ಗುಮ್ಮನ ಜೊತೆಗಿನ ಗುದ್ದಾಟ

ನಾವು ಇತಿಹಾಸದಿಂದ ಯಾವ ಪಾಠವನ್ನೂ ಕಲಿತಿಲ್ಲ . ಈಗಲೂ ರಾಜಕಾರಣಿಗಳು ಈ ಅಸ್ತ್ರವನ್ನೆಲ್ಲ ಬಳಸುತ್ತಾ ನಮ್ಮನ್ನು ವಂಚಿಸುತ್ತಲೇ ಇದ್ದಾರೆ. ಇವರ ಕುತಂತ್ರಗಾರಿಕೆ ಇಷ್ಟೇ. ನಿಮ್ಮ ಧರ್ಮಕ್ಕೆ ತೊಂದರೆ ಆಗುತ್ತಿದೆ. ನಿಮ್ಮ ಕುಲಕ್ಕೆ ಸಮಸ್ಯೆಯಾಗುತ್ತಿದೆ. ನಿಮ್ಮ ದೇಶಕ್ಕೆ ಸಂಚಕಾರ ಬಂದಿದೆ ಅಂತ ಹೇಳುತ್ತಾ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುತ್ತಾ ಹೋಗುತ್ತಾರೆ. ಆ ಭಿನ್ನಾಭಿಪ್ರಾಯ... ಸಂಶಯದ, ಭಯದ ವಾತಾವರಣವನ್ನು ಸೃಷ್ಟಿಸುತ್ತದೆ.
ಬೆಳ್ಳಿ ಪರದೆಯ ಮೇಲೆ ಪ್ರಕಾಶ್ ರಾಜ್ ಇಟ್ಟ ವಿಕ್ರಮ ಹೆಜ್ಜೆಗಳು ವಿಸ್ಮಯ ಹುಟ್ಟಿಸುವಂತಹದು. ಕನ್ನಡ ನಾಡು ಹೆಮ್ಮೆ ಪಡುವಂತಹದು. ನಾಯಕ, ಖಳನಾಯಕ, ಪೋಷಕ ಹೀಗೆ ಯಾವುದೇ ಪಾತ್ರಗಳಿಗೂ ಜೀವ ತುಂಬುವ ಪ್ರಕಾಶ್ ಬಹುಭಾಷೆ, ಬಹುಸಂಸ್ಕೃತಿಯ ರೂಪಕವಾಗಿ ಬದುಕುತ್ತಿರುವ ಕಲಾವಿದರಾಗಿದ್ದಾರೆ. ಇವರಿಗೆ ದೊರಕಿರುವ ಐದು ರಾಷ್ಟ್ರೀಯ ಪ್ರಶಸ್ತಿಗಳು, ಎಂಟು ನಂದಿ ಪ್ರಶಸ್ತಿಗಳು, ಆರು ಫಿಲಂಫೇರ್ ಪ್ರಶಸ್ತಿಗಳು ಸೇರಿದಂತೆ ನೂರಾರು ಪ್ರಶಸ್ತಿ ಗೌರವಗಳೇ ಅವರ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿದೆ. ಸಿನೆಮಾ ಅಲ್ಲದೆ ರಂಗಭೂಮಿ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಜನರನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಜಾಗೃತರಾಗುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಸಾಮಾಜಿಕ ಸೇವೆಗೂ ತಮ್ಮ ಬದುಕನ್ನು ಮೀಸಲಿಡುತ್ತಾ ಬಂದಿದ್ದಾರೆ. ಲೇಖಕರೂ ಆಗಿರುವ ಪ್ರಕಾಶ್ ರಾಜ್ ತಮ್ಮ ಅಂಕಣ ಬರಹಗಳ ಮೂಲಕವೂ ಗುರುತಿಸಲ್ಪಟ್ಟಿದ್ದಾರೆ.
ಈ ಲೇಖನದಲ್ಲಿ ಅಮ್ಮ ಹೇಳುತ್ತಿದ್ದ ಸುಂದರ ಸುಳ್ಳು ಮತ್ತು ರಾಜಕಾರಣಿಗಳು ಹೇಳುವ ಕುರೂಪಿ ಸುಳ್ಳುಗಳನ್ನು ಸಮೀಕರಿಸುವ ಮೂಲಕ ವರ್ತಮಾನವನ್ನು ವಿಶ್ಲೇಷಿಸಿದ್ದಾರೆ.
ಗುಮ್ಮ ಬಂದ ಗುಮ್ಮ
ಗಾಳಿಗುಮ್ಮ ಬಂದಾನ..
ಗಾಳಿ ಮಾತು ತಂದಾನ.. ವಿವೇಚನೆಯ ಕೊಂದಾನ...
ನಮಗೆ ಗೊತ್ತಿರುವ ಒಂದು ಅನುಭವದಿಂದ ಆರಂಭಿಸೋಣ. ನಾವು ವಿಜ್ಞಾನ ಓದಿದ್ದೇವೆ, ಬ್ರಹ್ಮಾಂಡ ಅಂದರೇನು ಅಂತ ನಮಗೆ ಗೊತ್ತಿದೆ. ಸೂರ್ಯ ಚಲಿಸುವುದಿಲ್ಲ... ಆದರೆ ಭೂಮಿ ??... ತನ್ನ ಕಕ್ಷೆಯಲ್ಲಿ ಗಂಟೆಗೆ ಸಾವಿರಕ್ಕೂ ಹೆಚ್ಚುಕಿಲೋಮೀಟರ್ ವೇಗದಲ್ಲಿ ಬುಗುರಿಯಂತೆ ತಿರುಗುತ್ತಾ ಸೂರ್ಯನ ಸುತ್ತಲೂ ಪ್ರದಕ್ಷಿಣೆ ಹಾಕುತ್ತ ಇದೆ ಅನ್ನುವುದು ತಿಳಿದಿದೆ.
ಆದರೆ ಈಗಲೂ ನಾವು ಸೂರ್ಯ ಹುಟ್ಟಿದ, ಸೂರ್ಯ ನೆತ್ತಿಗೆ ಬಂದ, ಸೂರ್ಯ ಮುಳುಗಿದ ಎನ್ನುವ ಸುಳ್ಳನ್ನು ನಂಬಿದ್ದೇವೆ.ಬೆಳಗ್ಗೆ ಸಂಜೆ ಮಧ್ಯಾಹ್ನ ಅಂತ ಕರೆಯುತ್ತಾ ಅದಕ್ಕೆ ತಕ್ಕ ಸುಂದರವಾದ ಸಿದ್ಧತೆಗಳನ್ನೂ ಮಾಡಿಕೊಂಡು ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಭೋಜನ ರಾತ್ರಿ ಔತಣ ..ದುಡಿಮೆ.. ವಿಶ್ರಾಂತಿ..ಪ್ರಯಾಣ.. ಹೀಗೆ ಸಮಯ ನಿರ್ವಹಣೆಯಲ್ಲಿ ತಲ್ಲೀನರಾಗಿದ್ದೇವೆ. ಓಡುತ್ತಿರುವ ರೈಲಿನಲ್ಲಿ ಕುಳಿತಾಗ ನಿಂತ ಮರಗಳೂ ಓಡುವಂತೆ ಕಾಣಿಸುವ ಹಾಗೆ, ಸೂರ್ಯ ಕೂಡ ಅನ್ನುವುದು ಗೊತ್ತಿದ್ದರೂ ನಮ್ಮ ಸುಂದರವಾದ ಸುಳ್ಳುಗಳನ್ನು, ಕವಿ ಹೇಳಿದ ರೂಪಕಗಳನ್ನು ನಾವು ಮರೆಯಲು ಸಿದ್ಧರಿಲ್ಲ.
ಇದು ಅಪಾಯಕಾರಿ ಸುಳ್ಳಲ್ಲ. ಸುಂದರವಾದ ಸುಳ್ಳು. ಇದರಿಂದ ಅಂಥದ್ದೇನೂ ತೊಂದರೆ ಆಗುವುದಿಲ್ಲ. ಆದರೆ ಕ್ರಮೇಣ ಈ ಸುಳ್ಳುಗಳು ಎಲ್ಲ ಅನುಭವ ವಲಯಕ್ಕೂ ಹಬ್ಬುತ್ತಾ ಹೋಗುತ್ತವೆ. ಇದೇ ಉದಾಹರಣೆಯನ್ನು ತೆಗೆದುಕೊಂಡರೆ ಎಷ್ಟೇ ವಿಜ್ಞಾನದ ಪಾಠ ಓದಿದರೂ ನಾವು ಗ್ರಹಣ ಅಂದಾಗ ಮತ್ತೆ ಕಂದಾಚಾರದ ಮೊರೆ ಹೋಗುತ್ತೇವೆ. ರಾಹು ಕೇತುಗಳು ಸೂರ್ಯನನ್ನು ನುಂಗುತ್ತವೆ ಅಂತ ಭಾವಿಸಿ ಪೂಜೆ, ಪುನಸ್ಕಾರ ಮಾಡುತ್ತೇವೆ. ಸುಂದರವಾದ ಸುಳ್ಳು ಕುರೂಪವಾಗುತ್ತಾ ಹೋಗುತ್ತದೆ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ ಅನ್ನುವ ಸುಳ್ಳು ಇಲ್ಲದೇ ಹೋಗಿದ್ದರೆ ಗ್ರಹಣದ ಸುಳ್ಳೂ ಇರುತ್ತಿರಲಿಲ್ಲ ಅಲ್ಲವೇ?
ಸುಳ್ಳಿಗೆ ಇರುವ ಶಕ್ತಿಯೇ ಅದು. ಅದು ನಂಬಿಸುತ್ತೆ... ಸತ್ಯವನ್ನು ಅದು ಮರೆಸಬಲ್ಲದು, ಸತ್ಯವನ್ನು ಅದು ನಿರಾಕರಿಸಬಲ್ಲದು ಮತ್ತು ಸತ್ಯವನ್ನು ಸುಳ್ಳೆಂದು ಸಾಬೀತು ಮಾಡಬಲ್ಲದು. ಇಂಥ ಸುಳ್ಳುಗಳನ್ನು ನಾವು ಮತ್ತೊಬ್ಬರಿಗಷ್ಟೇ ಅಲ್ಲ, ನಮಗೆ ನಾವೇ ಹೇಳಿಕೊಳ್ಳುತ್ತಾ ಇರುತ್ತೇವೆ. ನಾನು ಚೆನ್ನಾಗಿದ್ದೀನಿ ಅನ್ನುವ ನಿರಪಾಯಕಾರಿ ಸುಳ್ಳಿನಿಂದ ಹಿಡಿದು, ನನ್ನ ಜಾತಿಯೇ ಮೇಲು ಅನ್ನುವ ನೀಚ ಸುಳ್ಳು, ನಾನು ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದೇನೆ ಎನ್ನುವ ಪರೀಕ್ಷಿಸಲಾಗದ ಸುಳ್ಳು, ನಾನು ಸಭ್ಯ ಎಂಬ ಅರ್ಥಹೀನ ಸುಳ್ಳು, ನಾನು ಪ್ರಾಮಾಣಿಕ ಎಂಬ ಸಾಬೀತಾಗದ ಸುಳ್ಳಿನ ತನಕ ನಮ್ಮ ಸುಳ್ಳುಗಳ ಪ್ರಪಂಚ ಹಬ್ಬುತ್ತದೆ.
ಸೂರ್ಯ ಉದಯಿಸುವ ದಿಕ್ಕನ್ನು ನಂಬಿ ಹುಟ್ಟಿದ ಮತ್ತೊಂದು ಸುಳ್ಳಿನ ಹೆಸರು ವಾಸ್ತು. ಬಾಗಿಲು ಸೂರ್ಯೋದಯದ ಕಡೆ ಇರಬೇಕು, ಕುಬೇರನ ಮೂಲೆ ಅಗ್ನಿಮೂಲೆಯಲ್ಲಿ ಇರಬಾರದು, ನೀರಿನ ತೊಟ್ಟಿ ಎಲ್ಲಿರಬೇಕು, ಸ್ನಾನ ಎಲ್ಲಿ ಮಾಡಬೇಕು, ಎಲ್ಲಿ ನಿದ್ದೆ ಮಾಡಬೇಕು, ಎಲ್ಲಿ ಶೃಂಗಾರದಲ್ಲಿ ತೊಡಗಬೇಕು ಅನ್ನುವುದನ್ನೆಲ್ಲ ಹೇಳುವ ಸುಳ್ಳುಗಾರರು ಹುಟ್ಟಿಕೊಂಡರು. ಅವರು ಸುಳ್ಳನ್ನು ಮುಂದಿಟ್ಟುಕೊಂಡು ವ್ಯಾಪಾರ ಶುರುಮಾಡಿದರು. ದಿಕ್ಕನ್ನು ತೋರಿಸಿ ದಿಕ್ಕುತಪ್ಪಿಸಲು ಆರಂಭಿಸಿದರು.ಕಟ್ಟಿದ ಮನೆಯನ್ನು ಒಡೆಸಿದರು. ನಮ್ಮ ವಿವೇಚನೆಯನ್ನು ಸುಳ್ಳಿನ ಗಾಡಿಯಲ್ಲಿ ಇಟ್ಟು ಬೆಟ್ಟದಿಂದ ತಳ್ಳಿಬಿಟ್ಟರು.
ಈ ಸುಳ್ಳು ಹೇಗೆ ವಿಸ್ತಾರವಾಗುತ್ತದೆ, ಕಾಳ್ಗಿಚ್ಚಿನಂತೆ ಹಬ್ಬುತ್ತಾ ಬದುಕನ್ನು ಒಡೆಯುತ್ತದೆ ಅನ್ನುವುದನ್ನು ನೋಡೋಣ. ತಮಿಳುನಾಡಿನ ಹಳ್ಳಿಯಲ್ಲಿ ನಡೆದ ಒಂದು ಘಟನೆ ಇದು. ಒಂದು ಸಭ್ಯ ಕುಟುಂಬ. ಪ್ರೀತಿಯಿಂದ ಬೆಳೆಸಿದ ಮಗಳನ್ನು ದೂರದೂರಿನ ಸಂಬಂಧಿಕರ ಮಗನಿಗೆ ಮದುವೆ ಮಾಡಿಸುತ್ತಾರೆ. ವರ ವಿದೇಶದಲ್ಲಿ ಕೆಲಸ ಮಾಡುತ್ತ ಆರು ತಿಂಗಳಿಗೊಮ್ಮೆ ರಜೆಯಲ್ಲಿ ಬಂದು ಹೋಗುತ್ತಿರುತ್ತಾನೆ. ಅತ್ತೆ ಮಾವನನ್ನು ನೋಡಿಕೊಳ್ಳುವ ಹೊಣೆ ಸೊಸೆಯದ್ದು. ಹಲವು ತಿಂಗಳ ನಂತರ ಒಂದು ದಿನ ದೇವಸ್ಥಾನಕ್ಕೆ ಹೋಗಿ ಹಿಂದಿರುಗುವಾಗ ದಾರಿಯಲ್ಲಿ ಇವಳಿಗೆ ಪರಿಚಿತರಾದ ಅಪ್ಪನ ಜಮೀನಿನ ಪಕ್ಕದವರು ದಿಢೀರಂತ ಕಾರೊಂದರಲ್ಲಿ ಬಂದಿಳಿದು ಕಳವಳದಿಂದ ‘‘ನಿನ್ನ ತಂದೆಗೆ ಸೀರಿಯಸ್.. ಕೂಡಲೇ ನೋಡಬೇಕಂತೆ’’ ಎಂದು ಸುಳ್ಳು ಹೇಳುತ್ತಾರೆ. ಅವರ ಮಾತನ್ನು ನಂಬಿ ಮಗಳು ಕಾರು ಹತ್ತುತ್ತಾಳೆ.
ವಾಸ್ತವ ಏನೆಂದರೆ, ಅವಳ ಅಪ್ಪನಿಗೂ ಅವರಿಗೂ ಯಾವುದೋ ಜಗಳ. ಸೇಡು ತೀರಿಸಿಕೊಳ್ಳಬೇಕು ಅಂದುಕೊಂಡವರಿಗೆ ಗಂಡನ ಊರಿನಲ್ಲಿದ್ದ ಮಗಳು ನೆನಪಾದಳು. ಅವಳನ್ನು ಹೀಗೆ ಅಪಹರಿಸಿ, ಮುನ್ನೂರು ಕಿಲೋಮೀಟರ್ ಆಚೆಯ ಅಪರಿಚಿತ ಊರಿನಲ್ಲಿಳಿಸಿ ಹೋಗಿಬಿಡುತ್ತಾರೆ. ಪಾಪ ಆ ಮುಗ್ಧೆ ಕಾಡಿ ಬೇಡಿ ಒಂದೆರಡು ದಿನಗಳ ನಂತರ ಊರಿಗೆ ತಲುಪುವಷ್ಟರಲ್ಲಿ, ಅತ್ತ ಕೊಟ್ಟೂರಿನಲ್ಲೂ, ಇತ್ತ ಹೆತ್ತೂರಿನಲ್ಲೂ ಅವಳು ಯಾರನ್ನೋ ಪ್ರೀತಿಸಿ ಓಡಿಹೋಗಿದ್ದಾಳೆ ಎನ್ನುವ ಪುಕಾರನ್ನು ಹಬ್ಬಿಸಿರುತ್ತಾರೆ. ಸುಳ್ಳು ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಗಂಡನ ಮನೆಯವರು ನಡತೆಗೆಟ್ಟವಳು ಎಂದು ಹೊರಗಟ್ಟಿದರೆ... ಹೆತ್ತ ಮನೆಯವರು ನಿನ್ನಿಂದ ಮನೆತನಕ್ಕೇ ಕಳಂಕವೆಂದು ಹೊರಗಟ್ಟುತ್ತಾರೆ. ದಿಕ್ಕಿಲ್ಲದ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ಸತ್ಯ ಘಟನೆಯ ಹಿಂದಿರುವ ಸುಳ್ಳು ಒಂದು ಜೀವವನ್ನು ಬಲಿ ತೆಗೆದುಕೊಂಡಿತು.
ಉತ್ತರ ಭಾರತದ ಒಂದು ಘಟನೆ. ಬಡವನೊಬ್ಬ ಇಡೀ ದಿನ ಕೆಲಸ ಮಾಡಿ, ರಾತ್ರಿ ಅಡುಗೆಗೆ ಎಂದು ಸ್ವಲ್ಪ ಕುರಿಮಾಂಸ ತಂದಿಟ್ಟಿದ್ದ. ಯಾರೋ ಅದು ದನದ ಮಾಂಸ ಅಂತ ಸುದ್ದಿ ಹಬ್ಬಿಸಿದರು. ಅವನಿಗೆ ಏನಾಗುತ್ತಿದೆ ಅಂತ ಗೊತ್ತಾಗುವ ಮೊದಲೇ ಜನರೆಲ್ಲ ನುಗ್ಗಿ ದೊಣ್ಣೆಯಿಂದ ಹೊಡೆದು ಕೊಲ್ಲುತ್ತಾರೆ. ಇನ್ನೆಲ್ಲೋ ಕೂಲಿ ಕೆಲಸಕ್ಕೆ ಹೋದವರನ್ನು ಮಕ್ಕಳ ಕಳ್ಳರೆಂದು ಸುದ್ದಿ ಹಬ್ಬಿಸಿ ಮರಕ್ಕೆ ಕಟ್ಟಿ ಹೊಡೆದು ಕೊಲ್ಲುತ್ತಾರೆ.
ಹೀಗೆ ವಿನಾಕಾರಣ ಒಬ್ಬರು ಇನ್ನೊಬ್ಬರನ್ನು ದ್ವೇಷಿಸುವುದಕ್ಕೆ ಕತೆ ಕಟ್ಟುವುದು, ಸುಳ್ಳು ಹೇಳುತ್ತಲೇ ಒಂದು ಜನಾಂಗದ ಮನಸ್ಸನ್ನೇ ವಿಷಪೂರಿತಗೊಳಿಸುವುದು, ಉಸಿರಾಡುವ ಗಾಳಿಗೂ ಸುಳ್ಳಿನ ವಿಷ ಬೆರೆಸುವುದನ್ನು ಅನೇಕರು ಮಾಡುತ್ತಲೇ ಬರುತ್ತಿದ್ದಾರೆ.
ಕೆಲವರಿಗೆ ಕದಿಯುವ ಚಟವಿರುತ್ತದೆ. ತನಗೆ ಬೇಕೋ ಬೇಡವೋ ಒಂದಲ್ಲ ಒಂದನ್ನು ಅವರು ಕದಿಯುತ್ತಲೇ ಇರಬೇಕು. ಅದು ಕಾಯಿಲೆಯಾದರೆ, ಝೆನೋಫೋಬಿಯಾ ಅಂತ ಒಂದು ಅಸ್ವಸ್ಥತೆಯಿದೆ. ಅದು ಒಂಥರದ ಭಯ. ನಮ್ಮ ಊರಿಗೆ ಅಪರಿಚಿತರು ಬಂದರೆ ಅವರು ಯಾರು ಎಂದು ತಿಳಿಯುವ ಮುಂಚಿನ ಸಂಶಯ.. ಆತಂಕ.. ಭಯದ ಹಾಗೆ... ಬೇರೆ ಜಾತಿಯವನ ಬಗ್ಗೆ, ಬೇರೆ ಧರ್ಮದವನ ಬಗ್ಗೆ, ಬೇರೆ ಪಂಗಡದವನ ಬಗ್ಗೆ, ಬೇರೆ ದೇಶದವನ ಬಗ್ಗೆ, ಬೇರೆ ಬಣ್ಣದವನ ಬಗ್ಗೆ ಇರುವ ವಿನಾಕಾರಣ ಭಯ. ಜಿರಳೆ ಕಂಡರೆ ಭಯ, ಹಾವಿನ ಭಯ ಇರುವ ಹಾಗೆ ಇದು ಕೂಡ ಅವನು ನಮ್ಮವನಲ್ಲ ಅಂತ ಸಂಶಯದಿಂದ ನೋಡುವ ಒಂದು ಮನಸ್ಥಿತಿ ಇದು.
ಜನಸಾಮಾನ್ಯರ ಈ ಮನಸ್ಥಿತಿಯನ್ನು.. ಪ್ರಪಂಚದ ಎಲ್ಲಾ ಕಡೆಗಳಲ್ಲೂ.. ಎಲ್ಲಾ ಕಾಲಗಳಲ್ಲೂ ಧೂರ್ತರು, ಸರ್ವಾಧಿಕಾರಿಗಳೂ ಜನರನ್ನು ತಮ್ಮ ಗುಲಾಮರನ್ನಾಗಿಸಿ ಆಳಲು ಬಳಸುತ್ತಲೇ ಬಂದಿದ್ದಾರೆ.
ಹಿಟ್ಲರ್ ಬಳಸಿದ್ದೂ ಈ ಮನಸ್ಥಿತಿಯನ್ನೇ. ನಮ್ಮ ವರ್ಣವೇ ಶ್ರೇಷ್ಠ... ಎಂದು ತನ್ನ ದೇಶದವರನ್ನು ನಂಬಿಸಿ..ಅವರನ್ನು ಕಾಪಾಡುವ ನಾಯಕ ತಾನೇ ಎಂದು ಬಿಂಬಿಸಿ ಮಾರಣಹೋಮಕ್ಕೆ ಕಾರಣನಾದ. ಕೊನೆಗೆ ಅಳಿದದ್ದೇನು ಉಳಿದದ್ದೇನು ಎನ್ನುವ ಇತಿಹಾಸದ ಪಾಠ ನಮ್ಮ ಮುಂದಿದೆ.
ದುರದೃಷ್ಟವೆಂದರೆ... ನಾವು ಇತಿಹಾಸದಿಂದ ಯಾವ ಪಾಠವನ್ನೂ ಕಲಿತಿಲ್ಲ . ಈಗಲೂ ರಾಜಕಾರಣಿಗಳು ಈ ಅಸ್ತ್ರವನ್ನೆಲ್ಲ ಬಳಸುತ್ತಾ ನಮ್ಮನ್ನು ವಂಚಿಸುತ್ತಲೇ ಇದ್ದಾರೆ. ಇವರ ಕುತಂತ್ರಗಾರಿಕೆ ಇಷ್ಟೇ. ನಿಮ್ಮ ಧರ್ಮಕ್ಕೆ ತೊಂದರೆ ಆಗುತ್ತಿದೆ. ನಿಮ್ಮ ಕುಲಕ್ಕೆ ಸಮಸ್ಯೆಯಾಗುತ್ತಿದೆ. ನಿಮ್ಮ ದೇಶಕ್ಕೆ ಸಂಚಕಾರ ಬಂದಿದೆ ಅಂತ ಹೇಳುತ್ತಾ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುತ್ತಾ ಹೋಗುತ್ತಾರೆ. ಆ ಭಿನ್ನಾಭಿಪ್ರಾಯ... ಸಂಶಯದ, ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ಆಗ ದಿಕ್ಕುತೋಚದ ಜನರನ್ನು ಕಾಪಾಡುತ್ತೇವೆಂದು ಈ ಧೂರ್ತರು... ಸ್ವಯಂಘೋಷಿತ ನಾಯಕರುಗಳಾಗಿ ಅವತರಿಸುತ್ತಾರೆ. ಹೆದರಿದ ಜನರು ಕುರಿಗಳಂತೆ ಅವರನ್ನು ನಂಬುತ್ತಾರೆ. ಭಯವನ್ನು ದ್ವೇಷಾಗ್ನಿಯಾಗಿಸಲು ಹೆಚ್ಚು ಸಮಯ ಬೇಕಿಲ್ಲ. ಅದಕ್ಕೆ ಪೂರಕವಾದ ಕೋಮುಗಲಭೆ, ದಂಗೆ, ಕೊಲೆ, ಸುಲಿಗೆ, ಯುದ್ಧ ಮುಂತಾದ ಸುಳ್ಳು ಘಟನಾವಳಿಗಳನ್ನು ಇವರೇ ಸೃಷ್ಟಿಸುತ್ತಾರೆ. ಸುಳ್ಳು ಪ್ರಚಾರಗಳನ್ನು ಹಬ್ಬಿಸುತ್ತಾ ಹೋಗುತ್ತಾರೆ. ಇವರ ಹುನ್ನಾರವನ್ನು ಅರಿತು ಪ್ರಶ್ನಿಸುವವರನ್ನು ದೇಶದ್ರೋಹಿಗಳೆಂದು... ಧರ್ಮ ವಿರೋಧಿಗಳೆಂದು ಊಹಾಪೂಹಗಳನ್ನು... ವದಂತಿಗಳನ್ನು ಹರಡಿ ಚಾರಿತ್ರ್ಯವಧೆ ಮಾಡಿ ಕೊಲ್ಲುತ್ತಾರೆ ಅಥವಾ ಸೆರೆಮನೆಗೆ ದೂಡುತ್ತಾರೆ. ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿ ಹಾಕುತ್ತಾರೆ. ಕೊನೆಗೆ ಅಧಿಕಾರವನ್ನು ತಮ್ಮದಾಗಿಸಿಕೊಂಡನಂತರ ಸುಳ್ಳುಗಳಿಂದ ಗಳಿಸಿದ ಅಧಿಕಾರವನ್ನು ಉಳಿಸಿಕೊಳ್ಳಲು ಸುಳ್ಳಿನ ಮೇಲೆ ಸುಳ್ಳುಗಳ ಸರಮಾಲೆಯನ್ನು ಪೋಣಿಸುತ್ತಾ ಹೋಗುತ್ತಾರೆ..... ಇವರ ಬಣ್ಣ ಬಯಲಾಗುವವರೆಗೂ.
ನಾನು ಹೇಳುತ್ತಿರುವುದೆಲ್ಲ ನಮ್ಮ ಕಣ್ಣ ಮುಂದೇ ನಡೆಯುತ್ತಿರುವಂತೆ ನಿಮಗೆ ಅನಿಸುತ್ತಿದೆಯೆ???
ಇರಲಿ, ಎಕೆಂದರೆ ನಾನು ಸುಳ್ಳು ಹೇಳುತ್ತಿಲ್ಲ.
ಗೊಗೊಲ್ ಬರೆದ ಒಂದು ನಾಟಕವನ್ನು ಕೆ.ವಿ. ಸುಬ್ಬಣ್ಣ ಕನ್ನಡಕ್ಕೆ ಅನುವಾದಿಸಿದ್ದರು. ಇನ್‌ಸ್ಪೆಕ್ಟರ್ ಜನರಲ್ ಅನ್ನುವ ಮೂಲ ನಾಟಕವನ್ನು ‘ಸಾಹೇಬರು ಬರುತ್ತಾರೆ’ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದರು. ಆ ನಾಟಕದ ವಸ್ತು ಇಷ್ಟೇ. ಒಂದು ಭ್ರಷ್ಟ ಸಮಾಜದ ಅತಿಭ್ರಷ್ಟ ಇಲಾಖೆ. ಅಲ್ಲಿ ಎಲ್ಲರೂ ಕಳ್ಳರೇ. ಒಂದು ದಿನ ಅವರ ಕೆಲಸ ಕಾರ್ಯಗಳನ್ನು ಪರಿಶೀಲನೆ ಮಾಡುವುದಕ್ಕೆ ದೊಡ್ಡ ಸಾಹೇಬರು ಬರಲಿದ್ದಾರೆ ಅಂತ ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಾರೆ.
ಒಂದು ದಿನ ಒಬ್ಬ ಸಾಮಾನ್ಯ ಪ್ರವಾಸಿ ಆ ಊರಿನ ಹೋಟೆಲಿನಲ್ಲಿ ಕಾಣಿಸಿಕೊಳ್ಳುತ್ತಾನೆ. ಮಹಾನ್ ತರಲೆಯೂ ತುಂಟನೂ ಆದ ಅವನನ್ನು ಸಾಹೇಬರು ಅಂತ ಎಲ್ಲರೂ ತಪ್ಪು ತಿಳಿದುಕೊಂಡು ಅವನನ್ನು ಓಲೈಸಲು ಆರಂಭಿಸುತ್ತಾರೆ. ಅವನಿಗೂ ಈ ಭ್ರಷ್ಟರ ಚಿತಾವಣೆ ಗೊತ್ತಾಗಿ ತಾನು ಸಾಹೇಬನೇ ಅಂತ ಬಿಂಬಿಸುತ್ತಾ ಬೇಕು ಬೇಕಾದ್ದನ್ನೆಲ್ಲ ಪಡೆಯುತ್ತಾ ಹೋಗುತ್ತಾನೆ.
ಭ್ರಷ್ಟ ಸಮಾಜ, ಅಪ್ರಾಮಾಣಿಕ ಸಮಾಜ ಹೇಗೆ ಮತ್ತೊಬ್ಬ ಅಪ್ರಾಮಾಣಿಕನ ಕೈಗೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತದೆ ಅನ್ನುವ ಕತೆಯಿದು. ಸುಳ್ಳಿನ ಸಮಾಜ ಕೂಡ ಅಷ್ಟೇ. ಯಾರು ಬೇಕಿದ್ದರೂ ಒಂದು ಸುಳ್ಳು ಹೇಳಿ ನಮ್ಮನ್ನು ಆಳಬಲ್ಲರು. ನಮ್ಮನ್ನು ನಂಬಿಸಬಲ್ಲರು. ನಮ್ಮನ್ನು ಕಬಳಿಸಬಲ್ಲರು. ನಮ್ಮ ವಿವೇಚನೆಯನ್ನು ನಾಶ ಮಾಡಬಲ್ಲರು.
ಗಾಳಿ ಮಾತು ಅನ್ನುವ ಒಂದು ಸಿನೆಮಾ ಬಂದಿತ್ತು. ಲಕ್ಷ್ಮೀ ನಟಿಸಿದ ಆ ಚಿತ್ರದಲ್ಲಿ ಆಕೆಗೆ ಗೆಳತಿಯೇ ಪ್ರೇಮಪತ್ರ ಬರೆಯುತ್ತಿರುತ್ತಾಳೆ. ಯಾರೋ ಬರೆದಿದ್ದಾರೆ ಅಂತ ಸುದ್ದಿ ಹಬ್ಬಿಸುತ್ತಾಳೆ. ಅದು ಅವಳ ಸಾವಿನಲ್ಲಿ ಅಂತ್ಯವಾಗುತ್ತದೆ.
ಅಮ್ಮ ಹೇಳುತ್ತಿದ್ದ ಸುಂದರ ಸುಳ್ಳು ನೆನಪಿದೆಯಾ? ಗುಮ್ಮ ಬರ್ತಾನೆ ಗುಮ್ಮ ಅಂತ. ಅದು ಮಗುವಿನ ರಕ್ಷಣೆಗೆ ಅಂತ ಹೇಳುತ್ತಿದ್ದಳು ಅವಳು.
ಈಗ ರಾಜಕಾರಣಿ ತನ್ನ ಲಾಭಕ್ಕಾಗಿ ಹೇಳುತ್ತಿದ್ದಾನೆ- ಗುಮ್ಮ ಬರ್ತಾನೆ ಗುಮ್ಮ.
ಅವನನ್ನು ನಾವು ಗುಮ್ಮಬೇಕಲ್ವಾ ತಮ್ಮಾ.







