ರೊಟ್ಟಿ ಉಪ್ಪಿನ ಸವಾಲುಗಳು ಮತ್ತು ಹಲ್ಲೆಗಳು
ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ ಲೇಖನ ಸರಣಿ

‘ಭೀತಿಯುಳ್ಳ ಪತ್ರಕರ್ತ ಲೋಕತಂತ್ರದಲ್ಲಿ ಸತ್ತ ನಾಗರಿಕನನ್ನು ಸೃಷ್ಟಿಸುತ್ತಾನೆ’ ಎಂದಿದ್ದರು ಹಿರಿಯ ಪತ್ರಕರ್ತ ರವೀಶ್ ಕುಮಾರ್. ಇವತ್ತಿನ ದಿನಮಾನದಲ್ಲಿ ಪತ್ರಕರ್ತರ ಮೇಲಿನ ಹಲ್ಲೆಗಳ ಬಗ್ಗೆ ಓದುವಾಗ ಅವರ ಮಾತುಗಳು ನೆನಪಾಗುತ್ತವೆ. ಕೇರಳ, ತೆಲಂಗಾಣ, ಜಮ್ಮು-ಕಾಶ್ಮೀರ್, ಮಣಿಪುರ, ಗುಜರಾತ್ ಯಾವುದೇ ರಾಜ್ಯವನ್ನು ತೆಗೆದುಕೊಳ್ಳಿ ಪತ್ರಕರ್ತರ ಮೇಲಿನ ಹಲ್ಲೆಗಳು, ಆರೋಪದಡಿ ಬಂಧಿಸುವುದೋ, ಕಿಡ್ನಾಪ್ ಇತ್ಯಾದಿ ಸರ್ವೇಸಾಮಾನ್ಯವಾಗಿವೆ. ಸುದ್ದಿಮಾಧ್ಯಮಗಳು ಯಾವಾಗ ಬಲಪಂಥೀಯ ಬಂಡವಾಳಶಾಹಿಗಳ ವಶವರ್ತಿಯಾದವೋ ರವೀಶ್ ಕುಮಾರ್, ಅಭಿಸಾರ್ ಶರ್ಮಾ, ಪುಣ್ಯ ಪ್ರಾಸೂನ್ ವಾಜಪೇಯಿ ಅವರಂತಹ ಪ್ರಾಮಾಣಿಕ ಪತ್ರಕರ್ತರು ಗುಲಾಮಗಿರಿಯಿಂದ ಹೊರಬಂದು ಸ್ವತಂತ್ರ ಪತ್ರಿಕೋದ್ಯಮವನ್ನು ಆರಂಭಿಸಿದ್ದು ನಮ್ಮೆದುರಿನ ಕಟುವಾಸ್ತವ. ಅದು ಇಂದಿನ ಅಗತ್ಯವೂ ಅನಿವಾರ್ಯವೂ ಆಗಿದೆ. ಸ್ವತಂತ್ರ ಸುದ್ದಿಮಾಧ್ಯಮಗಳನ್ನೂ ಈ ಸರ್ವಾಧಿಕಾರಿ ಸರಕಾರ ನೆಮ್ಮದಿಯಿಂದ ಕೆಲಸಮಾಡಲು ಬಿಡಲಿಲ್ಲ. ಅವರ ಮೇಲೆ ಈ.ಡಿ. ದಾಳಿಗಳನ್ನು ನಡೆಸಿತು. ಕೊಟ್ಟ ಚಿತ್ರಹಿಂಸೆ, ಮಾನಸಿಕ ಕಿರುಕುಳಕ್ಕೆ ಲೆಕ್ಕವಿಲ್ಲ. ಆದರೂ ಎದೆಗುಂದದ ನಿರ್ಭೀತ ಪತ್ರಕರ್ತರು ನಿರಂತರವಾಗಿ ತಮ್ಮ ಕರ್ತವ್ಯವನ್ನು ಪಾಲಿಸುತ್ತಲೇ ಇದ್ದಾರೆ. ಇಂತಹ ನಿರ್ದಯಿ ವಾತಾವರಣದಲ್ಲಿ ಯಾವ ನಿರ್ಭೀತ ಪತ್ರಕರ್ತ ಇಂದು ಸುರಕ್ಷಿತವಾಗಿದ್ದಾನೆ? ಪತ್ರಕರ್ತರ ಮೇಲಿನ ಹಲ್ಲೆಗಳಿಗೆ ಯಾಕೆ ಕಾರ್ಯಾಂಗ, ನ್ಯಾಯಾಂಗಗಳೆಲ್ಲವೂ ಕಣ್ಣುಮುಚ್ಚಿ ಕುಳಿತಿವೆ? ಯಾಕೆ ಮೋದಿಗೆ ಅಷ್ಟೊಂದು ಭಯ? ಸರ್ವಾಧಿಕಾರಿ ಪ್ರಭುತ್ವ ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲ. ಫ್ಯಾಶಿಸಂ ಪ್ರಾಬಲ್ಯದ ಇವತ್ತಿನ ರಾಜಕಾರಣ ತಾರ್ಕಿಕ ಹಾಗೂ ಬೌದ್ಧಿಕ ಎಚ್ಚರದ ಪ್ರಜ್ಞಾವಂತ ಸಮಾಜವನ್ನು ಒಡೆಯಬೇಕೆನ್ನುತ್ತದೆ.
ಹಿಂದೆ ೨೦೧೯ರಲ್ಲಿ ಮಿರ್ಜಾಪುರದ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಉಣಬಡಿಸಲಾಗಿದ್ದ ‘ರೊಟ್ಟಿ ಉಪ್ಪಿನ’ ವೀಡಿಯೊವನ್ನು ತೋರಿಸಿ ಜನರ ಕಣ್ತೆರೆಸಿದ ತಪ್ಪಿಗೆ, ಸರಕಾರ ಮತ್ತು ಶಿಕ್ಷಣ ಇಲಾಖೆಯನ್ನು ಎಚ್ಚರಿಸಿದ ತಪ್ಪಿಗೆ ಆರೋಪಿಯಾದ ಜನಸಂದೇಶ್ ಪತ್ರಿಕೆಯ ಪವನ್ ಕುಮಾರ್ ಜೈಸ್ವಾಲ್ ಮುಖವೇ ಕಣ್ಣೆದುರಿಗೆ ಬರುತ್ತಿರುತ್ತದೆ. ಪ್ರಜಾಪ್ರಭುತ್ವದ ಆಶಯಗಳನ್ನೇ ಮಣ್ಣುಗೂಡಿಸುತ್ತಿರುವ ಸನ್ನಿವೇಶದಲ್ಲಿ ನಾವಿಂದು ಬದುಕುತ್ತಿದ್ದೇವೆ. ಪ್ರಾಮಾಣಿಕ ಪತ್ರಿಕೋದ್ಯಮ ಜೀವಂತವಿದ್ದುದರಿಂದಲೇ ಮಿರ್ಜಾಪುರದ ‘ರೊಟ್ಟಿ ಉಪ್ಪಿನ’ ಕತೆ ಹೇಗೆ ರಾಷ್ಟ್ರೀಯ ಸುದ್ದಿಯಾಗಿ ಗಮನ ಸೆಳೆದಿತ್ತು. ಪ್ರಸ್ತುತ ಉತ್ತರ ಪ್ರದೇಶವೆಂದರೆ ಎಲ್ಲಾ ಅಸಂಗತಗಳ ಡಿಸ್ಟೋಪಿಯನ್ ರೂಪಕವಾಗಿದೆ. ವಿಶೇಷವಾಗಿ ಪತ್ರಕರ್ತರ ಮೇಲಿನ ದಾಳಿ, ಹಲ್ಲೆಗಳ ವಿಷಯದಲ್ಲಿಯೂ ಉತ್ತರ ಪ್ರದೇಶ ಅಗ್ರಗಣ್ಯವೆನ್ನಬಹುದು.
ಉತ್ತರಪ್ರದೇಶದ ಜನಸಂದೇಶ್ ಪತ್ರಿಕೆಯ ಪತ್ರಕರ್ತ ಪವನ್ ಕುಮಾರ್ ಜೈಸ್ವಾಲ್ ಮೇಲೆ ಎಫ್ಐಆರ್ ದಾಖಲಾಗಿಸಿದ್ದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿತ್ತು. ಈ ಕೂಡಲೇ ದೂರನ್ನು ಹಿಂಪಡೆಯಬೇಕೆಂದು ನೂರಾರು ಪತ್ರಕರ್ತರು ಮಿರ್ಜಾಪುರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆಡಳಿತದಲ್ಲಿನ ಕುಂದುಕೊರತೆಯನ್ನು ಗಮನಕ್ಕೆ ತಂದು ಎಚ್ಚರಿಸಿದವರನ್ನೇ ಇಂದು ಅಧಿಕಾರದಲ್ಲಿರುವವರು ಆರೋಪಿಗಳನ್ನಾಗಿಸಿ ಜೈಲಿಗಟ್ಟುತ್ತಾರೆಂದರೆ ಸಮಾಜ ಕೊಳೆಯುತ್ತಿದೆ ಅಂತಲೇ ಅರ್ಥ. ಪ್ರಜಾಪ್ರಭುತ್ವದ ಕತ್ತನ್ನು ಹಿಸುಕುವ ಈ ಹುನ್ನಾರಗಳನ್ನು ತಡೆಯುವ ಶಕ್ತಿಗಳೇ ಕೈಚೆಲ್ಲಿ ಕುಳಿತಾಗ ಯಾರನ್ನು ದೂರಬೇಕು?
ಮೋದಿ ಆಡಳಿತವು ಪತ್ರಿಕೆಗಳನ್ನು ಮೌನಗೊಳಿಸಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬಳಸಿದ ಪ್ರಮುಖ ಸಾಧನಗಳಲ್ಲಿ ಕಾನೂನುಬಾಹಿರ ದೌರ್ಜನ್ಯ (ತಡೆಗಟ್ಟುವಿಕೆ) ಕಾಯ್ದೆ (UAPA) ಒಂದಾಗಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರದ ಈ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಕೊಲ್ಲಲ್ಪಟ್ಟ ೨೮ ಪತ್ರಕರ್ತರಲ್ಲಿ ಅರ್ಧದಷ್ಟು ಮಾಧ್ಯಮ ನಿರ್ದೇಶಕರು, ತನಿಖಾ ವರದಿಗಾರರು ಮತ್ತು ವರದಿಗಾರರು ಸೇರಿದಂತೆ ಪರಿಸರಕ್ಕೆ ಸಂಬಂಧಿಸಿದ ಕಥೆಗಳ ಮೇಲೆ ಕೆಲಸ ಮಾಡುತ್ತಿದ್ದವರು. ಪತ್ರಕರ್ತರ ರಕ್ಷಣೆ ಮತ್ತು ಅವರ ವಿರುದ್ಧದ ಹಿಂಸಾಚಾರದ ಅಪರಾಧಗಳಿಗೆ ಅಭಯವನ್ನು ನೀಡುವುದು ಮೋದಿ ಅವರು ಮತ್ತೊಂದು ಅವಧಿಗೆ ಪ್ರಯತ್ನಿಸುತ್ತಿದ್ದ ಚುನಾವಣೆಯ ಕೇಂದ್ರದಲ್ಲಿರಬೇಕು ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (RSF) ಅಂದಾಜಿಸಿತ್ತು.
ಉತ್ತರಪ್ರದೇಶದ ಪೊಲೀಸರ ಕಾರ್ಯವೈಖರಿಯನ್ನು ನೋಡಿದರೆ ಮೈನಡುಗುತ್ತದೆ. ಲೆಕ್ಕವಿರದ ಫೇಕ್ ಎನ್ಕೌಂಟರ್ಗಳು, ದಬ್ಬಾಳಿಕೆ, ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಎಲ್ಲ ಪೇಚುಗಳನ್ನು ಇಲ್ಲಿನ ಪೊಲೀಸರು ಪ್ರಭುತ್ವ ಬಯಸುವಂತೆಯೇ ಚಾಚೂತಪ್ಪದೆ ನಿರ್ವಹಿಸುತ್ತಾರೆ.
ಅಮೆಝಾನ್ ಪ್ರೈಮ್ ನಲ್ಲಿ ಗುರ್ಮೀತ್ ಸಿಂಗ್ ನಿರ್ದೇಶನದ ‘ಮಿರ್ಜಾಪುರ್’ ವೆಬ್ ಸಿರೀಸ್ ನೋಡಿದವರಿರಬಹುದು. ತೆರೆಯ ಮೇಲಷ್ಟೇ ಅಲ್ಲ ವಾಸ್ತವದಲ್ಲೂ ಉತ್ತರಪ್ರದೇಶದಲ್ಲಿ ಡ್ರಗ್ಗು, ಗನ್ನು, ಗೂಂಡಾಗಿರಿ, ಹಿಂಸಾಚಾರವೇ ರಾರಾಜಿಸುತ್ತಿದೆ. ಸಮಾಜದಲ್ಲಿ ಜಾತಿ ಹಾಗೂ ಅಪರಾಧಿ ಹಿನ್ನೆಲೆಯುಳ್ಳ ರಾಜಕೀಯ ಶಕ್ತಿಗಳು ಹೇಗೆಲ್ಲ ವಿಜೃಂಭಿಸುತ್ತಿವೆ ಎಂಬುದನ್ನು ಮನಗಾಣಿಸುವ ಅನೇಕ ಸಿನೆಮಾಗಳು ಬಂದುಹೋಗಿವೆ. ಉದಾಹರಣೆಗೆ, ಬ್ಯಾಂಡಿಟ್ ಕ್ವೀನ್ ನಿಂದ ಹಿಡಿದು ಗ್ಯಾಂಗ್ಸ್ ಆಫ್ ವಾಸಿಪುರ್, ಗುಲಾಬ್ ಗ್ಯಾಂಗ್, ಇಷ್ಕಿಯಾದಂಥ ಸಿನೆಮಾಗಳಲ್ಲಿ ಅಸಲಿ ಉತ್ತರಭಾರತದ ಅರಾಜಕೀಯತೆಯನ್ನು ಕಂಡಿರಬಹುದು.
ಹಿಂದೆ ವಿತ್ತ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಾರ್ತ್ ಬ್ಲಾಕಿನಲ್ಲಿರುವ ತಮ್ಮ ಸಚಿವಾಲಯವನ್ನು ಪೂರ್ವಾನುಮತಿಯಿಲ್ಲದೆ ಪತ್ರಕರ್ತರು ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧವನ್ನು ಜಾರಿಗೊಳಿಸಿದ ಕ್ರಮವನ್ನು ಎಡಿಟರ್ಸ್ ಗಿಲ್ಡ್ ಖಂಡಿಸಿತ್ತು. ಆ ನಿರ್ಧಾರವನ್ನು ಮರುಪರಿಶೀಲಿಸಿ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿತ್ತು. ಪತ್ರಕರ್ತರು ಸರಕಾರಿ ಕಚೇರಿಗಳಲ್ಲಿ ಅವರಿಗೆಂದು ನಿಯೋಜಿತವಾಗಿರುವ ರೂಮ್ನಲ್ಲಿ ಆತಿಥ್ಯ ಸ್ವೀಕರಿಸಲೆಂದು ಸರಕಾರಿ ಕಚೇರಿಗೆ ತೆರಳುವುದಲ್ಲ, ಅವರು ಸುದ್ದಿ ಸಂಗ್ರಹಿಸುವ ಸವಾಲಿನ ಕರ್ತವ್ಯ ನಿರ್ವಹಿಸಲು ತೆರಳುತ್ತಾರೆ. ಸಚಿವಾಲಯದ ಈ ಆದೇಶ ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಮತ್ತು ಇದರಿಂದ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಮತ್ತಷ್ಟು ಕೆಳಗಿಳಿಯಲಿದೆ ಎಂದು ಖಾರವಾಗಿ ಎಚ್ಚರಿಸಿತ್ತು.
ಕೇರಳದ ಪತ್ರಕರ್ತ ಕಪ್ಪನ್ ಸಿದ್ದೀಕಿ ಅವರು ಹಾಥರಸ್ನಲ್ಲಿ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ವರದಿ ಮಾಡಿದ್ದಕ್ಕಾಗಿ ಅವರನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಿ ಕಿರುಕುಳ ಕೊಟ್ಟಿದ್ದು ಗೊತ್ತೇ ಇದೆ. ಸುದೀರ್ಘ ಎರಡುವರ್ಷ ಜೈಲುವಾಸವನ್ನು ಅನುಭವಿಸಿದ ಕಪ್ಪನ್ ಬಿಡುಗಡೆಗಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿತ್ತು.
ಪ್ರಾಮಾಣಿಕ ಹಾಗೂ ವಸ್ತುನಿಷ್ಠ ವರದಿಗಾರಿಕೆಯನ್ನು ಸರಕಾರದ ಗೌರವಕ್ಕೆ ಧಕ್ಕೆ ತರುವಂಥ ಕೆಲಸವೆಂದು ವರದಿಗಾರನನ್ನೇ ಆರೋಪಿಯನ್ನಾಗಿಸುವುದು ಯಾವ ನ್ಯಾಯ! ಪತ್ರಕರ್ತ ಜೈಸ್ವಾಲರಿಗೆ ಸುದ್ದಿ ಮಾಹಿತಿ ನೀಡಿದ್ದು ಊರಿನ ಪ್ರಧಾನಿಯ ಪ್ರತಿನಿಧಿ. ಆ ಕರೆಯ ಮೇರೆಗೆ ಹೋಗಿ ವೀಡಿಯೊ ಮಾಡಿ ಎಚ್ಚರಿಸಿದ್ದು ಸರಕಾರಕ್ಕೆ ತೋರುವ ಅಗೌರವ ಹೇಗಾಯ್ತು? ಮೊದಲು ಆರೋಪ ದಾಖಲಾಗಬೇಕಿದ್ದು ಮಿರ್ಜಾಪುರ ಬ್ಲಾಕ್ ಶಿಕ್ಷಣ ಅಧಿಕಾರಿ ಪ್ರೇಮ್ ಶಂಕರ್ ರಾಮ್ ಅವರ ಮೇಲೆ. ಅವರೇ ಜೈಸ್ವಾಲ್ಮೇಲೆ ದೂರು ಕೊಟ್ಟವರು. ಜಿಲ್ಲಾಧಿಕಾರಿಯೂ ಚಪಾತಿಗೆ ಜೊತೆ ಉಪ್ಪು ಕೊಟ್ಟಿದ್ದನ್ನು ಒಪ್ಪಿಕೊಂಡು ಆನಂತರ ಪತ್ರಕರ್ತನ ಮೇಲೆ ಹರಿಹಾಯ್ದಿದ್ದಾರೆ.
ಪತ್ರಕರ್ತ ಪವನ್ ಕುಮಾರ್ ಜೈಸ್ವಾಲ್, ಗ್ರಾಮದ ಮುಖ್ಯ ಪ್ರತಿನಿಧಿ ರಾಜ್ಕುಮಾರ್ ಪಾಲ್ ಮತ್ತು ಇನ್ನೂ ಹಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೨೦ ಬಿ (ಕ್ರಿಮಿನಲ್ ಪಿತೂರಿ), ೧೮೬ (ಸರಕಾರಿ ನೌಕರನನ್ನು ಕರ್ತವ್ಯ ನಿರ್ವಹಿಸುವಲ್ಲಿ ಅಡ್ಡಿಪಡಿಸುವುದು), ೧೯೩ (ಸುಳ್ಳು ಪುರಾವೆಗಳು) ಮತ್ತು ೪೨೦ (ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪವನ್ ಜೈಸ್ವಾಲ್ ಕಾಲಾಂತರದಲ್ಲಿ ಆರೋಪ ಮುಕ್ತವಾದರೂ ದೇಹವನ್ನು ಕಿತ್ತು ತಿನ್ನುತ್ತಿದ್ದ ಕ್ಯಾನ್ಸರಿನಿಂದ ಮುಕ್ತರಾಗದೆ ಹೋದದ್ದು ದುರಂತ ಕತೆ.
ಕಳೆದ ಜೂನ್ ೧೨ರಂದು ನ್ಯೂಸ್ ೨೪ ವಾಹಿನಿಯ ವರದಿಗಾರ ಅಮಿತ್ ಶರ್ಮಾ ಮೇಲೆ ದಾಳಿ ನಡೆಸಿ ಗಂಭೀರವಾಗಿ ಹಲ್ಲೆ ಮಾಡಿದ್ದರು ರೈಲ್ವೆ ಪೊಲೀಸರು. ಶಾಮ್ಲಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದನ್ನು ವರದಿ ಮಾಡುತ್ತಿದ್ದ ಅಮಿತ್ ಶರ್ಮಾನಿಂದ ಕ್ಯಾಮರಾ ಮತ್ತು ಮೊಬೈಲನ್ನು ಕಸಿದುಕೊಂಡು ಥಳಿಸಿದ್ದರು. ದೌರ್ಜನ್ಯವನ್ನು ಖಂಡಿಸಿದ ಶರ್ಮಾನಿಗೆ ಮೂತ್ರವನ್ನು ಕುಡಿಸಿದ್ದರು ಈ ನರಪಿಶಾಚಿಗಳು.
ಸುದರ್ಶನ್ ನ್ಯೂಸ್ ಪತ್ರಕರ್ತ ಅಶುತೋಷ್ ಶ್ರೀವಾಸ್ತವ ಮೇಲೆ ಮೇ ೧೩, ೨೦೨೩ ರಲ್ಲಿ ಉತ್ತರ ಪ್ರದೇಶದ ಜೌನ್ಪುರದಲ್ಲಿ ಅಪರಿಚಿತ ವ್ಯಕ್ತಿಗಳು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದರು, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ (IFJ) ಅದರ ಅಂಗಸಂಸ್ಥೆಗಳಾದ ನ್ಯಾಷನಲ್ ಯೂನಿಯನ್ಪತ್ರಕರ್ತರು (ಭಾರತ) (NUJ-I) ಹಾಗೂ ಭಾರತೀಯ ಪತ್ರಕರ್ತರ ಒಕ್ಕೂಟ (IJU), ಶ್ರೀವಾಸ್ತವ ಅವರ ಹತ್ಯೆಯನ್ನು ಬಲವಾಗಿ ಖಂಡಿಸಿ ಹೊಣೆಗಾರರನ್ನು ಹೊಣೆಗಾರರನ್ನಾಗಿ ಮಾಡಲು ಅಧಿಕಾರಿಗಳಿಗೆ ಒತ್ತಾಯಿಸಿದ್ದರು.
ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ನಡೆಸುತ್ತಿದ್ದ ಸುದ್ದಿಗೋಷ್ಠಿಯಲ್ಲಿ ಲ್ಯಾಟಿನ್ ಅಮೆರಿಕದಿಂದ ದಕ್ಷಿಣ ಅಮೆರಿಕದ ಗಡಿಗೆ ಹೋಗುವ ವಲಸಿಗರ ಕಾರವಾನ್ ಕುರಿತು ಪಾಟಿಸವಾಲು ಹಾಕಿದ CNBC ಪತ್ರಕರ್ತ ಜಿಮ್ ಅಕೋಸ್ತಾ ಅವರ ಪತ್ರಿಕಾ ಪಾಸ್ ಅನ್ನು ಶ್ವೇತಭವನ ಅಮಾನತುಗೊಳಿಸಿತ್ತು. ಆದರೆ ಇಘೆಆಇ ತನ್ನ ಸಿಬ್ಬಂದಿ ಪತ್ರಕರ್ತನ ಪರವಾಗಿ ನಿಂತು ಟ್ರಂಪ್ ಅವರ ಈ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಅಪಾಯಕರ ಎಂದು ತನ್ನ ಪತ್ರಕರ್ತನಿಗೆ ಸಂಪೂರ್ಣ ಬೆಂಬಲನೀಡಿ ವಾದಿಸಿತು.
‘‘ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು, ವಾಕ್ ಸ್ವಾತಂತ್ರ್ಯದ ಬಗ್ಗೆ ಮೋದಿಯನ್ನು ಕೇಳಿದ್ದಕ್ಕಾಗಿ ಪತ್ರಕರ್ತೆ ಸಬ್ರೀನಾ ಸಿದ್ಧೀಕಿಯನ್ನು ಆಕೆ ಮುಸ್ಲಿಮ್ ಅನ್ನುವ ಕಾರಣಕ್ಕೆ ಟ್ರೋಲ್ ಮಾಡಿದ್ದರು ಜನ. ಅನೇಕರು ಸಬ್ರೀನಾ ಸಿದ್ದೀಕಿ ಅವರ ಪ್ರಶ್ನೆಯ ಹಿಂದೆ ಯಾವುದೋ ಒಂದು ಗುಪ್ತ ಅಜೆಂಡಾ ಇತ್ತು ಎಂದು ಆರೋಪಿಸಿದ್ದರು. ಆದರೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮುಂದೆ ಬಂದು ಆಕೆಗೆ ಕೊಟ್ಟ ಕಿರುಕುಳವನ್ನು ಬಲವಾಗಿ ಖಂಡಿಸಿ ಅದು ಪ್ರಜಾಪ್ರಭುತ್ವ ವಿರೋಧಿ ನಡೆ’’ ಎಂದು ಪತ್ರಕರ್ತೆಯ ಬೆಂಬಲಕ್ಕೆ ನಿಂತಿದ್ದರು.
ಸುದ್ದಿ ಮನೆಗಳನ್ನೇ ಬಂಡವಾಳಶಾಹಿಗಳ ಕೈಗೊಪ್ಪಿಸಿ ಪತ್ರಿಕೋದ್ಯಮವನ್ನೇ ನಾಶಮಾಡಲು ಹೊರಟ ಮೋದಿ ನೇತೃತ್ವದ ಸರಕಾರದಿಂದ ಇಂತಹ ನಿಷ್ಪಕ್ಷಪಾತಿ ನಿಲುವನ್ನು ನಿರೀಕ್ಷಿಸಲು ಎಂದಾದರೂ ಸಾಧ್ಯವೇ ! ಭದ್ರತಾ ದೃಷ್ಟಿಯಿಂದ ಸರಕಾರದ ಸಂಸ್ಥೆಗಳು ಕಾಳಜಿವಹಿಸಿಕೊಳ್ಳಲಿ, ಆದರೆ ಪ್ರಜಾಸತ್ತಾತ್ಮಕ ದೇಶದಲ್ಲಿ ಮಾಧ್ಯಮಗಳು ಭೀತಿ ಇಲ್ಲದೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತಾಗಬೇಕು. ಆದರೆ ಈ ರೀತಿ ಪತ್ರಕರ್ತರನ್ನೇ ಆರೋಪಿಗಳನ್ನಾಗಿಸಿ ಅಧಿಕಾರದಲ್ಲಿರುವವರು ತಮ್ಮ ಅಧಿಕಾರದ ದುರ್ಬಳಕೆ ಮಾಡುತ್ತಿದ್ದಾಗಲೂ ನಾವೇನನ್ನೂ ಮಾಡಲಾರದ ಡಿಸ್ಟೋಪಿಯಾದಲ್ಲಿ ಬದುಕುತ್ತಿದ್ದೇವೆನ್ನುವುದೇ ಇಂದಿನ ಸತ್ಯ.
First they came for the Socialists, and I did not speak out-
because I was not a Socialist….
ಮೊದಲು ಅವರು ಎರಗಿ ಬಂದರು ಸಮಾಜವಾದಿಗಳ ಕೊರಳಿಗಾಗಿ
ಪ್ರತಿಭಟಿಸಿ ನಾನು ದನಿಯೆತ್ತಲಿಲ್ಲ
ಯಾಕೆಂದರೆ ನಾನು ಸಮಾಜವಾದಿ ಆಗಿರಲಿಲ್ಲ.
ಎಂದು ಆರಂಭಗೊಳ್ಳುವ ಜರ್ಮನಿಯ ಪ್ರೊಟೆಸ್ಟಂಟ್ ಚರ್ಚಿನ ಪ್ರವಾದಿ, ಲುಥೆರನ್ ಸಚಿವನಾಗಿದ್ದ ಮಾರ್ಟಿನ್ ನಿಮೊಲ್ಲರ್ ಉದ್ಗರಿಸಿದ ಈ ಕವಿತೆ ಇವತ್ತಿನವರೆಗೂ ಬಡಿದೆಬ್ಬಿಸುತ್ತಲೇ ಇರುತ್ತದೆ.