Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
  4. ಪತ್ರಕರ್ತ ಪ್ರಶ್ನಿಸುವುದು ಧೈರ್ಯ ಅಲ್ಲ...

ಪತ್ರಕರ್ತ ಪ್ರಶ್ನಿಸುವುದು ಧೈರ್ಯ ಅಲ್ಲ ಅದು ಆತನ ಕರ್ತವ್ಯ

ಕರಣ್ ಥಾಪರ್ಕರಣ್ ಥಾಪರ್24 Dec 2025 8:15 AM IST
share
ಪತ್ರಕರ್ತ ಪ್ರಶ್ನಿಸುವುದು ಧೈರ್ಯ ಅಲ್ಲ ಅದು ಆತನ ಕರ್ತವ್ಯ
ಖ್ಯಾತ ಪತ್ರಕರ್ತ, ಸಂದರ್ಶಕ ಕರಣ್ ಥಾಪರ್ ಸಂದರ್ಶನ

ಸಂದರ್ಶನ : ಕಾರ್ತಿಕ್ ವೆಂಕಟೇಶ್ , ಬೆಂಗಳೂರು

ಕನ್ನಡಕ್ಕೆ : ಆರ್ . ಜೀವಿ


ಕರಣ್ ಥಾಪರ್ ಎಂದರೆ ನಿರ್ಭೀತ, ನೇರ, ನಿಷ್ಠುರ ಪ್ರಶ್ನೆಗಳು.

ಎದುರಿಗೆ ಕೂತವರು ಮುಖ್ಯಮಂತ್ರಿ ಅಥವಾ ರಾಷ್ಟ್ರೀಯ ನಾಯಕರೇ ಆಗಿರಬಹುದು, ಸೆಲೆಬ್ರಿಟಿಗಳಿರಬಹುದು, ಆದರೆ ಪ್ರಶ್ನೆಗಳಲ್ಲಿ ಯಾವುದೇ ರಾಜಿ ಇಲ್ಲ. ಸುಮ್ಮನೆ ಪ್ರಶ್ನೆ ಕೇಳಿ ಬಿಟ್ಟು ಬಿಡುವವರಲ್ಲ, ಉತ್ತರಕ್ಕಾಗಿ ಪಟ್ಟು ಹಿಡಿಯುವವರು ಕರಣ್. ಅವರ ಪ್ರಶ್ನೆಗಳಿಗೆ ತತ್ತರಿಸಿ ಕಣ್ಣೀರಿಟ್ಟವರು, ಉತ್ತರಿಸಲಾಗದೆ ಗಂಟಲು ಕಟ್ಟಿ ನೀರು ಕುಡಿದು ಎದ್ದು ಹೋದವರು, ನಿಮ್ಮ ಸಂದರ್ಶನದ ಉಸಾಬರಿಯೇ ಬೇಡ ಎಂದು ಸಿಟ್ಟಾದವರು - ಹೀಗೆ ವಿವಿಧ ಕ್ಷೇತ್ರಗಳ ಘಟಾನುಘಟಿಗಳ ಪಟ್ಟಿಯೇ ಇದೆ. ದೇಶದ ನಾಲ್ಕನೇ ಸೇನಾ ಮುಖ್ಯಸ್ಥರಾಗಿದ್ದ ಪ್ರಾಣ್ ನಾಥ್ ಥಾಪರ್ ಹಾಗೂ ಬಿಮಲ ಥಾಪರ್ ಅವರ ಪುತ್ರ ಕರಣ್. ಡೆಹ್ರಾಡೂನ್‌ನ ಡೂನ್ ಸ್ಕೂಲ್ ಹಾಗೂ ಕೇಂಬ್ರಿಜ್ ವಿವಿಯ ಹಳೆ ವಿದ್ಯಾರ್ಥಿ. 70 ರ ದಶಕದಲ್ಲಿ ನೈಜೀರಿಯಾದಲ್ಲಿ ‘ದಿ ಟೈಮ್ಸ್’ನಲ್ಲಿ ಪತ್ರಕರ್ತರಾಗಿ ಸೇವೆ ಆರಂಭ. ಅಲ್ಲಿಂದ ಹಲವಾರು ಪ್ರತಿಷ್ಠಿತ ಜಾಗತಿಕ ಹಾಗೂ ದೇಶೀಯ ಇಂಗ್ಲಿಷ್ ಪತ್ರಿಕೆಗಳಲ್ಲಿ, ನ್ಯೂಸ್ ಚಾನಲ್ ಗಳಲ್ಲಿ ಪತ್ರಕರ್ತರಾಗಿ ಅಗಾಧ ಅನುಭವ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಇವರು ಸಂದರ್ಶಿಸಿದ ಪ್ರಭಾವಿಗಳು ನೂರಾರು. ಅಂಕಣಕಾರರಾಗಿಯೂ ಪ್ರಸಿದ್ಧರು. ಹಲವು ಕೃತಿಗಳ ಲೇಖಕ. ಹತ್ತಾರು ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಸದ್ಯ ‘ದಿ ವೈರ್’ ಜಾಲತಾಣದಲ್ಲಿ ‘ದಿ ಇಂಟರ್‌ವ್ಯೆ’ ಹೆಸರಲ್ಲಿ ಸಂದರ್ಶನಗಳನ್ನು ನಡೆಸಿಕೊಡುತ್ತಿದ್ದಾರೆ. ಕನ್ನಡ ಮಾಧ್ಯಮವೊಂದರ ಜೊತೆ ಇದೇ ಮೊದಲ ಬಾರಿ ವಿವರವಾಗಿ ಮಾತಾಡಿದ್ದಾರೆ.

► 1970ರ ಅಂತ್ಯ ಭಾಗದಿಂದ ಆರಂಭಿಸಿ ಅಂದಾಜು 45-50 ವರ್ಷ ರಾಜಕೀಯ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದೀರಿ. ಕಳೆದ 50 ವರ್ಷದಿಂದ ದೇಶದ ನಾಯಕತ್ವವನ್ನು ನೋಡಿರುವ ನಿಮ್ಮ ಪ್ರಕಾರ, ಪ್ರಸ್ತುತ ರಾಜಕೀಯ ನಾಯಕತ್ವ, ಅದರಲ್ಲೂ ನಿರ್ದಿಷ್ಟವಾಗಿ, ಇಂದು ಆಡಳಿತ ನಡೆಸುತ್ತಿರುವವರ ಕುರಿತು ಅಭಿಪ್ರಾಯವೇನು?

ಪ್ರಧಾನಿ ಮೋದಿ ಅವರಲ್ಲಿ ನಾವು ಪ್ರಬಲ, ಸದೃಢ ನಾಯಕನನ್ನು ಹೊಂದಿದ್ದೇವೆ ಎಂಬುದನ್ನು ಯಾವುದೇ ಸಂಶಯವಿಲ್ಲದೆ ಹೇಳುತ್ತೇನೆ. ಅವರ ವಿರೋಧಿಗಳು ಕೂಡ ಇದನ್ನು ನಿರಾಕರಿಸುವುದಿಲ್ಲ ಎಂದುಕೊಂಡಿದ್ದೇನೆ. ಪ್ರಶ್ನೆ ಏನೆಂದರೆ, ನಮ್ಮ ರಾಜಕೀಯದ ಗುಣಮಟ್ಟ ಏನು? ಇಂದು ಜಾತ್ಯತೀತತೆ ಕಡಿಮೆಯಾಗುತ್ತಿರುವ, ಹೆಚ್ಚು ಬಹುಸಂಖ್ಯಾತರಾಗುತ್ತಿರುವ, ಕೆಲವೊಮ್ಮೆ ನಿಸ್ಸಂದಿಗ್ಧವಾಗಿ ಕೋಮುವಾದಿಯಾಗುತ್ತಿರುವ ವ್ಯವಸ್ಥೆ ಇಲ್ಲಿದೆ. ಸಂಸದರು ಹಾಗೂ ಸಚಿವರು ಮುಸ್ಲಿಮರನ್ನು ‘ಪಾಕಿಸ್ತಾನಕ್ಕೆ ಹೋಗು’ ಎಂದು ಕೆಲವೊಮ್ಮೆ ಹಂಗಿಸುವ ವ್ಯವಸ್ಥೆ ಇಲ್ಲಿದೆ. ಮುಸ್ಲಿಮರನ್ನು ‘ಅನ್ಯ’ರಂತೆ ಕಾಣುವ, ‘ಲವ್ ಜಿಹಾದ್’ ಮಾಡುತ್ತಾರೆ ಎಂದು ಆರೋಪ ಹೊರಿಸುವ ವ್ಯವಸ್ಥೆ ಇಲ್ಲಿದೆ; ‘ಲವ್ ಜಿಹಾದ್’ ಎಂದರೆ ಏನು ಎನ್ನುವುದು ದೇವರಿಗೇ ಗೊತ್ತು. ಹಸುಗಳ ಹತ್ಯೆ ಮಾಡುತ್ತಾರೆ ಎಂದು ಆರೋಪ ಹೊರಿಸಲಾಗುತ್ತಿದೆ. ಅವರ ಮೇಲೆ ಆಗಾಗ ಹಲ್ಲೆ ನಡೆಯುತ್ತದೆ ಮತ್ತು ಥಳಿಸಲಾಗುತ್ತದೆ. ಎಳೆಯ ಪ್ರಾಯದಲ್ಲಿ ನಾನು ಕಂಡ ಭಾರತದಲ್ಲಿ ಇದೆಲ್ಲ ಇರಲಿಲ್ಲ. ಅಂಥ ಘಟನೆಗಳು ಈಗ ಆಗಾಗ ಸಂಭವಿಸುತ್ತಿವೆ ಮತ್ತು ಕಾಲಕ್ರಮೇಣ ಹೆಚ್ಚುತ್ತಿವೆ. ಇದು ದುಃಖಕರ ಮತ್ತು ವಿಷಾದನೀಯ.

► ಮುಸ್ಲಿಮರ ಇಂಥ ಅನ್ಯೀಕರಣ ಅಥವಾ ಅಪರಾಧೀಕರಣ ಬಹಳ ಕಾಲದಿಂದಲೂ ಇದೆ. ಕಳೆದ 10 ವರ್ಷದಿಂದ ಮಾತ್ರವಲ್ಲ; ಕಳೆದ 50 ಇಲ್ಲವೇ 75 ವರ್ಷದಿಂದಲೂ ಇದೆ. ಆದರೆ, ಈ ಮೊದಲು ಪ್ರತಿಪಕ್ಷಗಳಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗುತ್ತಿತ್ತು. ಈಗ ಅದು ಇಲ್ಲವಾಗಿದೆಯೇ? ಪ್ರತಿಪಕ್ಷಗಳು ಕೂಡ ಒಮ್ಮೊಮ್ಮೆ ಕೋಮುವಾದಿ ನಿಲುವು ತಳೆಯಬೇಕಾದ ಒತ್ತಡಕ್ಕೆ ಸಿಲುಕಿವೆಯೇ? ಈಗ ಸಂಭವಿಸುತ್ತಿರುವುದು ಅದೇ ಅಲ್ಲವೇ ಮತ್ತು ಅದು ಏಕೆ ಸಂಭವಿಸುತ್ತಿದೆ?

ಪ್ರತಿಪಕ್ಷಗಳು ಪ್ರತಿರೋಧ ವ್ಯಕ್ತಪಡಿಸುತ್ತಿವೆ ಮತ್ತು ಕೆಲವೊಮ್ಮೆ ಪರಿಣಾಮಕಾರಿಯಾಗಿಯೇ ಪ್ರತಿರೋಧಿಸಿವೆ. ಕಾಂಗ್ರೆಸ್ ಅಥವಾ ರಾಹುಲ್ ಗಾಂಧಿ ಬಗ್ಗೆ ಮಾತ್ರ ಆಲೋಚಿಸಬೇಡಿ. ಮಮತಾ ಬ್ಯಾನರ್ಜಿ ಅವರನ್ನು ನೋಡಿ. ಸಿಪಿಎಂ, ಸಿಪಿಐ ನೋಡಿ. ಡಿಎಂಕೆ ಸೇರಿದಂತೆ ತಮಿಳುನಾಡಿನ ಪಕ್ಷಗಳನ್ನು ನೋಡಿ. ಅವರೆಲ್ಲರೂ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕೇಂದ್ರದಲ್ಲಿ ಪ್ರಬಲ ಬಿಜೆಪಿ ಮೇಲುಗೈ ಸಾಧಿಸಿದೆ. ಈಗ 2024ರವರೆಗೆ ಇದ್ದಂಥ ಬಹುಮತ ಇಲ್ಲದೆ ಇರಬಹುದು, ಅದನ್ನು ಕಳೆದುಕೊಂಡಿರಬಹುದು. ಪಕ್ಷಕ್ಕೆ ಅಧೀನವಾದ, ಮಣಿಯುವ ಮತ್ತು ಆಜ್ಞಾನುವರ್ತಿಯಾದ, ಬೆಂಬಲ ನೀಡಲು ಇಷ್ಟಪಡುವ ಸಹಪಕ್ಷಗಳನ್ನು ಆಧರಿಸಿರಬಹುದು ಮತ್ತು ಈಗ ಸಚಿವರು ಇದ್ದಾರೆ, ಮತ್ತು ಆಡಳಿತ ಪಕ್ಷವೊಂದಿದೆ ಮತ್ತು ಮುಸ್ಲಿಮರನ್ನು ಅನ್ಯರೆಂದು ಪರಿಗಣಿಸುವ ಆರೆಸ್ಸೆಸ್‌ನ್ನು ಸುತ್ತುವರಿದ ವ್ಯವಸ್ಥೆಯೊಂದು ಇದೆ. ಆರೆಸ್ಸೆಸ್ ಸಿದ್ಧಾಂತವು ಭಾರತವನ್ನು ಹಿಂದೂ ದೇಶ ಎಂದು ಕರೆಯುತ್ತದೆ ಮತ್ತು ಸಾಂಸ್ಕೃತಿಕವಾಗಿ ಅದನ್ನು ಹಾಗೆಯೇ ಕರೆಯಬೇಕು ಎಂದು ಒತ್ತಾಯಿಸುವುದು ಈಗ ಸಾರ್ವಜನಿಕ ನೀತಿ ಆಗಿಬಿಟ್ಟಿದೆ. ನನ್ನ ಪ್ರಕಾರ, ಇದು ತೀರಾ ಅಚ್ಚರಿಯ ವಿಷಯ. ನಮ್ಮದು ಹಿಂದೂ ರಾಷ್ಟ್ರವಲ್ಲ. ನಮ್ಮದು ಸಾಂವಿಧಾನಿಕವಾಗಿ ಜಾತ್ಯತೀತ ದೇಶ. ಅದನ್ನು ಹಿಂದೂ ದೇಶ ಎಂದು ವ್ಯಾಖ್ಯಾನಿಸುವುದರಿಂದ ಕ್ರಿಶ್ಚಿಯನ್ನರು, ಜೈನರು, ಬೌದ್ಧರು ಮತ್ತು ಮುಸ್ಲಿಮರ ಪ್ರತ್ಯೇಕ ಅಸ್ಮಿತೆಯ ಹಕ್ಕುಗಳನ್ನು ನಿರಾಕರಿಸಿದಂತೆ ಆಗಲಿದೆ.

► ಇಂಥ ಸಂವಾದಗಳು ಶೈಕ್ಷಣಿಕ ಸಂಸ್ಥೆಗಳನ್ನೂ ಪ್ರವೇಶಿಸಿರುವುದು ಆತಂಕಕಾರಿ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮಕ್ಕಳು ಇದನ್ನು ಕಲಿಯುತ್ತಿದ್ದಾರೆ ಮತ್ತು ಇದು ಹೊಸ ‘ಸಾಮಾನ್ಯ’ ಆಗಿಬಿಟ್ಟಿದೆ. ಮುಂದಿನ ದಶಕ ಇಲ್ಲವೇ 2 ದಶಕಗಳ ಬಳಿಕ ಈ ಮಕ್ಕಳು ದೇಶವನ್ನು ಆಳತೊಡಗುತ್ತಾರೆ. ಹೀಗಿರುವಾಗ ಗಣತಂತ್ರದ ಜಾತ್ಯತೀತ ಗುಣವನ್ನು ಕಾಪಾಡಿಕೊಳ್ಳುವುದು ಹೇಗೆ?

ನಾನು, ನೀವು ಮತ್ತು ನಮ್ಮಂಥ ಇತರರು ನಾವು ಮೊದಲಿಗೆ ಭಾರತೀಯರು, ನಮ್ಮ ಧರ್ಮ ನಮ್ಮ ಖಾಸಗಿ ವಿಷಯ. ಅದು ಯಾವುದೇ ರೀತಿಯಲ್ಲಿ ನಮ್ಮ ಅಸ್ಮಿತೆಯ ಭಾಗವಲ್ಲ ಎಂದು ಒತ್ತಾಯಿಸುವ ಮೂಲಕ ಇದನ್ನು ಮಾಡಬಹುದು. ಧರ್ಮ ಖಂಡಿತವಾಗಿಯೂ ನಮ್ಮ ಖಾಸಗಿ ಅಸ್ಮಿತೆಯ ಭಾಗ ಆಗಿರಬಹುದು. ಆದರೆ, ಅವರು ಹಿಂದೂ ಶಬ್ದಗಳಲ್ಲಿ ಮಾತ್ರ ಅದನ್ನು ಗುರುತಿಸುವುದಿಲ್ಲ; ತಮಿಳು ಭಾಷಿಕರನ್ನು ತಮಿಳು ಅಸ್ಮಿತೆಯಲ್ಲಿ ಮಾತ್ರವೇ ಗುರುತಿಸುವುದಿಲ್ಲ ಎನ್ನುವಂತೆ. ನಮ್ಮದು ಸಂಯೋಜಿತ ಅಸ್ಮಿತೆಗಳಿರುವ ಸಂಯೋಜಿತ ದೇಶ; ಅದರಲ್ಲಿ ಒಂದು ಎಳೆ ಧರ್ಮ. ಆದರೆ, ನಮ್ಮ ಅಸ್ಮಿತೆಯಲ್ಲಿ ಇನ್ನಿತರ ಹಲವು ಅಂಶಗಳಿರುತ್ತವೆ ಹಾಗೂ ಆ ಬಹುತ್ವ ಕುರಿತು ನಾವು ಮತ್ತೆ ಮತ್ತೆ ಹೇಳುತ್ತಿರಬೇಕಾಗುತ್ತದೆ.

► ಸಾರ್ವಜನಿಕ ಹಾಗೂ ಖಾಸಗಿ ಜೀವನದಲ್ಲಿ ಹಿಂದೂ ಅಸ್ಮಿತೆಯನ್ನು ತೋರಿಸಲು ಸಾರ್ವಜನಿಕರ ಭಾರೀ ಬೆಂಬಲವಿದೆ. ಹೀಗಿರುವಾಗ ಇದು ಸಾಧ್ಯವಿದೆ ಎಂದು ನೀವು ಹೇಳುತ್ತೀರಾ?

ಹಿಂದೂ ಅಸ್ಮಿತೆ ಸಂಕಷ್ಟದಲ್ಲಿದೆ ಮತ್ತು ಅಪಾಯದಲ್ಲಿದೆ ಎಂದು ಜನರಿಗೆ ಹೇಳಲಾಗುತ್ತಿದೆ; ಆದರೆ, ಅಂಥ ಆತಂಕವೇನೂ ಇಲ್ಲ. ಮುಸ್ಲಿಮರು ನಮ್ಮನ್ನು ಬೆದರಿಸುತ್ತಿದ್ದಾರೆ, ಅವರು ನಮ್ಮ ಜನಸಂಖ್ಯೆಯನ್ನು ಮೀರಿಸಿಬಿಡುತ್ತಾರೆ, ಕಾಲಕ್ರಮೇಣ ಭಾರತ ಮುಸ್ಲಿಮ್ ರಾಷ್ಟ್ರವಾಗಿ ಬದಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಸಂಪೂರ್ಣ ಅಸತ್ಯ ಮತ್ತು ಅಸಂಬದ್ಧ. 2011 ರ ಜನಗಣತಿ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ.14.8 ಇದೆ. ಹಿಂದೂಗಳ ಜನಸಂಖ್ಯೆ ಶೇ.79. ಇನ್ನು ಒಂದು ಸಾವಿರ ವರ್ಷದ ನಂತರವೂ ಶೇ.15ರಷ್ಟು ಮಂದಿ ಶೇ.80ರಷ್ಟು ಜನರನ್ನು ಮೀರಿಸಲು ಸಾಧ್ಯವಿಲ್ಲ.

► ನಿಮ್ಮ ಮಾತಿನಿಂದ ಗೊತ್ತಾಗಿದ್ದೇನೆಂದರೆ, ಮುಖಂಡರು ಜನರನ್ನು ನಿರ್ದಿಷ್ಟ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದಾರೆ ಮತ್ತು ಜನರನ್ನು ಅಲ್ಲಿಗೆ ಕರೆದೊಯ್ಯಲಾಗುತ್ತಿದೆ. ಬೇರೆ ದಿಕ್ಕಿನೆಡೆ ಮುನ್ನಡೆಸುವ ನಾಯಕನೊಬ್ಬ ಇದನ್ನು ಪರಿಣಾಮಕಾರಿಯಾಗಿ ಬದಲಿಸಬಹುದು. ನನ್ನ ಆಲೋಚನೆ ಸರಿ ಇದೆಯೇ?

ದೇಶವನ್ನು ಈ ಹಿಂದೆ ಮುನ್ನಡೆಸಿದ್ದ ಬಲಿಷ್ಠ ನಾಯಕರು ಚಿತ್ರಣವನ್ನು ಎಷ್ಟು ಪ್ರಭಾವಿಸಿದ್ದಾರೆ ಎಂದರೆ ನಮ್ಮ ಮೇಲೆ ಅವರ ಪ್ರಭಾವ ಮತ್ತು ಪಡಿಯಚ್ಚು ಅಗಾಧವಾಗಿದೆ. ನೆಹರೂ, ನೆಹರೂ ಯುಗ, ನೆಹರೂ ಚಿಂತನೆಗಳ ಬಗ್ಗೆ ನೆನಪಿಸಿಕೊಳ್ಳಿ ಹಾಗೂ 1960ರ ಮಧ್ಯಭಾಗ ಇಲ್ಲವೇ 70ರ ದಶಕದಲ್ಲಿ ನಾವು ಅವರನ್ನು ಆರಾಧಿಸುತ್ತಿದ್ದೆವು. ಇಂದಿರಾ ಗಾಂಧಿ ಮತ್ತು ಅವರ ಪ್ರಾಬಲ್ಯ ಹಾಗೂ ಅಧಿಕಾರದ ಮೇಲಿನ ಹಿಡಿತವನ್ನು ನೆನಪಿಸಿಕೊಳ್ಳಿ. ಬಾಂಗ್ಲಾ ಯುದ್ಧದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಕೂಡ ಅವರನ್ನು ‘ದುರ್ಗಾ’ ಎಂದು ಪರಿಗಣಿಸಿದ್ದರು. ಪ್ರಮುಖ, ಪ್ರಭಾವಶಾಲಿ ಮುಖಂಡರು ತಾವು ಮೇಲುಗೈ ಹೊಂದಿರುವ ವಾತಾವರಣವನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುತ್ತಾರೆ ಮತ್ತು ನಾವು ಅದರಿಂದ ಪ್ರಭಾವಿತರಾಗುತ್ತೇವೆ.

► ಅಂದರೆ, ಎಲ್ಲ ಭರವಸೆ ಇನ್ನೂ ಕಳೆದುಹೋಗಿಲ್ಲ?

ನನ್ನ ಪ್ರಕಾರ, ನಾವು ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬಾರದು. ಭಾರತ ಅತ್ಯಂತ ದೊಡ್ಡ ದೇಶ ಮತ್ತು ಹೆಚ್ಚಿನ ಜನ ನಂಬುವುದಕ್ಕಿಂತ ಅಧಿಕ ಪುಟಿದೇಳುವ ಸಾಮರ್ಥ್ಯವಿರುವ ದೇಶ ಎಂದು ನಾನು ಅಂದುಕೊಂಡಿದ್ದೇನೆ. ಆದರೆ, ನಾಯಕತ್ವದ ಸ್ವರೂಪದಿಂದಾಗಿ ನಾವೀಗ ದುರದೃಷ್ಟಕರ ಸ್ಥಿತಿಯಲ್ಲಿ ಸಾಗುತ್ತಿದ್ದೇವೆ. ಅವರು ಕೂಡ ಬಲಿಷ್ಠ ನಾಯಕರು, ಅವರ ಅಭಿಪ್ರಾಯಗಳು ನನಗೆ ಕಿರಿಕಿರಿ ಉಂಟುಮಾಡುತ್ತವೆ, ಆದರೆ ಅವರ ಹಿಡಿತ ಮೇಲುಗೈ ಸಾಧಿಸಿದೆ ಎನ್ನುವುದು ಕೂಡ ವಾಸ್ತವ.

► ನಾವು ಭರವಸೆ ಕಳೆದುಕೊಳ್ಳಬೇಕಿಲ್ಲ ಮತ್ತು ಪರಿಸ್ಥಿತಿ ಖಂಡಿತವಾಗಿಯೂ ಉತ್ತಮ ಸ್ಥಿತಿಗೆ ಬದಲಾಗಬಹುದು ಎಂಬ ನಿಮ್ಮ ಮಾತು ಕೇಳಿ ವಿಶ್ವಾಸ ಮೂಡಿದೆ.

ಹೌದು, ಹಿಂದೆ ಕೂಡ ನಾವು ಹಲವು ಸಂಕಷ್ಟ ಪರಿಸ್ಥಿತಿಯನ್ನು ದಾಟಿ ಬಂದಿದ್ದೇವೆ. 1975 ರಿಂದ 1977ರ ತುರ್ತುಪರಿಸ್ಥಿತಿಯನ್ನು ಮರೆಯಬೇಡಿ. 1976ರಲ್ಲಿ ಪ್ರಜಾಪ್ರಭುತ್ವವನ್ನೇ ಕಳೆದುಕೊಂಡೆವು ಎಂದು ಜನ ಅಂದುಕೊಂಡಿದ್ದರು. ಆದರೆ, ಪ್ರಜಾಪ್ರಭುತ್ವ ವಾಪಸಾಯಿತು ಮತ್ತು 1977ರಲ್ಲಿ ಜನರು ಸಿಕ್ಕ ಮೊದಲ ಅವಕಾಶವನ್ನು ಬಳಸಿಕೊಂಡು, ಪ್ರಜಾತಂತ್ರವನ್ನು ಮರುಸ್ಥಾಪನೆ ಮಾಡಿದರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಸರಕಾರದ ಸಂಸ್ಥೆಗಳ ಹಕ್ಕುಗಳನ್ನು, ಮುಕ್ತವಾಗಿ ಆಲೋಚಿಸುವ ಹಕ್ಕು, ಸ್ವತಂತ್ರವಾಗಿ ಸಂಘಟನೆಗಳನ್ನು ಕಟ್ಟಿಕೊಳ್ಳುವ ಹಕ್ಕು, ಇಷ್ಟ ಬಂದಂತೆ ಪಕ್ಷಗಳನ್ನು ಕಟ್ಟುವ ಹಕ್ಕುಗಳನ್ನು ಮರುಸ್ಥಾಪನೆ ಮಾಡಿದರು. ಈ ಎಲ್ಲವನ್ನೂ ದೇಶದ ಜನರು 1977ರಲ್ಲಿ ನಮಗೆ ಮರಳಿಸಿದರು. ಅವರಿಗೆ ಮತ್ತೆ ಅವಕಾಶ ಸಿಕ್ಕಿದಾಗ (ಅದಕ್ಕೆ ದೀರ್ಘ ಕಾಲ ಬೇಕಾಗಬಹುದು) ನಾವು ಹೆಮ್ಮೆಪಡುವ ಹಕ್ಕುಗಳು, ಸ್ವಾತಂತ್ರ್ಯ ಹಾಗೂ ವಿಶೇಷಾಧಿಕಾರಗಳನ್ನು ವಾಪಸ್ ಕೊಡಿಸುತ್ತಾರೆ ಎನ್ನುವ ಖಾತ್ರಿ ನನಗೆ ಇದೆ.

► ನೀವು ಚುನಾವಣೆಗಳ ಕುರಿತು ಮಾತನಾಡಿದಿರಿ; ಭಾರತೀಯರು 1977ರಲ್ಲಿ ಹೇಗೆ ನಿರ್ಧಾರಕವಾಗಿ ಮತ ಚಲಾಯಿಸಿದರು ಮತ್ತು 1975ರಲ್ಲಿ ತಮ್ಮಿಂದ ಕಿತ್ತುಕೊಂಡಿದ್ದ ಪ್ರಜಾಪ್ರಭುತ್ವವನ್ನು ಹೇಗೆ ಮರುಸ್ಥಾಪಿಸಿದರು ಎಂದು ವಿವರಿಸಿದಿರಿ. ಆದರೆ, ಇತ್ತೀಚೆಗೆ ನಡೆದ ಬಿಹಾರದ ಚುನಾವಣೆಯಲ್ಲಿ ನಾವು ಗಮನಿಸಿದ ವಂಚನೆ, ಮತದಾರರಿಗೆ ನೀಡಿದ ಸವಲತ್ತುಗಳು, ಎಸ್‌ಐಆರ್ ನೋಡಿದರೆ, ಚುನಾವಣೆಗಳು ಈ ಮೊದಲಿಗಿಂತ ಹೆಚ್ಚು ಕುಯುಕ್ತಿಯಿಂದ ನಡೆಯುತ್ತವೆ ಎಂದು ಗೊತ್ತಾಗುತ್ತದೆ. ಪ್ರಶ್ನೆ ಏನೆಂದರೆ, ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯುತ್ತವೆಯೇ?

ಜನರಿಗೆ ಬೇಕಾಗುವಷ್ಟು ಕಾಲ ಮುಕ್ತ ಹಾಗೂ ನ್ಯಾಯಬದ್ಧ ಚುನಾವಣೆಗಳು ನಡೆಯುತ್ತವೆ. ಆಳುತ್ತಿರುವ ಸರಕಾರವನ್ನು ಸೋಲಿಸಿದ ಚುನಾವಣೆಗಳು ನಡೆದಿವೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ, ಕೇರಳ ಮತ್ತು ಪಂಜಾಬಿನಲ್ಲಿ ಪ್ರತಿಪಕ್ಷಗಳ ಸರಕಾರ ಇದೆ. ಆದರೆ, ದುರದೃಷ್ಟಕರ ಅಂಶವೆಂದರೆ, ನಾವು ಈಗ ಒಂದು ದಾಖಲೆ ಸೃಷ್ಟಿಸಿದ್ದೇವೆ. ಪ್ರಾಯಶಃ ಇದು ಮಧ್ಯಪ್ರದೇಶದಲ್ಲಿ ಆರಂಭವಾಯಿತು, ಮಹಾರಾಷ್ಟ್ರದಲ್ಲಿ ನಡೆಯಿತು, ಬಿಹಾರದಲ್ಲೂ ನಡೆಯಿತು; ಚುನಾವಣೆಗಿಂತ ಮೊದಲು ಸರಕಾರಗಳು ಮತದಾರರಿಗೆ ಸವಲತ್ತುಗಳನ್ನು ಕೊಡಲು ಆರಂಭಿಸಿದವು. ಇದೊಂದು ರೀತಿಯಲ್ಲಿ ಮತಗಳ ಖರೀದಿ. ಈ ಸವಲತ್ತುಗಳು ಜನರಿಗೆ ಉಪಯುಕ್ತ ಎಂದು ನನಗೆ ಗೊತ್ತಿದೆ; ಆದರೆ, ಸವಲತ್ತುಗಳನ್ನು ಚುನಾವಣೆಗೆ 5 ವಾರ ಮೊದಲು ನೀಡುವುದು ಮತದಾರರಿಗೆ ಆಮಿಷ ಒಡ್ಡುತ್ತಿರುವ ಸ್ಪಷ್ಟ ಸೂಚನೆ; ಇದು ಮುಂದುವರಿದರೆ ಪ್ರತಿಪಕ್ಷಗಳಿಗೆ ಚುನಾವಣೆಯಲ್ಲಿ ಜಯ ಗಳಿಸುವುದು ಅಸಾಧ್ಯವಾಗಿ ಬಿಡುತ್ತದೆ. ಏಕೆಂದರೆ, ಆಡಳಿತ ಪಕ್ಷದ ಕೈಯಲ್ಲಿ ತಿಜೋರಿ ಇರುತ್ತದೆ ಮತ್ತು ಅದು ಸವಲತ್ತುಗಳನ್ನು ನೀಡಬಹುದು. ಚುನಾವಣೆಗೆ ಮೊದಲು ಇಂಥ ಸವಲತ್ತುಗಳನ್ನು ನೀಡಲಾಗುತ್ತಿದೆ ಮತ್ತು ಇದು ‘ನಮಗೆ ಮತ ಹಾಕಿ, ಇದು ನಾವು ಮಾಡಬಹುದಾದ್ದು; ಇದನ್ನು ನಾವು ಮಾಡುತ್ತೇವೆ’ ಎಂದು ಹೇಳಿದಂತೆ ಆಗುತ್ತದೆ.

► ನಮ್ಮಂಥ ಬಡ ದೇಶದಲ್ಲಿ ಇದು ಮತದಾರರಲ್ಲಿ ತಾರತಮ್ಯ ಮಾಡಿದಂತೆ ಆಗಲಿದೆ. ದೇಶದಲ್ಲಿ ಹೆಚ್ಚಿನವರು ಅಂದಿನ ಸಂಪಾದನೆಯಲ್ಲಿ ಬದುಕು ನೂಕುವವರಾಗಿದ್ದು, ಅವರಿಗೆ ಭಾರೀ ಮೊತ್ತವನ್ನು ವರ್ಗಾವಣೆ ಮಾಡಿದರೆ, ನಮಗೆ ಮತ ನೀಡಿ; ಮುಂದೆಯೂ ನಿಮಗೆ ಇದೇ ರೀತಿ ಹಣ ನೀಡುತ್ತೇವೆ ಎಂದು ಹೇಳಿದಂತೆ ಆಗಲಿದೆ.

ಹೌದು. ನಾನು ವೃತ್ತಪತ್ರಿಕೆಗಳಲ್ಲಿ ಓದಿದಂತೆ, ಬಿಹಾರದ ಪ್ರಜೆಗಳ ವಾರ್ಷಿಕ ವರಮಾನ ಅಂದಾಜು 70,000 ರೂ. ಇದ್ದು, ಅವರಿಗೆ ನೀಡಿದ 10,000 ರೂ. ಭಾರೀ ಮೊತ್ತ. ನಾನು ಓದಿದ ಕೆಲವು ಲೆಕ್ಕಾಚಾರಗಳ ಪ್ರಕಾರ, ಮತಕ್ಷೇತ್ರ ಒಂದರಲ್ಲಿ 60,000 - 65,000 ಮಹಿಳೆಯರಿಗೆ ಹಣ ನೀಡಲಾಗಿದೆ; ಇದರರ್ಥವೇನೆಂದರೆ, ನೀವು ಹೆಚ್ಚಿನ ಸಂಖ್ಯೆಯವರಿಗೆ ಆಮಿಷ ಒಡ್ಡಿದ್ದೀರಿ ಹಾಗೂ ನಿಮಗೆ ಮತ ಚಲಾಯಿಸುವಂತೆ ಮಾಡಿದ್ದೀರಿ.

► ನೀವು ಜೀವಮಾನವಿಡೀ ಕೆಲಸ ಮಾಡಿದ ಮಾಧ್ಯಮ ಕ್ಷೇತ್ರದ ಬಗ್ಗೆ ಮಾತನಾಡೋಣ. ದೇಶದಲ್ಲಿ ದೀರ್ಘಕಾಲದಿಂದ ಮತ್ತು ತುರ್ತುಪರಿಸ್ಥಿತಿಯಲ್ಲೂ ನಿರ್ಭೀತ, ಅಧಿಕಾರವನ್ನು ಪ್ರಶ್ನಿಸುವ ಪ್ರಬಲ ಮಾಧ್ಯಮಗಳಿದ್ದವು. ಕಳೆದ ಒಂದು ದಶಕದಲ್ಲಿ ಅದು ಸಂಪೂರ್ಣವಾಗಿ ಕುಸಿದಿದೆ. ಮುದ್ರಣ ಮತ್ತು ದೃಶ್ಯ-ಶ್ರಾವ್ಯ ಮಾಧ್ಯಮದಲ್ಲಿರುವವರು ಸರಕಾರ ಹೇಳಿದ್ದನ್ನು ಮಾಡುತ್ತಿದ್ದಾರೆ. ಸರಕಾರವನ್ನು ಪ್ರಶ್ನಿಸುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಸಾಮಾನ್ಯ ಮತದಾರರು ಸತ್ಯವನ್ನು ಅರಿತುಕೊಳ್ಳುವುದು ಹೇಗೆ ಸಾಧ್ಯ? ಸರಕಾರ ಮಾಡುತ್ತಿರುವ ತಪ್ಪುಗಳೇನು ಎಂದು ಅವರು ತಿಳಿದುಕೊಳ್ಳುವುದು ಹೇಗೆ ಮತ್ತು ಆಮೂಲಕ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳುವುದು ಹೇಗೆ?

ಮಾಧ್ಯಮಗಳು ನಾಗರಿಕರಿಗೆ ತಿಳಿಸದೆ ಇರುವ ಘೋರ ‘ಸತ್ಯ’ಗಳು ಸಾಕಷ್ಟಿವೆ. ಮಾಧ್ಯಮ ಒಂದೋ ಸ್ವಯಂ ಸೆನ್ಸರ್ ಹಾಕಿಕೊಳ್ಳುತ್ತದೆ ಅಥವಾ ಮಾಲಕರು ಕತ್ತರಿ ಹಾಕುತ್ತಾರೆ, ಇಲ್ಲವೇ ಸರಕಾರ ಕತ್ತರಿ ಪ್ರಯೋಗ ಮಾಡುತ್ತದೆ. ಆದರೆ, ಆ ಕುರಿತ ವಿವರ/ವಿಶ್ಲೇಷಣೆಯನ್ನು ಎಂದಿಗೂ ಕೊಡುವುದಿಲ್ಲ. ಆದ್ದರಿಂದ, ನಾವು ಇನ್ನಿತರ ಮೂಲಗಳಿಂದ, ಸಾಮಾಜಿಕ ಮಾಧ್ಯಮ, ವಾಟ್ಸ್‌ಆ್ಯಪ್, ಯುಟ್ಯೂಬ್ ಇನ್ನಿತರ ಮಾಧ್ಯಮಗಳ ಮೂಲಕ ಸತ್ಯವನ್ನು ತಿಳಿದುಕೊಳ್ಳಬೇಕಾಗುತ್ತದೆ; ಏಕೆಂದರೆ, ಅವು ಇನ್ನೂ ಸ್ವತಂತ್ರವಾಗಿವೆ ಮತ್ತು ಮುಕ್ತವಾಗಿವೆ. ಆದರೆ, ಕೆಲವು ವೃತ್ತಪತ್ರಿಕೆಗಳು ನಿಮಗೆ ಸತ್ಯವನ್ನು ತಿಳಿಸುತ್ತವೆ- ಕೋಲ್ಕತಾದ ಸ್ಟೇಟ್ಸ್‌ಮನ್, ದಕ್ಷಿಣ ಭಾರತದಲ್ಲಿ ದಿ ಹಿಂದೂ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್. ಈ ಮೂರು ಪತ್ರಿಕೆಗಳೂ ಅತ್ಯುನ್ನತ ಗುಣಮಟ್ಟವನ್ನು ಎತ್ತಿಹಿಡಿಯಲು ಪ್ರಯತ್ನಿಸಿವೆ. ಕೆಲವೊಮ್ಮೆ ಅದರಲ್ಲಿ ವಿಫಲವಾಗಿವೆ ಎಂಬುದನ್ನು ನಾನು ನಿರಾಕರಿಸುವುದಿಲ್ಲ. ಆದರೆ, ಹೆಚ್ಚಿನ ಸಲ ಅವು ಯಶಸ್ವಿಯಾಗಿವೆ. ನಾನು ದಿ ಹಿಂದೂ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಓದುತ್ತೇನೆ ಮತ್ತು ಅವನ್ನು ಆಧರಿಸಿದ್ದೇನೆ.....ಆದರೆ, ದುರದೃಷ್ಟಕರ ಸಂಗತಿ ಎಂದರೆ, ಸಂತುಲನೆ ಕಾಯ್ದುಕೊಳ್ಳಲು ಈ ಪತ್ರಿಕೆಗಳು ಕೂಡ ಸರಕಾರದ ಸಚಿವರಿಗೆ ಅಂಕಣ ಬರೆಯಲು ಅವಕಾಶ ನೀಡಿವೆ. ಇದರಿಂದಾಗಿ, ಜಗದೀಪ್ ಧನ್ಕರ್ ಮತ್ತು ರಾಮ್ ಮಾಧವ್ ಅವರಂಥವರು ಅಂಕಣಕಾರರಾಗಿದ್ದಾರೆ. 2014ಕ್ಕಿಂತ ಮೊದಲು ಇಂಥ ಜನರ ಸುಳಿವೇ ಇರಲಿಲ್ಲ. ಆದರೆ, ಈಗ ಅವರು ನಿಯತವಾಗಿ ಬರೆಯುತ್ತಾರೆ. ಆದರೆ, ಪತ್ರಿಕೆಯೊಂದು ಆಂತರಿಕ ಸಮತೋಲ ಸಾಧಿಸುವ ದಾರಿ ಇದಾಗಿರಬಹುದು ಮತ್ತು ಅದು ಅಗತ್ಯ ಎಂದಾದಲ್ಲಿ ಒಪ್ಪಿಕೊಳ್ಳೋಣ; ಆದರೆ, ನಮಗೆ ಉತ್ತಮ, ನಂಬಿಕಾರ್ಹ, ವಿಶ್ವಾಸಾರ್ಹ ಸುದ್ದಿ ಸಿಗುತ್ತಿರುವವರೆಗೆ ನಾನು ಅವರನ್ನು ಅಂಕಣಕಾರರೆಂದು ಸಂತೋಷವಾಗಿ ಓದುತ್ತೇನೆ.

► ಸರಕಾರವು (ನೀವು ಸಹಯೋಗ ಹೊಂದಿರುವ) ದಿ ವೈರ್ ಮತ್ತಿತರ ಸ್ವತಂತ್ರ ಮಾಧ್ಯಮಗಳ ಬೆನ್ನು ಹತ್ತಿದೆ. ಸರಕಾರದ ವಿವಿಧ ಏಜೆನ್ಸಿಗಳು ಉಸಿರು ಹತ್ತಿಕ್ಕಲು ಮುಂದಾಗಿರುವ ಸನ್ನಿವೇಶದಲ್ಲಿ ಮಾಧ್ಯಮ ಎಷ್ಟು ಕಾಲ ವಸ್ತುನಿಷ್ಠ ವರದಿಗಾರಿಕೆ ಮತ್ತು ತನಿಖಾ ಪತ್ರಿಕೋದ್ಯಮ ಮುಂದುವರಿಸಲು ಸಾಧ್ಯವಿದೆ?

ಈ ಪ್ರಶ್ನೆಗೆ ಉತ್ತರ ನಿರಾಶಾದಾಯಕವಾಗಿದೆ. ಮಾಧ್ಯಮ ಈ ರೀತಿ ದೀರ್ಘ ಕಾಲ ಮುಂದುವರಿಯುವುದು ಸಾಧ್ಯವಿಲ್ಲ. ಇದರಿಂದಾಗಿಯೇ ದೇಶದಲ್ಲಿರುವ ಟೆಲಿವಿಷನ್ ಮಾಧ್ಯಮ ‘ಗೋದಿ ಮೀಡಿಯಾ’ ಆಗಿದೆ. ವೃತ್ತಪತ್ರಿಕೆಗಳು ಕೂಡ ಅಧಿಕಾರಕ್ಕೆ ಅಧೀನವಾಗಿವೆ. ಅವು ಸರಕಾರ ಹೇಳಿದ್ದನ್ನೇ ಹೇಳುತ್ತವೆ. ವಿಶ್ಲೇಷಣೆ ಮತ್ತು ಉತ್ತಮ, ಪ್ರಾಮಾಣಿಕ ವರದಿಗಾರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸ್ವಯಂ ಸೆನ್ಸರ್ ಮಾಡಿಕೊಳ್ಳುತ್ತವೆ. ಅನೇಕ ಪತ್ರಿಕೆಗಳಲ್ಲಿ ಅಂಕಣಕಾರರಿಗೆ ನಿರ್ದಿಷ್ಟ ವಿಷಯದ ಕುರಿತು ಬರೆಯಬಾರದು ಎಂದು ಸೂಚಿಸಲಾಗಿರುತ್ತದೆ.

► ಆದ್ದರಿಂದ, ಆತಂಕ ಮತ್ತು ಚಿಂತೆಗೆ ಕಾರಣಗಳಿವೆ. ಪರಿಸ್ಥಿತಿ ಆಶಾದಾಯಕವಾಗಿಲ್ಲ.

ಹೌದು. ಮಾಧ್ಯಮಗಳು ಏನು ಮಾಡಬಹುದು ಮತ್ತು ಹೇಗಿರಬೇಕು ಎಂಬುದಕ್ಕೆ ಭಾರತೀಯ ಮಾಧ್ಯಮ ಆದರ್ಶ ಮಾದರಿಯಲ್ಲ. ಇದಕ್ಕೆ ಕೆಲವು ವಿನಾಯಿತಿ ಇದೆ. ಆದರೆ, ಹೆಚ್ಚಿನವು ನಿರಾಶಾದಾಯಕವಾಗಿವೆ. ಇದು ಟೆಲಿವಿಷನ್‌ಗೆ ಸಂಬಂಧಿಸಿದಂತೆ ಇನ್ನಷ್ಟು ನಿಜ... ಪ್ರತಿದಿನ ವೀಕ್ಷಿಸಬಹುದಾದ ಒಂದೇ ಒಂದು ಸುದ್ದಿ ಚಾನೆಲ್ ಇಲ್ಲ.... ಎಲ್ಲವೂ ವಿರೋಧಪಕ್ಷಗಳ ಮೇಲೆ ದಾಳಿ ನಡೆಸುತ್ತವೆ. ಅವು ಸರಕಾರವನ್ನು ಟೀಕಿಸುವುದನ್ನು ನೀವು ನೋಡುವುದು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡುತ್ತವೆ. ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವುದೂ ಇಲ್ಲ. ಚುನಾವಣೆ ಸಮಯದಲ್ಲಿ ಅತ್ಯಂತ ಮುಖ್ಯ ಘಟನೆಗಳು ನಡೆಯುತ್ತಿದ್ದರೂ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಮೆರವಣಿಗೆಗಳನ್ನು ಲೈವ್ ಆಗಿ ತೋರಿಸಲಾಯಿತು. ಸುದ್ದಿ ಬುಲೆಟಿನ್ ಪ್ರಸಾರವಾಗುತ್ತಿದ್ದಾಗ ಅದರ ಮಧ್ಯದಲ್ಲಿ ಪ್ರಧಾನಿ ಅಥವಾ ಗೃಹ ಸಚಿವರ ಮೆರವಣಿಗೆಯನ್ನು ಪ್ರಸಾರ ಮಾಡಲಾಯಿತು. ಮೆರವಣಿಗೆಯಲ್ಲಿ ಈಗಾಗಲೇ 3 - 4 ಬಾರಿ ಹೇಳಿದ್ದನ್ನೇ ಹೇಳುತ್ತಿದ್ದಾರೆ ಎನ್ನುವುದು ಗೊತ್ತಿದ್ದರೂ, ಪ್ರಧಾನಿ ಅಥವಾ ಗೃಹ ಸಚಿವರ ಭಾಷಣ ಪ್ರಸಾರ ಮಾಡಲಾಯಿತು.

► ಒಬ್ಬ ಪತ್ರಕರ್ತನಾಗಿ ನೀವು ಮುಖಂಡರನ್ನು ಪ್ರಶ್ನಿಸಲು ಎಂದೂ ಹಿಂಜರಿದವರಲ್ಲ. ಪ್ರಧಾನಿ ಅವರೊಟ್ಟಿಗಿನ ಹಳೆಯ ಸಂದರ್ಶನವೊಂದರಲ್ಲಿ ನೀವು ಹೇಳಿದ, ಈಗ ಅಂತರ್ಜಾಲದಲ್ಲಿ ಮೀಮ್ ಆಗಿರುವ ‘ದೋಸ್ತಿ ಬನೇ ರಹೆ’ ಹೇಳಿಕೆಯಿದೆ. ಕಠಿಣ ಪ್ರಶ್ನೆ ಕೇಳುವ ಧೈರ್ಯ ನಿಮಗೆ ಹೇಗೆ ಬಂದಿತು?

ಇದು ಧೈರ್ಯದ ಪ್ರಶ್ನೆಯಲ್ಲ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ ಎಂಬ ಅರಿವು ಅದು. ಪತ್ರಕರ್ತನಾಗಿ ನನ್ನ ಕೆಲಸ ಪ್ರಶ್ನೆಗಳನ್ನು ಕೇಳುವುದು. ಕೆಲವೊಮ್ಮೆ ಅವು ಕಠಿಣ ಪ್ರಶ್ನೆಗಳಾಗಿರುತ್ತವೆ. ಕೆಲವೊಮ್ಮೆ ನಾನು ಕೇಳಿದ ಪ್ರಶ್ನೆಗೆ ಅತಿಥಿ ಉತ್ತರಿಸಲು ಇಚ್ಛಿಸದೇ ಇರಬಹುದು. ಆದರೆ, ನೀವು ಕೇಳಿದ ಪ್ರಶ್ನೆಯನ್ನು ಶ್ರೋತೃಗಳು ಆಲಿಸುತ್ತಿರುವಾಗ, ಪ್ರಶ್ನೆಗೆ ಉತ್ತರವನ್ನು ಪಡೆಯುವುದು ಅವರಿಗೆ ತೋರಿಸುವ ಸೌಜನ್ಯ. ಇಲ್ಲವಾದರೆ, ನಿಮ್ಮ ಸಂದರ್ಶನವನ್ನು ವೀಕ್ಷಿಸುತ್ತಿರುವವರ ಸಮಯ ವ್ಯರ್ಥವಾಗುತ್ತದೆ ಮತ್ತು ಅವರು ತಮ್ಮಲ್ಲೇ ಹೇಳಿಕೊಳ್ಳುತ್ತಾರೆ- ಈತ ಪ್ರಶ್ನೆಗಳನ್ನು ಕೇಳುತ್ತಾನೆ; ಆದರೆ, ಉತ್ತರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಹಟ ಹಿಡಿಯುವುದಿಲ್ಲ; ಈತನ ಸಂದರ್ಶನ ವೀಕ್ಷಿಸುವುದರಿಂದ ನಮ್ಮ ಸಮಯ ವ್ಯರ್ಥವಾಗುತ್ತದೆ ಅಷ್ಟೇ. ಏಕೆ ನೋಡಬೇಕು? ಆದ್ದರಿಂದ, ಪತ್ರಕರ್ತನಾಗಿ ಪ್ರಶ್ನೆಗಳಿಗೆ ಉತ್ತರ ಪಡೆಯುವುದು ನನ್ನ ಜವಾಬ್ದಾರಿ; ಇದರರ್ಥವೇನೆಂದರೆ, ಕೇಳಿದ ಪ್ರಶ್ನೆಗೆ ಉತ್ತರ ಖಾತ್ರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ, ತೀವ್ರ ಪ್ರಯತ್ನದ ನಂತರವೂ ಉತ್ತರ ಪಡೆಯಲು ಆಗದಿದ್ದರೆ, ವೈಫಲ್ಯವನ್ನು ಬಳಸಿಕೊಂಡೇ ಮುಂದಿನ ಪ್ರಶ್ನೆಗೆ ಉತ್ತರವನ್ನು ಪಡೆಯಬೇಕಾಗುತ್ತದೆ. ‘ನೀವೇಕೆ ಉತ್ತರಿಸುತ್ತಿಲ್ಲ?’, ‘ನಿಮ್ಮನ್ನು ಪೇಚಿಗೆ ಸಿಲುಕಿಸುವಂಥದ್ದು ಇಲ್ಲವೇ ಬೆದರಿಸುವಂಥದ್ದು ಅಥವಾ ನಾಚಿಕೆ ಪಡುವಂಥದ್ದು ಏನಿದೆ ಇದರಲ್ಲಿ?’. ಪಾಶ್ಚಿಮಾತ್ಯ ದೇಶಗಳಲ್ಲಿ ಅಥವಾ ಬೇರೆ ದೇಶಗಳಲ್ಲಿ ಆಂಕರ್‌ಗಳು ಟಿ.ವಿ. ಚಾನೆಲ್‌ಗಳಲ್ಲಿ ಮಾಡುವುದು ಇದನ್ನೇ. ಬಿಬಿಸಿ ಇದನ್ನು ಮಾಡುತ್ತದೆ. ಸಿಎನ್‌ಎನ್ ಮಾಡುತ್ತದೆ. ಅಲ್ ಜಝೀರಾ ಮಾಡುತ್ತದೆ. ಅದನ್ನು ಮಾಡುವುದು ನಮ್ಮ ಕೆಲಸ. ಆದ್ದರಿಂದ, ಅದು ಧೈರ್ಯದ ಪ್ರಶ್ನೆ ಎಂದು ನಾನು ಅಂದುಕೊಳ್ಳುವುದಿಲ್ಲ. ‘‘ನಾನು ಧೈರ್ಯಶಾಲಿಯಾಗಿರಬೇಕು. ದಾಳಿ ನಡೆಸುವ ಅಗತ್ಯವಿದೆ. ಒಂದು ನಿರ್ಧಾರ ತೆಗೆದುಕೊಳ್ಳಬೇಕಿದೆ’’ ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುವುದಿಲ್ಲ. ನಾನು ಮಾಡಲೇಬೇಕಿರುವ ಕೆಲಸ ಮಾಡುತ್ತಿದ್ದೇನೆ.

► ನಿಮ್ಮ ಜೊತೆ ಮಾತನಾಡುವುದು ಸಂತೋಷದ ವಿಷಯವಲ್ಲ ಎಂದು ಹೇಳಿದ್ದ ಜಯಲಲಿತಾ, ನಿಮ್ಮ ಕೈ ಕುಲುಕಲು ನಿರಾಕರಿಸಿದ್ದರು. ನೀವು ಅವರ ಜೊತೆ ನಿಜವಾಗಿಯೂ ಕಠಿಣವಾಗಿ ವರ್ತಿಸಿದ್ದು ನಿಮ್ಮ ಪಾಲಿಗೆ ಗೌರವ ಪದಕದಂತೆ ಕಾಣುತ್ತದೆಯೇ ಮತ್ತು ಅದಕ್ಕಾಗಿಯೇ ಅವರು ಸಂದರ್ಶನದ ಕೊನೆಯಲ್ಲಿ ನಿಮ್ಮ ಬಗ್ಗೆ ನಿರುತ್ಸಾಹ ತಳೆದರು.

ನಾನು ಉತ್ಪ್ರೇಕ್ಷಿಸುವುದಿಲ್ಲ ಮತ್ತು ಅದನ್ನು ನಾನು ಗೌರವದ ಸಂಕೇತ ಎಂದು ಭಾವಿಸುವುದಿಲ್ಲ. ಆದರೆ, ಅವರ ವರ್ತನೆಯಿಂದ ಅವರು ಸಂದರ್ಶನವನ್ನು ಇಷ್ಟಪಡಲಿಲ್ಲ ಎಂಬುದು ವೀಕ್ಷಕರಿಗೆ ಸ್ಪಷ್ಟವಾಯಿತು ಮತ್ತು ಇದೊಂದು ಕಠಿಣ ಮತ್ತು ಉತ್ತಮ ಸಂದರ್ಶನ ಎಂದು ಗೊತ್ತಾಯಿತು. ಒಂದರ್ಥದಲ್ಲಿ ಅವರ ವರ್ತನೆ ನನಗೆ ನೆರವಾಯಿತು; ಏಕೆಂದರೆ, ಯಾವುದೇ ಪತ್ರಕರ್ತ ಇಲ್ಲವೇ ಆಂಕರ್ ವೀಕ್ಷಕರಿಂದ ಪಡೆಯಬೇಕೆಂದುಕೊಂಡಿದ್ದ ಪ್ರತಿಕ್ರಿಯೆಯು ಇದರಿಂದ ಸಿಕ್ಕಿತು. ಇದು ನನಗೆ ಸಿಕ್ಕಿದ ಗೌರವ ಪದಕ ಎನ್ನುವ ಆಲೋಚನೆ ಉತ್ಪ್ರೇಕ್ಷೆ ಆಗುತ್ತದೆ. ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡಂತೆ ಆಗಲಿದೆ.

► ದೇಶದ ಯುವ ಜನತೆಗೆ ನಿಮ್ಮ ಸಲಹೆಯೇನು? ಅವರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಇನ್ನಿತರ ಹಲವು ಸವಾಲುಗಳಿವೆ. ನಮ್ಮ ನಗರಗಳಲ್ಲಿ ಬದುಕುವುದು ಕಷ್ಟವಾಗುತ್ತಿದೆ. ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ತುಂಬ ದುಬಾರಿಯಾಗುತ್ತಿವೆ. 5 ವರ್ಷಗಳ ಹಿಂದೆ ಬೇರೆ ದೇಶಗಳಿಗೆ ವಲಸೆ ಹೋಗುವ ಅವಕಾಶವಿತ್ತು. ಆದರೆ, ಈಗ ಎಲ್ಲ ದೇಶಗಳಲ್ಲೂ ಕದನಾಸಕ್ತಿಯ ದೇಶಭಕ್ತಿ (ಜಿಂಗೋಯಿಸಂ) ವ್ಯಾಪಿಸಿದೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತಿತರ ದೇಶಗಳಲ್ಲೂ ಜನಾಂಗೀಯವಾದವನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಸಲಹೆ ಏನು?

ನಿಮ್ಮ ಪ್ರಶ್ನೆಯ ಒಂದು ಅಂಶಕ್ಕೆ ನನ್ನನ್ನು ಮಿತಿಗೊಳಿಸಿಕೊಳ್ಳುತ್ತಿದ್ದೇನೆ. ನನ್ನ ಪ್ರಕಾರ ಮುಖ್ಯವಾದದ್ದು ಏನೆಂದರೆ, ಅವರ ಕಡೆಗೆ ಬೇರೆಯವರು ಎಸೆಯುವ ಹಲವು ಆಲೋಚನೆಗಳು, ವಿವಿಧ ಸಲಹೆಗಳ ಅಬ್ಬರದಲ್ಲಿ ಅವರು ತೇಲಿಹೋಗುತ್ತಿರುವಾಗ, ನಾನೇನು ಮಾಡಬೇಕು, ನನಗೆ ಮುಖ್ಯವಾದದ್ದೇನು, ನನ್ನನ್ನು ನಾನೇ ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಲು ಮಾಡಬೇಕಿರುವುದೇನು ಎಂದು ಪ್ರಶ್ನೆ ಕೇಳಿಕೊಳ್ಳಬೇಕು ಮತ್ತು ಅದಕ್ಕೆ ಅನುಗುಣವಾಗಿ ಆದ್ಯತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಹರೆಯದಲ್ಲಿರುವಾಗ ಮತ್ತು ಸ್ವಯಂವಿಚಾರ ಸಾಮರ್ಥ್ಯ ಕಡಿಮೆ ಇರುವಾಗ, ಇದು ಬಹಳ ಕಷ್ಟಕರ. ಆದರೆ, ನನ್ನ ಪ್ರಕಾರ ಇದನ್ನು ಮಾಡುವುದು ಅತ್ಯಂತ ಮುಖ್ಯ. ನಾವೆಲ್ಲರೂ ಹರೆಯದಲ್ಲಿದ್ದಾಗ ಇಂಥ ಮುಖ್ಯ ಆಯ್ಕೆಗಳನ್ನು ಮಾಡಿಕೊಳ್ಳಬೇಕಾಗಿ ಬಂದಾಗ ಹಲವು ಸವಾಲುಗಳು ಎದುರಾಗುತ್ತವೆ- ಯಾವ ವಿಶ್ವವಿದ್ಯಾನಿಲಯದಲ್ಲಿ ಮತ್ತು ಯಾವ ವಿಷಯ ಅಧ್ಯಯನ ಮಾಡಬೇಕು ಎಂದು ನಿರ್ಧರಿಸುವಾಗ, ಸಂಗಾತಿಯ ಹುಡುಕಾಟ ಆರಂಭಿಸಿದಾಗ...ಇತ್ಯಾದಿ ಕ್ಷಣಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಂಥ ಕ್ಷಣಗಳಲ್ಲಿ ನೀವು ನಿಮ್ಮೊಳಗೆ ಇಳಿದು, ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ನಿಮ್ಮ ಆತ್ಮದೊಳಗೆ ಆಳವಾಗಿ ಇಳಿದು ಉತ್ತರಗಳನ್ನು ಕಂಡುಕೊಳ್ಳುವುದು ಅತ್ಯಂತ ಮುಖ್ಯವಾಗಲಿದೆ. ಪ್ರಯತ್ನಿಸಿ ಮತ್ತು ನಿಮ್ಮನ್ನು ಅರ್ಥಮಾಡಿಕೊಳ್ಳಿ. ಪ್ರಯತ್ನಿಸಿ ಮತ್ತು ನಿಮಗೆ ನೀವು ನಿಜವಾಗಿರಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಅತ್ಯುತ್ತಮವಾಗಿ ಕೆಲಸ ಮಾಡಲು ಪ್ರಯತ್ನಿಸಿ ಮತ್ತು ಆಗ ಕೆಲಸಗಳು ಆಗುತ್ತವೆ ಎಂಬುದನ್ನು ಕಂಡುಕೊಳ್ಳುವಿರಿ. ನಾವು ನಮ್ಮ ಸುತ್ತ ಕಪಟವನ್ನು ಸೃಷ್ಟಿಸಿಕೊಂಡಾಗ ನಮ್ಮದೇ ಬಿಂಬದಲ್ಲಿ ಸಿಲುಕಿಕೊಳ್ಳುತ್ತೇವೆ; ಆಗ ನೀವಲ್ಲದ ನೀವು ಆಗುತ್ತೀರಿ. ನೀವಲ್ಲದ ನೀವು ಆಗಲು ಕಠಿಣ ಶ್ರಮ ಹಾಕುತ್ತೀರಿ. ಆಗ ಸಮಸ್ಯೆಗೆ ಸಿಲುಕುತ್ತೀರಿ. ಸ್ವಂತಿಕೆ ಬೆಳೆಸಿಕೊಳ್ಳಿ ಮತ್ತು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ- ನಾನು ಯಾರು? ನನಗೇನು ಬೇಕು? ನನಗೆ ಅದು ಏಕೆ ಬೇಕು? ಇದೆಲ್ಲವೂ ನೀವು ಯುವಕರಾಗಿದ್ದಾಗ ಎದುರಾಗುವ ಕ್ಲಿಷ್ಟ ಪ್ರಶ್ನೆಗಳು. ನನ್ನ ವಯಸ್ಸಿನಲ್ಲೂ ಇವು ಕ್ಲಿಷ್ಟ ಪ್ರಶ್ನೆಗಳು. ಆದರೆ, ಇಂಥ ಪ್ರಶ್ನೆಗಳನ್ನು ನಾವು ನಮ್ಮಲ್ಲಿ ನಿರಂತರವಾಗಿ ಕೇಳಿಕೊಳ್ಳುತ್ತಲೇ ಇರಬೇಕಾಗುತ್ತದೆ.

► ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಯುವಜನರು ಪ್ರಾಮಾಣಿಕರಾಗಿರಬೇಕು ಮತ್ತು ತಮಗೆ ತಾವು ನಿಜವಾಗಿರಬೇಕು ಎಂದು ನೀವು ಹೇಳುತ್ತಿದ್ದೀರಿ?

ಖಂಡಿತವಾಗಿಯೂ ಹೌದು.

***

ಸಂದರ್ಶನಕಾರ ಕಾರ್ತಿಕ್ ವೆಂಕಟೇಶ್ ಬೆಂಗಳೂರಿನ ಹವ್ಯಾಸಿ ಲೇಖಕರು. ಮಕ್ಕಳಿಗಾಗಿ"10 Makers of the Constitution' ಹಾಗೂ "10 Indian Languages and How They Came to Be' ಎಂಬ ಕೃತಿಗಳ ಲೇಖಕ.

share
ಕರಣ್ ಥಾಪರ್
ಕರಣ್ ಥಾಪರ್
Next Story
X