ಎಲೆಟ್ರಿ ಟೋನಿಕ್

ಪಿ. ಮಹಮ್ಮದ್
ದೇಶದ ಅಗ್ರ ವ್ಯಂಗ್ಯಚಿತ್ರಕಾರರಾಗಿ ಗುರುತಿಸಿಕೊಂಡಿರುವ ಪಿ. ಮಹಮ್ಮದ್ ಅವರು ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆಯವರು. ಎಂ.ಟಿ. ವಿ. ಆಚಾರ್ಯ ಕಲಾ ಶಾಲೆಯ ಮೂಲಕ ವ್ಯಂಗ್ಯ ಗೆರೆಗಳ ಮೂಲಾಕ್ಷರಗಳನ್ನು ಅಭ್ಯಾಸ ಮಾಡಿದ ಇವರು, 1986ಕ್ಕೆ ಕಾರ್ಟೂನ್ ಲೋಕಕ್ಕೆ ಕಾಲಿಟ್ಟರು. ನಾಡಿನ, ದೇಶದ ಹಲವು ಪತ್ರಿಕೆಗಳಲ್ಲಿ ವ್ಯಂಗ್ಯ ಚಿತ್ರಗಳ ಮೂಲಕ ರಾಜಕೀಯ, ಸಾಮಾಜಿಕ ಸನ್ನಿವೇಶಗಳನ್ನು ವಿಡಂಬಿಸುತ್ತಾ ಬಂದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೌರಿ ಲಂಕೇಶ್-ಪೆನ್ ಪ್ರಶಸ್ತಿ ಇವರ ವ್ಯಂಗ್ಯ ಗೆರೆಗಳಿಗೆ ಸಂದ ಗೌರವಗಳಾಗಿವೆ. ರೇಡಿಯೊ ರಿಪೇರಿ ಅವರಿಗೆ ಬಾಲ್ಯದಿಂದಲೂ ಪ್ರಿಯವಾದ ಹವ್ಯಾಸ. ಇಲ್ಲಿರುವ ಎಲೆಟ್ರಿ ಟೋನಿಕ್ ಕತೆಯ ಸೆಲೆಯು ಆ ಎಲೆಕ್ಟ್ರಾನಿಕ್ ಲೋಕದಿಂದಲೇ ಹೊರಚಿಮ್ಮಿದ್ದಾಗಿದೆ.
ಓಪನಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಜಮಾಲನ ‘ಮಾರ್ಕೋನಿ ಇಲೆಕ್ಟ್ರಾನಿಕ್ಸ್’ ಕಿಕ್ಕಿರಿದು ತುಂಬಿತು. ತನ್ನ ಅಂಗಡಿ ಒಂದು ವಸ್ತುಸಂಗ್ರಹಾಲಯವಾಗುವತ್ತ ದಾಪುಗಾಲು ಹಾಕುತ್ತಿದ್ದರೂ, ಮುಲಾಜಿನಿಂದಾಗಿ ಯಾರಿಗೂ ‘ಕೆಲವು ದಿನ ಬಿಟ್ಟು ತನ್ನಿ’ ಎಂದು ಹೇಳಲು ಅವನಿಂದಾಗಲಿಲ್ಲ. ಜಮಾಲ್ ಸನ್ನಿವೇಶಕ್ಕೆ ಬೇಗನೆ ಎಜಸ್ಟ್ ಆದ. ಆ ರೇಡಿಯೊ-ಜಂಗುಳಿಯ ಎಡೆಯಲ್ಲಿ ಇಂಚಿನಷ್ಟು ನೆಲವನ್ನು ಪತ್ತೆ ಮಾಡಿ, ಅದರಲ್ಲಿಯೇ ರಶ್ಯನ್ ಬ್ಯಾಲೆ ನರ್ತಕರಂತೆ ತುದಿಗಾಲಿನಲ್ಲಿ ಬ್ಯಾಲೆನ್ಸ್ ಮಾಡಿಕೊಂಡು, ತನ್ನ ಕೆಲಸದ ಟೇಬಲ್ ಬಳಿ ಹೋಗಿ ತಲುಪುವ ಕುಶಲಕಲೆಯಲ್ಲಿ ಪಾರಂಗತನಾದ.
1 ಕಿನ್ನಿಬಿದ್ರೆಯ ‘ಮಾರ್ಕೋನಿ ಇಲೆಕ್ಟ್ರಾನಿಕ್ಸ್’ ಎಂಬ ವಿಚಿತ್ರ ಹೆಸರಿನ ಅಂಗಡಿಯ ಮಾಲಕನಾದ ಜಮಾಲ್ ಯಾನೆ ಜಮಾಲುದ್ದೀನ್ ಮತ್ತೆ ಸುದ್ದಿಯ ಅರ್ಥಾತ್ ವಿವಾದದ ಕೇಂದ್ರ ಬಿಂದುವಾಗಿದ್ದಾನೆ. ತಮ್ಮ ‘ಏ-ವನ್’ ಮಾರ್ಕಿನ ನಶ್ಯ ಪುಡಿಗೆ ಕಿನ್ನಿಬಿದ್ರೆ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ‘ಪೊಡಿತ ಸಾಯ್ಬೆರ್’ ಎಂದೇ ಖ್ಯಾತರಾಗಿರುವ ಪೋಕೊರು ಹಾಜಿಯವರ ಈ ಕೊನೆಯ ಮಗ, ಬೆಂಗಳೂರಿನಲ್ಲಿ ಅದೆಂಥದೋ ಕೋರ್ಸ್ ಮುಗಿಸಿ ಊರಿಗೆ ವಾಪಸ್ ಬಂದಾಗಿನಿಂದ ಒಂದಲ್ಲ ಒಂದು ಸುದ್ದಿಗೆ ಕಾರಣ ಆಗುತ್ತಲೇ ಇದ್ದಾನೆ. ಅವನು ಕಲಿತು ಬಂದ ಹೊಸದರಲ್ಲಿ ಪೋಕೊರು ಹಾಜಿಯವರಿಗೆ ಮಗನ ವಿದ್ಯೆಯ ಬಗ್ಗೆ ಅಂಗಡಿಗೆ ಬರುವ ಗಿರಾಕಿಗಳಿಗೆ ಹೇಳಿದಷ್ಟೂ ಮುಗಿಯುತ್ತಿರಲಿಲ್ಲ. ತಮ್ಮ ಜಮಾಲ್ ‘ಎ.ಲೆ.ಕ.ಟ್.ರೋ.ನಿ.ಕ್ಸ್’ ಕಲಿತು ಬಂದಿದ್ದಾನೆ ಎಂದು, ನಾಲಗೆ ಸ್ವಲ್ಪ ತಡವರಿಸಿದರೂ, ಹೆಮ್ಮೆಯಿಂದ ಹೇಳಿಕೊಂಡದ್ದೇ ಹೇಳಿಕೊಂಡದ್ದು. ಅದೇ ಖುಷಿಯಲ್ಲಿ ಪೋಕೊರು ಹಾಜಿಯವರು ಕೆಲವು ದಿನ ಗಿರಾಕಿಗಳಿಗೆ ತಮ್ಮ ಸ್ಪೆಷಲ್ ‘ಏ-ವನ್’ ನಶ್ಯವನ್ನು ಉಚಿತವಾಗಿ ಹಂಚಿದ್ದರು. ಅವರ ಮಗ ಕಲಿತು ಬಂದ ವಿಷಯದ ಹೆಸರನ್ನು ತಮ್ಮದೇ ರೀತಿಯಲ್ಲಿ ಗ್ರಹಿಸಿದ ಗಿರಾಕಿಗಳು, ಪೊಡಿತ ಸಾಯ್ಬೆರ್‌ನ ಮಗ ‘ಎಲೆಟ್ರಿ ಟೋನಿಕ್’ ಕುಡಿದು ಬಂದಿದ್ದಾನಂತೆ ಎಂದು ಹೋದಲ್ಲಿ ಬಂದಲ್ಲಿ ಪ್ರಚಾರ ಮಾಡುವ ಮೂಲಕ ‘ಫ್ರೀ ನಶ್ಯ’ದ ಋಣದಿಂದ ಮುಕ್ತರಾದರು.
ಹಾಗೆ ಊರಿಗೆ ಬಂದ ಮೊದಲ ಕೆಲವು ದಿನಗಳನ್ನು ಜಮಾಲುದ್ದೀನ್ ಖುಷಿಯಾಗಿಯೇ ಕಳೆದ. ತಂದೆಯ ಅಂಗಡಿಯಲ್ಲಿ ಅವರಿಗೆ ಸಹಾಯವನ್ನೂ ಮಾಡುತ್ತಿದ್ದ. ಆದರೆ ದಿನ ಕಳೆದಂತೆ ಆ ಚಿಕ್ಕ ಊರು ಬೋರಾಗತೊಡಗಿತು. ಈ ಪೊಟ್ಟು ಊರಿನಲ್ಲಿ ನಾನು ಇರುವುದಿಲ್ಲ. ಬೆಂಗಳೂರಿಗೊ, ಬೊಂಬಾಯಿಗೊ ಹೋಗುತ್ತೇನೆ. ಅಲ್ಲಿ ನನ್ನ ದೋಸ್ತಿಗಳಿದ್ದಾರೆ ಎಂದು ಅಪ್ಪನೆದುರು ರಾಗ ಎಳೆಯಲು ಶುರು ಮಾಡಿದ. ಪೋಕೊರು ಹಾಜಿಯವರು ಮೊದ ಮೊದಲು ಮಗನ ಗೊಣಗಾಟವನ್ನು ಅಸಡ್ಡೆ ಮಾಡಿದರು. ತಮ್ಮ ಕೊನೆಯ ಮಗನನ್ನಾದರೂ ಊರಲ್ಲಿಯೇ ಉಳಿಸಿಕೊಳ್ಳಬೇಕೆಂಬ ಯೋಚನೆ ಅವರ ತಲೆಯಲ್ಲಿತ್ತು. ಜಮಾಲನ ಅಣ್ಣಂದಿರು ಪರವೂರುಗಳಲ್ಲಿ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದರು. ಅಕ್ಕಂದಿರು ಮದುವೆಯಾಗಿ ಹೋಗಿದ್ದರು. ಇನ್ನು ಈ ಜಮಾಲ್ ಕೂಡ ತಮ್ಮಿಂದ ದೂರ ಹೋಗಿ ಬಿಟ್ಟರೆ ತಾವು ಇಷ್ಟು ವರ್ಷ ದುಡಿದು ಗಳಿಸಿದ್ದು ಎಂತಕ್ಕೆ ಎಂಬ ಪ್ರಶ್ನೆ ಒಂದು ಕಡೆಯಾದರೆ, ವೃದ್ಧಾಪ್ಯದಲ್ಲಿ ತಾವು ಮತ್ತು ಹೆಂಡತಿ ಐಸಮ್ಮ ಇಬ್ಬರೇ ಊರಿನಲ್ಲಿ ಬದುಕುವ ಯೋಚನೆಯೇ ಅವರನ್ನು ಖಿನ್ನತೆಗೆ ದೂಡುತ್ತಿತ್ತು. ಆದ್ದರಿಂದ ‘ಪರ ಊರಿಗೆ ಹೋಗುತ್ತೇನೆ’ ಎಂದು ಒಂದೇ ಹಠ ಹಿಡಿದಿರುವ ಮಗನಿಗೆ ಪೋಕೊರು ಹಾಜಿ ಮತ್ತು ಅವರ ಪತ್ನಿ ಐಸಮ್ಮ ಬಗೆ ಬಗೆಯಾಗಿ ಬುದ್ಧಿ ಹೇಳಿ ನೋಡಿದರು. ಕೊನೆಯ ಉಪಾಯವಾಗಿ ಕಣ್ಣೀರಾಸ್ತ್ರವನ್ನು ಪ್ರಯೋಗಿಸಿದರು. ಊಹ್ಞೂಂ! ಏನು ಮಾಡಿದರೂ ಜಮಾಲನ ಮನಸ್ಸು ಬದಲಾಗಲಿಲ್ಲ. ಇವನೂ ತಮ್ಮ ಮುದಿತನದಲ್ಲಿ ಆಸರೆಯಾಗುವುದಿಲ್ಲ ಎಂದುಕೊಂಡು, ಪೋಕೊರು ಹಾಜಿ ಕೊನೆಗೆ ಮಗನನ್ನು ಅವನ ಪಾಡಿಗೆ ಬಿಟ್ಟು ಬಿಟ್ಟರು.
ಒಂದು ದಿನ ಜಮಾಲ್ ಭಾರೀ ಹುಮ್ಮಸ್ಸಿನಲ್ಲಿ ಬೊಂಬಾಯಿಯ ಬಸ್ಸು ಹತ್ತಿ ಹೋಗಿಯೇ ಬಿಟ್ಟ. ಹಾಗೆ ಹೋದ ಜಮಾಲ್ ಎರಡು ತಿಂಗಳು ಕಳೆಯುವುದರೊಳಗೆ ಬೊಂಬಾಯಿಯಿಂದ ವಾಪಸ್ ಬಂದು ಬಿಟ್ಟ, ಪೋಕೊರು ಹಾಜಿಯವರು ನಮಾಝ್ ಮಾಡುವಾಗ ಕಣ್ಣೀರು ಸುರಿಸುತ್ತಾ ಮಾಡುತ್ತಿದ್ದ ಪ್ರಾರ್ಥನೆಗಳು ದೇವರಿಗೆ ತಲುಪಿತೋ ಎಂಬಂತೆ! ಯಾವ ದೋಸ್ತಿಗಳಿದ್ದಾರೆ ಎಂದು ಭಾರೀ ಜಂಭ ಕೊಚ್ಚಿಕೊಂಡು ಹೋಗಿದ್ದನೋ ಅವರೆಲ್ಲ ಆ ಮಹಾನಗರದ ಫುಟ್ಪಾತು-ಕೊಳೆಗೇರಿಗಳಲ್ಲಿ, ಸತ್ತು ಹೋದ ರೇಡಿಯೊ, ಟೇಪ್ ರೆಕಾರ್ಡರ್, ಟಿ.ವಿ. ಇತ್ಯಾದಿಗಳ ಒಳಗೆ ಮತ್ತೆ ಜೀವ ತುಂಬಲು ಪ್ರಯತ್ನಿಸುತ್ತ ತಮ್ಮ ಬಾಳ ಬಂಡಿಯನ್ನು ಎಳೆಯಲು ಪಡುತ್ತಿರುವ ಪಾಡನ್ನು ಪ್ರತ್ಯಕ್ಷ ಕಂಡು ಬೆಚ್ಚಿ, ಅಲ್ಲಿಂದ ಹೇಳದೆ ಕೇಳದೆ ಓಡಿ ಬಂದಿದ್ದ.
ಊರಿಗೆ ವಾಪಸ್ ಬಂದವನು ಇನ್ನು ತಾನು ಎಲ್ಲಿಗೂ ಹೋಗುವುದಿಲ್ಲವೆಂದೂ ತನಗೊಂದು ಅಂಗಡಿ ಹಾಕಿ ಕೊಡಬೇಕೆಂದೂ ಅಪ್ಪನಿಗೆ ಹೇಳಿದ. ಪೋಕೊರು ಹಾಜಿಯ ಆನಂದಕ್ಕೆ ಪಾರವೇ ಇಲ್ಲದಂತಾಯ್ತು. ಮಗನ ಬೇಡಿಕೆಗೆ ದುಸರಾ ಮಾತಾಡದೆ ಒಪ್ಪಿದರು. ಹಣದ ವಿಷಯದಲ್ಲಿ ಖಂಜೂಸ್ ಎಂಬ ತಮ್ಮ ಅಪಖ್ಯಾತಿಗೆ ವಿರುದ್ಧವಾಗಿ, ಕೈ ಸಡಿಲ ಬಿಟ್ಟು ದಿಲ್ದಾರಾಗಿ ಖರ್ಚು ಮಾಡಿದರು. ಅಂಗಡಿ ಕೋಣೆ ನಿರ್ಮಾಣಗೊಂಡಿತು. ನುರಿತ ಆಚಾರಿಗಳಿಂದ ಜಮಾಲ್ ಸೂಚಿಸಿದಂತೆ ಪೀಠೋಪಕರಣಗಳನ್ನು ತಯಾರಿಸಿ ಜೋಡಿಸಲಾಯ್ತು. ಇಲೆಕ್ಟ್ರಾನಿಕ್ ವರ್ಕ್‌ಷಾಪಿಗೆ ಅತ್ಯಗತ್ಯವಾದ ಮಲ್ಟಿಮೀಟರ್, ಓಸ್ಸಿಲೋಸ್ಚೋಪ್ ಮುಂತಾದ ಚಿತ್ರ-ವಿಚಿತ್ರ ಉಪಕರಣಗಳು, ಬಿಡಿಭಾಗಗಳು ಇತ್ಯಾದಿಗಳನ್ನು ಜಮಾಲ್ ಬಾಂಬೆ, ಡೆಲ್ಲಿಗಳಿಂದ ತರಿಸಿದ. ಈ ಎಲ್ಲ ಚಟುವಟಿಕೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದ ಕಿನ್ನಿಬಿದ್ರೆಯ ಮಹಾಜನತೆಗೆ ಅದು ಯಾವುದರ ಅಂಗಡಿ ಎಂದು ಗೊತ್ತಾದದ್ದು ಅಲ್ಲೊಂದು ಬಣ್ಣ ಬಣ್ಣದ ಆಕರ್ಷಕ ಬೋರ್ಡು ಏರಿದಾಗಲೆ. ಅದರಲ್ಲಿ ಮೇಲೆ ದೊಡ್ಡದಾಗಿ ‘ಮಾರ್ಕೋನಿ ಇಲೆಕ್ಟ್ರಾನಿಕ್ಸ್’ ಎಂದು ಬರೆಯಲಾಗಿತ್ತು; ಕೆಳಗೆ ಸ್ವಲ್ಪ ಸಣ್ಣ ಅಕ್ಷರಗಳಲ್ಲಿ ‘ನಮ್ಮಲ್ಲಿ ಎಲ್ಲಾ ಥರದ ರೇಡಿಯೋ, ಟಿ.ವಿ., ಗ್ರಾಮೋಫೋನ್, ಟೇಪ್‌ರೆಕಾರ್ಡರ್ ಇತ್ಯಾದಿಗಳನ್ನು ರಿಪೇರಿ ಮಾಡಿಕೊಡಲಾಗುವುದು’ ಎಂದೂ ಬರೆಯಲಾಗಿತ್ತು. ಅಲ್ಲಿತನಕ ಊರವರ ಬಾಯಲ್ಲಿ ‘ಎಲೆಟ್ರಿ ಟೋನಿಕ್ ಜಮಾಲ್’ ಆಗಿದ್ದ ಪೋಕೊರು ಹಾಜಿಯ ಕೊನೆಯ ಮಗನ ಹೆಸರು ‘ರೇಡಿಯೊ ರಿಪೇರಿ ಜಮಾಲ್’ ಎಂದು ಚೇಂಜಾಯ್ತು!
ಮಸೀದಿಯ ಗುರುಗಳ ಪ್ರಾರ್ಥನೆಯೊಂದಿಗೆ ‘ಮಾರ್ಕೋನಿ ಇಲೆಕ್ಟ್ರಾನಿಕ್ಸ್’ ಓಪನಿಂಗ್ ನೆರವೇರಿತು. ನಾಲ್ಕಡಿ ಎತ್ತರದ ಸ್ಪೀಕರುಗಳು ಕಿವಿತಮಟೆ ಹರಿದು ಹೋಗುವಂತೆ ಜನಪ್ರಿಯ ಸಿನೆಮಾ ಹಾಡುಗಳನ್ನು ಬಿತ್ತರಿಸಿ, ಉದ್ಘಾಟನೆಯಾದ ಸುದ್ದಿಯನ್ನು ಎಲ್ಲಾ ದಿಕ್ಕುಗಳಿಗೆ ಸಾರಿದವು. ಪೋಕೊರು ಹಾಜಿಯವರು ಕೆಲವು ದಿನ ಮೊದಲೇ ತಮ್ಮ ಗಿರಾಕಿಗಳಿಗೆ ಮತ್ತು ಪರಿಚಯದವರಿಗೆ ಅಂಗಡಿ ಉದ್ಘಾಟನೆಗೆ ಬರಬೇಕೆಂದು ಆಮಂತ್ರಣ ನೀಡಿದ್ದರು; ಬಂದವರಿಗೆ ತಾವೇ ಲಾಡು ಹಂಚಿದರು.
ಮರುದಿನದಿಂದಲೇ ಜಮಾಲನ ಅಂಗಡಿಗೆ ಥರಾವರಿ ರೇಡಿಯೊ ಸೆಟ್ಟುಗಳು ಚಿಕಿತ್ಸೆಗೆ ಬರತೊಡಗಿದವು; ಚಿಕ್ಕ ಪುಟ್ಟ ಸೋಂಕು ರೋಗ ಆಗಿದ್ದವು, ಅರೆಪ್ರಜ್ಞಾವಸ್ಥೆಯಲ್ಲಿದ್ದವು, ಕೂಡಲೇ ತೀವ್ರ ನಿಗಾ ಘಟಕಕ್ಕೆ ಸೇರಿಸಬೇಕಾದಂಥವು, ಹೀಗೆ. ಇನ್ನು ಕೆಲವು ಸಂಕೀರ್ಣ ಕೇಸುಗಳೂ ಇದ್ದವು. ಉದಾಹರಣೆಗೆ ದಿನಸಿ ಅಂಗಡಿಯ ಗಡಿಯಾರರ ಬುಷ್ ರೇಡಿಯೊದಲ್ಲಿ ಮಂಗಳೂರು ಆಕಾಶವಾಣಿ ಬಿಟ್ಟು ಪ್ರಪಂಚದ ಎಲ್ಲಾ ಸ್ಟೇಷನ್ನುಗಳು ಸಿಗುತ್ತಿದ್ದವು! ಇಂದ್ರ ಭವನ ಹೋಟೆಲಿನ ಮಾಬಲ ಶೆಟ್ರ ಫಿಲಿಪ್ಸ್ ಹಗಲಿನಲ್ಲಿ ಮಾತ್ರ ಡ್ಯೂಟಿ ಮಾಡುತ್ತಿತ್ತು; ಸೂರ್ಯ ಮುಳುಗುತ್ತಲೇ ನಿದ್ರಾವಶವಾಗುತ್ತಿದ್ದ ಅದು, ಮರುದಿನ ಬಿಸಿಲು ಏರುತ್ತಿದ್ದಂತೆ ಮತ್ತೆ ಎದ್ದು ಕರ್ತವ್ಯ ನಿರತವಾಗುತ್ತಿತ್ತು! ಟೈಲರ್ ಇಸ್ಮಾಲಿಯ ಸಂದೂಕದಂಥ ಮರ್ಫಿಯೂ ಬಂತು. ಶೇಂದಿ ಅಂಗಡಿಯ ಚೀಂಕ್ರ ಪೂಜಾರಿಯ ಟ್ರಾನ್ಸಿಸ್ಟರಿನಲ್ಲಿ ಎಲ್ಲವೂ ಸರಿ ಇತ್ತು. ಆದರೆ ಸೌಂಡು ಮಾತ್ರ ಬರುತ್ತಿರಲಿಲ್ಲ! ಪುಟ್ಟ ಮಕ್ಕಳು ಮಲಗಬಹುದಾದ ಗಾತ್ರದ ಕೆಲವು ಪ್ರಾಚೀನ ರೇಡಿಯೊ ಸೆಟ್ಟುಗಳು ತಮ್ಮ ಮಾಲಕರ ಅವಕೃಪೆಗೆ ಒಳಗಾಗಿ ಜಮಾಲನ ಅಂಗಡಿಯಲ್ಲಿ ಶಾಶ್ವತವಾಗಿ ನೆಲೆಯೂರಲು ಬಂದವು. ಒಂದೆರಡು ಆಧುನಿಕ ಸ್ಟೀರಿಯೊ ಕ್ಯಾಸೆಟ್ ಪ್ಲೇಯರ್, ಟಿ.ವಿ.ಗಳೂ ವಿಸಿಟ್ ಕೊಟ್ಟವು. ಓಪನಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಜಮಾಲನ ‘ಮಾರ್ಕೋನಿ ಇಲೆಕ್ಟ್ರಾನಿಕ್ಸ್’ ಕಿಕ್ಕಿರಿದು ತುಂಬಿತು. ತನ್ನ ಅಂಗಡಿ ಒಂದು ವಸ್ತುಸಂಗ್ರಹಾಲಯವಾಗುವತ್ತ ದಾಪುಗಾಲು ಹಾಕುತ್ತಿದ್ದರೂ, ಮುಲಾಜಿನಿಂದಾಗಿ ಯಾರಿಗೂ ‘ಕೆಲವು ದಿನ ಬಿಟ್ಟು ತನ್ನಿ’ ಎಂದು ಹೇಳಲು ಅವನಿಂದಾಗಲಿಲ್ಲ. ಜಮಾಲ್ ಸನ್ನಿವೇಶಕ್ಕೆ ಬೇಗನೆ ಎಜಸ್ಟ್ ಆದ. ಆ ರೇಡಿಯೊ-ಜಂಗುಳಿಯ ಎಡೆಯಲ್ಲಿ ಇಂಚಿನಷ್ಟು ನೆಲವನ್ನು ಪತ್ತೆ ಮಾಡಿ, ಅದರಲ್ಲಿಯೇ ರಶ್ಯನ್ ಬ್ಯಾಲೆ ನರ್ತಕರಂತೆ ತುದಿಗಾಲಿನಲ್ಲಿ ಬ್ಯಾಲೆನ್ಸ್ ಮಾಡಿಕೊಂಡು, ತನ್ನ ಕೆಲಸದ ಟೇಬಲ್ ಬಳಿ ಹೋಗಿ ತಲುಪುವ ಕುಶಲಕಲೆಯಲ್ಲಿ ಪಾರಂಗತನಾದ.
2 ‘ಎಲೆಟ್ರಿ ಟೋನಿಕ್ ಕುಡಿದವನು’ ಎಂದು ಊರ ಜನರಿಂದ ಕರೆಸಿಕೊಂಡಿದ್ದ ಜಮಾಲನಿಗೆ ಇಲೆಕ್ಟ್ರಾನಿಕ್ಸ್ ಎಂಬುದು ಬರೀ ಹೊಟ್ಟೆ ಪಾಡಿನ ಸಂಗತಿಯಾಗಿರಲಿಲ್ಲ. ಆ ವಿಷಯದ ಮೇಲೆ ಮೊದಲಿಂದಲೂ ಅವನಿಗೆ ಹುಚ್ಚು ಎನ್ನುವಷ್ಟು ಕುತೂಹಲ, ಪ್ರೀತಿ. ರೋಗಗ್ರಸ್ಥ ರೇಡಿಯೊ, ಟೇಪ್ ರೆಕಾರ್ಡರು ಇತ್ಯಾದಿಗಳನ್ನು ದುರಸ್ತಿ ಮಾಡುತ್ತಾ ತನ್ನ ಆಯುಷ್ಯವನ್ನು ಕಳೆಯುವ ಯೋಚನೆ ಅವನಿಗಿರಲಿಲ್ಲ. ಅವನಿಗೆ ಇಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ಜೋಡಿಸಿ, ಹೊಸ ಹೊಸ ಪ್ರಯೋಗಗಳನ್ನು ಮಾಡಿ ನೋಡುವ ಹುಮ್ಮಸ್ಸು. ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತರಿಸಿಕೊಂಡು, ಅಲ್ಲಿ ಕೊಡಲಾದ ನಕ್ಷೆಗಳನ್ನು ಅನುಸರಿಸಿ, ಕುತೂಹಲಕರ ಸಾಧನಗಳನ್ನು ಸೃಷ್ಟಿಸುತ್ತಿದ್ದ. ಒಮ್ಮೆ ತಮ್ಮ ಮನೆಗೊಂದು ಕರೆಗಂಟೆ ಉಪಕರಣವನ್ನು ತಯಾರು ಮಾಡಿದ. ಅದರ ವಿಶೇಷತೆ ಎಂದರೆ ಅದಕ್ಕೆ ಒತ್ತು ಗುಂಡಿ ಇರಲಿಲ್ಲ. ಚಿಕ್ಕದೊಂದು ತಾಮ್ರದ ತಗಡಿನ ಚೂರನ್ನು ಗೋಡೆಗೆ ಅಂಟಿಸಲಾಗಿತ್ತು. ಆ ತಗಡಿನ ಚೂರನ್ನು ಬೆರಳಿನಿಂದ ಮುಟ್ಟಿದರೆ ಸಾಕು, ಮನೆಯೊಳಗಿದ್ದ ಸಾಧನದಿಂದ ಇಂಪಾದ ಕರೆ ಗಂಟೆ ಮೊಳಗುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಅದ್ಭುತ ಸಾಧನವನ್ನು ಜಮಾಲ್ ತನ್ನ ಸ್ವಂತ ಕೈಗಳಿಂದ ಅಲ್ಲಿಂದ ಎತ್ತಂಗಡಿ ಮಾಡಬೇಕಾಯ್ತು. ಹಗಲು, ರಾತ್ರಿಯೆನ್ನದೆ ಒಂದೇ ಸಮನೆ ಇಂಪಾಗಿ ಕೂಗಿಕೊಳ್ಳುತ್ತಿದ್ದ ಅದರ ಸದ್ದಿಗೆ ಎದುರು ಬಾಗಿಲು ತೆರೆದು ತೆರೆದು ಸುಸ್ತಾದ ಅವನ ತಾಯಿ ಐಸಮ್ಮ, ಕೂಡಲೇ ಆ ದರಿದ್ರವನ್ನು ಅಲ್ಲಿಂದ ತೆಗೆಯುವಂತೆ ಮಗನಿಗೆ ಆರ್ಡರ್ ಮಾಡಿದರು. ಆ ಕಾಲ್-ಬೆಲ್ ಎಷ್ಟೊಂದು ಸೂಕ್ಷ್ಮವಾಗಿತ್ತೆಂದರೆ ಗೋಡೆ ಮೇಲಿದ್ದ ತಾಮ್ರದ ತಗಡಿನ ಚೂರಿನ ಮೇಲೆ ಹಲ್ಲಿ, ಜಿರಳೆ ಇತ್ಯಾದಿಗಳು ಹರಿದಾಡಿದರೂ ಕರೆಗಂಟೆ ಮೊಳಗುತ್ತಿತ್ತು!
ತನ್ನ ಮಹತ್ವಾಕಾಂಕ್ಷೆಯ ಆವಿಷ್ಕಾರವೊಂದು ಈ ರೀತಿಯ ಅಂತ್ಯವನ್ನು ಕಂಡರೂ ಜಮಾಲನ ಉತ್ಸಾಹ ಏನೂ ಕುಗ್ಗಲಿಲ್ಲ. ಅವನ ತಲೆ ಮುಂದಿನ ಪ್ರಯೋಗಗಳತ್ತ ಓಡಿತು. ಅದರ ಫಲವೇ ಅವನ ‘ಸೈಕಲ್ ರೇಡಿಯೊ’. ತನ್ನ ಸೈಕಲ್ಲಿನ ಹೆಡ್‌ಲೈಟಿನ ಬಲ್ಬ್ ತೆಗೆದು ಅದರೊಳಗೊಂದು ಚಿಕ್ಕ ರೇಡಿಯೊವನ್ನು ಜೋಡಿಸಿ ಇಟ್ಟ. ಸೈಕಲ್ ಓಡುವಾಗ ಆ ಹೆಡ್ ಲೈಟಿನ ವಿದ್ಯುತ್ತ್ತಿನ ಬಲದಿಂದ ರೇಡಿಯೊ ಕಾರ್ಯ ನಿರ್ವಹಿಸುತ್ತಿತ್ತು. ಸೈಕಲ್ಲಿನ ವೇಗ ಹೆಚ್ಚಾದಂತೆ ಅದರ ಧ್ವನಿಯೂ ಜೋರಾಗುತ್ತಿತ್ತು. ಜಮಾಲ್ ಥ್ರಿಲ್ಲಾದ. ತನ್ನ ಹೊಸ ಸಂಶೋಧನೆಯನ್ನು ಹೊರ ಜಗತ್ತಿಗೆ ಪರಿಚಯಿಸಲು ಜಮಾಲನ ಮನಸ್ಸು ಹಾತೊರೆಯಿತು. ತನ್ನ ಸೈಕಲ್ ರೇಡಿಯೊವನ್ನು ಕಿನ್ನಿಬಿದ್ರೆಯ ಉದ್ದಗಲಗಳಲ್ಲಿ ಭಾರೀ ಹುಮ್ಮಸ್ಸಿನಲ್ಲಿ ಓಡಿಸಿದ. ಅಲ್ಲಿನ ಜನರ ಪಾಲಿಗೆ ಅದು ತೀರಾ ಹೊಸ ಅನುಭವ. ಅಚ್ಚರಿ, ಬೆರಗುಗಳನ್ನು ತೋರ್ಪಡಿಸುತ್ತ ಜಮಾಲನ ಸಾಧನೆಯನ್ನು ಹೊಗಳಿದರು.
ಒಮ್ಮೆ ಸಂಜೆ ಹೊತ್ತು, ಜೂನಿಯರ್ ಕಾಲೇಜಿನ ರಸ್ತೆಯಲ್ಲಿ ವಿದ್ಯಾರ್ಥಿನಿಯರ ಗುಂಪೊಂದು ನಡೆದುಕೊಂಡು ಹೋಗುತ್ತಿತ್ತು. ಅದೇ ವೇಳೆ ಅಲ್ಲಿಂದ ಹಾದು ಹೋಗುತ್ತಿದ್ದ ಜಮಾಲನಿಗೆ ತನ್ನ ಅದ್ಭುತ ಆವಿಷ್ಕಾರವನ್ನು ಆ ಹೆಣ್ಣುಮಕ್ಕಳ ಎದುರು ಪ್ರದರ್ಶಿಸುವ ಆಶೆಯನ್ನು ತಡೆದುಕೊಳ್ಳಲಿಕ್ಕಾಗಲಿಲ್ಲ. ಆದರೆ ಅವನ ಸೈಕಲ್ ರೇಡಿಯೊಕ್ಕೆ ಜೀವ ಬರಬೇಕಾದರೆ ಸೈಕಲ್ ವೇಗವಾಗಿ ಓಡಬೇಕಿತ್ತು. ಜಮಾಲ್ ಸೈಕಲ್ ವೇಗ ಹೆಚ್ಚಿಸಿದ. ರೇಡಿಯೊದಿಂದ ಜೋರಾಗಿ ಹಾಡು ಹೊಮ್ಮತೊಡಗಿತು. ಹುಡುಗಿಯರು ಹಾಡು ಕೇಳಿ ತಿರುಗಿ ನೋಡಿದರು. ಆದರೆ ದುರದೃಷ್ಟವಶಾತ್ ಸೈಕಲ್ಲಿನ ಚಕ್ರ ಒಂದು ಹೊಂಡದ ಮೇಲೆ ಚಲಿಸಿದ ಕಾರಣ ಬ್ಯಾಲೆನ್ಸ್ ತಪ್ಪಿ, ರಸ್ತೆ ತುಂಬಾ ನಡೆದು ಹೋಗುತ್ತಿದ್ದ ಆ ಹೆಣ್ಣು ಮಕ್ಕಳ ಮೇಲೆ ಸೈಕಲ್ ಸಮೇತವಾಗಿ ಬಿದ್ದ!
ದಿನಗಳು ಉರುಳುತ್ತಿರಲು ಒಂದು ಅಪಖ್ಯಾತಿಯೂ ಜಮಾಲನ ಹೆಸರಿಗೆ ಅಂಟಿಕೊಳ್ಳತೊಡಗಿತ್ತು. ಎಷ್ಟು ದಿನಗಳಾದರೂ ತಮ್ಮ ರೇಡಿಯೊ ಇತ್ಯಾದಿಗಳನ್ನು ರಿಪೇರಿ ಮಾಡಿ ಕೊಡುತ್ತಿಲ್ಲ ಎಂದು ಗಿರಾಕಿಗಳು ಅಸಮಾಧಾನ ಹೊರ ಹಾಕತೊಡಗಿದರು. ಕೆಲವರು ಜಗಳವನ್ನೂ ಮಾಡಿದರು. ಗಿರಾಕಿಗಳ ಕಿರಿಕಿರಿ ತಾಳಲಾರದೆ ಜಮಾಲ್ ಅಪರೂಪಕ್ಕೆ ತನ್ನ ಮುಖ್ಯ ವೃತ್ತಿಯತ್ತ ಗಮನಹರಿಸುತ್ತಿದ್ದ. ಕೆಲವು ಗಿರಾಕಿಗಳು ನೇರವಾಗಿ ಪೋಕೊರು ಹಾಜಿಯವರ ಹತ್ತಿರ ದೂರು ಹೇಳಿದ್ದೂ ಉಂಟು, ತತ್ಪರಿಣಾಮವಾಗಿ ಅವರು ಮಗನಿಗೆ ಕೆಲಸದ ಮೇಲೆ ಗಮನ ಹರಿಸುವಂತೆ ತಾಕೀತು ಮಾಡಿದರು.
ಜಮಾಲನ ನಿರ್ಲಕ್ಷ್ಯದಿಂದಲೋ ದುರದೃಷ್ಟದಿಂದಲೋ, ಕೆಲವು ಅಹಿತಕರ ಘಟನೆಗಳೂ ನಡೆದು ಹೋದವು. ಉದಾಹರಣೆಗೆ ಫೋಟೊ ಸ್ಟುಡಿಯೋ ರಾಮಣ್ಣನವರ ರೇಡಿಯೊ. ಅದೊಂದು ಭಾರೀ ಗಾತ್ರದ ಇಂಗ್ಲೆಂಡಿನಲ್ಲಿ ತಯಾರಿಸಲ್ಪಟ್ಟ ಪ್ರಾಚೀನ ವಾಲ್ವ್ ರೇಡಿಯೊ. ಅದನ್ನು ರಾಮಣ್ಣನ ಅಜ್ಜನಿಗೆ ಗಟ್ಟದ ಮೇಲಿನ ಕಾಫಿ ಎಸ್ಟೇಟಿನ ಒಬ್ಬ ಬ್ರಿಟಿಷ್ ‘ದೊರೆ’ ಇನಾಮ್ ಕೊಟ್ಟದ್ದಂತೆ. ಒಂದು ಕಾಲದಲ್ಲಿ ಅದರೊಳಗೆ ‘ಮೇಡ್ ಇನ್ ಇಂಗ್ಲೆಂಡ್’ ಎಂದು ಬರೆದಿದ್ದ ಭಾಗಗಳೇ ಇದ್ದಿರಬೇಕು. ಆದರೆ ಆ ಮಾದರಿಯ ರೇಡಿಯೊಗಳ ಯುಗ ಅಂತ್ಯಗೊಂಡಿದ್ದ ಕಾರಣ ಅದರ ಒರಿಜಿನಲ್ ಬಿಡಿ ಭಾಗಗಳು ಸಿಗುವ ಸಂಭವವಿರಲಿಲ್ಲ. ಹೀಗಾಗಿ ಅದನ್ನು ಹಿಂದೆ ದುರಸ್ತಿ ಮಾಡಿದ್ದವರು ಏನೇನೋ ಪ್ರಯೋಗಗಳನ್ನು ಮಾಡಿ, ಅದರಿಂದ ಧ್ವನಿ ಹೊರಡುವಂತೆ ಮಾಡಿ ಕೊಟ್ಟಿದ್ದರು. ಅಂಥ ಗತವೈಭವದ ಇತಿಹಾಸವಿದ್ದ ರೇಡಿಯೊದ ಹಿಂಬದಿ ಕವರ್ ತೆಗೆದು ಒಳಗೆ ಇಣಿಕಿದಾಗ ಜಮಾಲನಿಗೆ ಒಂದು ಭಾರೀ ಕಗ್ಗಾಡಿನಲ್ಲಿ ಪ್ರವೇಶ ಮಾಡಿದ ಅನುಭವವಾಯ್ತು. ವಿದ್ಯುತ್ ಇಲಾಖೆ ಮತ್ತು ಟೆಲಿಫೋನ್ ಇಲಾಖೆಗಳ ಕಾರ್ಯ ವೈಖರಿಯನ್ನು ನೆನಪಿಸುವಂತೆ ಎಲ್ಲೆಂದರಲ್ಲಿ ವಯರುಗಳನ್ನು ಎಳೆದು ಜೋಡಿಸಲಾಗಿತ್ತು. ತಾಯತಗಳಂಥ ರೆಸಿಸ್ಟರ್-ಕಂಡೆನ್ಸರುಗಳು ತ್ರಿಶಂಕು ಸ್ಠಿತಿಯಲ್ಲಿ ನೇತಾಡುತ್ತಿದ್ದವು. ವಾಲ್ವಗಳು ದಾರಿತಪ್ಪಿದ ಪ್ರಯಾಣಿಕರಂತೆ ನಿಂತಿದ್ದವು. ಅದರ ಚಾಸ್ಸಿಸನ್ನು ಕಳಚಿ ಹೊರ ತೆಗೆದಾಗ ಅಲ್ಲಿ ಇನ್ನೂ ಒಂದು ಅದ್ಭುತ ಕಾದಿತ್ತು- ಆಗ ತಾನೆ ಕಣ್ಣು ಬಿಡುತ್ತಿದ್ದ ನಸು ಗುಲಾಬಿ ಬಣ್ಣದ ಇಲಿಮರಿಗಳು ಹಠಾತ್ತನೆ ಬಿದ್ದ ಬೆಳಕಿಗೆ ಬೆಚ್ಚಿ ಕ್ಷೀಣ ಧ್ವನಿಯಲ್ಲಿ ಚೀರತೊಡಗಿದವು. ಅಂತೂ ಜಮಾಲನ ಹಲವು ದಿನಗಳ ಸತತ ಪ್ರಯತ್ನದ ಫಲವಾಗಿ ಆ ಪ್ರಾಚೀನ ಪೆಟ್ಟಿಗೆಗೆ ಜೀವ ಬಂತು. ರಾಮಣ್ಣನ ಎದುರು ಅವರ ರೇಡಿಯೊವನ್ನು ಚಾಲೂ ಮಾಡಿ ತೋರಿಸಿದ. ರಾಮಣ್ಣ ಜಮಾಲನ ಬುದ್ಧಿವಂತಿಕೆಯನ್ನು ಹೊಗಳಿದ್ದೇ ಹೊಗಳಿದ್ದು. ಅವನು ಹೇಳಿದ ಮಜೂರಿ ಕೊಟ್ಟು, ಖುಷಿಯಿಂದ ತಮ್ಮ ಹರ್ಕ್ಯೂಲಿಸ್ ಸೈಕಲ್ಲಿನ ಕ್ಯಾರಿಯರಿಗೆ ರೇಡಿಯೊವನ್ನು ಬಿಗಿದು, ಮನೆಗೆ ತೆಗೆದುಕೊಂಡು ಹೋದರು.
ಆದರೆ ನಂತರ ನಡೆದದ್ದು ಮಾತ್ರ ಜಮಾಲ್ ಕನಸಿನಲ್ಲೂ ನಿರೀಕ್ಷಿಸಿರದೆ ಇದ್ದದ್ದು. ರೇಡಿಯೋವನ್ನು ಮನೆಗೆ ತೆಗೆದುಕೊಂಡು ಹೋದ ರಾಮಣ್ಣನಿಗೆ ಮನೆಯವರ ಎದುರಿಗೆ ಅದನ್ನು ಚಾಲೂ ಮಾಡಿ ತೋರಿಸುವ ಉಮೇದು. ಸತ್ತೇ ಹೋದರು ಎಂದು ತಾವೆಲ್ಲ ಭಾವಿಸಿದ್ದ ತಮ್ಮ ಪ್ರೀತಿಯ ನೆಂಟರೊಬ್ಬರು ಮತ್ತೆ ಜೀವಂತವಾಗಿ ಎದ್ದು ಬಂದರೆನ್ನುವಷ್ಟು ಖುಷಿ. ಒಳಗಿದ್ದ ಹೆಂಡತಿ, ಮಕ್ಕಳನ್ನು ಕೂಗಿ ಕರೆದರು. ರಿಪೇರಿ ಮಾಡಿದ ಜಮಾಲನ ಜಾಣ್ಮೆಯನ್ನು ಹೊಗಳುತ್ತ ಅದರ ಏರಿಯಲ್ ಮತ್ತು ಅರ್ಥಿಂಗ್ ತಂತಿಗಳನ್ನು ಹಿಂಬದಿಯಲ್ಲಿದ್ದ ಎರಡು ರಂಧ್ರಗಳಿಗೆ ಸಿಕ್ಕಿಸಿದರು. ಕರೆಂಟಿನ ವಯರನ್ನು ಪ್ಲಗ್ಗಿಗೆ ಸಿಕ್ಕಿಸಿ, ಸ್ವಿಚ್ಚನ್ನು ಒತ್ತಿದ್ದಷ್ಟೆ, ಆದರೆ ಮರುಕ್ಷಣ ರೇಡಿಯೊದಿಂದ ಹೊರಟದ್ದು ಇಂಪಾದ ಸಂಗೀತವಲ್ಲ! ಬದಲಿಗೆ ‘ಢಾಂ!’ ಎಂಬ ಬೆಚ್ಚಿಬೀಳಿಸುವಂತಹ ಸದ್ದು, ಬೆಂಕಿ! ಕೈ, ಮುಖಗಳ ಚರ್ಮ ಸುಟ್ಟು ಹೋದ ರಾಮಣ್ಣನನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಜಮಾಲ್ ಸುದ್ದಿ ಕೇಳಿ ವಿಹ್ವಲನಾದ. ಎಲ್ಲಾ ವಿವರಗಳನ್ನು ತಿಳಿದುಕೊಂಡ ನಂತರ ಘಟನೆ ಹೇಗೆ ಸಂಭವಿಸಿರಬಹುದು ಎಂದು ವಿಪರೀತ ತಲೆಕೆಡಿಸಿಕೊಂಡ. ಅವನಿಗೆ ಮುಖ್ಯ ಸುಳಿವು ಸಿಕ್ಕಿದ್ದು ರಾಮಣ್ಣ ರೇಡಿಯೊವನ್ನು ಸೈಕಲ್ಲಿನ ಕ್ಯಾರಿಯರಿಗೆ ಕಟ್ಟಿ, ತೆಗೆದುಕೊಂಡು ಹೋದದ್ದು ಎಂದು ಪಕ್ಕದ ಸೈಕಲ್ ಅಂಗಡಿಯ ಮೈಂದಣ್ಣ ಹೇಳಿದಾಗ. ರಸ್ತೆಯ ಹೊಂಡಗಳ ಮೇಲೆ ಸೈಕಲ್ ತನ್ನ ಸ್ವಭಾವಕ್ಕೆ ತಕ್ಕಂತೆ ಜಿಗಿಯುತ್ತಾ, ಕುಣಿಯುತ್ತಾ ಹೋದ ಪರಿಣಾಮ ಅದರೊಳಗಿದ್ದ ನೇತಾಡುವ ಬಿಡಿಭಾಗಗಳು ಒಂದಕ್ಕೊಂದು ಅಪ್ಪಿಕೊಂಡು ಬಿಟ್ಟವು. ರೇಡಿಯೊ ಆನ್ ಮಾಡಿದಾಗ ಅಲ್ಲಿ ವಿದ್ಯುತ್ ಹರಿದು, ಶಾರ್ಟ್ ಸರ್ಕಿಟ್ ಸಂಭವಿಸಿ, ರೇಡಿಯೊ ಬಾಂಬಿನಂತೆ ಸ್ಫೋಟಿಸಿರಬೇಕು ಎಂದು ಜಮಾಲ್ ಊಹಿಸಿದ.
ಆದರೆ ಜಮಾಲನ ಸ್ಪಷ್ಟೀಕರಣವನ್ನು ಕೇಳುವವರು ಅಲ್ಲಿ ಯಾರೂ ಇರಲಿಲ್ಲ. ಮೊದಲೇ ತನ್ನ ‘ಸಂಶೋಧನೆ’ಗಳ ದೆಸೆಯಿಂದ ಸಾಕಷ್ಟು ಹೆಸರು ಕೆಡಿಸಿಕೊಂಡಿದ್ದರಿಂದ ಇದು ಅಂಥಾದ್ದೇ ಏನೋ ಮಾಡಿದ್ದಾನೆ ಎಂದು ಕಿನ್ನಿಬಿದ್ರೆಯ ಜನ ತಮ್ಮ ತಮ್ಮಲ್ಲಿ ಮಾತಾಡಿಕೊಂಡರು. ಆದರೆ ಊರಿನಲ್ಲಿ ಪೋಕೊರು ಹಾಜಿಯವರು ಹೊಂದಿದ್ದ ವೈಯಕ್ತಿಕ ವರ್ಚಸ್ಸಿನ ಏಕೈಕ ಕಾರಣದಿಂದ ಜಮಾಲ್ ಬಚಾವ್ ಆದ. ಪೋಕೊರು ಹಾಜಿ ರಾಮಣ್ಣನಿಗೆ ಆಸ್ಪತ್ರೆ ಖರ್ಚು ಮತ್ತು ಮನೆಯಲ್ಲಿ ಉಂಟಾದ ಇತರ ಹಾನಿಗಳ ಬಾಬತ್ತಾಗಿ ಮೇಲೆ ಕೆಲವು ಸಾವಿರ ರೂಪಾಯಿಗಳ ಪರಿಹಾರವನ್ನು ನೀಡಿದರು. ಆದರೆ ಮಗನಿಗೆ ರೇಡಿಯೊ ರಿಪೇರಿ ಕೆಲಸವನ್ನು ನಿಲ್ಲಿಸುವಂತೆ ತಾಕೀತು ಮಾಡಿದರು. ಜಮಾಲ್ ಅದಕ್ಕೇ ಕಾಯುತ್ತಿದ್ದವನಂತೆ ಅಂಗಡಿಯಲ್ಲಿದ್ದ ಎಲ್ಲಾ ರೋಗ ಪೀಡಿತ ರೇಡಿಯೊಗಳನ್ನು ಅವುಗಳು ಇರುವ ಸ್ಥಿತಿಯಲ್ಲಿಯೇ ಅವುಗಳ ಮಾಲಕರಿಗೆ ವಾಪಸ್ ಕೊಟ್ಟು ಬಿಟ್ಟ!
ಇಲ್ಲಿ ಒಂದು ವಿಷಯ ಹೇಳದೇ ಇದ್ದರೆ ಜಮಾಲನಿಗೆ ಅನ್ಯಾಯ ಮಾಡಿದಂತಾಗುತ್ತದೆ. ತಿಳಿದೋ ತಿಳಿಯದೆಯೋ ಅವನಿಂದ ಕೆಲವು ಅಡ್ಡಕಸುಬಿ ಕೃತ್ಯಗಳು ನಡೆದುಹೋಗಿವೆ. ಅದರ ಪ್ರತಿಫಲವಾಗಿ ಊರಿನಲ್ಲಿ ಅವನಿಗೆ ಅಪಖ್ಯಾತಿ ಅಂಟಿರುವುದೂ ನಿಜ; ಆದರೆ ಅವನೊಬ್ಬ ಭಾರೀ ಮೇಧಾವಿ ಎಂದು ಭಾವಿಸಿರುವ ಕೆಲವು ಅಭಿಮಾನಿಗಳೂ ಅವನಿಗೆ ಈ ನಡುವೆ ಕಿನ್ನಿಬಿದ್ರೆಯಲ್ಲಿ ಹುಟ್ಟಿಕೊಂಡಿದ್ದರು. ಜಮಾಲನಂಥವರು ತಮ್ಮ ಊರಿನಲ್ಲಿ ಇರುವುದೇ ಒಂದು ದೊಡ್ಡ ಹೆಮ್ಮೆಯ ವಿಷಯ ಎಂದು ಅವರೆಲ್ಲ ಗಟ್ಟಿಯಾಗಿ ನಂಬಿದ್ದರು. ಅಂಥವರು ತಮ್ಮ ಇಲೆಕ್ಟ್ರಾನಿಕ್ ಉಪಕರಣಗಳನ್ನು ದುರಸ್ತಿಗಾಗಿ ತಂದಾಗ ಜಮಾಲ್ ಅವುಗಳ ಶುಶ್ರೂಷೆ ಮಾಡಿ ಕೊಡುತ್ತಿದ್ದನು. ಆದರೆ ಈಗ ‘ಮಾರ್ಕೋನಿ ಇಲೆಕ್ಟ್ರಾನಿಕ್ಸ್’ ಬಾಗಿಲು ಮಾತ್ರ ಸದಾ ಮುಚ್ಚಿರುತ್ತಿತ್ತು. ಜಮಾಲ್ ಒಳಗಿರುವ ಪುರಾವೆಯಾಗಿ ಆಗೊಮ್ಮೆ ಈಗೊಮ್ಮೆ ವಿಚಿತ್ರ ಸದ್ದುಗಳು ಅಲ್ಲಿಂದ ಕೇಳಿ ಬರುತ್ತಿತ್ತು. ಕಿಟಿಕಿಯಿಂದ ಇಣಿಕಿದರೆ ಟೇಬಲ್ ಲ್ಯಾಂಪಿನ ಬೆಳಕಿನಲ್ಲಿ, ಮುಖ ತುಂಬ ಬೆವರ ಹನಿಗಳಿಂದಾವೃತನಾಗಿ, ಎಂಥದೋ ಉಪಕರಣದ ವಯರುಗಳನ್ನು ಕೀಳುತ್ತಾ, ಜೋಡಿಸುತ್ತಾ, ನಡು ನಡುವೆ ಮೀಟರಿನಿಂದ ಅದನ್ನು ಪರೀಕ್ಷೆ ಮಾಡುತ್ತಾ ಇರುವ ಜಮಾಲ್ ಕಣ್ಣಿಗೆ ಬೀಳುತ್ತಾನೆ.
3 ಬಹಳ ಕಾಲ ಅಜ್ಞಾತವಾಸದಲ್ಲಿದ್ದ ಕಾರಣ ಊರಿನ ಜನ ಜಮಾಲನನ್ನು ಮರೆತೇ ಬಿಟ್ಟಿದ್ದರು. ಆದರೆ ಈಗ ಮತ್ತೆ ಜನರ ನಾಲಗೆಗೆ ವಸ್ತುವಾಗಿದ್ದಾನೆ. ಕೆಲವು ಲೋಕಲ್ ಪುಢಾರಿಗಳು ಈ ಸನ್ನಿವೇಶವನ್ನು ಹೇಗೆ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂಬ ಸುದ್ದಿಯೂ ಉಂಟು. ಈ ಬಾರಿಯ ವಿವಾದದ ಮೂಲ ಈಚೆಗೆ ಜಮಾಲ್ ಧರಿಸುತ್ತಿದ್ದ ಒಂದು ‘ಕನ್ನಡಕ’ ಮತ್ತು ‘ಟೊಪ್ಪಿ’ಯಾಗಿತ್ತು. ಅದು ಸಾಮಾನ್ಯ ಕನ್ನಡಕವಲ್ಲ ಎಂದು ಯಾರೂ ಹೇಳಬಹುದಿತ್ತು. ಪಕ್ಕನೆ ಮಕ್ಕಳ ಆಟದ ವಸ್ತುವಿನಂತೆ ಕಾಣುತ್ತಿದ್ದ ಅದನ್ನು ಹಲವು ರೀತಿಯ ಪ್ಲಾಸ್ಟಿಕ್ ಭಾಗಗಳು ಮತ್ತು ವಯರುಗಳನ್ನು ಜೋಡಿಸಿ ತಯಾರಿಸಲಾಗಿತ್ತು. ಅದರ ಆಯತಾಕಾರದ ಪುಟ್ಟ ಹಲಗೆಯಂಥ ಭಾಗ ಕಣ್ಣುಗಳನ್ನು ಮರೆಮಾಡುತ್ತಿತ್ತು. ಐದಾರು ಇಂಚು ಉದ್ದದ ಎರಡು ಪಟ್ಟಿಗಳು ಆ ಹಲಗೆ ಮತ್ತು ಎರಡು ಕಿವಿಗಳ ನಡುವೆ ಸೇತುವೆಯಂತಿದ್ದವು. ತಲೆಯ ಮೇಲೆ ಅಗ್ನಿಶಾಮಕದವರು ಧರಿಸುವಂಥ ಹೆಲ್ಮೆಟ್ಟು, ಹೆಲ್ಮೆಟ್ಟಿನ ನೆತ್ತಿಯಲ್ಲಿ ಮೇಲಕ್ಕೆ ಚಾಚಿದ ಪುಟ್ಟ ಕೊಡೆಯ ಅಸ್ಥಿಪಂಜರದಂಥ ವಸ್ತು. ಇವೆಲ್ಲಕ್ಕೂ ಅಂಟಿಕೊಂಡಿದ್ದ ಕೆಲವು ವಯರುಗಳು. ಒಂದು ವಯರು ಕಿವಿಗಳ ಒಳಗಿದ್ದ ಅಂಗಿಯ ಗುಂಡಿಯಂಥಹುದಕ್ಕೆ ಜೋಡಿ ಕೊಂಡಿತ್ತು.
ಈ ವಿಚಿತ್ರ ಸಾಧನವನ್ನು ಧರಿಸಿದವನಾಗಿ ಜಮಾಲ್ ಜೂನಿಯರ್ ಕಾಲೇಜಿನ ಎದುರಿನ ರಸ್ತೆ ಬದಿಯ ಅರಳಿ ಮರದ ಬುಡದಲ್ಲಿ ಕೂತಿದ್ದ. ಅವನ ಮುಖದ ಅರ್ಧ ಭಾಗ ಮುಚ್ಚಿದ್ದರೂ ಅವನ ಬಾಯಿ ಆಗಾಗ ಮುಗುಳ್ನಗೆ, ಬೇಸರ ಮೊದಲಾದ ಭಾವನೆಗಳನ್ನು ತೋರಿಸುತ್ತಿರುವಂತೆ ಭಾಸವಾಗುತ್ತಿತ್ತು. ಅದು ಸಂಜೆ ಹೊತ್ತು. ಕಾಲೇಜು ಆಗಷ್ಟೇ ಬಿಟ್ಟಿದೆ. ಕಾಲೇಜಿನ ವಿದ್ಯಾರ್ಥಿನಿಯರ ಒಂದು ಗುಂಪು ಅಲ್ಲಿಂದ ಹಾದು ಹೋಗುತ್ತಿತ್ತು. ಯಾಕೋ ಜಮಾಲ್ ಘೊಳ್ಳನೆ ನಕ್ಕ. ಒಂದು ಕ್ಷಣ ಹುಡುಗಿಯರು ಅವನು ಕೂತಿದ್ದ ಕಡೆ ನೋಡಿ, ಗುಸುಗುಸು ಮಾತಾಡಿಕೊಂಡು ಮುಂದೆ ಹೋದರು. ಅವರ ಹಿಂದಿನಿಂದ ಒಂದು ಗಂಡು ಮಕ್ಕಳ ಗುಂಪು ಹೋಗುತ್ತಿತ್ತು. ಅದರ ಲೀಡರ್ ಹರಿರಾಮ ಜಮಾಲನ ಹಾವ ಭಾವಗಳನ್ನೂ ಅವನು ಧರಿಸಿದ್ದ ಸಾಧನವನ್ನೂ ಗಮನಿಸಿ ಒಳಗೊಳಗೆ ಹಲ್ಲುಕಡಿದ. ಮರು ದಿನ ಜಮಾಲ್ ಕಾಲೇಜಿನ ಹತ್ತಿರ ಹೋಗಿ ಹಿಂದೂ ಹುಡುಗಿಯರಿಗೆ ಮಸ್ಕಿರಿ ಮಾಡುತ್ತಾನಂತೆ ಎಂಬ ಸುದ್ದಿ ಊರಿನಲ್ಲಿ ಹರಡಿತು. ನಿಜ ಹೇಳಬೇಕೆಂದರೆ ಆ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಎಲ್ಲ ಸಮುದಾಯಗಳ ಹೆಣ್ಣು ಮಕ್ಕಳು ಓದುತ್ತಿದ್ದರು. ಆದರೆ ಜಮಾಲನಿಗೆ ಅಂಟಿದ್ದ ಅಪಕೀರ್ತಿಗಳಿಂದಾಗಿ ಜನ ಸುದ್ದಿ ಸತ್ಯ ಇದ್ದರೂ ಇರಬಹುದು ಎಂದು ಕೊಂಡರು. ಕಿನ್ನಿಬಿದ್ರೆಯ ವಾತಾವರಣ ಈ ರೀತಿಯಾಗಿ ಬಿಗುವಿನಿಂದ ಕೂಡಿದ್ದ ಸಮಯಕ್ಕೆ ಕಾಯುತ್ತಿದ್ದಂತೆ ಮಂಗಳೂರಿನ ಒಂದು ಸಂಜೆ ಪತ್ರಿಕೆಯಲ್ಲಿ ಕಪೋಲಕಲ್ಪಿತ ಸುದ್ದಿಯೊಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಎಲ್ಲಾ ಥರದ ಮಸಾಲೆಗಳ ಸಮೇತ ರಾರಾಜಿಸಿತು:
ಕಿನ್ನಿಬಿದ್ರೆಯಲ್ಲಿ ಜನರನ್ನು ವಿವಸ್ತ್ರಗೊಳಿಸುವ ಕನ್ನಡಕ!
ಪತ್ರಿಕೆಯನ್ನು ನೋಡಿದ ಕಿನ್ನಿಬಿದ್ರೆ ಜನ ಬೆಚ್ಚಿ ಬಿದ್ದರು. ಜಮಾಲ್ ಯಾವಾಗಲೂ ಜೂನಿಯರ್ ಕಾಲೇಜಿನ ಬಳಿ ಯಾಕೆ ಸುಳಿದಾಡುತ್ತಾನೆ ಎಂಬ ಪ್ರಶ್ನೆಗೆ ಉತ್ತರ ಈಗ ಹೊಳೆಯಿತು! ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಹೆಣ್ಣು ಮಕ್ಕಳ ಪಾಲಕರು ಸುದ್ದಿಯನ್ನು ನೋಡಿ ಸಿಟ್ಟಿನಿಂದ ಕುದಿಯ ತೊಡಗಿದರು. ಊರಿನ ಮುಸಲ್ಮಾನ ಸಮುದಾಯದಲ್ಲಿ ಪಿಯುಸಿ ಮೆಟ್ಟಿಲೇರಿದ ಪ್ರಪ್ರಥಮ ಹೆಣ್ಣು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೂರುನ್ನೀಸಳ ತಂದೆ ಹಮ್ಮಬ್ಬ ಬ್ಯಾರಿಗೆ ಸಂದಿಗ್ಧ ಪರಿಸ್ಥಿತಿ. ಜಮಾಲ್ ಆ ಕನ್ನಡಕದಿಂದ ತಮ್ಮ ಮಗಳನ್ನೂ ನೋಡಿರಬಹುದು ಎನ್ನುವ ಅನುಮಾನವಿದ್ದರೂ ಅದರ ಕುರಿತು ಬಹಿರಂಗವಾಗಿ ಮಾತಾಡಲು ಹಿಂದೇಟು ಹಾಕಿದರು. ಯಾಕೆಂದರೆ ಜಮಾಲನ ‘ಕನ್ನಡಕ’ದ ದೆಸೆಯಿಂದ ಊರು ಹಿಂದೂ ಮತ್ತು ಮುಸ್ಲಿಮ್ ಎಂದು ಇಬ್ಭಾಗವಾಗಿತ್ತಲ್ಲ!
ಸಂಜೆಯಾಗುತ್ತಿದ್ದಂತೆ ಒಂದು ರೀತಿಯ ಉದ್ವಿಗ್ನತೆಯ ಮಂಜು ಊರಿನ ಮೇಲೆ ಕವಿಯಿತು. ಪೇಟೆಯ ಮೂರು ಮಾರ್ಗ ಕೂಡುವಲ್ಲಿ ಜನರು ಅಲ್ಲಲ್ಲಿ ಗುಂಪು ಗುಂಪಾಗಿ ನಿಂತು, ಗುಸು ಗುಸು ಮಾತಾಡತೊಡಗಿದರು. ಕ್ರಮೇಣ ಸಣ್ಣ ಗುಂಪುಗಳು ಎರಡು ದೊಡ್ಡ ಗುಂಪುಗಳಾಗಿ ಮಾರ್ಪಟ್ಟವು. ಒಂದು ಗುಂಪು ದಿನಸಿ ವ್ಯಾಪಾರಿ ಪಾಂಡು ಶೆಣೈಯ ಅಂಗಡಿ ಎದುರು ಸೇರಿದ್ದರೆ, ಇನ್ನೊಂದು ಗುಂಪು ಅಬುಕೊರು ಬ್ಯಾರಿಯ ಸೌದೆ ಡಿಪೋ ಎದುರು ಜಮಾಯಿಸಿತು. ಎರಡರ ಮಧ್ಯೆ ಇದ್ದ ‘ಏ-ಒನ್’ ನಶ್ಯದ ಅಂಗಡಿಯ ಪೋಕೊರು ಹಾಜಿ ಒಳಗೊಳಗೆ ತಲ್ಲಣಿಸಿ ಹೋಗಿದ್ದರು. ಅವರಿಗೆ ಜಮಾಲನ ಕ್ಷೇಮದ್ದೆ ಚಿಂತೆಯಾಗಿತ್ತು. ಅವನು ಎರಡು ದಿನಗಳಿಂದ ಮನೆಗೆ ಬಂದಿರಲಿಲ್ಲ. ಮಗ ದೂರದ ಊರುಗಳಲ್ಲಿರುವ ತನ್ನ ದೋಸ್ತಿಗಳನ್ನು ಭೇಟಿ ಮಾಡಲೆಂದೋ ಸುಮ್ಮನೆ ತಿರುಗಾಡಿ ಬರಲೆಂದೋ ಆಗಾಗ ಹೀಗೆ ಹೋಗುತ್ತಿದ್ದನಾದರೂ ಈ ಸರ್ತಿ ಮಾತ್ರ ಪೋಕೊರು ಹಾಜಿಯವರಿಗೆ ಬಹಳ ಆತಂಕ ಉಂಟಾಯ್ತು. ಮಗನ ವಿಷಯದಲ್ಲಿ ಬಾಯಿಗೊಂದರಂತೆ ಹೇಳುತ್ತಿದ್ದ ಮಾತುಗಳು ಅವರ ಕಿವಿಗೂ ಬಿದ್ದಿತ್ತು. ತಾವು ಜಮಾಲನನ್ನು ಊರಿನಲ್ಲಿ ನೆಲೆಸಲು ಬಲವಂತ ಮಾಡಿದ್ದೇ ತಪ್ಪಾಯ್ತು ಎಂದು ತಮ್ಮನ್ನು ತಾವೇ ಶಪಿಸಿಕೊಂಡರು.
ಅತ್ತ ಪಾಂಡು ಶೆಣೈ ಮತ್ತು ಅಬುಕೊರು ಬ್ಯಾರಿಯ ಅಂಗಡಿಗಳ ಮುಂದೆ ಕ್ಷಣ ಕ್ಷಣಕ್ಕೂ ಕಾವು ಏರುತ್ತಿತ್ತು. ಎರಡು ಸಮುದಾಯಗಳ ಮುಖಂಡರುಗಳೂ ತಮ್ಮ ತಮ್ಮ ಗುಂಪುಗಳಿಗೆ ಶಾಂತಿಯನ್ನು ಕಾಪಾಡುವಂತೆ ಮೇಲಿಂದ ಮೇಲೆ ಮನವಿ ಮಾಡುತ್ತಿದ್ದರು. ಆದರೆ ಶಾಂತಿ ಯಾರಿಗೂ ಬೇಕಾಗಿರಲಿಲ್ಲವಾದರೂ ಸನ್ನಿವೇಶ ತಮ್ಮ ಕೈ ಮೀರಿ ಹೋಗಿಬಿಟ್ಟರೆ ಎಂಬ ಚಿಂತೆಯ ಕಾರಣದಿಂದ ಉಗ್ರ ಪ್ರವೃತ್ತಿಯವರನ್ನು ಸಮಾಧಾನ ಪಡಿಸುತ್ತಲೂ ಶಾಂತ ಪ್ರವೃತ್ತಿಯವರನ್ನು ಕೆರಳಿಸುತ್ತಲೂ ಇರುವ ಮೂಲಕ ಒಂದು ರೀತಿಯ ಬ್ಯಾಲೆನ್ಸನ್ನು ಸಾಧಿಸುವ ಪ್ರಯತ್ನಗಳು ಎರಡೂ ಬದಿಗಳಲ್ಲಿ ನಡೆದಿತ್ತು. ಕೊನೆಗೆ ಪಾಂಡು ಶೆಣೈ ಗುಂಪು ಒಂದು ತೀರ್ಮಾನಕ್ಕೆ ಬಂತು: ಜಮಾಲನ ಅಂಗಡಿಗೆ ದಾಳಿ ಮಾಡುವುದು, ಆದರೆ ಯಾರಿಗೂ ದೈಹಿಕ ತೊಂದರೆ ಉಂಟು ಮಾಡಬಾರದು ಎಂದು ಬಹುಮತದಿಂದ ನಿರ್ಧರಿಸಲಾಯ್ತು. ಈ ಸುದ್ದಿ ಅಬುಕೊರು ಬ್ಯಾರಿಯ ಗುಂಪಿಗೆ ಮುಟ್ಟಿತು. ಹಾಗೇನಾದರೂ ಆದರೆ ತಮ್ಮ ಗುಂಪು ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ತಮ್ಮಲ್ಲಿಯೇ ಮಾತಾಡಿಕೊಂಡು ಅದಕ್ಕೆ ರೆಡಿಯಾದರು.
ಸೂರ್ಯ ಪಶ್ಚಿಮದ ಕಡಲಿನಲ್ಲಿ ಮುಳುಗುವ ಅವಸರದಲ್ಲಿದ್ದ. ಆಕಾಶ ಹಳದಿ, ಕೆಂಪು, ನೇರಳೆ ಇತ್ಯಾದಿ ಬಣ್ಣಗಳಿಂದ ರಾರಾಜಿಸುತ್ತಿತ್ತು. ಹಕ್ಕಿಗಳು ಈ ಊರಿನ ಉಸಾಬರಿ ತಮಗೆ ಬೇಡ ಎಂಬಂತೆ ತಮ್ಮ ಪಾಡಿಗೆ ಹಾರಿ ಹೋಗುತ್ತಿದ್ದವು.
ಆ ಘಳಿಗೆ ಬಂತು. ಪಾಂಡು ಶೆಣೈ ಗುಂಪಿನಲ್ಲಿ ಚಲನೆ ಕಾಣಿಸಿಕೊಂಡು ಜಮಾಲನ ಅಂಗಡಿಯ ದಿಕ್ಕಿನತ್ತ ಹೊರಟಿತು. ಕೆಲವರು ಪಿಕ್ಕಾಸಿ, ಸಬ್ಬಳು, ಇತ್ಯಾದಿಗಳನ್ನು ಹಿಡಿದುಕೊಂಡಿದ್ದರು. ಶೆಣೈಯವರ ಮಗ ಮುಕುಂದ ಆ ಗುಂಪಿನ ಮುಂಚೂಣಿಯಲ್ಲಿದ್ದ. ಅವನ ಕೈಯಲ್ಲೂ ಒಂದು ಪಿಕ್ಕಾಸಿ ಇತ್ತು. ‘ಮಾರ್ಕೋನಿ ಇಲೆಕ್ಟ್ರಾನಿಕ್ಸ್’ ಮೇಲೆ ಮೊದಲ ಹೊಡೆತ ಅವನೇ ಹಾಕುವುದೆಂದು ತೀರ್ಮಾನ ಆಗಿತ್ತು. ಆ ಬದಿಯಲ್ಲಿ ಅಬುಕೊರು ಬ್ಯಾರಿಯ ಗುಂಪು ಕೂಡಾ ಚುರುಕಾಯಿತು. ಎದುರು ಗುಂಪಿನವರು ಮೊದಲ ಪ್ರಹಾರ ಮಾಡಿದ ಮರುಕ್ಷಣ ಮಿಂಚಿನ ವೇಗದಲ್ಲಿ ತಾವು ಹೇಗೆ ಕಾರ್ಯಾಚರಣೆ ನಡೆಸಬೇಕೆಂದು ಪ್ಲಾನ್ ತಯಾರಾಗಿತ್ತು.
ಪೋಕೊರು ಹಾಜಿ ತಮ್ಮ ಅಂಗಡಿಯನ್ನು ಮಧ್ಯಾಹ್ನದ ನಂತರ ತೆರೆದೇ ಇರಲಿಲ್ಲ. ತಮ್ಮ ಮುಚ್ಚಿದ ಅಂಗಡಿಯ ಎದುರು ನಿಂತುಕೊಂಡು, ಬಾಯಲ್ಲಿ ಮಣ ಮಣ ಎಂದು ಒಂದೇ ಸಮನೆ ದೇವರಿಗೆ ಮೊರೆಯಿಡುತ್ತಿದ್ದರು. ಎರಡೂ ಗುಂಪುಗಳಿಗೆ ಸೇರದ, ತಟಸ್ಥ ಧೋರಣೆ ತಳೆದಿದ್ದ ಕೆಲವರು ಅವರ ಅಕ್ಕ ಪಕ್ಕದಲ್ಲಿ ನಿಂತಿದ್ದರು. ಪೋಕೊರು ಹಾಜಿ ಉಸಿರು ಬಿಗಿ ಹಿಡಿದುಕೊಂಡು ಮಗನ ಅಂಗಡಿಯತ್ತ ನೋಡುತ್ತಿದ್ದರು. ಒಂದು ಗುಂಪು ಅತ್ತ ಚಲಿಸಿದ್ದನ್ನೂ ಸ್ವಲ್ಪ ದೂರದಲ್ಲಿ ಇನ್ನೊಂದು ಗುಂಪು ಅದೇ ದಿಕ್ಕಿನತ್ತ ಹೊರಟದ್ದನ್ನೂ ಗಮನಿಸಿದರು. ಇಡೀ ವಾತಾವರಣದಲ್ಲಿ ನೆಲೆಗೊಂಡಿದ್ದ ಉಸಿರುಗಟ್ಟಿಸುವಂಥ ಒಂದು ಅಸಹಜ ಮೌನವು ಮುಂದೆ ಸಂಭವಿಸಲಿದ್ದ ಘಟನೆಗಳಿಗೆ ವೇದಿಕೆ ಸಿದ್ಧ ಮಾಡಿತ್ತು. ಅಷ್ಟರಲ್ಲಿ ಹಠಾತ್ತನೆ ಧಾಡ್ಡ್! ಎಂಬ ಜೋರಾದ ಸದ್ದು ಆ ಮೌನವನ್ನು ಅಪ್ಪಳಿಸಿತು. ಅದರ ಬೆನ್ನಿಗೇ ಅಲ್ಲಿ ಯಾರೂ ಎಣಿಸದೆ ಇದ್ದ ಸಂಗತಿಯೊಂದು ನಡೆದು ಹೋಯ್ತು. ಮಾರ್ಕೋನಿ ಇಲೆಕ್ಟ್ರಾನಿಕ್ಸನ್ನು ನೆಲಸಮ ಮಾಡಲೆಂದು ಉತ್ಸಾಹದಿಂದ ಹೋಗಿದ್ದ ಗುಂಪು ಎದ್ದೆನೋ ಬಿದ್ದೆನೋ ಎಂದು ಚಲ್ಲಾಪಿಲ್ಲಿಯಾಗಿ ಓಡತೊಡಗಿತು. ಇದನ್ನು ಕಂಡ ಇನ್ನೊಂದು ಗುಂಪು ಕೂಡ ತನ್ನ ಕಾಲಿಗೆ ಬುದ್ಧಿ ಹೇಳಿತು. ಅದರ ಬೆನ್ನಿಗೇ ಆ ಊರು ಹಿಂದೆಂದೂ ಕೇಳಿರದಷ್ಟು ಜೋರಾದ ಧ್ವನಿಯಲ್ಲಿ, ಆ ಮುಸ್ಸಂಜೆಯ ನೀರವತೆಯನ್ನು ಭೇದಿಸಿ ಹಾಡೊಂದು ಮೊಳಗತೊಡಗಿತು!
ಈಶ್ವರ್ ಅಲ್ಲಾ ತೇರೋ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್...!
ಒಂದು ಕ್ಷಣ ಸ್ಥಂಭೀಭೂತರಾದ ಪೋಕೊರು ಹಾಜಿಯವರಿಗೆ ನಡೆದದ್ದೇನೆಂದು ಹೊಳೆಯುತ್ತಲೇ ರೋಮಾಂಚಿತರಾಗಿ, ಎರಡೂ ಕೈಗಳನ್ನು ಮೇಲೆತ್ತಿ ಜೋರಾಗಿ ಕಿರುಚತೊಡಗಿದರು. ಅವರಿಗೆ ಮಗನ ಬಗ್ಗೆ ಒಮ್ಮೆಲೇ ಹೆಮ್ಮೆ ಉಕ್ಕಿತು. ಸಂತೋಷಾತಿರೇಕದಿಂದ ಪೋಕೊರು ಹಾಜಿ ಧಡ್ಡೆಂದು ನಿಂತಲ್ಲೇ ಕುಸಿದು ಬಿದ್ದರು.
ಹಾಡು ಬಹಳ ಹೊತ್ತು ಮೊಳಗುತ್ತಲೆ ಇತ್ತು. ಅಲ್ಲಿ ನಿಜವಾಗಿ ನಡೆದದ್ದು ಇಷ್ಟು. ಮುಕುಂದನು ಮಾರ್ಕೋನಿ ಇಲೆಕ್ಟ್ರಾನಿಕ್ಸಿನ ಬಾಗಿಲು ಮುರಿಯಲೆಂದು ಪಿಕ್ಕಾಸಿಯಿಂದ ಏಟು ಹಾಕಿದಾಗ ಬಾಗಿಲಿಗೆ ಅಡ್ಡಕ್ಕೆ ಕಟ್ಟಲಾಗಿದ್ದ, ಪಕ್ಕನೆ ನೋಡಿದರೆ ಗಮನಕ್ಕೆ ಬಾರದಷ್ಟು ತೆಳ್ಳಗಿನ, ತಂತಿಯು ಕಡಿದು ಹೋಯ್ತು; ಮರುಕ್ಷಣ ಅದಕ್ಕೆ ಜೋಡಿಸಲಾಗಿದ್ದ ಒಳಗಿದ್ದ ಟೇಪ್ ರೆಕಾರ್ಡರ್ ಸ್ವಯಂಚಾಲನೆಗೊಂಡಿತು. ಅದರೊಳಗಿದ್ದ ಗಾಂಧೀಜಿಯವರ ಮೆಚ್ಚಿನ ಭಜನೆಯ ಕ್ಯಾಸೆಟ್ ಪ್ಲೇ ಆಗಿ, ಬೃಹತ್ ಧ್ವನಿವರ್ಧಕಗಳ ಮೂಲಕ ಅಬ್ಬರಿಸಿಕೊಂಡು ಹೊರ ಹೊಮ್ಮಿತು. ಧ್ವಂಸಗೊಳಿಸುವ ಏಕೈಕ ಉದ್ದೇಶವನ್ನಿಟ್ಟುಕೊಂಡು ಬಂದಿದ್ದ ಗುಂಪು ತೀರಾ ಅನಿರೀಕ್ಷಿತವಾದ ಈ ಬೆಳವಣಿಗೆಯಿಂದ ಕಕ್ಕಾಬಿಕ್ಕಿಯಾಯ್ತು. ಭೂತ ಕಂಡವರಂತೆ ಬೆಚ್ಚಿ ಬಿದ್ದು ಚೆಲ್ಲಾಪಿಲ್ಲಿ ಓಡಿತು! ಈ ವಿವರಗಳು ಬಹಿರಂಗವಾದ ನಂತರ ಎರಡೂ ಗುಂಪುಗಳ ಸದಸ್ಯರು ಕೆಲವು ವಾರಗಳ ಕಾಲ ತಲೆಮರೆಸಿಕೊಂಡು ಓಡಾಡಿದರು. ಈ ಎಲ್ಲ ಗಲಾಟೆ, ಗೊಂದಲಗಳ ನಡುವೆ ಜಮಾಲನ ನಿಗೂಢ ಕನ್ನಡಕವನ್ನು ಕಿನ್ನಿಬಿದ್ರೆಯ ಜನ ಮರೆತು ಬಿಟ್ಟರು.
4 ದಿನ, ವಾರ, ತಿಂಗಳು.. ಹೀಗೆ ಕಾಲ ಚಲಿಸುತ್ತಿರಲು ಬೆಂಗಳೂರಿನ ಒಂದು ಪ್ರಸಿದ್ಧ ಪೇಪರಿನಲ್ಲಿ ಜಮಾಲನ ಫೋಟೊ ದೊಡ್ಡದಾಗಿ ಪ್ರಕಟವಾಯ್ತು. ಜಮಾಲನಿಗೆ ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಫೋಟೊದಲ್ಲಿ ಅವನು ತನ್ನ ವಿಚಿತ್ರ ಕನ್ನಡಕ ಮತ್ತು ಟೊಪ್ಪಿಯನ್ನು ಧರಿಸಿಕೊಂಡೇ ನಿಂತಿದ್ದ. ಅದು ವಾಸ್ತವವಾಗಿ ಕನ್ನಡಕವಾಗಿರಲಿಲ್ಲ, ಅದೊಂದು ಪುಟಾಣಿ ಟಿ.ವಿ.ಯಾಗಿತ್ತು! ಕನ್ನಡಕದಲ್ಲಿ ಪುಟ್ಟ ಟಿ.ವಿ. ಪರದೆ ಇತ್ತು. ತಲೆಯ ಮೇಲಿನ ಟೊಪ್ಪಿಯೊಳಗೆ ಅದರ ಪುಟ್ಟ ಯಂತ್ರವಿತ್ತು. ಕೊಡೆಯ ಅಸ್ಥಿಪಂಜರ ಅದರ ಆಂಟೆನಾ ಆಗಿತ್ತು.
ಸುದ್ದಿ ಓದಿದ ಕಿನ್ನಿಬಿದ್ರೆಯ ಜನ ಹೆಮ್ಮೆಯಿಂದ ಕುಣಿದಾಡಿದರು. ತಮ್ಮ ಊರಿನ ಹೆಮ್ಮೆಯ ಪುತ್ರನನ್ನು ಸನ್ಮಾನಿಸಲು ಅವನ ಆಗಮನಕ್ಕಾಗಿ ಎದುರು ನೋಡತೊಡಗಿದರು. ಆದರೆ ಅವನು ಕಿನ್ನಿಬಿದ್ರೆಗೆ ತಿರುಗಿ ಬರಲೇ ಇಲ್ಲ. ಒಂದು ವಿಶ್ವವಿಖ್ಯಾತ ಯೂನಿವರ್ಸಿಟಿಯ ಆಹ್ವಾನದ ಮೇರೆಗೆ ‘ಇಲೆಕ್ಟ್ರಾನಿಕ್ಸ್’ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಅಮೆರಿಕಕ್ಕೆ ಹೋದನೆಂದು ಜನ ಮಾತಾಡಿಕೊಂಡರು.







