Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
  4. ಗೂಡನಗಲಿದ ಹಕ್ಕಿ

ಗೂಡನಗಲಿದ ಹಕ್ಕಿ

ಸುಧಾ ಆಡುಕಳಸುಧಾ ಆಡುಕಳ26 Dec 2025 11:57 AM IST
share
ಗೂಡನಗಲಿದ ಹಕ್ಕಿ

ಊರ ಬಾಗಿಲಿಗೆ ಬಂದು ನಿಂತರೆ ಇಡಿಯ ಊರಿನ ಚಹರೆಯೇ ಬದಲಾಗಿ ಹೋಗಿದೆ. ಗೂಡಂಗಡಿಯಿದ್ದ ಜಾಗದಲ್ಲಿ ಬಹುಮಹಡಿಗಳ ಕಟ್ಟಡ ಎದ್ದುನಿಂತಿದೆ. ತಂಪು ಪಾನೀಯಗಳಿಂದ ಹಿಡಿದು ಜಿಮ್ನವರೆಗೆ ಎಲ್ಲ ಸವಲತ್ತುಗಳೂ ಆ ಕಟ್ಟಡದಡಿಯಲ್ಲಿಯೇ ಇವೆ. ಒಂದೇ ಕೋಣೆಯ ಶಾಲೆ ವಿಸ್ತಾರಗೊಂಡು ಕಣ್ಣು ತುಂಬುವವರೆಗೂ ಚಾಚಿಕೊಂಡಿದೆ. ಸಂಕ ದಾಟುವ ಜಾಗದಲ್ಲಿ ಸೇತುವೆಗಳು ಎದ್ದುನಿಂತಿವೆ. ಬಿರುಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ಹೊಳೆ ಅದರೊಡಲಿನಲ್ಲಿ ತೇಲಿಬಿಟ್ಟ ನೂರಾರು ಪಂಪುಗಳ ಬಾಲದ ಹೊಡೆತಕ್ಕೆ ನಲುಗಿ ಬತ್ತಿಹೋಗಿದೆ.

ಸುಧಾ ಆಡುಕಳ

ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಸುಧಾ ಆಡುಕಳ ಅವರು ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು, ’ಗೀತಾಂಜಲಿ’ ಕವನ ಸಂಕಲನವನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ ಜೊತೆಗೆ ಎಂದೂ ಹುಟ್ಟದ ಮಗುವಿಗೆ ಪತ್ರ ಎಂಬ ಪುಸ್ತಕವನ್ನೂ ಅನುವಾದಿಸಿದ್ದಾರೆ. ಬಕುಲದ ಬಾಗಿಲು, ಒಂದು ಇಡಿಯ ಬಳಪ, ಮಗುವಿನ ಭಾಷೆ ಮತ್ತು ಶಿಕ್ಷಕ, ನೀಲಿ ಮತ್ತು ಸೇಬು ಎಂಬ ಕೃತಿಗಳನ್ನು ರಚಿಸಿದ್ದಾರೆ.

ಪುಟ್ಟ ಹಕ್ಕಿಯೊಂದು ಅಮ್ಮ-ಅಪ್ಪ ಕಟ್ಟಿದ ಗೂಡಲ್ಲಿ ಬೆಚ್ಚಗೆ ಮಲಗಿರುತ್ತದೆ. ಹುಳ ಹುಪ್ಪಟೆಗಳನ್ನು ಹಿಡಿದು ಬರುವ ಅವರ ದಾರಿ ಕಾಯುತ್ತದೆ. ಹತ್ತಿರ ಬಂದವೆಂಬ ಸುಳಿವು ಸಿಕ್ಕಿದರೆ ಸಾಕು, ಬ್ರಹ್ಮಾಂಡವನ್ನೇ ನುಂಗಿಬಿಡುವ ಹಸಿವೆಯನ್ನು ಕೊಕ್ಕಿಗೆ ತಂದುಕೊಂಡು ಗೂಡಿನ ಹೊರಗೆ ಬಾಯಿ ಚಾಚುತ್ತವೆ. ಒಮ್ಮೆ ಮರಿಗಳು ಬಂದವೆಂದರೆ ಅಪ್ಪನಿಗೆ ಗೂಡಿನಲ್ಲಿ ಮತ್ತೆ ಜಾಗವಿಲ್ಲ. ಬೆಚ್ಚನೆಯ ಅಪ್ಪುಗೆಗಾಗಿ ಅಮ್ಮ ಮಾತ್ರವೇ ಕೆಲಸಮಯ ಗೂಡಿನಲ್ಲಿ ತುಸು ಜಾಗ ಮಾಡಿಕೊಳ್ಳುತ್ತದೆ. ನೋಡನೋಡುತ್ತಿದ್ದಂತೆ ರೆಕ್ಕೆ ಬೆಳೆಸಿಕೊಂಡ ಹಕ್ಕಿಗಳನ್ನು ಬಲವಂತವಾಗಿ ಗೂಡಿನಾಚೆಗೆ ದೂಡುತ್ತದೆ. ಕುಯ್ಯೋ... ಕುರ್ರೋ ಅನ್ನುತ್ತಲೇ ಗಾಳಿಯ ಮಡಿಲಿಗೆ ತನ್ನ ಭಾರವನ್ನು ತೇಲಿಬಿಡುವ ಮರಿಹಕ್ಕಿಗಳು ಹಗುರಾಗುವ ಹೊಸ ದಾರಿಗಳನ್ನು ಕಂಡುಕೊಳ್ಳುತ್ತವೆ. ಬಯಲಿಗೆ ಜಾರಿದ ಮರಿಹಕ್ಕಿ ಮತ್ತೆಂದೂ ತನ್ನ ಹಳೆಯ ಗೂಡಿಗೆ ಮರಳಲಾರದು. ಬೇಕೆನಿಸಿದರೆ ತನಗೆಂದು ಹೊಸಗೂಡೊಂದನ್ನು ಕಟ್ಟಿಕೊಳ್ಳುವುದು. ಸಿಟ್ಟು ಬಂದರೂ ಒಬ್ಬರಿಗೊಬ್ಬರು ದೂರವಿರಲಾರದಂತಹ ಪುಟ್ಟ ಗೂಡಿನಿಂದ ಹೊರಬಂದ ನಮ್ಮೆಲ್ಲರ ಸ್ಥಿತಿಯೂ ಪುಟ್ಟ ಹಕ್ಕಿಗಳಿಗಿಂತ ಬೇರೆಯೇನಲ್ಲ. ಆದರೆ ಹಕ್ಕಿಯಂತೆ ರೆಕ್ಕೆ ಬಲಿತ ಮೇಲೆ ಹುಟ್ಟಿಬೆಳೆದ ಗೂಡನ್ನು ಮರೆತು ಬಯಲಾಗಿಬಿಡುವ ಜಂಗಮತನ ನಮಗಿನ್ನೂ ದಕ್ಕಿಲ್ಲ. ಮತ್ತೆ, ಮತ್ತೆ ಅದೇ ಗೂಡಿಗೆ ಮರಳುವ, ಬಾಲ್ಯದ ಹಸಿತನವನ್ನು ಅನುಭವಿಸಬೇಕೆನ್ನುವ ತುಡಿತಕ್ಕೆ ಕೊನೆಯೆಂಬುದಿದೆಯೇ? ಮನಸ್ಸಿನ ಗೋಡೆಯ ಮೇಲೆ ಬಾಲ್ಯದ ನೆನಪುಗಳ ಚಿತ್ರ ಮಾಸುವುದೇ ಇಲ್ಲ.

ಮನೆಯೆಂಬ ಪುಟ್ಟ ಗೂಡಿನ ಅಂಗಳದಲ್ಲಿ ನಿಂತು ನೋಡಿದರೆ ಒಂದು ಬದಿಯಲ್ಲಿ ಎತ್ತರೆತ್ತರಕ್ಕೆ ಎದ್ದುನಿಂತ ಪರ್ವತಗಳ ಸಾಲು, ಇನ್ನೊಂದು ಬದಿಯಲ್ಲಿ ಸಳಸಳವೆಂದು ಸದ್ದು ಮಾಡುತ್ತಾ ಹರಿಯುವ ಹೊಳೆ, ಮತ್ತೊಂದು ಬದಿಯಲ್ಲಿ ಹಸುರುಟ್ಟು ನಳನಳಿಸುವ ಹಸಿರು ಗದ್ದೆಯ ಬಯಲು. ಕೆಲಸಗಳ ಭರಾಟೆಯಲ್ಲಿ ಕಳೆದು ಹೋಗುವ ಹಗಲು, ಸಂಜೆಯಿಳಿಯಿತೆಂದರೆ ತೆರೆದುಕೊಳ್ಳುವ ಕಿನ್ನರ ಲೋಕದ ಬೆಡಗು. ಝಗಮಗಿಸುವ ವಿದ್ಯುದ್ದೀಪಗಳಿನ್ನೂ ಆ ಪುಟ್ಟ ಹಳ್ಳಿಯನ್ನು ತಲುಪಿರದ ದಿನಗಳವು. ರಾತ್ರಿಯ ಕತ್ತಲನ್ನು ಕಳೆಯಲು ಸೀಮೆಎಣ್ಣೆಯ ಬುಡ್ಡಿಗಳು ಹೊರಗಿಣುಕುತ್ತಿದ್ದವು. ಎಣ್ಣೆ ತೀರಿತೆಂದರೆ ಪುಟ್ಟ ಹಣತೆಗಳದೇ ಕಾರುಬಾರು. ದೀಪದ ಬೆಳಕಿನಲ್ಲಿ ಆ ಪುಟ್ಟ ಗೂಡಿನ ಒಳಗಿರುವ ವಸ್ತುಗಳೆಲ್ಲವೂ ತಮ್ಮ ನೆರಳನ್ನು ಅಡ್ಡಾದಿಡ್ಡಿಯಾಗಿ ಹರಿಬಿಟ್ಟು ಗೋಡೆ, ನೆಲದ ಮೇಲೆಲ್ಲ ಹೊಸ ಚಿತ್ರಗಳನ್ನು ಮೂಡಿಸುತ್ತಿದ್ದವು. ಬೀಸುವ ಗಾಳಿಯ ಅಲೆಗೆ ತಲೆಯಲ್ಲಾಡಿಸುವ ದೀಪದ ಕುಡಿಯ ತಾಳಕ್ಕೆ ತಕ್ಕಂತೆ ಅಲುಗಾಡುತ್ತ ಜೀವ ಪಡೆದುಕೊಳ್ಳುತ್ತಿದ್ದವು. ದೀಪದ ಸುತ್ತಲೂ ಬಟ್ಟಲನ್ನಿಟ್ಟು ಊಟ ಮುಗಿಸಿದ ಮೇಲೆ ತಾಂಬೂಲದ ತಟ್ಟೆ ಕೈಬೀಸಿ ಕರೆಯುತ್ತಿತ್ತು. ಹಸಿರೆಲೆ, ಕಂದು ಅಡಿಕೆ, ಬಿಳಿಯ ಸುಣ್ಣ, ಕಪ್ಪು ತಂಬಾಕಿನ ಚೂರು ಎಲ್ಲವೂ ಬಾಯೊಳಗೆ ಅರೆದು ಕೆಂಪಾಗುವ ಹೊತ್ತಿನಲ್ಲಿ ಗಿಳಿಗೂಟಕ್ಕೆ ತೂಗುಬಿಟ್ಟ ಮದ್ದಲೆ ‘ಬಾ ನನ್ನ ಬಾರಿಸು’ ಎಂದು ಅಪ್ಪನನ್ನು ಕರೆಯುತ್ತಿತ್ತು. ಬಾಯಿತುಂಬಿದ ಕೆಂಪುರಸವನ್ನು ಪಿಚಕ್ಕನೆ ಉಗಿದು ಮದ್ದಲೆಯನ್ನು ಮಗುವಂತೆ ಹಗುರಾಗಿ ಇಳಿಸಿ ತೊಡೆಗೇರಿಸಿಕೊಳ್ಳುವ ಹೊತ್ತಿಗೆ ಮನಸ್ಸಿನ ಭಾವಕ್ಕೆ ತಕ್ಕಂತೆ ಯಕ್ಷಗಾನದ ಆಲಾಪವೊಂದು ಅವರ ಗಂಟಲಿನಿಂದ ಹೊರಬರುತ್ತಿತ್ತು. ಹಾಡಿನ ರಾಗಕ್ಕೆ ತಕ್ಕಂತೆ ಬೆರಳುಗಳು ಮದ್ದಲೆಯ ಮೇಲೆ ನಲಿಯುತ್ತಿದ್ದವು. ಕತ್ತಲೆಯನ್ನು ಸೀಳಿಕೊಂಡು ಹೊರಡುವ ಯಕ್ಷಗಾನದ ರಾಗ ಸುತ್ತಲಿನವರ ಮನೆಯ ಬಾಗಿಲು ಬಡಿದಾಗ ಮನೆಯೆದುರು ಬಿದ್ದ ಮಡಲಿನ ಸೂಡಿ ಕಟ್ಟುವ ಆಟದ ಮಳ್ಳರು ಪುಟ್ಟ ಗೂಡಿನೆಡೆಗೆ ದೌಡಾಯಿಸುತ್ತಿದ್ದರು. ಬೆಂಕಿ ಹೊತ್ತಿಸಿದ ಸೂಡಿಯನ್ನು ಬೀಸುತ್ತಾ ಅವರು ಗದ್ದೆಯ ಹಾದಿಯಲ್ಲಿ ನಡೆದು ಬರುತ್ತಿದ್ದರೆ ಬೆಂಕಿಯ ಚೆಂಡುಗಳು ಉರುಳಿ ಬರುತ್ತಿರುವಂತೆ ಕಾಣುತ್ತಿತ್ತು. ಅಂಗಳದ ಸುತ್ತ ನೆರೆದು ಅಪ್ಪನ ಭಾಗವತಿಕೆಯನ್ನು ಮೈದುಂಬಿಸಿಕೊಳ್ಳುವ ಅವರು ಹಾಡು ಮುಗಿದೊಡನೇ ಕವಳವನ್ನು ಬಾಯ್ತುಂಬಿಸಿಕೊಂಡು ಬಂದ ಹಾದಿಯಲ್ಲಿ ಮರಳುತ್ತಿದ್ದರು. ನಾಳೆಗಾಗಿ ಎಣ್ಣೆಯುಳಿಸಲು ಹೊಂಚು ಹಾಕುತ್ತಿದ್ದ ಅಮ್ಮ ‘ಮಾತಾಡಲು ಬೆಳಕು ಬೇಕಿಲ್ಲ’ ಎನ್ನುತ್ತಲೇ ನಮ್ಮ ಮಾತುಕತೆಯ ನಡುವೆಯೇ ದೀಪವಾರಿಸುತ್ತಿದ್ದಳು. ಮತ್ತೆ ತಾಸುಗಟ್ಟಲೆ ಮುಂದುವರಿಯುವ ಮಾತುಕತೆಗಳು ಮನದ ಕತ್ತಲೆ ಕಳೆದು ಬೆಳಕು ತುಂಬುತ್ತಿದ್ದವು.

ಆ ಪುಟ್ಟ ಗೂಡಿನ ಬಗ್ಗೆ ಇಷ್ಟೇ ನೆನಪುಗಳಿದ್ದರೆ ಮತ್ತೆ, ಮತ್ತೆ ಅಲ್ಲಿಗೆ ಹೊಕ್ಕಿಬರುವ ಹುಕಿಗೆ ಕೊನೆಯೆಂಬುದೇ ಇರುತ್ತಿರಲಿಲ್ಲ. ಹಸಿದ ಹಾವೊಂದು ಗೂಡಿಗೆ ದಾಳಿಯಿಟ್ಟರೆ ಹಕ್ಕಿಯ ಗೂಡು ಛಿದ್ರವಾಗುವಂತೆ ಮೃತ್ಯುವೆಂಬ ಹಾವು ತಾಯಿ ಹಕ್ಕಿಯನ್ನು ಕಚ್ಚಿಹೋಯಿತು. ಸಂಗಾತಿಯನ್ನು ಕಳಕೊಂಡ ಗಂಡುಹಕ್ಕಿ ಹಾಡುವುದನ್ನೇ ಮರೆತು ಮೌನವಾಯಿತು. ಸಡಿಲಗೊಂಡ ಮನೆ ಬೀಳಲು ಗಾಳಿಯ ನೆವವೂ ಸಾಕು. ಒಂದೊಂದೇ ಗೋಡೆಗಳುರುಳುತ್ತ ಮನೆಯೆಂಬುದು ಬಯಲಾಗಿಹೋಯ್ತು. ಸುರಿವ ಕಷ್ಟದ ಮಳೆಯಿಂದ ಬಚಾವಾಗಲು ಹಕ್ಕಿಗಳೆಲ್ಲವು ದಿಕ್ಕಾಪಾಲಾದವು. ಹೀಗೆ ಹಕ್ಕಿಯಂತೆ ಹಾರಿದವರು ಮನುಷ್ಯರಾಗಿರುವುದರಿಂದಲೇ ಮತ್ತೆ, ಮತ್ತೆ ಆ ಗೂಡನ್ನು, ಕಾಡನ್ನು ನೆನಪಿಸಿಕೊಳ್ಳುತ್ತಲೇ ಇದ್ದರು. ಒಮ್ಮೊಮ್ಮೆ ಅದೊಂದು ಸ್ವರ್ಗ ಸದೃಶ ಜಾಗವಾಗಿ ಮನದುಂಬುವುದು, ಮರುಗಳಿಗೆಯಲ್ಲಿಯೇ ಅಮ್ಮನನ್ನು ಕಸಿದುಕೊಂಡ ಮೃತ್ಯುಕೂಪ ಅಂತಲೂ ಅನಿಸುವುದು, ಇನ್ನೊಮ್ಮೆ ಅಲ್ಲಿ ನಮ್ಮದೆನ್ನುವುದು ಏನೂ ಇಲ್ಲವೆಂಬ ಶೂನ್ಯಭಾವ ಮೊಳೆಯುವುದು, ಮರುಕ್ಷಣದಲ್ಲಿಯೇ ಅಮ್ಮನಿನ್ನೂ ಅಲ್ಲಿಯೇ ಮಲಗಿದ್ದಾಳೆ ಎಂಬ ಆಪ್ತಭಾವ ಮೊಳೆಯುವುದು. ಈ ಭಾವಗಳ ತಾಕಲಾಟ ಅದೆಷ್ಟು ತೀವ್ರವಾಗಿತ್ತೆಂದರೆ ಎರಡು ದಶಕಗಳ ಕಾಲ ಆ ಜಾಗಕ್ಕೆ ಮರಳುವ ಧೈರ್ಯವೇ ಬರಲಿಲ್ಲ. ಅದೆಷ್ಟೋ ಸಲ ಹತ್ತಿರದವರೆಗೆ ಹೋಗಿ ಮೇಲಿನಿಂದ ಇಣುಕಿ, ಹೊಳೆಯಂಚಿನವರೆಗೂ ಸಾಗಿ ದಾಟಲಾರದೇ ಮರಳಿದ್ದೂ ಇದೆ. ಆತ್ಮದ ತುಣುಕೊಂದನ್ನು ಹೂಳಿದ್ದ ಜಾಗವದು ಎಂದೆನಿಸಿದ್ದು ಅದೆಷ್ಟು ಬಾರಿಯೋ. ತಹಬಂದಿಗೆ ತರಲಾರದ ತಾಕಲಾಟಗಳ ನಂತರ ಅದೊಂದು ಪುಟ್ಟ ಜಾಗ ನನ್ನ ನೆನಪಿನ ಕೋಶದ ಭಾಗವಾಗಿ ಹಾಗೇ ಉಳಿದುಬಿಡಲೆಂದು ಮರುಪ್ರಯಾಣದ ಯೋಚನೆಯನ್ನೇ ಬಿಟ್ಟುಬಿಟ್ಟಿದ್ದೆ.

ಕಾಲಕ್ಕೆ ಎಲ್ಲವನ್ನೂ ಮರೆಸುವ ಮಾಂತ್ರಿಕ ಶಕ್ತಿಯಿದೆ. ನನ್ನ ಮಾತು-ಕತೆಗಳಲ್ಲಿ ಮತ್ತೆ, ಮತ್ತೆ ಬರುವ ಆ ಊರನ್ನು ತಮ್ಮದೇ ಕಾಲ್ಪನಿಕ ಲೋಕದಲ್ಲಿ ಕಟ್ಟಿಕೊಂಡ ಮಕ್ಕಳು ಅಲ್ಲಿಗೊಮ್ಮೆ ಭೇಟಿನೀಡುವ ಉತ್ಸಾಹ ತೋರಿದಾಗ ಇಲ್ಲವೆನ್ನಲಾಗದೇ ಹೊರಟಿದ್ದೆ. ಇಷ್ಟು ವರ್ಷಗಳ ನಂತರವೂ ಕರುಳ ಬಂಧದ ಎಳೆಗಳನ್ನು ಬೆಸೆದುಕೊಂಡಿರುವ ಜೀವಗಳಿಗೆ, ನಮ್ಮ ಪುಟ್ಟ ಗೂಡನ್ನು ತಮ್ಮದಾಗಿಸಿಕೊಂಡು ಇಮಾರತನ್ನು ಕಟ್ಟಿ ಬದುಕುತ್ತಿರುವ ಖರೀದಿದಾರರಿಗೆ ನಮ್ಮ ಬರವಿನ ಬಗ್ಗೆ ಮೊದಲೇ ತಿಳಿಸಿದ್ದೆ. ನಾನು ಓದಿದ ಸಣ್ಣ ಶಾಲೆಯಿಂದು ಅಮಿತೋತ್ಸಾಹದ ಶಿಕ್ಷಕರಿಂದಾಗಿ ರಾಜ್ಯದಲ್ಲಿಯೇ ಹೆಸರಾಗಿದ್ದುದರ ಬಗ್ಗೆ ಮೊದಲೇ ತಿಳಿದಿದ್ದೆ. ನಮ್ಮೂರ ಹೆಂಗಸರ ಆಪ್ತ ಗೆಳತಿಯರಂತಿದ್ದ ಮಾರಿಯಮ್ಮ, ದೇವಿಯಮ್ಮರಿಗೆಂದು ಅವರಿಗಿಷ್ಟದ ಕುಂಕುಮ, ಹಸಿರು ಬಳೆಗಳನ್ನು ಖರೀದಿಸಿದ್ದೆ. ಇಷ್ಟಾಗಿಯೂ ನಮ್ಮ ಕಾರು ಹೆದ್ದಾರಿಯನ್ನು ಬಿಟ್ಟು ಆ ಊರಿಗೆ ತಿರುಗುವಾಗ ಹೊಟ್ಟೆಯೊಳಗಿಂದ ನೋವು ಎದ್ದುಬಂದಂತಹ ತಳಮಳ. ‘ಅಂದು ಹೋದವಳು ಇಂದು ಬಂದೆಯೇನು?’ ಎಂದು ಅಮ್ಮನೇ ಎದುರು ನಿಂತು ಕೇಳಿದಷ್ಟು ಕಳವಳ.

ಊರ ಬಾಗಿಲಿಗೆ ಬಂದು ನಿಂತರೆ ಇಡಿಯ ಊರಿನ ಚಹರೆಯೇ ಬದಲಾಗಿಹೋಗಿದೆ. ಗೂಡಂಗಡಿಯಿದ್ದ ಜಾಗದಲ್ಲಿ ಬಹುಮಹಡಿಗಳ ಕಟ್ಟಡ ಎದ್ದುನಿಂತಿದೆ. ತಂಪು ಪಾನೀಯಗಳಿಂದ ಹಿಡಿದು ಜಿಮ್ ನವರೆಗೆ ಎಲ್ಲ ಸವಲತ್ತುಗಳೂ ಆ ಕಟ್ಟಡದಡಿಯಲ್ಲಿಯೇ ಇವೆ. ಒಂದೇ ಕೋಣೆಯ ಶಾಲೆ ವಿಸ್ತಾರಗೊಂಡು ಕಣ್ಣು ತುಂಬುವವರೆಗೂ ಚಾಚಿಕೊಂಡಿದೆ. ಸಂಕ ದಾಟುವ ಜಾಗದಲ್ಲಿ ಸೇತುವೆಗಳು ಎದ್ದುನಿಂತಿವೆ. ಬಿರುಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ಹೊಳೆ ಅದರೊಡಲಿನಲ್ಲಿ ತೇಲಿಬಿಟ್ಟ ನೂರಾರು ಪಂಪುಗಳ ಬಾಲದ ಹೊಡೆತಕ್ಕೆ ನಲುಗಿ ಬತ್ತಿಹೋಗಿದೆ. ಎಂಟು ಮೈಲಿ ನಡೆದು ಪೇಟೆಯ ಮುಖನೋಡುತ್ತಿದ್ದ ಹೈದರೆಲ್ಲ ಮನೆಯಿಂದ ಗದ್ದೆಗೆ ಹೋಗಲೂ ಸ್ಕೂಟರನ್ನೇರುತ್ತಾರೆ. ಅರೆ! ನನ್ನ ಊರೂ ನಾಗರಿಕತೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಸಂಭ್ರಮಿಸುತ್ತಲೇ ತಂಪಾದ ಐಸ್ ಕ್ರೀಮನ್ನು ಸವಿಯತೊಡಗಿದೆ. ಕಲಿತ ಶಾಲೆಯ ಎದುರಿಗೊಂದು ಫೋಟೊ ಹೊಡೆಸಿಕೊಂಡು, ಸುತ್ತ ಹತ್ತಾರು ಹಳ್ಳಿಗಳಿಂದ ಬರುವ ನೂರಾರು ಮಕ್ಕಳು ಶಾಲೆಯಂಗಳದಲ್ಲಿ ಆಡುವ ದೃಶ್ಯವನ್ನು ಕಣ್ತುಂಬಿಕೊಂಡಾಯಿತು. ಅಷ್ಟರಲ್ಲಿ ಬಂದ ಊರಿನ ಹೊಸ ಮುಖಂಡ ಇಲ್ಲಿರುವ ಕಟ್ಟಡವೆಲ್ಲ ತನ್ನದೇ ಎಂದು ಎದೆಯುಬ್ಬಿಸಿ ಹೇಳುತ್ತ, ಇದನ್ನೆಲ್ಲ ಕಟ್ಟಲು ಬೇಕಾದ ಸಾಲದ ಮಂಜೂರಾತಿಗಾಗಿ ಇಡಿಯ ಊರನ್ನೇ ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ತಂದಿರುವುದಾಗಿ ಹೇಳಿದ. ಶಾಲೆಗೆ ಬರುವ ಮಕ್ಕಳಿಗೆ ಬಸ್ಸಿನ ಸೌಲಭ್ಯವಿದೆಯೆ? ಎಂದು ಕೇಳಿದರೆ, ‘‘ಬಸ್ ಎಲ್ಲ ಈಗ ಯಾರು ಹತ್ತುತ್ತಾರೆ? ಎಲ್ಲರಿಗೂ ಅವರವರದೇ ವೆಹಿಕಲ್ ಗಳಿವೆ’’ ಎಂದವನ ಮಾತನ್ನು ತುಂಡರಿಸುತ್ತಾ, ‘‘ಇಲ್ಲದವರಿಗೆ?’’ ಎಂಬ ಪ್ರಶ್ನೆಯ ಬಾಣವನ್ನು ತೂರಿದೆ. ‘‘ರಿಕ್ಷಾ, ಗಿಕ್ಷಾ ವ್ಯವಸ್ಥೆ ಮಾಡಿಕೊಳ್ತಾರೆ.’’ ಉಡಾಫೆಯ ಮಾತು ತೂರಿದ. ಜಿಲ್ಲಾ ಕೇಂದ್ರದ ಮಗ್ಗುಲಿನಲ್ಲಿಯೇ ಇರುವ ಊರಿನವರೂ ತಮ್ಮ ಮಕ್ಕಳಿಗೆ ಗ್ರಾಮೀಣ ಪ್ರಮಾಣಪತ್ರ ಬೇಕೆಂದು ಹಂಬಲಿಸಿ ಪಡೆದುಕೊಳ್ಳುತ್ತಿರುವಾಗ ಈಗಷ್ಟೇ ಅಕ್ಷರ ಲೋಕಕ್ಕೆ ಕಾಲಿಡುತ್ತಿರುವ ಈ ಮಕ್ಕಳು ಆ ಸೌಲಭ್ಯದಿಂದ ವಂಚಿತರಾಗುತ್ತಿರುವ ಬಗ್ಗೆ ಕೇಳಿದಾಗ ಖೇದವೆನಿಸಿತು. ವ್ಯಾಪಾರಿ ಮನಸ್ಥಿತಿಗೆ ಬಡತನವೂ ವ್ಯಾಪಾರದ ಸರಕೆ!

ಮನೆಯಲ್ಲಿ ಮಾಡಿದ ಕೆಂಪಕ್ಕಿಯ ಅನ್ನ, ಹುಳಿಮಾವಿನ ಹಣ್ಣಿನ ಸಿಹಿಗೊಜ್ಜು, ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ, ಮನೆಯಲ್ಲೇ ಬೆಳೆದ ಅಳಸಂಡೆಯ ಪಲ್ಯ, ಊರ ಹಸುವಿನ ಹಾಲಿನ ಸಿಹಿಮೊಸರು, ಮಿಡಿಮಾವಿನ ಕಾಯಿಯ ಉಪ್ಪಿನ ಕಾಯಿಯೊಂದಿಗೆ ಚಪ್ಪರಿಸಿ ಉಣ್ಣುವಾಗ ಮತ್ತದೇ ಹಕ್ಕಿಯ ಗುಟುಕಿನ ನೆನಪು. ಹಸಿಯಡಿಕೆಯ ಕವಳ ತಿಂದು ಪಟ್ಟಾಂಗಕ್ಕೆ ಕೂತರೆ ಬಿಡಿಸಲಾರದ ಸಿಕ್ಕುಗಳ ಸುರಿಮಳೆ. ಇಪ್ಪತ್ತು ವರ್ಷಗಳಾದರೂ ಖಾತಾ ಆಗದ ಜಮೀನು, ಸತ್ತು ಹೋದೆನೆಂದರೂ ಕೈಗೆಟುಕದ ವೈದ್ಯಕೀಯ ಸೌಲಭ್ಯಗಳು, ಮನೆಯಿಂದ ಶಾಲೆಗೆ ಹುಡುಗಿಯೊಬ್ಬಳು ಮೊದಲಿನಂತೆ ನಡೆದುಹೋಗಲಾಗದ ಹೆದರಿಕೆ, ಮೈಲುಗಳಾಚೆಯ ಶಾಲೆಗೆ ಕಳಿಸುವ ರಿಕ್ಷಾಕ್ಕೆ ಸಾವಿರದ ಲೆಕ್ಕದಲ್ಲಿ ಸುರಿಯಬೇಕಾದ ನೋಟುಗಳು, ಬತ್ತಿದ ಹೊಳೆಯಿಂದಾಗಿ ಬಣಗುಡುವ ತೋಟ, ಸುಣ್ಣ ಕಾಣದೇ ಬಿರುಕು ಬಿಟ್ಟ ಮನೆಯ ಗೋಡೆಗಳು..... ಹಳ್ಳಿಗಳ ಬವಣೆ ತೀರುವುದೇ ಇಲ್ಲ ಎನಿಸಿ ಖಿನ್ನವಾಯಿತು ಮನಸ್ಸು. ವರ್ಷಕ್ಕೊಮ್ಮೆ ಮಹಾನವಮಿಯ ದಿನ ಪೂಜಾರಿಯ ಮೈದುಂಬುತ್ತಿದ್ದ ಮಾರಿಯೀಗ ವಾರಕ್ಕೆರಡು ದಿನ ಬಂದು ಊರ, ಪರವೂರಿನವರ ದುಃಖ ಪರಿಹರಿಸುವಳಂತೆ. ದೇವಿ ಗುಡಿಯ ಸುತ್ತಲೂ ಈಗ ವಿಶಾಲ ಬಯಲು, ಪ್ರತಿ ವರ್ಷವೂ ಜಾತ್ರೆ ನೆರೆಯುವುದಂತೆ. ಕೆಂಗಣ್ಣು ಬಿಟ್ಟು ಕುಳಿತ ಮಾರಮ್ಮನ ಗುಡಿಗೆ ಅಮ್ಮನೊಡನೆ ಬಂದು ದೇವಿಯ ನೋಟಕ್ಕೆ ಹೆದರುತ್ತಲೇ ಅಮ್ಮನ ಸೆರಗ ಹಿಡಿದು ನಿಂತು ನಮಿಸುತ್ತಿದ್ದುದು ನೆನಪಾಗಿ ಕೈಮುಗಿದೆ. ಸುತ್ತ ಸೋಕಿದ ಗಾಳಿಯಲ್ಲಿ ಅಮ್ಮನ ಉಸಿರಿನ ಘಮವಿತ್ತೆ? ಎಷ್ಟು ನೆನಪಿಸಿಕೊಂಡರೂ ನೆನಪಾಗುತ್ತಿಲ್ಲ ಈ ಹೊತ್ತು.

share
ಸುಧಾ ಆಡುಕಳ
ಸುಧಾ ಆಡುಕಳ
Next Story
X