ಖಂಡವಿದೆಕೋ ... ಮಾಂಸವಿದೆಕೋ ...!

ಮನೆಗೆ ಬಂದವರೇ ಸುಸ್ತಾಗಿ ಮಲಗಿ ನಿದ್ದೆ ಹೋಗಿರುವ ಲಲಿತಮ್ಮನನ್ನು ನೋಡಿದರು. ವಿಶ್ವ ಹುಟ್ಟುವಾಗ ಮಗುವಿನ ತಲೆ ಹೊಟ್ಟೆಯೊಳಗೇ ತಿರುಗಿ ಬಿಟ್ಟಿತ್ತು. ಏನಾದರೂ ಮಗು ಹೊರಗೆ ಬರಲು ಕೇಳುತ್ತಿರಲಿಲ್ಲ. ವೈದ್ಯರು ಕೈಯಿಂದ ಹೊಟ್ಟೆಯನ್ನು ತಿರುವಿ ತಿರುವಿ ಕೊನೆಗೂ ತಲೆ ಹೊರಗೆ ಬರುವಂತೆ ಮಾಡಿದ್ದರು. ವಿಶ್ವನನ್ನು ಒಂಭತ್ತು ತಿಂಗಳು ಜೋಪಾನ ಮಾಡಿದ ಆಕೆಯ ಗರ್ಭ ಇದೀಗ ಕ್ಯಾನ್ಸರ್ ಹುಳಗಳ ಪಾಲಾಗಿದೆ. ಕತ್ತರಿಸಿ ತೆಗೆದು ಹಾಕಬೇಕು ಎನ್ನುತ್ತಿದ್ದಾರೆ ವೈದ್ಯರು. ಭಟ್ಟರಿಗೆ ಸಂಕಟ ಅನ್ನಿಸಿ ಹಿತ್ತಲಿಂದ ನೇರ ಕೊಟ್ಟಿಗೆಯ ಕಡೆ ನಡೆದರು.
ಅನಂತ ಭಟ್ಟರು ಮನೆಯ ಹಿತ್ತಿಲ ಕೊಟ್ಟಿಗೆಯ ಕಟ್ಟೆಯಲ್ಲಿ ಕಲ್ಲಿನಂತೆ ಕೂತು, ಹುಲ್ಲು ಮೆಲ್ಲುತ್ತಿದ್ದ ಜೋಡಿ ಎತ್ತುಗಳನ್ನೇ ನೋಡುತ್ತಿದ್ದರು. ಭಟ್ಟರ ಒಳಗಿನ ದುಗುಡ ಅರ್ಥವಾದಂತೆ ಅವುಗಳೂ ಆಗಾಗ ತಲೆಯೆತ್ತಿ ಭಟ್ಟರನ್ನು ನೋಡುತ್ತಿದ್ದವು. ಯಾರ ಹೆಗಲಿಗಾದರೂ ಈ ಎತ್ತುಗಳನ್ನು ಕಟ್ಟಿ ಬಿಟ್ಟರೆ ಸಾಕು ಎಂದು ಯೋಚಿಸುತ್ತಿರುವುದು ಇಂದು ನಿನ್ನೆಯಲ್ಲ. ಅದೊಂದು ಸಂಜೆ ಹೆಗಲಿಗೆ ಕೇಸರಿ ಶಾಲು ಹಾಕಿ ಎಲ್ಲಿಗೋ ಹೊರಡುತ್ತಿದ್ದ ಮಗ ವಿಶ್ವನನ್ನು ತಡೆದು ‘‘ನೋಡು...ಆ ನಿನ್ನ ಸಂಘಟನೆಯವರನ್ನು ಕರೆದು ಈ ಎರಡು ಎತ್ತುಗಳನ್ನು ಯಾವುದಾದರೂ ಗೋಶಾಲೆಗಳಿಗೆ ಸೇರಿಸಿ ಬಿಡು. ನೀನು ಮನೆ ಮಠ ಬಿಟ್ಟು ಸಂಘಟನೆಯಲ್ಲಿ ಕೆಲಸ ಮಾಡಿದ್ದಕ್ಕೆ ಅಷ್ಟಾದರೂ ಪ್ರಯೋಜನವಾಗಲಿ....ಮಾರುವುದಕ್ಕಂತೂ ನೀನು ಬಿಡುವುದಿಲ್ಲ’’ ತಂದೆಯನ್ನೊಮ್ಮೆ ದುರುಗುಟ್ಟಿ ನೋಡಿದವನೇ ಪ್ರತಿಕ್ರಿಯೆ ನೀಡದೆ ಬುಸು ಬುಸು ಎಂದು ಅಲ್ಲಿಂದ ತೆರಳಿದ್ದ. ಅಲ್ಲಿಗೆ ತಂದೆ-ಮಗನ ನಡುವಿನ ಮಾತುಕತೆ ಮುಗಿದಿತ್ತು. ಅಂದು ರಾತ್ರಿ ತಾಯಿಯ ಬಳಿ ವಿಶ್ವ ಎಗರಾಡಿದ್ದ ‘‘ಅಪ್ಪಯ್ಯ ಎಂತ ನನ್ನ ಮರ್ಯಾದೆ ತೆಗೆಯಲಿಕ್ಕೆ ಹೊರಟದ್ದ. ಗೋರಕ್ಷಕ ದಳದಲ್ಲಿರುವ ನಾನೇ ನನ್ನ ಮನೆಯಲ್ಲಿರುವ ದನವನ್ನು ಕೊಟ್ಟರೆ ಉಳಿದವರು ನನ್ನ ಮುಖಕ್ಕೆ ಉಗಿಯುವುದಿಲ್ಲವ?ಹಾಗಾದರೆ ನಿಮಗೆ ವಯಸ್ಸಾದ ಮೇಲೆ ನಾನು ನಿಮ್ಮನ್ನು ವೃದ್ಧಾಶ್ರಮಕ್ಕೆ ಕೊಟ್ಟು ಬಿಡುವುದಾ?’’ ‘‘ಹಾಗಲ್ಲ ಮಗ...ಅದನ್ನು ಇಟ್ಟುಕೊಂಡು ನಾವೆಂತ ಮಾಡುವುದು? ದನ ಸಾಕುವವರು ಅದನ್ನೆಲ್ಲ ಚಿಂತೆ ಮಾಡಿದರೆ ಆಗುತ್ತದ? ಗೋ ಶಾಲೆಗಾದ್ರೆ ಗೋಶಾಲೆಗೆ. ಕೊಟ್ಟು ಬಿಡು. ನಮಗೆ ದುಡ್ಡು ಬೇಡ....ಇಲ್ಲಿ ಅದರ ಹೊಟ್ಟೆ ಗೆ ಹಾಕಬೇಡ್ವ?’’ ತನ್ನ ನೋವಿನ ಹೊಟ್ಟೆಯನ್ನು ಅದುಮಿಕೊಂಡೇ ಲಲಿತಮ್ಮ ಮಗನನ್ನು ಓಲೈಸಲು ನೋಡಿದ್ದರು.
‘‘ಸಂಘಟನೆಯಲ್ಲಿದ್ದು ನನ್ನ ಮನೆಯ ಎತ್ತುಗಳನ್ನು ನಾನು ಹೊರಗಿನವರಿಗೆ ಕೊಟ್ಟರೆ ಸರಿಯಾಗುವುದಿಲ್ಲ. ಮೊದಲೇ ನಮ್ಮ ಜಾತಿಯನ್ನು ಹಿಡಿದುಕೊಂಡು ಅದು ಇದು ಎಂದು ತಮಾಷೆ ಮಾಡುತ್ತಾರೆ. ಇಷ್ಟು ಬಂಗದಲ್ಲಿ ನಿಮಗೆ ದನ ಸಾಕುವ ಉಸಾಬರಿ ಯಾಕೆ?’’ ತಾಯಿಯನ್ನೇ ತರಾಟೆಗೆ ತೆಗೆದುಕೊಂಡ.
‘‘ಹಾಗಲ್ಲ ಮಗ. ದನ ಸಾಕುವ ಕಷ್ಟ ನಿನಗೆ ಗೊತ್ತುಂಟಲ್ಲ? ಪದ್ಮಳ ಮಗಳು ಅಂಬಿಕಾಳ ಓದಿನ ಖರ್ಚು ಬೇರೆ ಉಂಟು. ಅಪ್ಪನೇ ಎಲ್ಲವನ್ನೂ ಸಂಭಾಳಿಸಬೇಡವ? ಇರುವುದು ನೂರು ಕಂಗಿನ ಮರ. ಅವುಗಳ ಅವಸ್ಥೆ ನಿನಗೆ ಗೊತ್ತಿರುವುದೇ ಅಲ್ವಾ?’’
‘‘ನನಗೆ ಅದೆಲ್ಲ ಗೊತ್ತಿಲ್ಲ. ನನ್ನ ಮರ್ಯಾದೆ ಕಳೆಯುವ ಕೆಲಸ ಮಾಡಬೇಡಿ ಅಷ್ಟೇ. ಮತ್ತೆ ನಾನು ಹೇಳಿಲ್ಲ ಅಂತ ಬೇಡ...’’ ವಿಶ್ವ ಎಚ್ಚರಿಕೆ ನೀಡಿದ್ದ. ನಲುವತ್ತು ಸೆಂಟ್ಸ್ ಜಾಗದಲ್ಲಿ ಅನಂತ ಭಟ್ಚರ ಪುಟ್ಚ ಹಂಚಿನ ಮನೆ ಇದೆ. ಮನೆಯ ಹಿತ್ತಲಲ್ಲೇ ನೂರು ಅಡಿಕೆ ಮರಗಳು. ಹೆಸರಿಗಷ್ಟೇ ಅದು ತೋಟ. ಹಲವು ಮರಗಳು ರೋಗ ಹಿಡಿದು ಮುರುಟಿ ಹೋಗಿವೆ. ದನ ಸಾಕಿ ಅಭ್ಯಾಸವಾಗಿದೆ. ಅದನ್ನು ಬಿಡುವಂತಿಲ್ಲ ಎಂದು ಇಟ್ಟುಕೊಂಡಿದ್ದಾರೆ. ಉಪ್ಪಿನಂಗಡಿ ಸೊಸೈಟಿಗೆ ಅಕ್ಕನ ಮಗಳು ಅಂಬಿಕಾ ಹಾಲು ತೆಗೆದುಕೊಂಡು ಹಾಕುತ್ತಾಳೆ. ಮನೆಯಲ್ಲಿದ್ದ ನಾಲ್ಕು ಹಸುಗಳ ಜೊತೆಗೆ ಈ ಎರಡು ಎತ್ತುಗಳೂ ಅದು ಹೇಗೋ ಹಂಚಿ ತಿಂದು ಬದುಕುತ್ತಿದ್ದವು. ಆದರೆ ಎರಡು ಹಸುಗಳು ಹಾಲು ಕೊಡುವುದು ನಿಧಾನಿಸಿದ ದಿನದಿಂದ ಈ ಎತ್ತುಗಳ ಪಾಲಿಗೆ ಕೊಟ್ಟಿಗೆ ಕಿರಿದಾಗ ತೊಡಗಿತು. ಪತಿ ಕೊರೋನಕ್ಕೆ ಬಲಿಯಾದ ಮೇಲೆ ಅಕ್ಕ ಪದ್ಮಮ್ಮ ಪಿಯುಸಿ ಓದುವ ತನ್ನ ಮಗಳು ಅಂಬಿಕಾ ಜೊತೆಗೆ ತಮ್ಮನ ಮನೆಯಲ್ಲೇ ಉಳಿದುಕೊಂಡಿದ್ದರು. ಕೊರೋನ ಬಳಿಕ ಅನಂತಭಟ್ಟರ ಬದುಕಿನಲ್ಲೂ ಸಾಕಷ್ಟು ಏರುಪೇರುಗಳಾದವು. ಪತ್ನಿ ಲಲಿತಮ್ಮರಿಗೆ ಆಗಾಗ ಹೊಟ್ಟೆನೋವು ಕಾಣಿಸತೊಡಗಿತು. ಯಾವುಯಾವುದೋ ಕಷಾಯ ಕುಡಿಸಿದರೂ ಪ್ರಯೋಜನವಿರಲಿಲ್ಲ. ಅಕ್ಕನ ಮಗಳು ಅಂಬಿಕಾಳ ಕಾಲೇಜಿನ ಖರ್ಚು ವೆಚ್ಚವೂ ಅನಂತಭಟ್ಟರ ಹೆಗಲ ಮೇಲೆ ಬಿತ್ತು. ಮಗ ವಿಶ್ವೇಶ್ವರ ಆ ಸಂಘಟನೆ, ಈ ಸಂಘಟನೆ ಎಂದು ಓಡಾಡುತ್ತಿದ್ದ. ಮನೆಗೆ ಎಂತ ಲಾಭವೂ ಇರಲಿಲ್ಲ. ಕೊಟ್ಟಿಗೆಗೆ ಹೋಗಿ ಎರಡು ಸೂಡಿ ಹುಲ್ಲು ಹಾಕು ಎಂದರೆ ತಲೆ ಕೊಡವಿ ಎದ್ದು ಹೋಗಿ ಬಿಡುತ್ತಾನೆ. ಅಕ್ಕ ಪದ್ಮಳಿಂದಾಗಿ ಕೊಟ್ಟಿಗೆ ಗುಡಿಸುವುದು, ದನಗಳನ್ನು ನೋಡಿಕೊಳ್ಳುವುದು ಅನಂತ ಭಟ್ಟರಿಗೆ ಒಂದಿಷ್ಟು ಸುಲಭವಾಯಿತು. ಇವುಗಳ ನಡುವೆ, ಇರುವ ಎರಡು ಎತ್ತುಗಳನ್ನು ಯಾರಿಗಾದರೂ ಮಾರಿದರೆ ಮನೆಯ ಕಷ್ಟ ಸ್ವಲ್ಪ ಹಗುರವಾಗಬಹುದು ಎಂದು ಭಾವಿಸಿ ದನದ ವ್ಯಾಪಾರಿ ಅಬ್ಬು ಬ್ಯಾರಿಯನ್ನು ಕರೆಸಿದ್ದರು. ಎತ್ತುಗಳ ವಿಷಯ ಪ್ರಸ್ತಾಪ ಮಾಡಿದ್ದೇ ಅಬ್ಬು ಬ್ಯಾರಿ ಬೆಚ್ಚಿ ‘‘ಏ...ಎಂತ ಹೇಳುವುದು ಭಟ್ರೆ. ನಾನು ಆ ವ್ಯಾಪಾರ ಬಿಟ್ಟು ವರ್ಷ ಆಯಿತು. ನೀವು ತಮಾಷೆ ಮಾಡುವುದಾ?’’ ಎಂದು ಬಿಟ್ಟಿದ್ದ.
‘‘ನೀನು ಆ ವ್ಯಾಪಾರ ಬಿಟ್ಟರೆ ನಾವು ದನ ಸಾಕುವವರು ಎಂತ ಮಾಡುವುದು? ದನಗಳನ್ನು ಕಾಡಿನಲ್ಲಿ ಬಿಟ್ಟು ಹುಲಿ ಬಾಯಿಗೆ ಕೊಡುವುದಾ? ನೋಡು, ಅಷ್ಟೊಂದು ಹಾಲುಕೊಡುತ್ತಿದ್ದ ಕಾಳಿ ಇದೀಗ ದೃಷ್ಟಿ ತಾಗಿದ ಹಾಗೆ ಆಡ್ತಾಳೆ. ಈ ಎರಡು ಎತ್ತುಗಳನ್ನು ನೀನು ಯಾರಿಗಾದರೂ ತಾಗಿಸಿ ಸಿಕ್ಕಿದ್ದರಲ್ಲಿ ಸ್ವಲ್ಪ ಕೊಡು. ಮನೆಯ ಪರಿಸ್ಥಿತಿ ಅಷ್ಟು ಸರಿ ಇಲ್ಲ’’ ಎಂದಿದ್ದರು. ‘‘ನೀವು ಹೇಳಿದರೆ ನಂಬಲಿಕ್ಕಿಲ್ಲ. ಆ ವ್ಯಾಪಾರ ಉಂಟಲ್ಲ, ಅದರಲ್ಲಿ ಬರ್ಕತ್ತಿಲ್ಲ. ಸುಮ್ಮನೆ ಯಾಕೆ ಮೈಮೇಲೆ ಎಳೆದುಕೊಳ್ಳುವುದು. ನಾನೀಗ ಆ ವ್ಯಾಪಾರ ಬಿಟ್ಟು ಜಾಗದ ವಹಿವಾಟಿಗೆ ಇಳಿದಿದ್ದೇನೆ. ಹಾಗೆಯೇ ಅಡಿಕೆ ಇಳಿಸಿದರೆ ಹೇಳಿ. ಒಳ್ಳೆಯ ರೇಟು ಕೊಡುವಾ...’’ ಎಂದು ಹಲ್ಲು ಕಿರಿದಿದ್ದ. ಅಬ್ಬು ಬ್ಯಾರಿ ಯಾಕೆ ನಿರಾಕರಿಸುತ್ತಿದ್ದಾನೆ ಎನ್ನುವುದು ಭಟ್ಟರಿಗೆ ತಿಳಿಯದಿರುವುದೇನೂ ಅಲ್ಲ. ಮಗ ಉಪ್ಪಿನಂಗಡಿಯ ಗೋರಕ್ಷಕ ದಳದ ಸದಸ್ಯ ಎನ್ನುವುದು ಊರಿನ ಎಲ್ಲರಿಗೂ ಗೊತ್ತಿದೆ. ಇದೇ ಅಬ್ಬು ಬ್ಯಾರಿಗೆ ಒಮ್ಮೆ ಊರಿನ ಹುಡುಗರು ನಡು ದಾರಿಯಲ್ಲಿ ಅಡ್ಡ ನಿಲ್ಲಿಸಿ ವಾರ್ನಿಂಗ್ ಕೊಟ್ಟಿದ್ದರು. ಆ ಗುಂಪಿನಲ್ಲಿ ತನ್ನ ಮಗನೂ ಇದ್ದ ಎನ್ನುವುದು ಭಟ್ಟರಿಗೆ ಒಳಗೊಳಗೇ ಕೊರೆಯುವ ವಿಷಯವಾಗಿತ್ತು. ಆದರೆ ಮಗನನ್ನು ಎದುರು ಹಾಕಿಕೊಳ್ಳುವ ಧೈರ್ಯ ಇರಲಿಲ್ಲ. ಬಾಯಿ ತೆರೆದರೆ ಹುಲಿಯಂತೆ ಹಾರಿ ಮೇಲೆ ಬೀಳುತ್ತಾನೆ. ಆತನ ಸಹವಾಸ ಸರಿಯಿಲ್ಲ. ಬೀಡಿ ಸಿಗರೇಟಿನ ವಾಸನೆ ಬಾಯಿಯಿಂದ ಬರುತ್ತದೆ. ಮಾತುಗಳಲ್ಲಿ ಸಂಸ್ಕಾರ ಇಲ್ಲವೇ ಇಲ್ಲ. ‘‘ಹಾಗಲ್ಲ ಅಬ್ಬು. ಮಗನಿಗೆ ಗೊತ್ತಾಗದ ಹಾಗೆ ನಾನು ನೋಡಿಕೊಳ್ಳುತ್ತೇನೆ. ನಿನ್ನ ಕಮಿಶನ್ ಕಳೆದು ಕೊಟ್ಟರೆ ಸಾಕು. ಇವುಗಳನ್ನೊಮ್ಮೆ ತಗೊಂಡು ಹೋಗು. ಇದಕ್ಕೆ ಹುಲ್ಲು ತಂದು ಹಾಕಲು ನನ್ನ ಬಳಿ ಗದ್ದೆ ಉಂಟಾ?’’ ಅನಂತಭಟ್ಟರು ಅಬ್ಬು ಬ್ಯಾರಿಯ ಕೈ ಹಿಡಿದು ಕೇಳಿ ಕೊಂಡಿದ್ದರು.
ಭಟ್ಟರು ತನ್ನನ್ನು ಪರೀಕ್ಷೆ ಮಾಡುತ್ತಿದ್ದಾರೆ ಎಂದೆನಿಸಿತ್ತು ಅಬ್ಬು ಬ್ಯಾರಿಗೆ. ‘‘ಭಟ್ರೆ, ಎಷ್ಟು ಸಾರಿ ಹೇಳುವುದು. ನಾನು ಆ ವ್ಯಾಪಾರ ಬಿಟ್ಟು ವರ್ಷ ಆಗಿದೆ. ಈಗ ನಮ್ಮವರು ಅದನ್ನು ತಿನ್ನುವುದು ಕಡಿಮೆ ಮಾಡಿದ್ದಾರೆ. ಹಾಗೆ ಬೇಕಾದರೆ ಕಾಸರಗೋಡು, ಕೇರಳಕ್ಕೆ ಹೋಗಿ ತಿಂದು ಬರುತ್ತಾರೆ. ಅಲ್ಲಿಂದಲೇ ಬರುವಾಗ ಹಿಡಿದುಕೊಂಡು ಬರುತ್ತಾರೆ. ನಾವಿಲ್ಲಿ ಒಬ್ಬರಿಗೊಬ್ಬರು ಮುಖ ನೋಡಬೇಡವ...ಸುಮ್ಮಗೆ ನೀವೆಂತ ತಮಾಷೆ ಮಾಡುವುದಾ?’’ ಅಬ್ಬು ಸಾರಾಸಗಟಾಗಿ ತಿರಸ್ಕರಿಸಿದ್ದ.
ಅನಂತ ಭಟ್ಟರು ಅಲ್ಲಿಗೆ ಮಾತು ನಿಲ್ಲಿಸಿ ಬಿಟ್ಟರು. ಅಷ್ಟರಲ್ಲಿ ಒಳಗಿಂದ ಬಂದ ಲಲಿತಮ್ಮ ‘‘ಅದೆಲ್ಲ ಇರಲಿ. ಇಕೋ...ಎರಡು ಸೌತೆಕಾಯಿ ಉಂಟು. ಹಿತ್ತಲಲ್ಲಿ ಆದದ್ದು. ಈ ಸರ್ತಿ ಒಂದಿಷ್ಟು ಜಾಸ್ತಿ ಆಗಿದೆ. ನನ್ನ ಮಗನ ಹೊಟ್ಟೆಗೆ ಸೌತೆಕಾಯಿ ಇಳಿಯುವುದಿಲ್ಲ...’’ ಎನ್ನುತ್ತಾ ಎರಡು ಸೌತೆಕಾಯಿಯನ್ನು ಅಬ್ಬು ಬ್ಯಾರಿಯ ಕೈಗೆ ಇಟ್ಟಿದ್ದರು. ‘‘ತಪ್ಪು ತಿಳಿಯಬೇಡಿ ಅಕ್ಕ. ದೇವರಾಣೆ ನಾನೀಗ ಆ ವ್ಯಾಪಾರ ಬಿಟ್ಟಿದ್ದೇನೆ’’ ಎನ್ನುತ್ತಾ ಲಲಿತಮ್ಮನ ಮುಂದೆ ಅಬ್ಬು ಮತ್ತೆ ಅಲವತ್ತುಕೊಂಡಿದ್ದ.
‘‘ಆಯ್ತು ಬಿಡು. ಪರಿಸ್ಥಿತಿಯೇ ಹೀಗಿರುವಾಗ ನೀನಾದರೂ ಏನು ಮಾಡ್ತೀಯ? ನಿನಗೆ ಒಂದಿಷ್ಟು ಕಾಸು ಸಿಕ್ಕುವುದಿದ್ದರೆ ಸಿಗಲಿ ಎಂದು ಅವರು ನಿನ್ನನ್ನು ಕರೆಸಿದ್ದು. ಕೊಟ್ಟಿಗೆಯ ಆ ಮೂಲೆಯಲ್ಲಿ ಅದೂ ಇರಲಿ. ಇದ್ದುದನ್ನು ಅದರ ಬಾಯಿಗೆ ಹಾಕಿ ಬಿಡುವುದು ಅಷ್ಟೇ...ಕೊಟ್ಟಿಗೆಗೇನು ಭಾರವಾಗುತ್ತದ?’’ ಎಂದು ಅಬ್ಬುವನ್ನು ಸಮಾಧಾನಿಸಿದ್ದರು.
ಕಾಡಿನಲ್ಲಿ ಬಿಟ್ಟು ಬಂದರೆ ಹೇಗೆ ಎಂಬ ಯೋಚನೆಯೂ ಒಮ್ಮೆ ಅನಂತ ಭಟ್ಟರಿಗೆ ಬಂದು ಎರಡೂ ಎತ್ತುಗಳನ್ನು ಮೆಲ್ಲಗೆ ಊರಾಚೆಯ ಕಾಡಿಗೆ ದಾಟಿಸಿ ಸೀದಾ ಮನೆಗೆ ಬಂದು ಮಲಗಿ ಬಿಟ್ಟಿದ್ದರು. ಪತ್ನಿ ಲಲಿತೆಗಾಗಲಿ, ಅಕ್ಕ ಪದ್ಮಗಾಗಲಿ ಏನೂ ಹೇಳಿರಲಿಲ್ಲ. ವಿಶೇಷ ಎಂದರೆ, ಹಟ್ಟಿಯನ್ನು ಗುಡಿಸಿ ಹಸುಗಳಿಗೆ ಹುಲ್ಲು ಹಾಕಿ ಬಂದ ಪದ್ಮಳೂ ಈ ಬಗ್ಗೆ ತಮ್ಮನಲ್ಲಿ ಏನೂ ಕೇಳಿರಲಿಲ್ಲ. ಎತ್ತುಗಳು ಹಟ್ಟಿಯಲ್ಲಿಲ್ಲದೇ ಇರುವುದು ಅವರ ಗಮನಕ್ಕೂ ಬಂದಿತ್ತಾದರೂ ಆ ಬಗ್ಗೆ ತಮ್ಮನಲ್ಲಿ ಕೇಳುವ ಧೈರ್ಯ ಬಂದಿರಲಿಲ್ಲ.
ಮರುದಿನ ಬೆಳ್ಳಂಬೆಳಗ್ಗೆ ಅನಂತ ಭಟ್ಟರು ಎದ್ದವರೇ ಹಟ್ಟಿಯ ಕಡೆಗೆ ಧಾವಿಸಿದರೆ ಎರಡೂ ಎತ್ತುಗಳು ಭಟ್ಟರನ್ನೇ ಕಣ್ಣು ಪಿಳುಕಿಸಿ ನೋಡುತ್ತಾ ನಿಂತಿದ್ದವು. ಹೋದ ದಾರಿಯಲ್ಲೇ ಅವುಗಳು ಮರಳಿ ಬಂದಿದ್ದವು. ಅವುಗಳ ಮುಖವನ್ನು ಎದೆಗೆ ಒತ್ತಿಕೊಂಡು ಕೆಲ ಕ್ಷಣ ಹಾಗೆ ಕಣ್ಣು ಮುಚ್ಚಿ ನಿಂತು ಬಿಟ್ಟರು.
ಎಲ್ಲ ಸಮಸ್ಯೆಗಳು ಆರಂಭವಾಗಿದ್ದು ಲಲಿತಮ್ಮನ ಹೊಟ್ಟೆ ನೋವು ಉಲ್ಬಣಿಸಿದ ದಿನದಿಂದ. ‘‘ಹೀಗೆ ಆಯುರ್ವೇದ ಕಷಾಯ ಕುಡಿಸಿ ಗುಣ ಪಡಿಸುವುದಕ್ಕಾಗುವುದಿಲ್ಲ. ಒಂದು ಹೋಗಿ ಎರಡಾಗುವುದು ಬೇಡ. ನೀನು ಸೀದಾ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗು’’ ಎಂದು ಅಕ್ಕ ಪದ್ಮಮ್ಮ ಒತ್ತಾಯಿಸಿದರು. ಅಕ್ಕನ ಮಗಳು ಅಂಬಿಕಾಳನ್ನು ಜೊತೆಯಾಗಿಸಿಕೊಂಡು ಪತ್ನಿಯನ್ನು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಭಟ್ಟರಿಗೆ ಅನಿವಾರ್ಯವಾಯಿತು. ಪುತ್ತೂರಿನ ಆಸ್ಪತ್ರೆಯ ವೈದ್ಯರು ಭಟ್ಟರಿಗೆ ಪರಿಚಿತರು. ‘‘ನೋಡಿ... ಬಂದದ್ದು ಸ್ವಲ್ಪ ತಡವಾಗಿದೆ. ಗರ್ಭಕೋಶದಲ್ಲಿ ಅದೇನೋ ಸಮಸ್ಯೆ ಇದ್ದ ಹಾಗೆ ಇದೆ...ಇವತ್ತು ಒಂದು ದಿನ ಆಸ್ಪತ್ರೆಯಲ್ಲೇ ಇರಲಿ. ಎಲ್ಲ ಪರೀಕ್ಷೆ ಮಾಡಿ ಬಳಿಕ ಹೇಳುತ್ತೇನೆ’’ ಎಂದರು. ಆಗ ಭಟ್ಟರಿಗೆ ರೋಗದ ಗಂಭೀರತೆ ಅರಿವಾಯಿತು. ಅಕ್ಕನಿಗೆ ಫೋನ್ ಮಾಡಿ ‘‘ಇವತ್ತು ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಆ ಕೊಟ್ಟಿಗೆಯ ಕಡೆಗೆ ಸ್ವಲ್ಪ ಗಮನ ಕೊಂಡು’’ ಎಂದು ಸೂಚನೆ ನೀಡಿದರು. ಮರುದಿನ ಎಲ್ಲ ತಪಾಸಣೆ ಮುಗಿದು ವರದಿಗಳನ್ನು ನೋಡಿ ಬಳಿಕ ವೈದ್ಯರು ಹೇಳಿದರು ‘‘ನೋಡಿ...ನೀವು ತುಂಬಾ ತಡವಾಗಿ ಬಂದಿದ್ದೀರಿ. ಗರ್ಭ ಕೋಶದಲ್ಲಿ ಕ್ಯಾನ್ಸರ್ ಆಗಿದೆ. ಗರ್ಭಕೋಶವನ್ನು ಕತ್ತರಿಸಿ ತೆಗೆಯಬೇಕು. ಇಲ್ಲವಾದರೆ ಕ್ಯಾನ್ಸರ್ ಇಡೀ ದೇಹಕ್ಕೆ ಹರಡಬಹುದು. ಜೀವಕ್ಕೆ ಅಪಾಯವಿದೆ’’
ಭಟ್ಟರು ಒಮ್ಮೆಲೆ ಕುಸಿದು ಬಿಟ್ಟರು. ಜೊತೆಗಿದ್ದ ಅಂಬಿಕಾಳೂ ಕಂಗಾಲಾಗಿದ್ದಳು. ‘‘ಆದಷ್ಟು ಬೇಗ ಆಪರೇಷನ್ ಮಾಡಬೇಕು. ಮಂಗಳೂರಿನಲ್ಲಿ ನನಗೆ ಗೊತ್ತಿರುವ ವೈದ್ಯರಿದ್ದಾರೆ. ಅವರಿಗೆ ನಾನು ಫೋನ್ ಮಾಡಿ ತಿಳಿಸುವೆ. ನೀವು ಪತ್ನಿಯನ್ನು ಕರೆದುಕೊಂಡು ಹೋಗಿ’’ ವೈದ್ಯರು ಸಲಹೆ ನೀಡಿದರು.
ವಿಷಯ ಕೇಳಿದ ಲಲಿತಮ್ಮ ನೋವಿನ ನಡುವೆಯೂ ನಕ್ಕರು ‘‘ನಿಮಗೆ ಮರುಳು. ಈ ಡಾಕ್ಟರ್‌ಗಳು ಹಣ ಮಾಡುವುದಕ್ಕೆ ಒಂದೊಂದು ಹೇಳುತ್ತಾರೆ. ನೀವು ಹೆದರುತ್ತೀರಿ. ನನಗೆ ಆಯುರ್ವೇದ ಕಷಾಯವೇ ಸಾಕು. ಅದು ಕುಡಿದರೆ ನೋವು ಕಮ್ಮಿಯಾಗುತ್ತದೆ’’ ಆದರೆ ಅದನ್ನು ಕೇಳಿಸಿಕೊಳ್ಳಲು ಭಟ್ಟರು ಸಿದ್ಧರಿರಲಿಲ್ಲ. ಪತ್ನಿಯನ್ನು ಕರೆದುಕೊಂಡು ಪುತ್ತೂರಿನಿಂದ ಮನೆಗೆ ಬಂದವರೇ ಮಗ ಮನೆಗೆ ಬರುವುದನ್ನೇ ಕಾಯತೊಡಗಿದರು. ಸಂಜೆ ಮನೆ ಸೇರಿದ ಮಗನ ಬಳಿ ತಾಯಿಯ ರೋಗದ ಬಗ್ಗೆ ಮಾಹಿತಿ ನೀಡಿದರು. ಮಗ ಒಂದು ಮಾತೂ ಆಡದೆ ಗುಮ್ಮನೆ ಕೂತಿದ್ದ. ಆತನಿಂದ ಯಾವುದೇ ಪ್ರತಿಕ್ರಿಯೆ ಬರದೇ ಇರುವುದು ನೋಡಿ, ‘‘ಆಪರೇಷನ್ ಆಗಲೇ ಬೇಕಂತೆ. ಹಣ ಕೂಡಿಸಬೇಕಾಗಬಹುದು...’’ ಎಂದು ಮಗನ ಮುಖ ನೋಡಿದರು. ‘‘ನಾನೆಲ್ಲಿಂದ ತರುವುದು. ನೀವೇನು ಕೊಟ್ಟದ್ದುಂಟಾ...ತೋಟದಲ್ಲಿ ಸಿಕ್ಕಿದ ಅಡಿಕೆಯನ್ನು ಒಮ್ಮೆಯಾದರೂ ನನಗೆ ಮಾರಲು ನೀವು ಬಿಟ್ಟದ್ದುಂಟಾ? ಮಾರಿದ್ದನ್ನೆಲ ಎಂತ ಮಾಡಿದ್ರಿ?’’ ಎಂದು ಮಗ ಏರಿ ಹೋದ. ಭಟ್ಟರು ವೌನವಾದರು.
‘‘ಆ ನೂರು ಕಂಗಿನ ಮರದಲ್ಲಿ ಎಂತ ಬರ್ತದೆ ಮಗಾ? ಎಲ್ಲವೂ ಅದರಲ್ಲೇ ಆಗಬೇಕಲ್ಲ? ಈಗ ನೋಡಿದರೆ ಅದಕ್ಕೂ ರೋಗ ಹಿಡಿದಿದೆ...’’ ಲಲಿತಮ್ಮ ಮಲಗಿದಲ್ಲಿಂದಲೇ ಗಂಡನ ಪರವಾಗಿ ಮಾತನಾಡಿದರು.
‘‘ಎಂತಾದರೂ ಮಾಡಿ ಒಂದು ಇಪ್ಪತ್ತೈದು ಸಾವಿರ ಅಪ್ಪನ ಕೈಗೆ ಕೊಡು...ಉಳಿದದ್ದನ್ನು ಅನಂತು ಹೇಗೋ ಮಾಡುತ್ತಾನೆ...’’ ಒಳಗಿನಿಂದ ಪದ್ಮಮ್ಮ ವಿಶ್ವನಲ್ಲಿ ಕೇಳಿ ಕೊಂಡರು. ‘‘ಅಡಿಕೆಯಲ್ಲಿ ಬಂದದ್ದನ್ನೆಲ್ಲ ನಿಮ್ಮ ಮಗಳ ಕಾಲೇಜು ಫೀಸಿಗೆ ಕೊಟ್ಟರೆ ನಾನೇನು ಮಾಡಲಿ...ಎಂತಾದರೂ ಮಾಡಿ ಹೇಗೆ ತರುವುದು? ಬ್ಯಾಂಕಿನ ಬಾಗಿಲು ಮುರಿಯುವುದಾ?’’ ಎಂದವನೇ ಎದ್ದು ಮನೆಯಿಂದ ಹೊರಗೆ ನಡೆದ. ‘‘ಈ ರಾತ್ರಿ ಈಗ ಎಲ್ಲಿಗೆ ಸವಾರಿ? ತಾಯಿಯ ಆರೋಗ್ಯಕ್ಕಿಂತ ಆ ಸ್ನೇಹಿತರೇ ನಿನಗೆ ಮುಖ್ಯವಾ?’’ ಪದ್ಮಮ್ಮ ಒರಟಾಗಿ ಕೇಳಿ ಬಿಟ್ಟರು.
‘‘ತಾಯಿಯ ಆರೋಗ್ಯ ನೋಡಲು ನೀವೆಲ್ಲ ಇದ್ದೀರಲ್ಲ’’ ಎಂದವನೇ ತಿರುಗಿಯೂ ನೋಡದೆ ಬಿರಬಿರನೆ ನಡೆದ.
ಮರುದಿನ ಅನಂತಭಟ್ಟರು ಜೀವಚೈತನ್ಯವೇ ಕಳೆದುಕೊಂಡವರಂತೆ ಮನೆಯ ಜಗಲಿಯ ಮೂಲೆಯಲ್ಲಿದ್ದ ಆರಾಮ ಕುರ್ಚಿಗೆ ಒರಗಿ ಬಿಟ್ಟರು. ಲಲಿತಮ್ಮ ಆರೋಗ್ಯ ಸುಧಾರಿಸಿದವರಂತೆ ಭಟ್ಟರ ಹಿಂದೆ ಮುಂದೆ ಓಡಾಡ ತೊಡಗಿದರು. ‘‘ನೋಡು...ನೀನು ಮಲಗು. ಕಷ್ಟ ತಗೋಬೇಡ...’’ ಎಂದು ಭಟ್ಟರು ಸಲಹೆ ನೀಡಿದರು.
‘‘ಮೊನ್ನೆ ತಂದ ಕಷಾಯ ಸ್ವಲ್ಪ ಪ್ರಯೋಜನಕ್ಕೆ ಬಂದ ಹಾಗೆ ಉಂಟು. ಈಗ ಸ್ವಲ್ಪ ಗುಣ ಕಾಣ್ತದೆ’’ ಎಂದು ಲಲಿತಮ್ಮ ಹೇಳಿದರೆ ಭಟ್ಟರು ಕಿವಿಗೆ ಹಾಕಿಕೊಳ್ಳಲಿಲ್ಲ ‘‘ಎಂತ ಕಷಾಯ. ಆ ಸುಬ್ರಾಯ ಜೋಯಿಸನ ಕರ್ಮ. ಕಷಾಯ ಅಂತೆ ಕಷಾಯ...’’
ಅಂದು ಸಂಜೆ ಪದ್ಮಮ್ಮ ಮಗಳನ್ನು ಕರೆದು ‘‘ಅಟ್ಟದಿಂದ ಆ ನನ್ನ ಪೆಟ್ಟಿಗೆಯನ್ನು ಇಳಿಸು’’ ಎಂದು ಕೇಳಿಕೊಂಡರು. ಬಣ್ಣದ ಹೂಗಳಿರುವ ಹಳೆಯ ಡಬ್ಬಿಯ ಪೆಟ್ಟಿಗೆ. ಅವರ ಮದುವೆ ಸಂದರ್ಭದಲ್ಲಿ ಕೊಂಡುಕೊಂಡ ಪೆಟ್ಟಿಗೆ ಅದು. ಆ ಪೆಟ್ಟಿಗೆಯಲ್ಲಿ ಮದುವೆಗೆ ತೆಗೆದ ಸೀರೆಯೂ ಸೇರಿದಂತೆ ಹಳೆ ಬಟ್ಟೆಗಳಿದ್ದವು. ಗಂಡನಿಗೆ ಸಂಬಂಧಿಸಿ ಕೆಲವು ವಸ್ತುಗಳೂ ಇದ್ದವು. ಪೆಟ್ಟಿಗೆಯ ಮೂಲೆಯಲ್ಲಿ ಸಣ್ಣ ಕರಡಿಗೆಯೊಂದರಲ್ಲಿ ಕಳಚಿಟ್ಟ ಕರಿಮಣಿ ಸರ ಇತ್ತು. ಅದನ್ನು ಎತ್ತಿಕೊಂಡರು. ಮಗಳು ಅಂಬಿಕಾಳನ್ನು ಕರೆದು ಆಕೆಯ ಕಿವಿಯಲ್ಲಿದ್ದ ಸಣ್ಣ ಎರಡು ಜುಮುಕಿಗಳನ್ನು ಕಳಚಲು ಹೇಳಿದರು. ಆಕೆ ಏನೂ ಪ್ರತಿಯಾಡದೆ ಕಳಚಿ ತಾಯಿಯ ಕೈಗೆ ಇಟ್ಟಳು. ಅವೆಲ್ಲದರ ಜೊತೆಗೆ ಪದ್ಮಮ್ಮ ತಮ್ಮ ನ ಮುಂದೆ ನಿಂತರು ‘‘ನೋಡು. ಇದು ಆ ಪೆಟ್ಟಿಗೆಯ ಮೂಲೆಯಲ್ಲಿ ಧೂಳು ತಿನ್ನುತ್ತಿತ್ತು. ಮುಂದೆ ಮಗಳಿಗೆ ಏನಾದರೂ ಸಹಾಯಕ್ಕೆ ಇರಲಿ ಎಂದು ಜೋಪಾನ ಇಟ್ಟಿದ್ದೆ. ಇದನ್ನು ಏನಾದರೂ ಮಾಡಿ ಸ್ವಲ್ಪ ಹಣ ಹೊಂದಿಸು. ಅಲ್ಲಿ ಇಲ್ಲಿ ಸ್ವಲ್ಪ ಕೈ ಸಾಲ ಮಾಡು. ನೀನು ನಾಳೆಯೇ ಮಂಗಳೂರಿಗೆ ಹೋಗಿ ವೈದ್ಯರಲ್ಲಿ ಮಾತನಾಡಿ ಅವಳ ಆಪರೇಷನ್‌ಗೆ ಸಿದ್ಧತೆ ಮಾಡು...’’ ಎಂದರು.
ಅಕ್ಕನ ಮುಖವನ್ನೊಮ್ಮೆ ನೋಡಿದ ಭಟ್ಟರು ಮರು ಮಾತನಾಡದೆ ಅದನ್ನು ತೆಗೆದುಕೊಂಡರು. ಮರುದಿನವೇ ಪತ್ನಿಯನ್ನು ಕರೆದುಕೊಂಡು ಮಂಗಳೂರಿಗೆ ಹೊರಟರು. ಅಲ್ಲಿ ಪುತ್ತೂರಿನ ವೈದ್ಯರ ಶಿಫಾರಸು ತೋರಿಸಿದ್ದೇ ದಾದಿಯೊಬ್ಬಳು ಬಂದು ಭಟ್ಟರ ಪತ್ನಿಯನ್ನು ಗಾಲಿ ಕುರ್ಚಿಯಲ್ಲಿ ಕುಳ್ಳಿರಿಸಿ ಒಳಗೆ ಕರೆದುಕೊಂಡು ಹೋದಳು.
ಅರ್ಧ ದಿನ ಬೇರೆ ಬೇರೆ ಪರೀಕ್ಷೆಗಳಿಗೇ ಹೋಯಿತು. ಎಲ್ಲ ಮುಗಿದ ಬಳಿಕ ವೈದ್ಯರು ಭಟ್ಟರನ್ನು ಕರೆದರು ‘‘ಈ ವಾರದೊಳಗೆ ಆಪರೇಷನ್ ನಡೆಯಲೇ ಬೇಕು. ಈಗಾಗಲೇ ತುಂಬಾ ತಡವಾಗಿದೆ. ಇಲ್ಲವಾದರೆ ಮತ್ತೆ ಆಪರೇಷನ್ ಮಾಡಿದರೂ ಪ್ರಯೋಜನವಿಲ್ಲ ಎನ್ನುವ ಸ್ಥಿತಿಯಾಗಬಹುದು. ಎಲ್ಲ ಸೇರಿದರೆ ಎರಡು ಲಕ್ಷದವರೆಗೆ ಆಗಬಹುದು...’’
ಪತ್ನಿಯನ್ನು ಕರೆದುಕೊಂಡು ಮತ್ತೆ ಉಪ್ಪಿನಂಗಡಿಗೆ ವಾಪಸಾದರು. ಅಕ್ಕನ ಕರಿಮಣಿ, ಜುಮುಕಿ ಮಾರಿ ಒಂದಿಷ್ಟು ಹಣ ಬಂತು. ಉಪ್ಪಿನಂಗಡಿಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಅಡಿಕೆ ವ್ಯಾಪಾರಿ ಇದಿನಬ್ಬರ ಅಂಗಡಿಗೆ ಹೋದವರೇ ‘‘ಕಷ್ಟ ಇದೆ. ಸ್ವಲ್ಪ ಹಣ ಸಿಗಬಹುದಾ? ಅಡಿಕೆ ಅಂಗಳದಲ್ಲಿ ಒಣಗಲು ಹಾಕಿದ್ದೇನೆ. ಅದರಲ್ಲಿ ಕಳೆದುಕೊಳ್ಳಿ...’’ ಎಂದರು.
ಎಂದೂ ಸಾಲ ಕೇಳಿರದ ಭಟ್ಟರ ಸ್ಥಿತಿ ನೋಡಿ ಇದಿನಬ್ಬರು ಆವಕ್ಕಾದರು ‘‘ಎಂತಾಯಿತು ಭಟ್ಟರೆ?’’
‘‘ಅವಳಿಗೆ ಸ್ವಲ್ಪ ಆರೋಗ್ಯ ಕೆಟ್ಟಿದೆ. ಒಂದು ಸಣ್ಣ ಆಪರೇಷನ್...’’ ಭಟ್ಟರು ಸಂಕೋಚದಿಂದ ವಿವರಿಸಿದರು.
‘‘ಎಷ್ಟು ಬೇಕು....’’
‘‘ಒಂದೈವತ್ತು ಸಾವಿರ...’’
‘‘ಒಮ್ಮೆಲೆ ಅಷ್ಟು ಎಲ್ಲಿಂದ ಭಟ್ಟರೆ....? ನನ್ನ ಬಳಿ ಒಂದು ಮೂವತ್ತು ಉಂಟು....ಇದು ಇಟ್ಟುಕೊಳ್ಳಿ. ನಿಮಗೆ ಯಾವಾಗ ಸಾಧ್ಯವಾಗುತ್ತದೋ ಆಗ ಕೊಡಿ...ನನಗೆ ಅರ್ಜಂಟಿಲ್ಲ’’ ಎಂದು ಒಳಗೆ ಹೋದವರೇ ಹಣ ಎಣಿಸಿಕೊಂಡು ಬಂದರು.
ಭಟ್ಟರು ಅಲ್ಲಿಂದ ನೇರ ದಿನಸಿ ಅಂಗಡಿಯ ಗೋಪಾಲ ಕಿಣಿಯವರ ಬಳಿ ಹೋಗಿ ಕೈಸಾಲ ಹತ್ತು ಸಾವಿರ ಇಸಿದು ಕೊಂಡು ಬಂದರು. ಅದೂ ಇದೂ ಎಲ್ಲ ಒಟ್ಟು ಮಾಡಿದರೂ ಇನ್ನೂ ಒಂದು ನಲುವತ್ತು ಸಾವಿರ ರೂಪಾಯಿ ಅಗತ್ಯವಿದೆ ಎಂದು ಅನ್ನಿಸಿತು. ಗಂಟಲು ಕಟ್ಟಿದಂತಾಯಿತು. ಮನೆಗೆ ಬಂದವರೇ ಸುಸ್ತಾಗಿ ಮಲಗಿ ನಿದ್ದೆ ಹೋಗಿರುವ ಲಲಿತಮ್ಮನನ್ನು ನೋಡಿದರು. ವಿಶ್ವ ಹುಟ್ಟುವಾಗ ಮಗುವಿನ ತಲೆ ಹೊಟ್ಟೆಯೊಳಗೇ ತಿರುಗಿ ಬಿಟ್ಟಿತ್ತು. ಏನಾದರೂ ಮಗು ಹೊರಗೆ ಬರಲು ಕೇಳುತ್ತಿರಲಿಲ್ಲ. ವೈದ್ಯರು ಕೈಯಿಂದ ಹೊಟ್ಟೆಯನ್ನು ತಿರುವಿ ತಿರುವಿ ಕೊನೆಗೂ ತಲೆ ಹೊರಗೆ ಬರುವಂತೆ ಮಾಡಿದ್ದರು. ವಿಶ್ವನನ್ನು ಒಂಭತ್ತು ತಿಂಗಳು ಜೋಪಾನ ಮಾಡಿದ ಆಕೆಯ ಗರ್ಭ ಇದೀಗ ಕ್ಯಾನ್ಸರ್ ಹುಳಗಳ ಪಾಲಾಗಿದೆ. ಕತ್ತರಿಸಿ ತೆಗೆದು ಹಾಕಬೇಕು ಎನ್ನುತ್ತಿದ್ದಾರೆ ವೈದ್ಯರು. ಭಟ್ಟರಿಗೆ ಸಂಕಟ ಅನ್ನಿಸಿ ಹಿತ್ತಲಿಂದ ನೇರ ಕೊಟ್ಟಿಗೆಯ ಕಡೆ ನಡೆದರು.
ಹಣ ಭರ್ತಿಯಾಗದೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹೇಗೆ? ಯಾಕೋ ಎತ್ತುಗಳ ಕಡೆಗೆ ನೋಡಿದರು. ಅವು ಭಟ್ಟರನ್ನೇ ನೋಡುತ್ತಿದ್ದವು. ಅವರಿಗೆ ಮತ್ತೆ ಅಬ್ಬು ಬ್ಯಾರಿಯ ನೆನಪಾಯಿತು. ಮತ್ತೊಮ್ಮೆ ಅವನಲ್ಲಿ ಮಾತನಾಡದೆ ಬೇರೆ ಉಪಾಯವೇ ಇಲ್ಲ ಅನ್ನಿಸಿತು.
ಅಂದು ಸಂಜೆ ಅಬ್ಬು ಬ್ಯಾರಿ ಬಂದಾಗ ಅನಂತಭಟ್ಟರು ಕುರ್ಚಿಗೆ ಒರಗಿದ್ದರು. ‘‘ಎಂತ ಭಟ್ಟರೆ ಹೇಳಿ ಕಳುಹಿಸಿದು ್ದ?’’ ಎನ್ನುತ್ತಲೇ ಜಗಲಿಯ ತಿಟ್ಟೆಯಲ್ಲಿ ಅಬ್ಬು ಬ್ಯಾರಿ ಕುಳಿತ. ಭಟ್ಟರು ಮಾತನಾಡಲಿಲ್ಲ. ಅವರ ಕಣ್ಣು ಮಾಡು ನೋಡುತ್ತಿತ್ತು.
‘‘ಎಂತಾಯಿತು ಭಟ್ಟರೆ? ಮಾತಾಡಿ...’’ ‘‘ಎಂತದೂ ಇಲ್ಲ’’ ಎಂದು ಭಟ್ಟರು ವೌನಕ್ಕೆ ಶರಣಾದರು. ‘‘ಇದೊಳ್ಳೆ ಪಜೀತಿಯಾಯಿತಲ್ಲ ’’ ಎಂದು ಅಬ್ಬು ಅಂಗಳದ ತೆಂಗಿನ ಮರದ ಫಸಲು ನೋಡತೊಡಗಿದ.
‘‘ಅಬ್ಬು...ಅವಳಿಗೆ ಗರ್ಭ ಕ್ಯಾನ್ಸರ್. ಅವಳು ಉಳಿಯುವುದು ಕಷ್ಟ ಅಂತೆ’’ ಭಟ್ಟರ ಬಾಯಿಯಿಂದ ಮಾತು ಹೊರ ಬಿದ್ದಾಗ ಅಬ್ಬು ಬ್ಯಾರಿ ಕಂಗಾಲಾಗಿದ್ದ.
‘‘ಎಂತ ಹೇಳುವುದು ಭಟ್ರೆ ನೀವು?’’
‘‘ಏನಾದರೂ ಮಾಡಿ ಅವಳನ್ನು ಉಳಿಸಿಕೊಳ್ಳಬೇಕು. ಎಲ್ಲಿಂದಾದರೂ ಆಗಬಹುದು. ಒಂದು ಐವತ್ತು ಸಾವಿರ ರೂಪಾಯಿ ನೀನು ತಂದು ಕೊಡಬೇಕು. ಬಾಕಿ ವ್ಯವಸ್ಥೆ ನಾನು ಮಾಡಿಕೊಂಡಿದ್ದೇನೆ’’ ಒಮ್ಮೆಲೆ ಅಬ್ಬು ಬ್ಯಾರಿಯ ಕೈ ಹಿಡಿದು ಕೇಳಿಕೊಂಡರು ಭಟ್ಟರು.
ಅಬ್ಬುವಿಗೆ ಏನು ಹೇಳಬೇಕು ಎನ್ನುವುದು ಹೊಳೆಯಲಿಲ್ಲ. ‘‘ಭಟ್ರೆ...ಅಷ್ಟು ಹಣ ನನ್ನಲ್ಲಿ ಎಲ್ಲಿಂದ?’’
‘‘ಅದು ನನಗೆ ಗೊತ್ತಿಲ್ಲ. ಬಡ್ಡಿ ಬೇಕಾದರೂ ಕೊಡುತ್ತೇನೆ.ಯಾರಿಂದಲಾದರೂ ಸಾಲ ಇಸಿದು ಕೊಡು...ಅವಳಿಲ್ಲದೆ ನನಗೆ ಬದುಕುವುದು ಸಾಧ್ಯವಿಲ್ಲ. ಅವಳನ್ನು ಅಷ್ಟು ಸುಲಭವಾಗಿ ಆ ಕ್ಯಾನ್ಸರ್‌ಗೆ ಬಿಟ್ಟು ಕೊಡುವುದಿಲ್ಲ ನಾನು. ಏನು ಆಗಲಿಲ್ಲ ಅಂದರೆ ನನ್ನ ತೋಟವನ್ನೇ ಮಾರುತ್ತೇನೆ’’ ಅವರ ಕಂಠ ಗದ್ಗದವಾಗಿತ್ತು. ‘‘ಅಷ್ಟು ಹಣ ನನಗೆ ಯಾರು ಸಾಲ ಕೊಡುತ್ತಾರೆ ಭಟ್ರೆ?’’
ಅನಂತ ಭಟ್ಟರು ವೌನವಾದರು. ಅಬ್ಬು ಬ್ಯಾರಿಯೇ ಬಾಯಿ ತೆರೆಯಬೇಕಾಯಿತು.
‘‘ನೀವೇನೂ ಚಿಂತೆ ಮಾಡಬೇಡಿ. ಅಕ್ಕನಿಗೆ ಏನೂ ಆಗುವುದಿಲ್ಲ. ಎಲ್ಲ ಸರಿಯಾಗುತ್ತದೆ’’
‘‘ಎಂತದೂ ಸರಿಯಾಗುವುದಿಲ್ಲ. ಇನ್ನು ನಾಲ್ಕು ದಿನದಲ್ಲಿ ಹಣ ಹೊಂದಿಸದೇ ಇದ್ದರೆ ಗರ್ಭದ ಕ್ಯಾನ್ಸರ್ ಎಲ್ಲ ಕಡೆಗೆ ಹರಡುತ್ತದಂತೆ’’ ಎಂದು ಭಟ್ಟರು ನಿಟ್ಟುಸಿರಿಟ್ಟರು.
‘‘ಈಗ ಎಂತ ಮಾಡುವುದು?’’ ಅಬ್ಬು ಬ್ಯಾರಿ ತಿರುಗಿ ಭಟ್ಟರನ್ನೇ ಕೇಳಿದ.
‘‘ಏನಾದರೂ ಮಾಡಬಹುದಾ ಅಂತ ನಿನ್ನನ್ನು ಕರೆದದ್ದು. ನಿನ್ನನ್ನು ಬಿಟ್ಟರೆ ಈಗ ನನಗೆ ಬೇರೆ ಗತಿಯೇ ಇಲ್ಲ’’ ಭಟ್ಟರು ಅಳು ಧ್ವನಿಯಲ್ಲಿ ಹೇಳಿದರು.
‘‘ನೀವು ಹೀಗೆ ಹೇಳಿದರೆ ನಾನು ಎಂತ ಮಾಡುವುದು. ನನ್ನ ಹೆಂಡತಿಯ ಕಿವಿಯಲ್ಲಿರುವ ಅಲಿಕತ್ ತೆಗೆದುಕೊಡುವ ಅಂದರೆ ಅದು ರೋಲ್ಡ್ ಗೋಲ್ಡಿದ್ದು. ಆ ವ್ಯಾಪಾರ, ಈ ವ್ಯಾಪಾರ ಎಂದು ಅವಳ ಕಿವಿಯಲ್ಲಿದ್ದ ಎರಡು ಬಂಗಾರದ ಅಲಿಕತ್ತನ್ನೂ ತಿಂದು ನೀರು ಕುಡಿದಿದ್ದೇನೆ...’’ ಅಬ್ಬು ಬ್ಯಾರಿ ಅಸಹಾಯಕತೆ ತೋಡಿಕೊಂಡ.
‘‘ನನ್ನ ಕೊಟ್ಟಿಗೆಯಲ್ಲಿರುವ ಎರಡು ಎತ್ತುಗಳನ್ನು ಯಾರಿಗಾದರೂ ಕೊಟ್ಟು ಬಿಡು. ನಿನ್ನ ಕಮಿಶನ್ ಬಿಟ್ಟು ಉಳಿದದ್ದು ನನಗೆ ತಂದುಕೊಡು’’ ಅನಂತ ಭಟ್ಟರು ಕೊನೆಯ ಪರಿಹಾರವನ್ನು ಯಾಚಿಸಿದರು.
ಅಬ್ಬು ಬ್ಯಾರಿ ಆವಕ್ಕಾದ. ‘‘ನಾನು ಅದರ ವ್ಯಾಪಾರ ಬಿಟ್ಟಿದ್ದೇನೆ ಭಟ್ರೆ...’’ ಹಳೆಯ ರಾಗವನ್ನೇ ಮತ್ತೆ ಎಳೆದ.
‘‘ಅಬ್ಬು ನೀನು ಎತ್ತುಗಳನ್ನು ಯಾರಿಗೆ ಬೇಕಾದರೂ ಮಾರು. ಅದು ನಿನಗೆ ಬಿಟ್ಟದ್ದು. ಅವಳ ಜೀವ ನಿನ್ನ ಕೈಯಲ್ಲುಂಟು. ಏನಿಲ್ಲದಿದ್ದರೂ ಕರೆದು ಕರೆದು ಬೆಳೆದ ತರಕಾರಿಯಲ್ಲಿ ನಿನಗೆ ಸಣ್ಣ ಪಾಲು ಕೊಡುತ್ತಿದ್ದವಳಲ್ಲವೆ?’’ ಭಟ್ಟರ ಕಣ್ಣಂಚಲ್ಲಿ ಹನಿಯಿತ್ತು.
ಅಬ್ಬು ಬ್ಯಾರಿ ಈಗ ತಣ್ಣಗಾಗಿದ್ದ ‘‘ಎಂತ ಭಟ್ರೆ. ನೀವು ಹೀಗೆ ಹೇಳುವುದಾ? ಬರೇ ತರಕಾರಿ ಮಾತ್ರವ? ಮಗನ ಪ್ರೀತಿ ತೋರಿಸಿದ್ದಾರೆ ಅವರು ನನಗೆ. ನನ್ನ ಇಬ್ಬರು ಮಕ್ಕಳಿಗೆ ಎಷ್ಟು ಸಾರಿ ಕೈ ತುತ್ತು ಉಣಿಸಲಿಲ್ಲ? ಅದನ್ನೆಲ್ಲ ನೆನಪಿಟ್ಟುಕೊಳ್ಳದೇ ಇದ್ದರೆ ನಾನು ಮನುಷ್ಯನಾ? ಅದನ್ನು ಮಾರಿ ಕೊಡಬೇಕು. ಅಷ್ಟೇ ಅಲ್ವ? ಮಾರಿಕೊಟ್ಟರೆ ಆಯಿತಲ್ಲ? ನನಗೆ ಎಂತ ಕಮಿಶನೂ ಬೇಡ. ಸಾಗಿಸುವ ಟೆಂಪೋ ಡ್ರೈವರ್‌ನ ದುಡ್ಡು ಕೊಟ್ಟರೆ ಸಾಕು...ಅದನ್ನು ತಲುಪಿಸುವ ಚಾರ್ಜು ಅವರಿಗೆ ಕೊಡಬೇಕಾಗುತ್ತದೆ’’
‘‘ಅಷ್ಟು ಮಾಡಿ ಅವಳ ಜೀವ ಉಳಿಸು ಮಾರಾಯ?’’ ಅಬ್ಬು ಬ್ಯಾರಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೇಳಿಕೊಂಡರು.
‘‘ನಿಮ್ಮ ಮಗ ಒಪ್ಪಿದ್ದಾನ ಇದಕ್ಕೆ?’’ ಅಬ್ಬುಬ್ಯಾರಿ ಆತಂಕದಿಂದ ಮೆಲ್ಲಗೆ ಕೇಳಿದರು.
‘‘ಒಪ್ಪದೇ ಏನು? ಅವನ ಹೆತ್ತ ತಾಯಿಗಿಂತ ಸಂಘಟನೆಯ? ಅವನೇ ಹೇಳಿದ್ದು, ನಿನ್ನನ್ನು ಕರೆಸಿ ಆ ಎತ್ತುಗಳನ್ನು ಮಾರಲು. ಅವನಿಲ್ಲದ ಹೊತ್ತಿನಲ್ಲಿ ಸಂಜೆಯ ಹೊತ್ತಿಗೆ ತೆಗೆದುಕೊಂಡು ಹೋಗು. ಅವನು ಈ ವಿಷಯದಲ್ಲಿ ತಲೆ ಹಾಕುವುದಿಲ್ಲ ಎಂದು ಮಾತು ಕೊಟ್ಟಿದ್ದಾನೆ’’ ಅನಂತ ಭಟ್ಟರು ದೃಢವಾಗಿ ಹೇಳಿ ಬಿಟ್ಟರು.
‘‘ಈಗ ಸಮಾಧಾನವಾಯಿತು. ಎತ್ತುಗಳನ್ನು ನಾನೂ ನೋಡಿದ್ದೇನೆ. ಏನಿಲ್ಲ ಎಂದರೂ 40-50 ಸಾವಿರಕ್ಕೆ ಮೋಸವಿಲ್ಲ. ದೇವರಾಣೆ ನನಗೆ ಒಂದು ಪೈಸೆ ಕಮಿಶನ್ ಬೇಡ. ಅಕ್ಕನ ಆಪರೇಷನ್ ಒಂದು ಆಗಲಿ. ಆರೋಗ್ಯವಾಗಿ ಮನೆಗೆ ಬರಲಿ’’
‘‘ಆದಷ್ಟು ಬೇಗ ಹಣ ಹೊಂದಾಣಿಕೆ ಆಗಬೇಕು. ಹೆಚ್ಚು ಸಮಯವಿಲ್ಲ’’ ‘‘ ನಾಡಿದ್ದು ಸಂಜೆ ಹಣದ ಜೊತೆಗೆ ಬರುವೆ. ಒಂದು ಪಾರ್ಟಿ ಉಂಟು. ಟೆಂಪೋ ರಾತ್ರಿ ಏಳು ಗಂಟೆಗೆ ಬರುತ್ತದೆ’’
‘‘ಹಾಗಾದರೆ ನಾಳೆಯೇ ಹೋಗಿ ಮಂಗಳೂರು ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿ ಬರುವೆ. ನಾಡಿದ್ದು ಸಂಜೆ ಟೆಂಪೋ ತಂದು ಎರಡೂ ಎತ್ತುಗಳನ್ನು ಕೊಂಡು ಹೋಗು’’ ಭಟ್ಟರು ಒಂದಿಷ್ಟು ನಿರಾಳವಾದರು. ‘‘ನನ್ನ ಲಲಿತೆಯನ್ನು ಬದುಕಿಸಿದೆ ಮಾರಾಯ ನೀನು’’ ಎನ್ನುತ್ತಾ ಎದ್ದು ಅಬ್ಬು ಬ್ಯಾರಿಯನ್ನು ತಬ್ಬಿಕೊಂಡರು.
***
ಅಂದು ಮುಸ್ಸಂಜೆ ಏಳು ಗಂಟೆಗೆ ವಿಶ್ವ ಮನೆಯ ಕಡೆಗೆ ಬರುತ್ತಿರುವಾಗ ಮನೆಯ ಅಂಗಳದಿಂದ ಟೆಂಪೊವೊಂದು ಹೊರಗೆ ಹೋಗುವುದು ಕಂಡಿತು. ‘ನನ್ನ ಮನೆಗೆ ಯಾರ ಟೆಂಪೋ ಬಂದದ್ದು?’ ಎಂದು ಗೊಣಗುತ್ತಾ ಮನೆಯೊಳಗೆ ಕಾಲಿಟ್ಟ. ಅಪ್ಪ ಮತ್ತು ಅಂಬಿಕಾ ಮಂಗಳೂರು ಆಸ್ಪತ್ರೆಯಲ್ಲಿ ತಾಯಿಯ ಜೊತೆಗಿದ್ದರು. ನಾಳೆ ಆಕೆಯ ಆಪರೇಷನ್ ಎನ್ನುವುದು ಗೊತ್ತಾಗಿತ್ತು. ಮನೆಯಲ್ಲಿ ಪದ್ಮಮ್ಮ ಮಾತ್ರ ಇದ್ದರು. ಅಡುಗೆ ಮನೆಯಲ್ಲಿ ಅನ್ನಕ್ಕೆ ಇಡುತ್ತಿದ್ದರು.
‘‘ಅದು ಯಾರದು ಟೆಂಪೋ?’’ ವಿಶ್ವ ಕೇಳಿದ.
ಪದ್ಮಮ್ಮ ಕೇಳದಂತೆ ವರ್ತಿಸಿದರು.
‘‘ಕಿವಿ ಕೇಳಿಸುವುದಿಲ್ಲವಾ? ಟೆಂಪೊವೊಂದು ಬಂದು ಹೋಯಿತಲ್ಲ, ಯಾರದು?’’
‘‘ಒಂದಿಷ್ಟು ಗೊಬ್ಬರ ಇತ್ತು. ಅದನ್ನು ಕೊಂಡು ಹೋಗಲಿಕ್ಕೆ ಬಂದದ್ದು. ಶೀನಪ್ಪ ಶೆಟ್ಟರ ತೋಟಕ್ಕೆ ಗೊಬ್ಬರ ಬೇಕು ಎಂದು ಹೇಳಿದ್ದರಂತೆ ನಿನ್ನ ಅಪ್ಪನಲ್ಲಿ’’ ಪದ್ಮಮ್ಮ ಮಾತು ತೇಲಿಸಿದರು.
ವಿಶ್ವನಿಗೆ ಯಾಕೋ ಅನುಮಾನ ಬಂದು ಹಿತ್ತಲಿಗೆ ಬಂದು ಕೊಟ್ಟಿಗೆಗೆ ಇಣುಕಿದ. ಅಲ್ಲಿ ಎತ್ತುಗಳು ಇರಲಿಲ್ಲ. ತನ್ನ ಕುರುಚಲು ಗಡ್ಡ ಸವರಿಕೊಂಡು ಕಿಸೆಯಲ್ಲಿದ್ದ ನೋಕಿಯೋ ಫೋನ್ ಕೈಗೆತ್ತಿಕೊಂಡ. ಅವನಿಗೆ ಟೆಂಪೋ ಹೆಸರು ನೆನಪಿತ್ತು. ಅಬ್ಬು ಬ್ಯಾರಿಯ ದುಡ್ಡು ಕೈ ಸೇರಿದ್ದೇ ಭಟ್ಟರು ಅದನ್ನು ಹಾಗೆಯೇ ತಂದು ಆಸ್ಪತ್ರೆಯ ಕೌಂಟರಿಗೆ ಕಟ್ಟಿದ್ದರು. ದುಡ್ಡು ಕಟ್ಟಿದ ಬೆನ್ನಿಗೇ ವೈದ್ಯರು ಆಪರೇಶನ್‌ಗೆ ಸಿದ್ಧತೆ ನಡೆಸಿದ್ದರು. ‘‘ನಾಳೆ ಬೆಳಗ್ಗೆ ಏಳು ಗಂಟೆಗೆ ಆಪರೇಶನ್ ಇಟ್ಟುಕೊಂಡಿದ್ದೇವೆ. ಯಾರಾದರೂ ಒಬ್ಬರು ಹತ್ತಿರದಲ್ಲೇ ಇರಿ’’ ಎಂದಿದ್ದರು. ಶನಿವಾರ ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಲಲಿತಮ್ಮನಿಗೆ ಶಸ್ತ್ರಕ್ರಿಯೆ. ಅನಂತಭಟ್ಟರು ಮತ್ತು ಅಂಬಿಕಾ ಆಪರೇಶನ್ ಥಿಯೇಟರ್ ಹೊರಗೆ ವೈದ್ಯರು ಹೊರಬರುವುದನ್ನೇ ಕಾಯುತ್ತಾ ಕುಳಿತಿದ್ದರು. ಲಲಿತಮ್ಮನ ತಂದೆಯ ಕಡೆಯವರೂ ಒಂದಿಬ್ಬರು ಅಲ್ಲಿದ್ದರು. ಗೋಪಾಲ ಕಿಣಿಯವರೂ ದಿನಸಿ ಅಂಗಡಿಯಲ್ಲಿ ಮಗನನ್ನು ಕುಳ್ಳಿರಿಸಿ ಅನಂತಭಟ್ಟರ ಜೊತೆಗಿದ್ದರು. ಬೆಳಗ್ಗೆ ಸುಮಾರು ಹತ್ತು ಗಂಟೆ ಹೊತ್ತಿಗೆ ಶಸ್ತ್ರಕ್ರಿಯೆ ಮುಗಿಯಿತು. ಆಪರೇಷನ್ ಮುಗಿಸಿ ಥಿಯೇಟರ್‌ನಿಂದ ವೈದ್ಯರು ಹೊರ ಬಂದವರೇ ‘‘ಭಟ್ಟರೇ...ಎಲ್ಲ ದೇವರ ದಯೆಯಿಂದ ಒಳ್ಳೆಯದಾಗಿದೆ. ಕ್ಯಾನ್ಸರ್ ಆಗಿರುವ ಗರ್ಭದ ಭಾಗವನ್ನು ಕತ್ತರಿಸಿ ತೆಗೆದಿದ್ದೇವೆ. ಇನ್ನು ಯಾವ ಅಪಾಯವೂ ಇಲ್ಲ’’ ಅಭಿನಂದಿಸಿದರು.
ಅನಂತ ಭಟ್ಟರು ಒಮ್ಮೆಲೆ ಹಗುರಾದರು. ‘‘ಇನ್ನು ಏನೂ ತೊಂದರೆ ಇಲ್ಲವಾ?’’ ಕೇಳಿದರು.
‘‘ಏನು ತೊಂದರೆ ಇಲ್ಲ’’ ವೈದ್ಯರು ಅನಂತ ಭಟ್ಟರ ಹೆಗಲಿಗೆ ಕೈಯಿಟ್ಟರು. ಅಂಬಿಕಾಳ ಮುಖದಲ್ಲೂ ನಗು ಅರಳಿತ್ತು. ‘‘ಕ್ಯಾನ್ಸರ್ ಹರಡುವ ಅಪಾಯ ಏನೂ ಇಲ್ವ?’’ ಭಟ್ಟರು ಎದ್ದು ನಿಂತು ವೈದ್ಯರ ಕೈ ಹಿಡಿದು ಕೇಳಿದರು.
‘‘ಹಾಗೆ ಆಗದ ಹಾಗೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ. ನಾವಿರುವುದೇ ಅದಕ್ಕಲ್ಲವಾ? ಹೆದರಬೇಡಿ’’ ವೈದ್ಯರು ಭರವಸೆ ನೀಡಿದರು.
ಅಷ್ಟರಲ್ಲಿ ಸ್ವಲ್ಪ ದೂರದಲ್ಲಿದ್ದ ಗೋಪಾಲ ಕಿಣಿಯವರು ಮೊಬೈಲ್‌ನಲ್ಲಿ ಯಾರಲ್ಲೋ ಜೋರಾಗಿ ಮಾತನಾಡುತ್ತಿದ್ದರು ‘‘ಏನು ಏನು... ಹೌದಾ ? ಹೌದಾ?’’ ಎನ್ನುತ್ತಿದ್ದರು.
ಅನಂತ ಭಟ್ಟರು ಕಿಣಿಯವರ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದರು. ಕಿಣಿಯವರು ಭಟ್ಟರ ಹತ್ತಿರ ಬಂದು ಮೆಲ್ಲಗೆ ಪಿಸುಗುಟ್ಟಿದರು ‘‘ಅದೇ...ನಮ್ಮ ಬ್ರೋಕರ್ ಅಬ್ಬು ಬ್ಯಾರಿ ಇದ್ದಾನಲ್ಲ.... ಅವನ ಹೆಣ ಪೆರ್ನೆಯ ಸಮೀಪದ ಚರಂಡಿಯಲ್ಲಿ ಸಿಕ್ಕಿದೆಯಂತೆ...’’
‘‘ಎಂತ? ಏನಾಯಿತು?’’ ಅನಂತ ಭಟ್ಟರಿಗೆ ಅರ್ಥವಾಗಲಿಲ್ಲ.
‘‘ಮತ್ತೆಂತದು? ಎಷ್ಟು ಹೇಳಿದರೂ ಇವರ ಬುದ್ಧಿ ಬಿಡುವುದಿಲ್ಲ. ಮತ್ತೆ ಮತ್ತೆ ಆ ವ್ಯಾಪಾರಕ್ಕೆ ಎಂತಕ್ಕೆ ಹೋಗಬೇಕು? ದನ ಸಾಗಾಟ ಮಾಡಿದ್ದಂತೆ. ಪುತ್ತೂರಿನ ಗೋರಕ್ಷಕ ದಳದವರ ಕೈಗೆ ರಾತ್ರಿ ಟೆಂಪೋ ಸಹಿತ ಸಿಕ್ಕಿ ಬಿದ್ದಿದ್ದಾನೆ. ಎರಡು ದನಗಳನ್ನು ಗೋರಕ್ಷಕ ದಳದವರು ರಕ್ಷಿಸಿದ್ದಾರಂತೆ. ಅವನು ಆ ಸಂದರ್ಭದಲ್ಲಿ ಟೆಂಪೋ ಹಾರಿ ಕಾರ್ಯಕರ್ತರ ಕೈಯಿಂದ ತಪ್ಪಿಸಿಕೊಂಡು ಓಡಿದ್ದನಂತೆ. ಆದರೆ ಇವತ್ತು ಬೆಳಗ್ಗೆ ನೋಡಿದರೆ ಅವನ ಹೆಣ ಚರಂಡಿಯಲ್ಲಿ ಬಿದ್ದು ಉಂಟಂತೆ’’ ಕಿಣಿಯವರು ಹೇಳಿದರು.
ಅನಂತ ಭಟ್ಟರು ಸಿಡಿಲು ಬಡಿದವರಂತೆ ಕುಳಿತು ಬಿಟ್ಟರು. ಅಷ್ಟರಲ್ಲಿ ಅಲ್ಲಿಗೆ ಬಂದ ಕಿರಿಯ ವೈದ್ಯರೊಬ್ಬರು ಭಟ್ಟರ ಬಳಿ ಸಾರಿ ‘‘ಎಲ್ಲ ಸರಿಯಾಗಿದೆ. ಯಾಕೆ ಬೆದರಿದ್ದೀರಿ. ಎಲ್ಲ ಸರಿಯಾಗಿದೆ’’ ಎಂದು ಸಮಾಧಾನಿಸಿದರು. ಇದೀಗ ಕಿಣಿಯವರೇ ಹತ್ತಿರಕ್ಕೆ ಬಂದು ‘‘ಅದೆಲ್ಲ ಇರಲಿ. ಆಪರೇಷನ್ ಎಂತಾಯಿತು? ಎಲ್ಲ ಸರಿಯಾಯಿತಂತಲ್ಲ. ಕ್ಯಾನ್ಸರ್ ಭಾಗವನ್ನು ಕತ್ತರಿಸಿ ತೆಗೆದಿದ್ದಾರಂತೆ. ಇನ್ನು ಬರಲಿಕ್ಕಿಲ್ಲ. ಬಚಾವು’’ ಎಂದು ಹೆಗಲಿಗೆ ಕೈ ಹಾಕಿದರು.







