ಶೇಕ್ ಮುಹ್ಯುದ್ದೀನ್ ಇಬ್ನು ಅರಬಿ ನುಡಿಮುತ್ತುಗಳು
'ಕಣ್ಣಿಂದ ಉದುರುವ ಅಶ್ರು ಹನಿಗಳು ಮನದೊಳಗಿನ ಹೂದೋಟಗಳನ್ನು ಸದಾ ಹಸಿರಾಗಿಡುತ್ತವೆ.'
'ತನ್ನ ಸಿಪ್ಪೆಯನ್ನು ತನ್ನಿಂದ ಅಗಲಲು ಬಿಡದ ಬೀಜವು ಎಂದೂ ಮರವಾಗಿ ಬೆಳೆಯುವುದಿಲ್ಲ.'
'ಸಂಕಟ ಎಂಬುದು ಒಂದು ದೊಡ್ಡ ಅನುಗ್ರಹ. ಹಾಗಲ್ಲದಿದ್ದರೆ ದೇವರು ತನ್ನ ಅತ್ಯಂತ ಪ್ರೀತಿಪಾತ್ರರಾದ ದೂತರಿಗೆ ಅಷ್ಟೊಂದು ಸಂಕಷ್ಟಗಳನ್ನು ನೀಡುತ್ತಿರಲಿಲ್ಲ.'
'ನೀನು ಬಿತ್ತುತ್ತಿರುವುದು ಏನೆಂಬುದನ್ನು ಗಮನವಿಟ್ಟು ನೋಡು. ಏಕೆಂದರೆ, ನೀನು ಏನನ್ನು ಬಿತ್ತಿರುವೆಯೋ ಅದರ ಫಲಮಾತ್ರ ನಿನಗೆ ಸಿಗಲಿದೆ.'
'ಲೌಕಿಕ ವ್ಯಾಮೋಹಗಳೆಂದರೆ ಸಮುದ್ರದ ಉಪ್ಪು ನೀರಿನಂತೆ - ದಾಹ ನೀಗಿಸಲೆಂದು ನೀರು ಕುಡಿದಷ್ಟೂ ದಾಹ ಹೆಚ್ಚುತ್ತಲೇ ಹೋಗುತ್ತದೆ.'
'ಅಪೇಕ್ಷೆಗಳ ಸರಪಣಿಯಲ್ಲಿ ಬಂದಿಯಾಗಿರುವ ಮನಸ್ಸಿಗೆ, ದೇವರೆಡೆಗೆ ಪ್ರಯಾಣಿಸಲು ಹೇಗೆ ತಾನೇ ಸಾಧ್ಯವಾದೀತು?'
'ದೇವರನ್ನು ಗ್ರಹಿಸುವ ಸಾಮರ್ಥ್ಯ ದೃಷ್ಟಿಗಾಗಲಿ ಬುದ್ಧಿಗಾಗಲಿ ಇಲ್ಲ. ತಮ್ಮ ಎಟುಕಿಗೆ ಮೀರಿದ್ದನ್ನು ಊಹಿಸಲು, ವರ್ಣಿಸಲು ಅಥವಾ ಚಿತ್ರಿಸಲು ಪ್ರಯತ್ನಿಸುವವರು ಅವನನ್ನು ತೀರಾ ಸೀಮಿತ ಹಾಗೂ ದುರ್ಬಲಗೊಳಿಸಿ ಜನರ ಮುಂದಿಡುತ್ತಾರೆ.'
;ಬದುಕಿನ ಕೊನೆಯ ಕ್ಷಣದ ತನಕವೂ ನಾನು ಪರಿಪೂರ್ಣನಾಗಿದ್ದೇನೆ ಎಂಬ ಭ್ರಮೆಯನ್ನು ಬೆಳೆಸಿಕೊಳ್ಳಬೇಡಿ. ದೇವರ ಹೊರತು ಬೇರಾರೂ ಪರಿಪೂರ್ಣರಲ್ಲ. ನಾವೆಲ್ಲಾ ಸತ್ಯದ ಹಾದಿಯಲ್ಲಿರುವ ಪ್ರಯಾಣಿಕರು ಮಾತ್ರ.';
'ಧರ್ಮ ವಿಶ್ವಾಸ ಮತ್ತು ಸುಶೀಲತೆ ಇವೆರಡು ವಿಶಿಷ್ಟ ಹಕ್ಕಿಗಳು. ಆ ಪೈಕಿ ಒಂದು ಹಕ್ಕಿ ಕೈತಪ್ಪಿ ಹೊರಟು ಹೋದರೆ ಸಾಕು, ಇನ್ನೊಂದು ತನ್ನಿಂತಾನೇ ನಿಮ್ಮನ್ನಗಲಿ ಹಾರಿಹೋಗುತ್ತದೆ.'
'ನಿಮ್ಮ ಚಿಂತನೆಯೇ ನಿಮ್ಮ ನೈಜ ಅಸ್ತಿತ್ವ. ಉಳಿದಿದ್ದೆಲ್ಲವೂ ಕೇವಲ ಮೂಳೆ, ಮಾಂಸ ಮಾತ್ರ.'







