Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
  4. ಸತ್ಯೋತ್ತರ ಯುಗದಲ್ಲಿ ಮಾಧ್ಯಮ ವೃತ್ತಿ

ಸತ್ಯೋತ್ತರ ಯುಗದಲ್ಲಿ ಮಾಧ್ಯಮ ವೃತ್ತಿ

ಡಾ. ಡಿ.ಎಸ್. ಪೂರ್ಣಾನಂದಡಾ. ಡಿ.ಎಸ್. ಪೂರ್ಣಾನಂದ1 Jan 2025 2:56 PM IST
share
ಸತ್ಯೋತ್ತರ ಯುಗದಲ್ಲಿ ಮಾಧ್ಯಮ ವೃತ್ತಿ
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ಡಿ.ಎಸ್. ಪೂರ್ಣಾನಂದ ಅವರು, ನೂರಾರು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾದವರು. 1988ರಿಂದ 2008ರವರೆಗೆ ಮಂಗಳೂರು ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದ ಇವರು, 2008ರಲ್ಲಿ ಕುವೆಂಪು ವಿ.ವಿ.ಗೆ ಸೇರ್ಪಡೆಗೊಂಡರು. ‘ಕಮ್ಯುನಿಕೇಶನ್ ಗ್ಯಾಪ್ ಇನ್ ಡೆವೆಲಪ್‌ಮೆಂಟ್’, ‘ಎನ್ವಿರಾನ್‌ಮೆಂಟಲ್ ಜರ್ನಲಿಸಂ: ರಿಪೋರ್ಟಿಂಗ್ ಎನ್‌ವಿರಾನ್‌ಮೆಂಟಲ್ ಕನ್ಸರ್ನ್ಸ್ ಎಂಡ್ ಕ್ಲೈಮೆಟ್ ಚೇಂಜ್’ ಇವರು ಬರೆದಿರುವ ಕೃತಿಗಳು. ನ್ಯೂಯಾರ್ಕ್ ನ ಸಿರಾಕ್ಯುಸ್ ವಿವಿ ಮತ್ತು ನಾರ್ವೆಯ ವೋಲ್ಡಾ ವಿವಿಯಿಂದ ಫೆಲೋವನ್ನು ಪಡೆದಿದ್ದಾರೆ.

ಯೂರೋಪಿಯನ್ ಒಕ್ಕೂಟದಲ್ಲಿ ಬ್ರಿಟನ್ ತನ್ನ ಸದಸ್ಯತ್ವವನ್ನು ಮುಂದುವರಿಸಬೇಕೆ ಆಥವಾ ಹೊರ ಬರಬೇಕೆ ಎಂದು ತೀರ್ಮಾನಿಸಲು 2016ರಲ್ಲಿ ಜನಮತಗಣನೆ (ಬ್ರೆಕ್ಸಿಟ್) ನಡೆಸಿತು. ಒಕ್ಕೂಟದ ಬೆಂಬಲಿಗರು ಮತ್ತು ವಿರೋಧಿಗಳು ತಾವು ನಡೆಸಿದ ಪ್ರಚಾರದುದ್ದಕ್ಕೂ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಸುಳ್ಳುಗಳನ್ನು ಹೇಳುತ್ತಾ ಬಂದಿದ್ದರು. ಮತದಾರರನ್ನು ಭಾವನಾತ್ಮಕವಾಗಿ ಪ್ರಭಾವಿಸಿದ್ದರು. ಒಕ್ಕೂಟದ ವಿರೋಧಿಗಳಿಗೆ ಅಚ್ಚರಿಯ ಜಯವೇನೋ ಲಭಿಸಿತು. ಆದರೆ ಮತಗಣನೆಯ ವಿಷಯದ ಪೂರ್ಣ ಗ್ರಹಿಕೆ ಬಹುತೇಕರಿಗೆ ಇರಲಿಲ್ಲ. ಅದೇ ವರ್ಷ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿವಾದಾತ್ಮಕ ಜಯ ಗಳಿಸಿದ ಡೊನಾಲ್ಡ್ ಟ್ರಂಪ್ ಸುಳ್ಳುಗಳೇ ತುಂಬಿದ್ದ ಪ್ರಚಾರವನ್ನು ಮಾಡಿದ್ದರು. ಈ ಎರಡೂ ಪ್ರಕರಣಗಳಲ್ಲಿ ತಮ್ಮ ವೃತ್ತಿ ಧರ್ಮವನ್ನು ಮರೆತ ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಲಗಾಮಿಲ್ಲದ ಸಾಮಾಜಿಕ ಮಾಧ್ಯಮಗಳು ಸತ್ಯ ಸಂಗತಿಗಳ ಬದಲು ನಾಗರಿಕರ ಭಾವನೆಗಳಿಗೆ, ನಂಬಿಕೆಗಳಿಗೆ ಮತ್ತು ಪೂರ್ವಗ್ರಹಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದವು. ಸತ್ಯಕ್ಕಿಂತ ಸುಳ್ಳುಗಳೇ ಪ್ರಮುಖ ಪಾತ್ರವಹಿಸಿದ ಈ ವಿದ್ಯಮಾನವನ್ನು ‘ಸತ್ಯೋತ್ತರ’ ರಾಜಕಾರಣವೆಂದು ವ್ಯಾಖ್ಯಾನಿಸಲಾಯಿತು.

‘ಸತ್ಯೋತ್ತರ’ವನ್ನು 2016ರ ಅಂತರ್‌ರಾಷ್ಟ್ರೀಯ ಪದ ಎಂದು ಘೋಷಿಸಿದ ಆಕ್ಸ್ ಫರ್ಡ್ ಶಬ್ದಕೋಶ ಆ ಪದವು ‘‘ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ವಸ್ತುನಿಷ್ಠ ಸತ್ಯಗಳಿಗಿಂತ ಭಾವನೆಗಳು ಮತ್ತು ವೈಯಕ್ತಿಕ ನಂಬಿಕೆಗಳು ಹೆಚ್ಚು ಪ್ರಭಾವಶಾಲಿ ಎಂಬುದನ್ನು ಸೂಚಿಸುತ್ತದೆ’’ ಎಂದು ವ್ಯಾಖ್ಯಾನಿಸಿದೆ. ಉದ್ದೇಶಪೂರ್ವಕ ವಾಗಿ ವದಂತಿ ಹಬ್ಬಿಸುವುದು, ಪಿತೂರಿಯ ಸಿದ್ಧಾಂತಗಳನ್ನು ಹುಟ್ಟು ಹಾಕುವುದು ಮತ್ತು ಸುಳ್ಳು ಸುದ್ದಿಗಳನ್ನು ಸೃಷ್ಟಿಸುವುದು ಸತ್ಯೋತ್ತರ ರಾಜಕಾರಣದ ಭಾಗವಾಗಿದೆ. ಸುಳ್ಳುಗಳನ್ನು ಅಕ್ಷಮ್ಯ ಎಂದು ಪರಿಗಣಿಸುವ ಬದಲು ಅವು ಕೆಲವು ಸಂದರ್ಭಗಳಲ್ಲಿ ಸ್ವೀಕಾರಾರ್ಹ ಎಂಬ ನಂಬಿಕೆ ಬೆಳೆದದ್ದು ಸತ್ಯೋತ್ತರ ಯುಗದ ಆರಂಭಕ್ಕೆ ಕಾರಣವಾಯಿತು ಎಂದು ಹೇಳಬಹುದು. ಭಾವುಕ ಭಾಷೆಯನ್ನು ಬಳಸಿ ಪ್ರೇಕ್ಷಕರಿಂದ ನಿರ್ದಿಷ್ಟ ಪ್ರತಿಕ್ರಿಯೆ ಯನ್ನು ಪಡೆಯುವ ತಂತ್ರಗಾರಿಕೆಯನ್ನು ಅದು ಬಳಸುತ್ತದೆ. ನಿಸ್ಸಂಶಯವಾಗಿ ಕಾಣುವ ಸತ್ಯ ಸಂಗತಿಗಳನ್ನು ಮಾತ್ರ ವರದಿ ಮಾಡುವುದು ಮಾಧ್ಯಮಗಳ ಹೊಣೆ ಎಂಬ ವೃತ್ತಿ ಮೌಲ್ಯವನ್ನು ಸತ್ಯೋತ್ತರ ಯುಗ ಮಾನ್ಯ ಮಾಡುವುದಿಲ್ಲ. ಪತ್ರಕರ್ತನ ವೈಯಕ್ತಿಕ ನಂಬಿಕೆಗಳು, ಭಾವನೆಗಳು ಮತ್ತು ಸೈದ್ಧಾಂತಿಕ ಒಲವುಗಳು ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.

ಕಳೆದ ಹತ್ತು ವರ್ಷಗಳಲ್ಲಿ ಹಿಂದೆಂದೂ ಕಾಣದ ಅರೆಸತ್ಯ ಮತ್ತು ಅಪ್ಪಟ ಸುಳ್ಳುಗಳನ್ನು ಹೇಳುತ್ತಾ, ಮತೀಯ ಭಾವನೆಗಳನ್ನು ಕೆರಳಿಸುತ್ತಾ, ದ್ವೇಷ ಮತ್ತು ಹಿಂಸೆಗೆ ಪ್ರಚೋದನೆ ನೀಡುತ್ತಾ, ಪುರಾಣಗಳನ್ನು ಸೃಷ್ಟಿಸುತ್ತಾ ಮತ್ತು ಜನರ ಗಮನವನ್ನು ವಾಸ್ತವದಿಂದ ದೂರ ಸೆಳೆಯುತ್ತಾ ಬಂದಿರುವ ಪ್ರಭಾವಿ ಭಾರತೀಯ ಮಾಧ್ಯಮಗಳು ಸತ್ಯೋತ್ತರ ಜಗತ್ತನ್ನು ಸೃಷ್ಟಿಸಿವೆ. ಯಾವುದೇ ಸಂಕೋಚವಿಲ್ಲದೆ ಸುಳ್ಳನ್ನು ಪ್ರಸಾರ ಮಾಡುವುದಲ್ಲದೆ ಅವುಗಳನ್ನು ‘ಪರ್ಯಾಯ ಸತ್ಯ’ಗಳೆಂದು ಸಮರ್ಥಿಸಿಕೊಂಡಿವೆ. ನೂರು ವರ್ಷಗಳಿಂದ ಸುಳ್ಳನ್ನೇ ಬಂಡವಾಳವಾಗಿಸಿಕೊಂಡು ದ್ವೇಷ, ಹಿಂಸೆ, ಅಸಮಾನತೆ ಮತ್ತು ಅನ್ಯಾಯವನ್ನು ಪೋಷಿಸುತ್ತಾ ಇಂದು ಬಹುದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆದಿರುವ ಸಂಘ ಪರಿವಾರ ಸತ್ಯೋತ್ತರ ರಾಜಕಾರಣದ ಪ್ರಮುಖ ಪಾತ್ರಧಾರಿ ಏಕೆಂದರೆ ಅದರ ಸಿದ್ಧಾಂತದ ಪ್ರತಿಪಾದಕರು ಮಾಧ್ಯಮದ ಆಳ-ಅಗಲಗಳಲ್ಲಿ ಸೇರಿಹೋಗಿದ್ದಾರೆ. ಸಾಂವಿಧಾನಿಕ ಮೌಲ್ಯಗಳನ್ನು ಕಡೆಗಣಿಸಿ ಒಬ್ಬ ವ್ಯಕ್ತಿಯ ವರ್ಚಸ್ಸನ್ನು ಈ ದೇಶದ ಅಸ್ಮಿತೆಯೊಂದಿಗೆ ಸಮೀಕರಿಸಿ, ಸರ್ವಾಧಿಕಾರಿ ಪ್ರವೃತ್ತಿಯನ್ನು ಪರಿಣಾಮಕಾರಿ ನಾಯಕತ್ವವೆಂದು, ದ್ವೇಷವನ್ನೇ ರಾಷ್ಟ್ರಪ್ರೇಮವೆಂದು, ದಾಸ್ಯವನ್ನೇ ವಿಮೋಚನೆಯೆಂದು, ಅಸಮಾನತೆಯನ್ನೇ ಸಂಸ್ಕೃತಿಯೆಂದು ನಿರೂಪಿಸಿ ಜನರ ನಾಗರಿಕ ಪ್ರಜ್ಞೆಯನ್ನು ನಿಷ್ಕ್ರಿಯಗೊಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಾ ಬಂದಿವೆ.

ಜಾರ್ಜ್ ಆರ್‌ವೆಲ್‌ರವರು 1948ರಲ್ಲಿ ಬರೆದ ‘1984’ ಎಂಬ ಶೀರ್ಷಿಕೆಯ ಕಾದಂಬರಿ ಸರ್ವಾಧಿಕಾರಿಯೊಬ್ಬ ತನ್ನ ಪ್ರಜೆಗಳನ್ನು ಹೇಗೆ ನಿಯಂತ್ರಿಸುತ್ತಾನೆ ಎಂಬುದನ್ನು ಚಿತ್ರಿಸುತ್ತದೆ. ಆರ್‌ವೆಲ್ ಸೃಷ್ಟಿಸುವ ಪ್ರಪಂಚದಲ್ಲಿ ದೊಡ್ಡಣ್ಣನೊಬ್ಬ (ಬಿಗ್ ಬ್ರದರ್) ಟೆಲಿವಿಷನ್ ಮೇಲೆ ಇಟ್ಟಿರುವ ಕಣ್ಣಿನಂತಹ ಸಾಧನದಿಂದ ಎಲ್ಲರನ್ನೂ ಗಮನಿಸುತ್ತಾನೆ. ಬಾಹ್ಯ ವೈರಿಗಳ ಬಗ್ಗೆ ದ್ವೆೀಷ ಬೆಳೆಸಿ ತನ್ನ ಬಗ್ಗೆ ಪ್ರೀತಿ ಹುಟ್ಟಿಸಲು ಟೆಲಿವಿಷನ್‌ನ ಯೋಜಿತ ಪ್ರಚಾರವನ್ನು ಬಳಸುತ್ತಾನೆ. ಡೊಡ್ಡಣ್ಣನನ್ನು ಪ್ರಜೆಗಳು ಆರಾಧಿಸುತ್ತಾರೆ. ‘ಸತ್ಯ ಸಚಿವಾಲಯ’ದಲ್ಲಿ ಕೆಲಸ ಮಾಡುವ ಕಾದಂಬರಿಯ ನಾಯಕ ವಿನ್ಸ್‌ಟನ್ ಸ್ಮಿತ್‌ನ ಉದ್ಯೋಗ ಸತ್ಯ ತಿರುಚುವ ಇತಿಹಾಸದ ಮರುಬರವಣಿಗೆೆ. ಅವನು ದೊಡ್ಡಣ್ಣನ ಪ್ರಚಾರ ಯೋಜನೆಗೆ ಹೊಂದಿಕೆಯಾಗದ ಹಳೆಯ ಪತ್ರಿಕಾ ವರದಿಗಳು, ಛಾಯಾಚಿತ್ರಗಳು ಮತ್ತು ಇತರ ದಾಖಲೆಗಳನ್ನು ನಾಶಪಡಿಸುತ್ತಾನೆ. ಎಲ್ಲ ಭಿನ್ನಮತೀಯರ ಮತ್ತು ದೇಶದ್ರೋಹಿಗಳೆಂದು ಗುರುತಿಸಲ್ಪಟ್ಟಿರುವವರ ದಾಖಲೆಗಳನ್ನು ಅಳಿಸಿ ಹಾಕುತ್ತಾನೆ. ಸರಕಾರ ಬಳಸುವ ಇಬ್ಬಂದಿ ಮಾತು (ಡಬಲ್‌ಸ್ಪೀಕ್) ಎಷ್ಟು ಭ್ರಷ್ಟವಾದ ಭಾಷೆಯಾಗಿದೆ ಎಂದರೆ ಅದು ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಅನುಪಯುಕ್ತವಾಗಿದೆ. ಚಿಂತನೆ ಪೊಲೀಸರು (ಥಾಟ್ ಪೊಲೀಸ್) ಆಳುವ ಪಕ್ಷ ಒಪ್ಪದೇ ಇರುವ ವೈಯಕ್ತಿಕ ಮತ್ತು ರಾಜಕೀಯ ಚಿಂತನೆಗಳನ್ನು ಹೊಂದಿದ್ದವರನ್ನು ಕಂಡುಹಿಡಿದು ಶಿಕ್ಷಿಸುತ್ತಾರೆ. ಅಲ್ಲಿ ಶಾಂತಿ ಎಂದರೆ ಯುದ್ಧ, ಸ್ವಾತಂತ್ರ್ಯ ಎಂದರೆ ದಾಸ್ಯ, ನ್ಯಾಯ ಎಂದರೆ ಅಸಮಾನತೆ ಮತ್ತು ಪೂರ್ವಾಗ್ರಹ. ಯಾರು ಪ್ರಭುತ್ವದ ಆದೇಶವನ್ನು ಉಲ್ಲಂಘಿಸುತ್ತಾರೊ ಅವರನ್ನು ಜೈಲಿಗೆ ಕಳುಹಿಸಿ ಪುನರ್ ಶಿಕ್ಷಣ ನೀಡಲಾಗುತ್ತದೆ. ನಾಯಕ ಸ್ಮಿತ್ ದಂಗೆಕೋರ ಗುಂಪಿನೊಂದಿಗೆ ಗುಪ್ತ ಸಂಪರ್ಕ ಹೊಂದಿದ್ದ ಕಾರಣ ಬಂಧಿತನಾಗುತ್ತಾನೆ. ‘ಪ್ರೀತಿ ಸಚಿವಾಲಯ’ದಲ್ಲಿ ಅವನಿಗೆ ಚಿತ್ರಹಿಂಸೆ ನೀಡಲಾಗುತ್ತದೆ. ಕೊನೆಯಲ್ಲಿ ಬಿಡುಗಡೆಯಾದಾಗ ಅವನಿಗೆ ದೊಡ್ಡಣ್ಣನನ್ನು ಪ್ರೀತಿಸುತ್ತಿದ್ದೇನೆ ಎಂಬ ಅರಿವಾಗುತ್ತದೆ. ಎಪ್ಪತ್ತಾರು ವರ್ಷಗಳ ಹಿಂದೆ ಪ್ರಕಟವಾದ ಈ ವಿಡಂಬನಾ ಕಾದಂಬರಿ ಇಂದಿನ ಆಕ್ರಮಣಕಾರಿ ರಾಜಕೀಯ ಮತ್ತು ಅದರ ಸಾಧನವಾಗಿರುವ ಮಡಿಲ ಮಾಧ್ಯಮಗಳ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಕಾಣುತ್ತದೆ.

ಸರಕಾರವನ್ನು ಪ್ರಶ್ನಿಸುವ ಮತ್ತು ಭಿನ್ನಮತ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಡುವ ಮಾಧ್ಯಮಗಳ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ನಿರಂತರ ದಾಳಿ ನಡೆಸುತ್ತಿರುವುದು ಆರ್‌ವೆಲ್ ನಿರೂಪಿಸುವ ದಮನಕಾರಿ ಸರ್ವಾಧಿಕಾರವನ್ನು ನೆನಪಿಸುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ (ಯುಎಪಿಎ) 15 ಪತ್ರಕರ್ತರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿದೆ. 37 ಪತ್ರಕರ್ತರನ್ನು ಜೈಲಿಗೆ ತಳ್ಳಲಾಗಿದೆ. ವಿಶೇಷವಾಗಿ ಮುಸ್ಲಿಮ್ ಪತ್ರಕರ್ತರನ್ನು ಗುರಿಯಾಗಿಸಿ ಕಿರುಕುಳ ನೀಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣವನ್ನು ವರದಿ ಮಾಡಲು ಹೋಗಿದ್ದ ಕೇರಳದ ಪತ್ರಕರ್ತ ಸಿದ್ದೀಕಿ ಕಪ್ಪನ್ ರವರನ್ನು ಯುಎಪಿಎ ಮತ್ತು ಪಿಎಮ್‌ಎಲ್‌ಎ (ಕಾಳಹಣ ಸಂಗ್ರಹ) ಕಾಯ್ದೆಗಳಡಿ ಬಂಧಿಸಿ ಎರಡು ವರ್ಷ ಜೈಲಿನಲ್ಲಿಡಲಾಗಿತ್ತು. ಜಾಮೀನು ಪಡೆದು ಹೊರಬಂದ ನಂತರ ಖಾಯಂ ಕೆಲಸ ಕಳೆದುಕೊಂಡ ಕಪ್ಪನ್ ಅವರ ವೃತ್ತಿ ಮತ್ತು ವೈಯಕ್ತಿಕ ಬದುಕು ಛಿದ್ರವಾಗಿದೆ. ವಿವಾದಾತ್ಮಕ ವಿಷಯಗಳನ್ನು ವರದಿ ಮಾಡುವುದರಿಂದ ಈಗ ಅವರು ದೂರ ಉಳಿದಿದ್ದಾರೆಂದು ಅವರನ್ನು ಸಂದರ್ಶಿಸಿದ ಪತ್ರಕರ್ತರು ಹೇಳುತ್ತಾರೆ. ಇಂತಹ ದಮನಕಾರಿ ಕ್ರಮಗಳು ಪತ್ರಕರ್ತರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಬಲ್ಲವು.

ಇತ್ತೀಚೆಗೆ ದಿ ಹಿಂದು ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಮಹೇಶ್ ಲಾಂಗ ಅವರನ್ನು ಜಿಎಸ್‌ಟಿ ತೆರಿಗೆ ವಂಚನೆ ಆರೋಪದಡಿಯಲ್ಲಿ ಬಂಧಿಸಲಾಗಿದೆ ಅಲ್ಲದೆ, ಅವರು ಕೆಲವು ದಾಖಲೆಗಳನ್ನು ಹೊಂದಿದ್ದರೆಂದು ಕಳ್ಳತನದ ಆಪಾದನೆ ಹೊರಿಸಲಾಗಿದೆ. ದಾಖಲೆಗಳು, ಸಾಕ್ಷಿಗಳ ಬೆಂಬಲವಿಲ್ಲದೆ ವರದಿಗಾರಿಕೆ ಸಾಧ್ಯವೆ? ಕೆೆಲವು ತಿಂಗಳ ಹಿಂದೆ ನ್ಯೂಸ್ ಕ್ಲಿಕ್ ಕಚೇರಿಯ ಮೇಲೆ ದಾಳಿ ನಡೆಸಿ ವಿದೇಶಿ ಹಣ ಪಡೆದು ಚೀನಾ ಪರ ಪ್ರಚಾರ ಮಾಡಲಾಗಿದೆ ಎಂಬ ಆರೋಪದ ಮೇಲೆ ಅದರ ಸ್ಥಾಪಕ ಪ್ರಭಿರ್ ಪುರಕಾಯಸ್ತ ಅವರನ್ನು ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿಸಲಾಯಿತು. ಅವರ ಬಂಧನ ಕಾನೂನು ಬಾಹಿರವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಈ ಸತ್ಯೋತ್ತರ ಯುಗದಲ್ಲಿ ವೃತ್ತಿಧರ್ಮ ಪಾಲಿಸುವುದೇ ಅಪರಾಧವಾಗಿದೆ.

ಸಂಪನ್ಮೂಲ-ಶ್ರೀಮಂತ ಆದಿವಾಸಿ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಿರುವ ಬಂಡವಾಳಶಾಹಿಗಳನ್ನು ದೇಶಭಕ್ತರೆಂದೂ, ಅಭಿವೃದ್ಧಿಯ ಪ್ರವರ್ತಕರೆಂದೂ, ತಲೆಮಾರುಗಳಿಂದ ಅರಣ್ಯ ರಕ್ಷಣೆ ಮಾಡುತ್ತಾ ತಮ್ಮ ಹೊಟ್ಟೆಪಾಡಿಗಾಗಿ ನಿರಂತರ ಹೋರಾಡುವ ಆದಿವಾಸಿಗಳನ್ನು ಮಾವೊವಾದಿಗಳು, ನಕ್ಸಲರು, ಆತಂಕವಾದಿಗಳು ಮತ್ತು ದೇಶದ್ರೋಹಿಗಳೆಂದು ಮಾಧ್ಯಮಗಳು ಬಿಂಬಿಸುತ್ತಿವೆ. ಯಾರು ಹಿಂಸೆಗೆ ಬಲಿಪಶುಗಳಾಗಿದ್ದಾರೋ ಅವರೇ ಹಿಂಸೆಗೆ ಕಾರಣವೆೆಂದು ಮಾಧ್ಯಮಗಳು ದೂಷಿಸುತ್ತವೆ. ಆದಿವಾಸಿಗಳ ಹಕ್ಕುಗಳ ಪರವಾಗಿ ಮಾತನಾಡುವ ಹೋರಾಟಗಾರರಿಗೆ ‘ಅರ್ಬನ್ ನಕ್ಸಲ್’ ಎಂಬ ಲೇಬಲ್ ಹಚ್ಚುವ ಮೂಲಕ ಅವರ ವಿಶ್ವಾಸಾರ್ಹತೆಯನ್ನು ಕುಗ್ಗಿಸುವ ಮತ್ತು ಸತ್ಯವನ್ನು ಮರೆಮಾಚುವ ಕೆಲಸವನ್ನು ಮುಖ್ಯವಾಹಿನಿ ಮಾಧ್ಯಮಗಳು ಮಾಡುತ್ತಾ ಬಂದಿವೆ.

ಛತ್ತೀಸ್‌ಗಡನ ಹಸ್ದಿಯೊ ಅರಣ್ಯವನ್ನು ಅದಾನಿಯ ಕಲ್ಲಿದ್ದಲು ಕಂಪೆನಿಗೆ ಅಲ್ಲಿಯ ಆದಿವಾಸಿಗಳ ವಿರೋಧದ ನಡುವೆಯೂ ನೀಡಿರುವ ವಿರುದ್ಧ ಕೆಲವು ದಿನಗಳ ಹಿಂದೆ ಅಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕಲ್ಲಿದ್ದಲಿನ ಗಣಿಗಾರಿಕೆಗಾಗಿ ಸುಮಾರು ಎರಡೂವರೆ ಲಕ್ಷದಿಂದ ಎಂಟು ಲಕ್ಷ ಮರಗಳನ್ನು ಬಲಿಕೊಡಲಾಗುತ್ತದೆ ಎಂದು ಆದಿವಾಸಿಗಳು ಹೇಳುತ್ತಿದ್ದಾರೆ. ಮರಗಳನ್ನು ಕಡಿದು ಉರುಳಿಸುತ್ತಿದ್ದುದನ್ನು ಪ್ರತಿಭಟನಾಕಾರರು ತಡೆಯಲು ಮುಂದಾದಾಗ ಅವರ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು. ಈ ಘಟನೆಯನ್ನು ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಲಿಲ್ಲ. ಆದರೆ ವರದಿ ನೀಡಿದ ಕೆಲವು ಮುಖ್ಯ ವಾಹಿನಿ ಮಾಧ್ಯಮಗಳು ಆದಿವಾಸಿಗಳ ಪ್ರತಿಭಟನೆಯನ್ನು ಕಾನೂನು ಬಾಹಿರವೆಂದೂ, ಅಭಿವೃದ್ಧಿ ವಿರೋಧಿಯೆಂದೂ ಖಂಡಿಸಿದವು.

ಪತ್ರಕರ್ತರು ಪ್ರಬಲ ಆರ್ಥಿಕ ಮತ್ತು ರಾಜಕೀಯ ಶಕ್ತಿಗಳ ಕುರಿತು ವಿಮರ್ಶಾತ್ಮಕ ವರದಿಗಳನ್ನು ಬರೆಯುವುದನ್ನು ಹಂಚಿಕೊಳ್ಳುವ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರೆದ ಕ್ಷುಲ್ಲಕ ಟಿಪ್ಪಣಿಗಾಗಿ ಕೆಲಸ ಕಳೆದುಕೊಂಡ ಪತ್ರಕರ್ತರಿದ್ದಾರೆ. ಸೃಜನಶೀಲತೆ, ಸ್ವತಂತ್ರ ಚಿಂತನೆಯನ್ನು ಉತ್ತೇಜಿಸುವ ಮತ್ತು ವಿಚಾರ ವೈವಿಧ್ಯತೆಯನ್ನು ಗೌರವಿಸುವ ಮಾಧ್ಯಮಗಳೇ ಅತೀ ವಿರಳ.

ಕೆಲವೇ ಸ್ವತಂತ್ರ ಡಿಜಿಟಲ್ ಮಾಧ್ಯಮಗಳು ಸರಕಾರ ಹೇಳುವ ಸುಳ್ಳುಗಳನ್ನು ಮತ್ತು ಬಲಪಂಥೀಯ ಗುಂಪುಗಳ ಸಮಾಜ ವಿರೋಧಿ ಚಟುವಟಿಕೆಗಳನ್ನು ಬಯಲಿಗೆಳೆಯುತ್ತಿವೆ. ಆದರೆ ಅವುಗಳ ಮೇಲೂ ಸರಕಾರದ ಏಜೆನ್ಸಿಗಳು ದಾಳಿ ನಡೆಸಿ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಅಲ್ಲಿಯ ಪತ್ರಕರ್ತರಲ್ಲಿ ಭಯ ಹುಟ್ಟಿಸಿ ತನಿಖಾ ವರದಿಗಳ ಪ್ರಸಾರವನ್ನು ತಡೆಯುವ ಪ್ರಯತ್ನಗಳನ್ನು ಮಾಡಲಾಗಿದೆ. ಇಂತಹ ಪ್ರತಿಕೂಲ ವಾತಾವರಣದಲ್ಲೂ ಕೆಲವು ಡಿಜಿಟಲ್ ಮಾಧ್ಯಮಗಳು ಪತ್ರಿಕಾ ವೃತ್ತಿಯ ಮೌಲ್ಯಗಳಿಗೆ ಬದ್ಧವಾಗಿದ್ದು ಭಾವನೆಗಳು, ಅನಿಸಿಕೆಗಳು, ನಂಬಿಕೆಗಳಿಂದ ಪ್ರಭಾವಿತವಾಗದೆ ಸಾಕ್ಷಿ ಮತ್ತು ದಾಖಲೆಗಳ ಆಧಾರದ ಮೇಲೆ ಸುದ್ದಿ ಮತ್ತು ವಿಶ್ಲೇಷಣೆಗಳನ್ನು ಪ್ರೇಕ್ಷಕರಿಗೆ ನೀಡುತ್ತಿರುವುದು ಮಾಧ್ಯಮಗಳಲ್ಲಿ ವಿಶ್ವಾಸ ಮೂಡುವಂತೆ ಮಾಡಿದೆ.

share
ಡಾ. ಡಿ.ಎಸ್. ಪೂರ್ಣಾನಂದ
ಡಾ. ಡಿ.ಎಸ್. ಪೂರ್ಣಾನಂದ
Next Story
X