯುವ ಸಾಹಿತ್ಯ ವನ್ನು ಮಕ್ಕಳ ಸಾಹಿತ್ಯ ಎಂದು ಗುರುತಿಸಿ ಕೊಳ್ಳುತ್ತೇವೆ. ಅಂದರೆ ನಾವು ಹಿರಿಯರು ನಮ್ಮ ಮಕ್ಕಳಿಗೆ ಯಾವ ಬಗೆಯ ಸಾಹಿತ್ಯ ಕೊಟ್ಟರೆ ಚೆನ್ನ ಎಂದು ಆಲೋಚಿಸಿ ಅಂತಹ ಸಾಹಿತ್ಯವನ್ನು ನೀಡುವುದು. ಹೀಗೆ ಮಾಡುವಾಗ ಬರೆಯುವ ಹಿರಿಯರು ಸಹಜವಾಗಿಯೇ ಕೆಲವು ಅಂಶಗಳನ್ನು ಗುರುತಿಸಿಕೊಳ್ಳುತ್ತಾರೆ. ಮಕ್ಕಳನ್ನು ಖುಷಿಯಾಗಿಡಬೇಕು ಎಂಬ ಆಶಯದೊಂದಿಗೆ ಅವರನ್ನು ಸಮಾಜದ ರೀತಿ ನೀತಿಗಳಿಗೆ ಅನುಗುಣವಾಗಿ ಬೆಳೆಸಬೇಕು ಎಂಬ ಆಕಾಂಕ್ಷೆಯೂ ಸೇರಿರುತ್ತದೆ. ಆದರೆ ನಿಜವಾದ ಮಕ್ಕಳ ಸಾಹಿತ್ಯವೆಂದರೆ ಏನು, ಅದು ಹೇಗಿದ್ದರೆ ಹೆಚ್ಚು ಸೂಕ್ತ, ಆಯ ಕಾಲದ ಅಗತ್ಯಕ್ಕನುಗುಣವಾಗಿ ಅದು ಹೇಗೆ ಬದಲಾಗಬೇಕು ಎಂಬ ಕುರಿತು ಪ್ರತಿಯೊಬ್ಬ ಪ್ರಜ್ಞಾವಂತರು ಯೋಚಿಸಲೇಬೇಕಾಗುತ್ತದೆ.

ಬಹಳ ಹಿಂದಿನಿಂದಲೂ ಜನಪದರು ಮಕ್ಕಳಿಗಾಗಿ ರಚಿಸುತ್ತಾ ಬಂದಿರುವ ಕತೆ, ಹಾಡುಗಳನ್ನು ಕೇಳುತ್ತಲೇ ನಾವೆಲ್ಲ ಬೆಳೆದಿದ್ದೇವೆ. ಚಿಕ್ಕ ಮಗುವನ್ನು, ಮನೆಯವರೆಲ್ಲಾ ಸೇರಿ ಮುದ್ದಿನಿಂದ ಆಟವಾಡಿಸುವಾಗ ಹರಿದುಬರುವ ಹಾಡು,

ಕಥನಗಳ ಒಂದು ದೊಡ್ಡ ಪರಂಪರೆಯೇ ಪ್ರತೀ ಭಾಷೆಯಲ್ಲೂ

ಇದೆ. ಬಹುಶಃ ಮೊದಲ ಮಗು ಹುಟ್ಟಿದಂದೇ ಅಮ್ಮ, ಅಪ್ಪ, ಬಂಧು ಬಾಂಧವರ ಎದೆಯ ಪ್ರೀತಿ ಮಾತಿನ ಮೂಲಕ ಹರಿದು ಕತೆ, ಕವಿತೆಗಳಾಗಿ ಹೊರಹೊಮ್ಮಿರಬಹುದು. ಮಗುವಿನ ಕುರಿತಾದ ಅಕ್ಕರೆ, ಮಮತೆ, ಕಾಳಜಿಗಳೆಲ್ಲವೂ ಇಂತಹ ರಚನೆಗಳಲ್ಲಿ ತುಂಬಿ ಕೊಂಡು ಬಾಯಿಂದ ಬಾಯಿಗೆ ದಾಟಿ ಎಂದೋ ಒಮ್ಮೆ ‘ಮಕ್ಕಳ ಸಾಹಿತ್ಯ’ವೆಂದು ಗುರುತಿಸಲ್ಪಟ್ಟಿರಬೇಕು. ಅಂತಹ ಎಷ್ಟೋ ಜನಪದೀಯ ರಚನೆಗಳು ಸ್ಥಳೀಯವಾಗಿ ಪ್ರಸಿದ್ಧಿಯಾಗಿರುತ್ತವೆ.

ಆನೆ ಬಂತೊಂದಾನೆ/ ಯಾವೂರಾನೆ/ ಸಿದ್ದಾಪುರದ ಆನೆ/ ಇಲ್ಲಿಗೇಕೆ ಬಂತು?

ಅವಲಕ್ಕಿ ಪವಲಕ್ಕಿ/ ಕಾಂಚಣ ಮಿಣಿಮಿಣಿ?

ದ್ವಾಸಿ ಮಾಡ್ಲಕ್ಕಿತ್ತಲೇ/ ಅಕ್ಕಿ ಇಲ್ಯಲೇ/ ಅಕ್ಕಿ ತಪ್ಪುಕೆ ಅಕ್ಕನ್ ಮನಿಗ್ ಹ್ವಾಪ್ವಲೇ/ ಅಕ್ಕನ್ ಮನಿಗ್ ಹ್ವಾಪು ದಾರಿ ಯಾವ್ದ್? ದಾರಿ ಯಾವ್ದ್?.

ಇಂತಹ ಅನೇಕ ರಚನೆಗಳನ್ನು ಕಾಣಬಹುದು.




ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದಲ್ಲಿ ಹಿರಿಯ ಬರಹಗಾರರು ಮಕ್ಕಳಿಗಾಗಿ ವಿಪುಲವಾಗಿ ಬರೆದಿದ್ದರು. ಹಾಗೆ ಮಕ್ಕಳಿಗಾಗಿ ಬರೆಯುವುದು ಒಂದು ಬದ್ಧತೆಯೆಂಬಂತೆ ಅವರೆಲ್ಲ ನಡೆದುಕೊಂಡಿದ್ದಾರೆ. ಕುವೆಂಪು, ಶಿವರಾಮ ಕಾರಂತರು, ಪಂಜೇಮಂಗೇಶರಾಯರು, ಜಿ.ಪಿ. ರಾಜರತ್ನಂ, ಹೊಯಿಸಳ ಮೊದಲಾದ ಹಿರಿಯ ಬರಹಗಾರರು ಮಕ್ಕಳಿಗಾಗಿ ಬರೆದ ಒಂದು ರಚನೆ ಯಾದರೂ ಸಾಹಿತ್ಯದ ಓದುಗರ ನಾಲಗೆಯಲ್ಲಿ ಥಟ್ಟನೇ ಬಂದುಬಿಡುತ್ತದೆ. ನವೋದಯದ ಮುಂದಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ಸೊರಗಿತೆಂದು ವಿಮರ್ಶಕರು ಗುರುತಿಸು ತ್ತಾರೆ. ನವ್ಯದ ಕಾಲದಲ್ಲಿ ನವೋದಯದ ಈ ಬದ್ಧತೆ ಕಾಣಲಿಲ್ಲ. ಆದರೆ ಆ ಕಾಲಘಟ್ಟಗಳನ್ನೆಲ್ಲಾ ದಾಟಿ ಮುಂದೆ ಬಂದರೆ ಮತ್ತೆ ಲಕ್ಷ್ಮೀನಾರಾಯಣ ಭಟ್ಟ, ಎಚ್. ಎಸ್ ವೆಂಕಟೇಶಮೂರ್ತಿ, ಸುಮತೀಂದ್ರನಾಡಿಗ, ಪಳಕಳ ಸೀತಾರಾಮ ಭಟ್, ವೈದೇಹಿ, ಶ್ರೀನಿವಾಸ ಉಡುಪ ಹೀಗೆ ಅನೇಕರು ಹೊಸ ಪ್ರಯೋಗಗಳೊಂದಿಗೆ ಮಕ್ಕಳ ಸಾಹಿತ್ಯವನ್ನು ರಚಿಸಿದ್ದು ಕಾಣಸಿಗುತ್ತದೆ. ಹಾಗೇ ಪ್ರಸ್ತುತ ಸನ್ನಿವೇಶದಲ್ಲಿ ಅಂದರೆ ೨೧ನೇ ಶತಮಾನದ ಮೊದಲ ದಶಕ ಮತ್ತು ಅದರ ಹಿಂದಿನ ದಶಕದಿಂದಲೂ ಮಕ್ಕಳ ಸಾಹಿತ್ಯ ರಚನೆ ಹೇರಳವಾಗಿಯೇ ಕಂಡು ಬರುತ್ತದೆ. ಅವುಗಳಲ್ಲಿ ಗಟ್ಟಿಕಾಳುಗಳಂತಹ ರಚನೆಗಳನ್ನು ಹುಡುಕುತ್ತ ಹೊರಟರೆ ತೀರಾ ನಿರಾಸೆಯೇನೂ ಆಗುವುದಿಲ್ಲ. ಇತ್ತೀಚೆಗಂತೂ ಯುವ ಬರಹಗಾರರನೇಕರು ಮಕ್ಕಳ ಸಾಹಿತ್ಯದೆಡೆಗೆ ಆಸಕ್ತಿ ತೋರುತ್ತಿದ್ದಾರೆ. ಹೊಸ ನುಡಿಗಟ್ಟು, ಆಶಯಗಳ ಹೊಸ ಬರಹಗಳು ಬರುತ್ತಿವೆ. ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಏನನ್ನು ಒಳಗೊಂಡಿರಬೇಕು, ಈ ಕಾಲದ ಮಕ್ಕಳಿಗೆ ಏನನ್ನು ಕೊಡಬೇಕೆಂದು ನಾವು ಬರಹಗಾರರು ಆಲೋಚಿಸಲೇಬೇಕಾಗಿದೆ.

ಕನ್ನಡ ನೆಲದ ಮಕ್ಕಳು ಅಂದರೆ ಬಹುತೇಕ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲೇ ಶಿಕ್ಷಣ ಪಡೆಯುತ್ತಿರುವ ಕಾಲಘಟ್ಟವಿದು. ಈ ವಿದ್ಯಮಾನಕ್ಕೆ ಹಳ್ಳಿ- ಪಟ್ಟಣ ಎಂಬ ಭೇದವಿಲ್ಲ. ಹಳ್ಳಿ ಹಳ್ಳಿಗಳಿಗೂ ಖಾಸಗಿ ಶಾಲಾ ಬಸ್ಸುಗಳು ಧಾವಿಸಿ ಬಂದು ಮಕ್ಕಳನ್ನು ಕರೆದೊಯ್ಯುತ್ತವೆ. ಬೆಳ್ಳಂಬೆಳಗಿನ ಹೊತ್ತು ಇದನ್ನು ಗಮನಿಸುತ್ತಾ ಸರಕಾರಿ ಶಾಲೆಗಳು ನಿಡುಸುಯ್ಯುತ್ತವೆ! ಇದರೊಂದಿಗೆ ಟೆಕ್ನಾಲಜಿಯ ಭರಾಟೆ ಉತ್ತುಂಗದಲ್ಲಿರುವ ಕಾಲವಿದು. ಮೊಬೈಲ್, ಟಿ.ವಿ, ಸಾಮಾಜಿಕ ಮಾಧ್ಯಮಗಳು, ಅಂತರ್ಜಾಲ, ಯೂಟ್ಯೂಬ್ ಚಾನಲ್ಗಳು ಹೀಗೆ ಬೇರೆ ಬೇರೆ ಹೆಸರಿನ; ಹೆಚ್ಚು ಕಮ್ಮಿ ಒಂದೇ ತಿರುಳಿನ ಅನೇಕ ಅಂಶಗಳು ಇದರಲ್ಲಿ ಸೇರಿಕೊಂಡಿವೆ. ಇಂತಹ ಮಾಧ್ಯಮಗಳಿಂದ ಒಳಿತು ಕೆಡುಕು ಎರಡೂ ಇವೆ. ಸಿಕ್ಕಾಪಟ್ಟೆ ಮಾಹಿತಿಗಳು ದೊಡ್ಡವರನ್ನೂ, ಮಕ್ಕಳನ್ನೂ ತಲುಪುತ್ತಿವೆ. ಹಾಗೇ ಸುಳ್ಳು ಸುದ್ದಿಯಾವುದು ನಿಜದ ನಿಜ ಯಾವುದು ಎಂದು ತಿಳಿಯಲಾಗದೆ ಮನುಷ್ಯ ಒದ್ದಾಡುತ್ತಿದ್ದಾನೆ. ಇದರೊಂದಿಗೆ ಹದಿಹರೆಯದ ಎಳೆ ಮನಸ್ಸುಗಳನ್ನು ದಾರಿ ತಪ್ಪಿಸಬಲ್ಲಂತಹ ಸಾಮಗ್ರಿಗಳು ಇಂತಹ ಮಾಧ್ಯಮಗಳಲ್ಲಿ ಹೇರಳವಾಗಿ ದೊರಕುತ್ತಿವೆ. ಈ ತರದ ವಿಚಿತ್ರ, ವಿಪರೀತ ಸನ್ನಿವೇಶದಲ್ಲಿ ‘ಮಕ್ಕಳ ಸಾಹಿತ್ಯ’ ಸಪ್ಪೆ ಎನ್ನಿಸಿಕೊಳ್ಳುವುದು ಬಹು ಸುಲಭ. ಹಾಗಾದರೆ ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಎಂತಹ ಸಾಹಿತ್ಯ ಕೊಡಬೇಕು ಎಂದು ಉತ್ತರ ಹುಡುಕಬೇಕಾಗಿದೆ.

ಮಕ್ಕಳ ಸಾಹಿತ್ಯದ ಮುಖ್ಯ ಗುಣ, ಮಕ್ಕಳನ್ನು ಖುಷಿಪಡಿಸುವುದಾಗಿರಬೇಕು. ನೆಮ್ಮದಿಯಿಂದಿರುವ ಮಗು ಸಮಾಜದ ಆಸ್ತಿ. ಮಗುವನ್ನು ಕಲ್ಪನಾಲೋಕಕ್ಕೆ ಕರೆದೊಯ್ದು ಅದರ ಸೃಜನಶೀಲತೆ ಮತ್ತು ಮಾನವತನ ಒಂದು ನಿರ್ದಿಷ್ಟರೂಪ ಕಂಡುಕೊಳ್ಳುವಂತೆ ಮಾಡುವುದು ಮಕ್ಕಳ ಸಾಹಿತ್ಯದ ಪ್ರಮುಖ ಉದ್ದೇಶ. ಮಕ್ಕಳ ಸಾಹಿತ್ಯವೆಂದರೆ ಅದು ನೀತಿಯನ್ನು ಬೋಧಿಸಬೇಕು, ಆದರ್ಶಗಳ ಘೋಷಣೆಗಳಿಂದ ಕಿಕ್ಕಿರಿದಿರಬೇಕು, ಪಂಚತಂತ್ರ ಮಾದರಿಯ ಕತೆಗಳಾಗಿರಬೇಕು, ರಾತ್ರಿ - ಬೆಳಗೂ ಮುಗಿಯದ ಉದ್ದುದ್ದ ಕಥಾ ಸಾಮ್ರಾಜ್ಯವಿರಬೇಕು ಎಂದೆಲ್ಲ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆದರೆ ಬೋಧನೆ, ಪಂಚತಂತ್ರ ಮಾದರಿಯ ಕಥೆಗಳು ಖಂಡಿತಾ ಅವಶ್ಯಕತೆಯಿಲ್ಲ. ಬೋರು ಹೊಡೆಸುವ ಸಾಹಿತ್ಯವನ್ನು ಚೈತನ್ಯದ ಚಿಲುಮೆಗಳಾದ ಮಕ್ಕಳು ಇಷ್ಟಪಡುವುದೂ ಇಲ್ಲ. ಮಗು ಕುತೂಹಲಿ, ಆಶಾವಾದಿ, ಸಂತಸದಿಂದ ಕುಣಿಯುವ; ಪ್ರಕೃತಿ - ಪ್ರಾಣಿಗಳನ್ನು ನೋಡಿ ತಣಿಯುವ, ದಿನವಿಡೀ ಉಲ್ಲಾಸದಿಂದ ಪುಟಿಯುವ ಅದ್ಭುತ ಸೃಷ್ಟಿ. ಇಂತಹ ಮಗುವಿಗೆ ನೀರಸವಾದ ನೀತಿ ಪಾಠದಂತಹ ಸಾಹಿತ್ಯ ಹಿಡಿಸಲಾರದೆಂಬುದನ್ನು ಮಕ್ಕಳಿಗಾಗಿ ಬರೆಯುವವರು ಮೊತ್ತಮೊದಲು ತಿಳಿದುಕೊಳ್ಳಬೇಕು. ಶಾಲಾ ಪಠ್ಯಗಳ ಮಾನಸಿಕ ಹೊರೆಯಿಂದ ತುಸು ಹೊತ್ತು ತಪ್ಪಿಸಿಕೊಂಡು ಬಂದು ಅಡ್ಡಾಡಿ, ಶಕ್ತಿ ತುಂಬಿಕೊಂಡು ಮರಳಲು ಆಸರೆಯಾಗುವಂತೆ ಮಕ್ಕಳ ಸಾಹಿತ್ಯವಿರಬೇಕು. ಕುತೂಹಲ ತಣಿಸುವ, ಸುಮ್ಮನೇ ಬೇರೊಂದು ಲೋಕಕ್ಕೆ ಪಯಣಿಸುವ, ಎದೆಗೆ ಸಂತಸ ತುಂಬಿಕೊಡುವ, ತೀರಾ ಹೊಸದಾದ ಸಾಹಿತ್ಯ ಮಕ್ಕಳಿಗೆ ಬೇಕು. ಇಂತಹ ಬರಹ ಸ್ವತಃ ಸಾಹಿತಿಗಳಿಗೂ ಸವಾಲೇ.

ಮಕ್ಕಳ ಸಾಹಿತ್ಯವೆಂದರೆ ಇಡೀ ಸಾಹಿತ್ಯವಲಯ ಕೂತು ಚರ್ಚಿಸಬೇಕಾದ ವಿಷಯ. ಮಕ್ಕಳ ಸಾಹಿತಿಗಳೆಂದರೆ ಸರಳ ರಚನೆಗಳನ್ನು ಹೊಸೆಯುವ; ‘ಬುದ್ಧಿಜೀವಿ’ಗಳಲ್ಲದ ಮನುಷ್ಯರು ಎಂಬ ಸ್ಥೂಲ ಗ್ರಹಿಕೆಯನ್ನು ಪ್ರೌಢಸಾಹಿತಿಗಳು ಈಗಲಾದರು ಕೈಬಿಡಬೇಕು. ಹಾಗೆ ಮಕ್ಕಳ ಬರಹಗಾರರೂ ‘ಏನೋ ಸರಳವಾಗಿ ಬರೆದರಾಯ್ತು’ ಎಂಬ ಲಘುತನವಿದ್ದರೆ, ಬಿಟ್ಟುಬಿಡಬೇಕು. ಮಕ್ಕಳ ಸಾಹಿತಿಗಳೊಂದಿಗೆ ಇನ್ನಿತರ ಬರಹಗಾರರ ಸಂವಾದ ಈನಿಟ್ಟಿನಲ್ಲಿ ಫಲಕಾರಿಯಾಗಬಹುದು. ವೈಜ್ಞಾನಿಕ ವಿಷಯಗಳನ್ನೊಳಗೊಂಡ ಲವಲವಿಕೆಯ ಸಾಹಿತ್ಯ, ಸಮಾಜದಲ್ಲಿನ ತಾರತಮ್ಯವನ್ನು ತೊಡೆದುಹಾಕಿ ಸಂವಿಧಾನಬದ್ಧ ಸಮಸಮಾಜದ ಕಟ್ಟುವಿಕೆ, ಲಿಂಗತಾರತಮ್ಯವನ್ನು ಪೋಷಿಸದೇ ಇರುವುದು, ಜೀವಿ ಪರಿಸರ, ಹೊಸ ತಂತ್ರಜ್ಞಾನದ ಆವಿಷ್ಕಾರಗಳು, ಶೋಷಿತರ ಬದುಕು - ಬವಣೆ ಹೀಗೆ ವಿಷಯಗಳನ್ನು ಹುಡುಕಿಕೊಳ್ಳುತ್ತಾ ಸಾಗಬೇಕು. ಆದರೆ ಲವಲವಿಕೆ, ಹೊಸತನವನ್ನು ಕಳೆದುಕೊಂಡರೆ ಅಂತಹ ರಚನೆಗಳು ಮಕ್ಕಳನ್ನು ತಲುಪಲಾರವು.. ಇದರೊಂದಿಗೆ ವಿವಿಧ ಬಗೆಯ ಸಾಹಿತ್ಯ ಪ್ರಕಾರಗಳಿಗೂ ವ್ಯಾಪ್ತಿಯನ್ನು ಹಿಗ್ಗಿಸಬೇಕಾದ ಅವಶ್ಯಕತೆಯಿದೆ.

ಇನ್ನೊಂದು ಪ್ರಮುಖ ವಿಷಯವೆಂದರೆ, ಈಗಾಗಲೇ ಇರುವ ಗುಣಮಟ್ಟದ ಸಾಹಿತ್ಯವನ್ನು ಮಕ್ಕಳಿಗೆ ತಲುಪಿಸುವುದು ಹೇಗೆ ಎಂಬುದು. ಮೊದಲೇ ಪ್ರಸ್ತಾಪಿಸಿದಂತೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆಗೆ ತೆರೆದುಕೊಂಡಿರುವ ಇವತ್ತಿನ ಬಹುತೇಕ ಮಕ್ಕಳು ಇಂಗ್ಲಿಷ್ ಹಾಡುಗಳನ್ನೇ ಕೇಳುತ್ತಾರೆ, ಇಂಗ್ಲಿಷ್ ಪುಸ್ತಕಗಳನ್ನೇ ಓದುತ್ತಾರೆ. ಕನ್ನಡ ಓದುವುದಂತೂ ಕಷ್ಟದಲ್ಲಿ. ಇನ್ನು, ಅಂತರ್ಜಾಲದಲ್ಲಿ ಲಭ್ಯವಿರುವ ಶಿಶುಗೀತೆಗಳನ್ನು ಇಂಗ್ಲಿಷಿನದ್ದೇ ಆರಿಸಿಕೊಂಡು ಕೇಳುತ್ತಾರೆ ಮತ್ತು ಪೋಷಕರು ಕೇಳಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ವಿದ್ಯಾವಂತ ಪೋಷಕರ ಪಾತ್ರ ಮಹತ್ವದ್ದು. ಮಕ್ಕಳಿಗೆ ಕನ್ನಡ ಪರಿಸರವನ್ನು ಕಟ್ಟಿಕೊಡುವುದು ಅವರ ಕೈಯಲ್ಲಿದೆ, ಹಾಗೆಯೇ ಶಿಕ್ಷಕರ ಪಾತ್ರವೂ ಬಹು ಮುಖ್ಯ. ಮಕ್ಕಳ ಸಾಹಿತ್ಯ ಮಕ್ಕಳಿಗೆ ತಲುಪುವಲ್ಲಿ ಬರಹಗಾರರೇ ಸಣ್ಣ ಸಣ್ಣ ತಂಡಗಳನ್ನು ಮಾಡಿಕೊಂಡು ಪ್ರಯತ್ನಿಸಬಹುದು. ಬಿಡುವಾದಾಗ ಶಾಲೆಗಳಿಗೆ ಹೋಗಿ ಮಕ್ಕಳ ಸಾಹಿತ್ಯವನ್ನು ಪರಿಚಯಿಸುವುದು, ಮಕ್ಕಳನ್ನು ಒಂದೆಡೆ ಸೇರಿಸಿ ಕತೆ, ಕವಿತೆಗಳನ್ನು ಕೇಳಿಸುವುದು ಮುಂತಾದುವನ್ನು ಸೃಜನಶೀಲವಾಗಿ ಹಮ್ಮಿಕೊಳ್ಳಬೇಕು. ಅಂತರ್ಜಾಲದ ಬಳಕೆಯನ್ನು ಮಾಡಿಕೊಂಡು ಮಕ್ಕಳ ಸಾಹಿತ್ಯವನ್ನು ತಲುಪಿಸುವ ಕೆಲಸವನ್ನು ಮಾಡಬಹುದು.

ಮಗು ಈ ನೆಲದ ನಕ್ಷತ್ರ; ಭೂಮಿಯ ಮೇಲಿನ ದೇವರು. ನಿಸರ್ಗದ ಸುಂದರ ಬಳ್ಳಿ ತಳೆದ ಮೊಗ್ಗು. ಇಂತಹ ಮುಗ್ಧ ಮನಸ್ಸಿನ ಮಕ್ಕಳು ನಮ್ಮ ಸುತ್ತಲೂ ಇದ್ದಾರೆ. ಆದರೆ ಅವರಲ್ಲಿ ಅನೇಕರಿಗೆ ಇರಲೊಂದು ಜೋಪಡಿಯೂ ಇಲ್ಲ, ತಿನ್ನಲು ಮೂರು ಹೊತ್ತಿನ ಊಟ ಸಿಕ್ಕುವುದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿ ಅಂತಹ ಮಕ್ಕಳು ದಿನದೂಡುತ್ತಿದ್ದಾರೆ. ಅಂತಹ ಮಕ್ಕಳಿಗೆ ಮೊದಲು ಸೂಕ್ತ ಮೂಲಭೂತ ಸೌಲಭ್ಯ, ಶಿಕ್ಷಣ ಲಭ್ಯವಾಗಬೇಕು. ಜೊತೆಗೆ ಉತ್ತಮ ಪುಸ್ತಕಗಳೂ ಅವರನ್ನು ತಲುಪಬೇಕು. ಈ ನಿಟ್ಟಿನಲ್ಲಿ ಸಮಾಜದ ಸೂಕ್ಷ್ಮಸಂವೇದಿ ಮನಸ್ಥಿತಿಯ ಜವಾಬ್ದಾರಿಯುತ ಪ್ರಜೆಗಳಾದ ನಾವೆಲ್ಲ ಚಿಂತಿಸಿ ಕೆಲಸಮಾಡಬೇಕಾಗಿದೆ.

share
ವಿಜಯಶ್ರೀ ಎಂ.ಹಾಲಾಡಿ
ವಿಜಯಶ್ರೀ ಎಂ.ಹಾಲಾಡಿ
Next Story
X