ಲವ್ ಜಿಹಾದ್

ಮುಹಮ್ಮದ್ ಕುಳಾಯಿ ಕತೆಗಳಲ್ಲಿ ಮನುಷ್ಯ ಸಂಬಂಧಗಳು ಹಾಲು-ಜೇನಿನಂತೆ ಬೆರೆತಿರುತ್ತವೆ. ಅಲ್ಲಿರುವ ಎಲ್ಲ ‘ಕದನ ಕುತೂಹಲ’ಗಳು ಮನುಷ್ಯನ ಮೇಲಿನ ಭರವಸೆಯೊಂದಿಗೇ ಕೊನೆಯಾಗುತ್ತವೆ. ಕುಚ್ಚಿಕಾಡಿನ ಕಪ್ಪು ಹುಡುಗ, ಕದನ ಕುತೂಹಲ, ನನ್ನ ಇನ್ನಷ್ಟು ಕತೆಗಳು ಇವರ ಪ್ರಕಟಿತ ಕಥಾ ಸಂಕಲನಗಳು. ರಂಗನೋ ಮಲೆಮಂಗನೋ, ಮಿತ್ತಬೈಲ್ ಯಮುನಕ್ಕ ತುಳುವಿನಿಂದ ಕನ್ನಡಕ್ಕೆ ಅನುವಾದಗೊಂಡ ಕಾದಂಬರಿಗಳು. ಕಾಡಂಕಲ್‌ಲ್ ಮನೆ ಕಾದಂಬರಿ. ‘ನನ್ನೊಳಗಿನ ನಾನು’ ಮಾಜಿ ಸಚಿವ ಬಿ. ಎಂ. ಮೊಹಿದೀನ್ ಅವರ ಆತ್ಮಕಥನ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅನುವಾದ ಪ್ರಶಸ್ತಿ, ಚದುರಂಗ ದತ್ತಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಪಿ. ಲಂಕೇಶ್ ಪ್ರಶಸ್ತಿ, ಹೇಮಂತ ಸಾಹಿತ್ಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಇವರ ಬರಹಗಳನ್ನು ಅರಸಿಕೊಂಡು ಬಂದಿವೆ. ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಳವಳಿಗೆ ಇವರ ಕೊಡುಗೆ ಗಮನಾರ್ಹವಾದುದು. ‘ಲವ್ ಜಿಹಾದ್’ ಕತೆಯಲ್ಲಿ ಪ್ರೀತಿಯ ಹಾಡಿನ ಲಯದಲ್ಲಿ ಸರ್ವ ಹೃದಯಗಳು ಒಂದಾಗಿ ಕರಗಿ ಹೋಗುವ ವಿಸ್ಮಯವನ್ನು ಕಾಣಬಹುದು.
ಅಂದು ಬೆಳಗ್ಗೆ ಸುಮಾರು ಏಳು ಗಂಟೆಯ ಸಮಯ. 8-10 ಯುವಕರ ಗುಪೊಂದು ಹೆಗಲಿಗೆ ಶಾಲು ಹಾಕಿಕೊಂಡು, ಬಾವುಟ ಹಿಡಿದು, ಘೋಷಣೆಗಳನ್ನು ಕೂಗುತ್ತಾ ಸಾಗಿ ಬಂತು. ರಸ್ತೆಯಲ್ಲಿದ್ದ ಜನರೆಲ್ಲ ಪಕ್ಕಕ್ಕೆ ಸರಿದು ಆತಂಕಗೊಂಡವರಂತೆ ಅವರನ್ನೇ ನೋಡತೊಡಗಿದರು. ಕಾಮತರು ಅಂಗಡಿಯಿಂದ ಹೊರಗೆ ಬಂದು ಜಗಲಿಯಲ್ಲಿ ಜಂತಿಗೆ ಕೈಕೊಟ್ಟು ನಿಂತು ಗುಂಪನ್ನೇ ನೋಡತೊಡಗಿದರು. ಅಷ್ಟರಲ್ಲಿ ಭಟ್ಟರೂ ಹೋಟೆಲ್‌ನ ಹೊರಗೆ ಬಂದರು.
ಬೆಳಗಿನ 8 ಗಂಟೆ. ಎಂದಿನಂತೆ ಗೃಹಿಣಿಯರು ಅಡುಗೆ ಕೆಲಸಗಳನ್ನು ಬೇಗ ಬೇಗ ಮುಗಿಸತೊಡಗಿದರು. ಮಹಿಳೆಯರು, ಪುರುಷರು ಕೆಲಸಕ್ಕೆ, ಆಫೀಸಿಗೆ ಹೊರಡಲು ತಯಾರಾಗಿ ನಿಂತರು. ವೃದ್ಧರು, ವೃದ್ಧೆಯರು ಫ್ಲಾ ಟಿನ ಬಾಲ್ಕನಿಗಳಲ್ಲಿ, ಮನೆಯ ಜಗಲಿಗಳಲ್ಲಿ ಕುರ್ಚಿ ಹಾಕಿ ಕಾಲಾಡಿಸುತ್ತಾ ಕಿವಿ ನಿಮಿರಿಸಿ ಕುಳಿತರು. ಗಂಟೆ 8:25 ಆಯಿತು. ಎಲ್ಲ ಮನೆಯ,ಫ್ಲಾ ಟ್‌ಗಳ ಕಿಟಕಿಗಳು ತೆರೆದುಕೊಂಡವು. ರಸ್ತೆ, ಮನೆ, ಬೀದಿ ಎಲ್ಲಕಡೆ ನಿಶ್ಯಬ್ದ. ಒಬ್ಬರ ಜೊತೆ ಒಬ್ಬರು ಮಾತನಾಡುತ್ತಾ ಇಲ್ಲ. ಮುಖ-ಮುಖ ನೋಡುತ್ತಾ ಇಲ್ಲ. ಎಲ್ಲರ ಗಮನವೂ ಇನ್ನು ಒಂದು ನಿಮಿಷ, ಆ ಒಂದು ನಿಮಿಷದಲ್ಲಿ ಕೇಳಿ ಬರುವ ಹಾಡಿಗಾಗಿ ಕಾಯತೊಡಗಿತು. ಆಕಾಶದಿಂದ ಮೊಳಗಿತು ಹಾಡು.....
ಬಹಾರೊಂ ಫೂಲ್ ಬರ್ಸಾವೊ ಮೇರಾ ಮೆಹಬೂಬ್ ಆಯಾ ಹೈ
ಬಹಾರೊಂ ಫೂಲ್ ಬರ್ಸಾವೊ
ಮೇರಾ ಮೆಹಬೂಬ್ ಆಯಾ ಹೈ
...................................
...................................
ಒಮ್ಮೆಲೆ ಇಡೀ ಊರು ಜೀವ ಬಂದಂತೆ ಚಲಿಸತೊಡಗಿತು. ಮಹಿಳೆಯರು, ಪುರುಷರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಲೆ ಕೆಳಗೆ ಹಾಕಿ ಹಾಡನ್ನು ಆಸ್ವಾದಿಸುತ್ತಾ ತಮ್ಮದೇ ಲೋಕದಲ್ಲಿ ವಿಹರಿಸುತ್ತಾ ಕನಸಿನಲ್ಲಿ ನಡೆಯುವವರಂತೆ ನಡೆಯತೊಡಗಿದರು. ಅಂಗಡಿ, ಹೋಟೆಲು, ಬಸ್ಸು ನಿಲ್ದಾಣ, ಆಟೊ ಪಾರ್ಕ್‌ಗಳೆಲ್ಲ ಒಮ್ಮೆಲೇ ಜೀವ ತುಂಬಿಕೊಂಡಿತು. ಎಲ್ಲರ ಮುಖದಲ್ಲೂ ಮಂದಹಾಸ, ಖುಷಿ, ಸಂತೋಷ, ಸಂಭ್ರಮ. ಮನೆಯಲ್ಲಿದ್ದ ಗೃಹಿಣಿಯರು ಕಿಟಕಿಯ ಪಕ್ಕ ಗಲ್ಲಕ್ಕೆ ಕೈಕೊಟ್ಟು ನಿಂತು ಮೈಮರೆತರು. ಜಗಲಿ, ಸಿಟೌಟ್‌ಗಳಲ್ಲಿ ಕುಳಿತಿದ್ದ ವೃದ್ಧರು ಹಾಡಿನ ಜೊತೆ ಗುಣುಗುತ್ತಾ ತಮ್ಮ ಯೌವನ ಕಾಲದ ದಿನಗಳನ್ನು ಮೆಲುಕು ಹಾಕುತ್ತಾ ಮನಸ್ಸಿನಲ್ಲೇ ಹಾಡಿಗೆ ತಾಳ ಹಾಕುತ್ತಾ ಪುಳಕಗೊಂಡರು. ಪ್ರತಿದಿನ ಬೆಳಗ್ಗೆ ಆ ಅರ್ಧಗಂಟೆಯ ಹಾಡನ್ನು ಇಡೀ ಊರೇ ಆಲಿಸಿ ಸಂಭ್ರಮಪಡುತ್ತಿದೆ.
* * *
ಅದೊಂದು ಪುಟ್ಟ ನಗರ. ಶಾಲೆ, ಕಾಲೇಜು, ಕೈಗಾರಿಕೆ, ಆಸ್ಪತ್ರೆಗಳು ಹೀಗೆ ಎಲ್ಲ ಮೂಲ ಸೌಕರ್ಯಗಳು ಇರುವ ಆ ನಗರದಲ್ಲಿ ಎಲ್ಲ ಮತ, ಧರ್ಮ, ಜಾತಿಯವರು ಶಾಂತಿ, ಸೌಹಾರ್ದದಿಂದ ಬದುಕುತ್ತಿದ್ದಾರೆ. ಹಾಗೆಂದು ಕೋಮುವಾದಿಗಳು ಇಲ್ಲವೆಂದಲ್ಲ. ಆದರೆ, ಅವರನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಆದರೂ ಆಗೊಮ್ಮೆ, ಈಗೊಮ್ಮೆ ಸಣ್ಣ, ಪುಟ್ಟ ಗಲಭೆ, ಪ್ರತಿಭಟನೆ, ಬಂದ್ ಹೀಗೆ ಶಾಂತಿ ಕೆಡಿಸುವ ಪ್ರಯತ್ನಗಳು ನಡೆದದ್ದೂ ಇವೆ. ನಗರದ ಬಸ್ಸು ನಿಲ್ದಾಣದ ಪಕ್ಕದ ರಸ್ತೆಯಲ್ಲಿರುವ ಒಂದು ಹಳೆಯ ಹಂಚಿನ ಕಟ್ಟಡದಲ್ಲಿ ರಾಮ್‌ಭಟ್ಟರ ಸ್ವಾಗತ ಹೋಟೆಲ್, ಸದಾಶಿವ ಕಾಮತರ ಮಂಗಳೂರು ಸ್ಟೋರ್ ಗಿರಣಿ ಅಂಗಡಿ, ನಾಗೇಶಣ್ಣನ ದರ್ಜಿ ಅಂಗಡಿ, ಡಿಸೋಜಾರ ಕಾರು, ಸ್ಕ್ಕೂಟರ್, ರಿಕ್ಷಾಗಳ ಟಯರ್‌ಗಳಿಗೆ ಪಂಕ್ಚರ್ ಹಾಕುವ ಅಂಗಡಿ, ಸುಲೈಮಾನ್‌ರ ತರಕಾರಿ, ಹಣ್ಣು ಹಂಪಲು ಅಂಗಡಿ ಹಾಗೂ ಕಟ್ಟಡದ ಕೊನೆಯಲ್ಲಿ ಭಾರತ್ ಇಲೆಕ್ಟ್ರಿಕಲ್ ಆಂಡ್ ಸೌಂಡ್ ಸಿಸ್ಟಮ್ ಅಂಗಡಿ. ಈ ಭಾರತ್ ಸೌಂಡ್ ಸಿಸ್ಟಮ್ ಅಂಗಡಿಯಿಂದ ಪ್ರತಿದಿನ ಬೆಳಗ್ಗೆ 8:30ರಿಂದ 9:00 ಗಂಟೆಯವರೆಗೆ ಹಾಡು ಮೊಳಗುತ್ತದೆ. ಜಗಲಿಯಲ್ಲಿ ದೊಡ್ಡ ಎರಡು ಧ್ವನಿವರ್ಧಕ ಪೆಟ್ಟಿಗೆಯಿಂದ ಹೊರಡುವ ಸಂಗೀತಕ್ಕೆ ಇಡೀ ಊರೇ ಸಂಭ್ರಮ ಪಡುತ್ತದೆ. ಈ ಹಾಡುಗಳಿಗಾಗಿ ಇಡೀ ಊರು ಪ್ರತಿದಿನ ಕಾದುಕುಳಿತಿರುತ್ತದೆ. ಪ್ರೀತಿ, ಪ್ರಣಯ, ಪ್ರೇಮ, ವಿರಹದ ಸಿನೆಮಾ ಗೀತೆಗಳು ಮಾತ್ರ ಪ್ರಸಾರವಾಗುತ್ತಿದ್ದುದರಿಂದ ಎಲ್ಲರೂ ಇದನ್ನು ಇಷ್ಟಪಡುತ್ತಿದ್ದರು. ಮುಹಮ್ಮದ್ ರಫಿಯವರ ಹಿಂದಿ ಹಾಡುಗಳು ಹೆಚ್ಚಾಗಿ ಬರುತ್ತಿದ್ದರೂ ಮಧ್ಯೆ ಮಧ್ಯೆ ಕನ್ನಡ ಹಾಡುಗಳೂ ಇರುತ್ತಿದ್ದವು. ಅದೂ ಪ್ರೀತಿ, ಪ್ರೇಮ, ಪ್ರಣಯಕ್ಕೆ ಸಂಬಂಧಿಸಿದ್ದು.
ಈ ಭಾರತ್ ಇಲೆಕ್ಟ್ರಿಕಲ್ ಆಂಡ್ ಸೌಂಡ್ ಸಿಸ್ಟಮ್ ಮದುವೆ, ಸಭೆ-ಸಮಾರಂಭ, ಸಂಗೀತ ರಸಮಂಜರಿ, ದೇವಸ್ಥಾನ, ಮಸೀದಿ, ಚರ್ಚ್, ಗೃಹಪ್ರವೇಶಗಳ ದೀಪಾಲಂಕಾರ ಮುಂತಾದುದಕ್ಕೆ ಹೆಸರುವಾಸಿ. ಈ ಮಳಿಗೆ ಸುಮಾರು ಮೂರು ವರ್ಷಗಳಿಂದ ಆ ಕಟ್ಟಡದಲ್ಲಿದ್ದರೂ ಸಂಗೀತ ಪ್ರಸಾರವಾಗತೊಡಗಿದ್ದು, ಇತ್ತೀಚೆಗೆ ಒಂದು ವರ್ಷದ ಹಿಂದೆ. ಕಬೀರ ಎಂಬ ಯುವಕ ಇದರ ಮಾಲಕ. ಕಡಿಮೆ ಮಾತನಾಡುವ, ಯಾರೊಡನೆಯೂ ಹೆಚ್ಚು ಬೆರೆಯದ ಈ ಯುವಕ ಇತ್ತೀಚೆಗೆ ಅಂದರೆ ಈ ಹಾಡು ಪ್ರಸಾರ ತೊಡಗಿದ ನಂತರ ಕಣ್ಣಿಗೆ ಬೀಳುವುದೇ ಅಪರೂಪವಾಗಿ ಬಿಟ್ಟಿದ್ದ. ಅಂಗಡಿಗೆ ಬಂದು ಒಂದರ್ಧ ಗಂಟೆ ಒಳಗಿನ ಕೋಣೆಯಲ್ಲಿ ಕುಳಿತು ಸಂಗೀತ ಇಟ್ಟು ಯಾರ ಕಣ್ಣಿಗೂ ಕಾಣದೆ ಮತ್ತೆ ಮಾಯವಾಗಿ ಬಿಡುತ್ತಿದ್ದ. ಆ ಮೇಲೆ ಅಂಗಡಿಯಲ್ಲಿರುತ್ತಿದ್ದುದು ಒಬ್ಬ ಹುಡುಗ ಮಾತ್ರ. ಸಂಜೆಯಾಗುತ್ತಲೇ ಅವನೇ ಅಂಗಡಿ ಬಂದ್ ಮಾಡಿ ಹೋಗುತ್ತಿದ್ದ.
* * *
ಅಂದು ಬೆಳಗ್ಗೆ ಸುಮಾರು ಏಳು ಗಂಟೆಯ ಸಮಯ. 8-10 ಯುವಕರ ಗುಪೊಂದು ಹೆಗಲಿಗೆ ಶಾಲು ಹಾಕಿಕೊಂಡು, ಬಾವುಟ ಹಿಡಿದು, ಘೋಷಣೆಗಳನ್ನು ಕೂಗುತ್ತಾ ಸಾಗಿ ಬಂತು. ರಸ್ತೆಯಲ್ಲಿದ್ದ ಜನರೆಲ್ಲ ಪಕ್ಕಕ್ಕೆ ಸರಿದು ಆತಂಕಗೊಂಡವರಂತೆ ಅವರನ್ನೇ ನೋಡತೊಡಗಿದರು. ಕಾಮತರು ಅಂಗಡಿಯಿಂದ ಹೊರಗೆ ಬಂದು ಜಗಲಿಯಲ್ಲಿ ಜಂತಿಗೆ ಕೈಕೊಟ್ಟು ನಿಂತು ಗುಂಪನ್ನೇ ನೋಡತೊಡಗಿದರು. ಅಷ್ಟರಲ್ಲಿ ಭಟ್ಟರೂ ಹೋಟೆಲ್‌ನ ಹೊರಗೆ ಬಂದರು.
‘‘ಏನು ಭಟ್ಟರೇ, ಏನೋ ಅನಾಹುತ ನಡೆಯುವ ಲಕ್ಷಣ ಕಾಣುತ್ತಿದೆಯಲ್ಲ’’ ಕಾಮತರು ಆತಂಕಗೊಂಡವರಂತೆ ಹೇಳಿದರು.
‘‘ಹೌದು ಕಾಮತರೇ, ಬಂದ್-ಗಿಂದ್ ಆಗಲಿಕ್ಕಿಲ್ಲ ಅಲ್ಲವಾ ? ನಾನು ತಿಂಡಿ, ಊಟಕ್ಕೆ ಎಲ್ಲ ವ್ಯವಸ್ಥೆ ಮಾಡಿಟ್ಟಿದ್ದೇನೆ. ಬಂದಾದರೆ ಎಲ್ಲ ಲಾಸ್. ನಿಮಗೆ ಹಾಗಲ್ಲ, ಅಂಗಡಿ ಮುಚ್ಚಿ ಹೋಗುವುದು. ವ್ಯಾಪಾರ ಇಲ್ಲಾಂತ ಅಷ್ಟೇ, ನಷ್ಟ ಆಗಲಿಕ್ಕಿಲ್ಲ ’’ ಭಟ್ಟರು ಹೇಳಿದರು
‘‘ಎಂತ ಸಾವು ಮಾರಾಯ ಇವರದ್ದು, ಒಂದು ದಿನ ವ್ಯಾಪಾರ ಇಲ್ಲಾ ಅಂದ್ರೆ ಕೆಲಸದವರಿಗೆ ಸಂಬಳ, ಬಾಡಿಗೆ ಎಲ್ಲ ಕೊಡಬೇಡವಾ, ಅದು ಲಾಸ್ ಅಲ್ಲವಾ ’’
ಅಷ್ಟರಲ್ಲಿ ಸೋಜಾ ಬಂದು ಅವರ ಜೊತೆ ಸೇರಿಕೊಂಡರು.
‘‘ಸೋಜಾರೇ, ನೀವು ಟಯರ್‌ಗಳನ್ನು ಹೊರಗಿಡಬೇಡಿ. ಸ್ವಲ್ಪ ಹೊತ್ತು ನೋಡುವ, ಬಂದ್ ಆದರೆ ತಿಳಿಯುತ್ತದೆ. ಸುಮ್ಮನೆ ಮತ್ತೊಮ್ಮೆ ಒಳಗೆ ಇಡುವ ಕೆಲಸ ಯಾಕೆ?’’ ಎಂದರು ಕಾಮತರು.
‘‘ನೀವೆಂತ ಕಾಮತರೇ, ಹೆದರಿಸುವುದಾ ನನ್ನನ್ನು. ನಾನು ಯಾರಿಗೂ ಹೆದರುವುದಿಲ್ಲ’’ ಎಂದರು ಸೋಜಾ ಅಸಮಾಧಾನದಿಂದ.
‘‘ನೀನು ಬೆಚ್ಚ ಆಗುವುದು ಎಂತ ಮಾರಾಯಾ, ನಿನ್ನ ಒಳ್ಳೆಯದಕ್ಕೆ ಹೇಳಿದ್ದು. ಹೋದ ಸಲ ಬಂದ್ ಆದಾಗ ನೀನು ಇದೇ ರೀತಿ ಹಠ ಹಿಡಿದು ಬಂದ್ ಮಾಡಲು ನಿರಾಕರಿಸಿದಾಗ ನಿನ್ನ ಅಂಗಡಿಯ ಟಯರ್‌ಗಳನ್ನು ರಸ್ತೆಯಲ್ಲಿ ಗುಡ್ಡೆ ಹಾಕಿ ಅವರು ಬೆಂಕಿ ಹಚ್ಚಿದ್ದು ನಿನಗೆ ಮರೆತು ಹೋಯಿತಾ? ಸ್ವಲ್ಪ ಜಾಗ್ರತೆಯಾಗಿರು ಎಂದು ಹೇಳಿದೆ ಅಷ್ಟೇ’’
‘‘ಮತ್ತೆ ಎಂತ ಮಾಡುವುದು ಕಾಮತರೇ, ಈ ಬಂದ್ ಹೇಳುವಾಗಲೇ ಪಿತ್ತ ನೆತ್ತಿಗೇರುತ್ತದೆ. ಒಂದು ದಿನ ಬಂದ್ ಮಾಡಿದರೆ ಖರ್ಚಿಗೆ ಎಷ್ಟು ಕಷ್ಟ ಆಗುತ್ತದೆ ಗೊತ್ತಲ್ಲವಾ? ಬೇರೇನು ಬೇಡ, ಮನೆಗೆ ಎರಡು ಪಾವು ಅಕ್ಕಿಯಾದರೂ ಕೊಂಡು ಹೋಗಬೇಕಲ್ಲ’’ ಸೋಜಾ ಬೇಸರ ವ್ಯಕ್ತಪಡಿಸಿದರು.
‘‘ಸುಲೈಮಾನ್, ನೀನು ಎಷ್ಟು ಬೇಕೋ ಅಷ್ಟು ಮಾತ್ರ ತರಕಾರಿ, ಹಣ್ಣು-ಹಂಪಲು ಹೊರಗಿಡು. ಬಾಕಿದ್ದೆಲ್ಲ ಒಳಗೇ ಇರಲಿ. ಬಂದ್ ಆದರೆ ಮತ್ತೆ ಒಳಗೆ ಇಡುವುದು ಕಷ್ಟ ’’ ಭಟ್ಟರು ಸುಲೈಮಾನ್‌ನ ಅಂಗಡಿಯ ಹತ್ತಿರ ಬಂದು ಹೇಳಿದರು.
* * *
ರಸ್ತೆಯುದ್ದಕ್ಕೂ ಘೋಷಣೆ ಕೂಗುತ್ತಾ ಹೋದ ಯುವಕರ ತಂಡ ಬಂದದ್ದು ಪೊಲೀಸ್ ಠಾಣೆಗೆ. ಠಾಣೆಯ ಹೊರಗೆ ನಿಂತು ಒಮ್ಮೆ ಜೋರಾಗಿ ಘೋಷಣೆ ಕೂಗಿ ಸುಮ್ಮನಾದ ಗುಂಪು ತಮ್ಮ ಬಾವುಟಗಳನ್ನು ಅಲ್ಲೇ ಜಗಲಿಯಲ್ಲಿಟ್ಟು ಒಳಗೆ ಪ್ರವೇಶಿಸಿತು. ಪೊಲೀಸರು ಒಮ್ಮೆಲೆ ಜಾಗೃತರಾದರು.
‘‘ಯಾರು? ಏನು ಬೇಕು ನಿಮಗೆ ?’’ ಒಬ್ಬ ಪೊಲೀಸ್ ಪೇದೆ ಕೇಳಿದ.
‘‘ಇನ್‌ಸ್ಪೆಕ್ಟರನ್ನು ಕಾಣಬೇಕು’’ ಗುಂಪಿನ ನಾಯಕ ಎತ್ತರದ ಧ್ವನಿಯಲ್ಲಿ ಹೇಳಿದ.
‘‘ಸ್ವಲ್ಪ ಕುಳಿತುಕೊಳ್ಳಿ, ಕರೆಯುತ್ತೇನೆ’’ ಹೇಳಿ ಪೇದೆ ಒಳಗೆ ಹೋದ. ಮತ್ತೆ ಹೊರಗೆ ಬಂದು, ‘‘ಇನ್‌ಸ್ಪೆಕ್ಟರ್ ಕರೆಯುತ್ತಾರೆ ಇಬ್ಬರು ಮಾತ್ರ ಹೋಗಿ’’ ಎಂದ.
‘‘ನಾವು ಇಬ್ಬರು ಮಾತ್ರ ಹೋಗುವುದಿಲ್ಲ, ಎಲ್ಲರೂ ಒಟ್ಟಿಗೆ ಹೋಗುವುದು’’ ನಾಯಕ ಒರಟಾಗಿ ಹೇಳಿದ.
‘‘ಸ್ವಲ್ಪ ಇರಿ ಈಗ ಬಂದೆೆ’’ ಎಂದು ಪೇದೆ ಮತ್ತೆ ಒಳಗೆ ಹೋಗಿ ಬಂದು ಎಲ್ಲರನ್ನೂ ಒಳಗೆ ಕಳುಹಿಸಿದ.
ಇನ್‌ಸ್ಪೆಕ್ಟರ್ ಮುಂದಿದ್ದ ಎರಡು ಕುರ್ಚಿಗಳಲ್ಲಿ ಇಬ್ಬರು ಕುಳಿತರು, ಮಿಕ್ಕವರು ನಿಂತೇ ಇದ್ದರು.
‘‘ಏನು ವಿಷಯ?’’ ಇನ್‌ಸ್ಪೆಕ್ಟರ್ ಗಂಭೀರವಾಗಿ ಕೇಳಿದರು.
‘‘ಸಾರ್, ಇಲ್ಲಿ ಲವ್ ಜಿಹಾದ್ ನಡೆಯುತ್ತಿದೆ’’ ನಾಯಕ ಹೇಳಿದ.
‘‘ಏನು ? ಲವ್ ಜಿಹಾದ್? ಎಲ್ಲಿ ? ’’
‘‘ಇಲ್ಲಿಯೇ ಸಾರ್. ನಮ್ಮ ನಗರದಲ್ಲೇ. ಕೆಲವು ಬ್ಯಾರಿಗಳು ನಮ್ಮ ಹೆಣ್ಣು ಮಕ್ಕಳನ್ನು ಲವ್ ಜಿಹಾದ್‌ಗೆ ಕೆಡವುತ್ತಿದ್ದಾರೆ’’
‘‘ಏನು ಹೇಳುತ್ತಿದ್ದೀರಿ ನೀವು? ನನಗೆ ಅರ್ಥ ಆಗುತ್ತಿಲ್ಲ, ಸರಿಯಾಗಿ ಬಿಡಿಸಿ ಹೇಳಿ?’’ ‘‘ಓ ಅಲ್ಲಿ ಭಟ್ಟರ ಹೋಟೆಲ್ ಹತ್ತಿರ ಒಂದು ಅಂಗಡಿ ಇದೆ. ನಮ್ಮ ಹೆಣ್ಣು ಮಕ್ಕಳು ಬೆಳಗ್ಗೆ ಶಾಲೆ-ಕಾಲೇಜು-ಕೆಲಸಕ್ಕೆ ಹೋಗುವಾಗ ಅಂಗಡಿಯವ ದಿನಾ ಪ್ರೀತಿ, ಪ್ರೇಮ, ಪ್ರಣಯ ಗೀತೆಗಳನ್ನು ಹಾಕಿ ನಮ್ಮ ಹೆಣ್ಣು ಮಕ್ಕಳಿಗೆ ಬಲೆ ಬೀಸುತ್ತಿದ್ದಾನೆ. ಇದೊಂದು ದೊಡ್ಡ ಜಾಲ. ಈಗಾಗಲೇ ನಮ್ಮ ಹಿಂದೂ ಹೆಣ್ಣು ಮಕ್ಕಳು ಅವನ ಬಲೆಗೆ ಬಿದ್ದಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ’’
‘‘ಏನು ಹೇಳುತ್ತಿದ್ದೀರಿ ನೀವು? ಈ ಹಾಡುಗಳಿಗೂ ಲವ್ ಜಿಹಾದ್‌ಗೂ ಏನು ಸಂಬಂಧ? ’’
‘‘ಸಂಬಂಧ ಇದೆ. ನೀವೊಮ್ಮೆ ಆತ ಹಾಡು ಹಾಕಿದಾಗ ರಸ್ತೆಗೆ ಬಂದು ನೋಡಿ. ನಮ್ಮ ಹೆಣ್ಣು ಮಕ್ಕಳು ಸನ್ಮೋಹಕ್ಕೆ ಒಳಗಾದವರಂತೆ, ಮೈ ಮರೆತವರಂತೆ ನಡೆಯುತ್ತಿರುತ್ತಾರೆ. ಅವನು ಹಾಕುವ ಹಾಡುಗಳನ್ನು ಒಮ್ಮೆ ಸರೀ ಗಮನಿಸಿ ಆಗ ನಿಮಗೇ ಗೊತ್ತಾಗುತ್ತದೆ ’’
‘‘ಅದಿರಲಿ, ಈಗ ನಾವೇನು ಮಾಡಬೇಕು? ’’
‘‘ಅವನು ಹಾಡು ಹಾಕುವುದನ್ನು ನಿಲ್ಲಿಸಬೇಕು. ನೀವು ನಿಲ್ಲಿಸದಿದ್ದರೆ ನಾವೇ ನಿಲ್ಲಿಸುತ್ತೇವೆ. ಅವನ ಅಂಗಡಿಗೆ ಬೆಂಕಿ ಹಚ್ಚುತ್ತೇವೆ. ನಮ್ಮ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ.’’
‘‘ಸರಿ, ಆತನನ್ನು ಕರೆಸಿ ಮಾತನಾಡುತ್ತೇನೆ. ನೀವು ಗಲಾಟೆ ಮಾಡಲಿಕ್ಕೆ ಹೋಗಬೇಡಿ. ಒಂದು ಕಂಪ್ಲೇಂಟ್ ಬರೆದು ಕೊಟ್ಟು ಹೋಗಿ’’ ಅಷ್ಟರಲ್ಲಿ ಗಂಟೆ 8:30 ಆಯಿತು, ಹಾಡು ಮೊಳಗಿತು.
ಸೇವಂತಿಯೇ, ಸೇವಂತಿಯೇ ನನ್ನಾಸೆ ಅಲೆಯಲ್ಲಿ ಘಂ ಅಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀ ಗಂಧಕ್ಕಿಂತ ಸೌಗಂಧ ನೀನು ಜನ್ಮಾಜನ್ಮದ ಪ್ರೀತಿಗೆ, ನನ್ನ ಮೆಚ್ಚಿನ ಹಾಡಿದು
....................................
....................................
ಇನ್‌ಸ್ಪೆಕ್ಟರ್ ಮಾತನಾಡಲಿಲ್ಲ, ಸುಮ್ಮನೆ ಹಾಡು ಕೇಳುತ್ತಾ ಕುಳಿತು ಬಿಟ್ಟರು. ಗುಂಪಿನ ಯುವಕರೆಲ್ಲರೂ ವೌನವಾಗಿ ಹಾಡನ್ನು ಆಸ್ವಾದಿಸುತ್ತಿರುವಂತೆ ಅವರ ಪಾದಗಳು ಹಾಡಿಗೆ ತಾಳ ಹಾಕುತ್ತಿರುವುದನ್ನು ಕಂಡು ಇನ್‌ಸ್ಪೆಕ್ಟರ್ ಮನಸ್ಸಲ್ಲೆ ನಕ್ಕರು.
ಹಾಡು ನಿಂತಿತು.
‘‘ನೋಡಿ, ನೋಡಿ. ನಮ್ಮ ಹೆಣ್ಣು ಮಕ್ಕಳು ಶಾಲೆ, ಕಾಲೇಜು, ಕೆಲಸಕ್ಕೆ ಹೋಗುವ ಸಮಯ ಇದು. ಇದೇ ಸಮಯ ನೋಡಿ ಆತ ಇಂತಹ ಪ್ರೇಮ ಗೀತೆಗಳನ್ನು ಹಾಕುತ್ತಾನೆ. ಮೋಡಿ ಮಾಡಿ ಲವ್ ಜಿಹಾದ್ ಮಾಡುತ್ತಾನೆ’’
‘‘ಈಗ ನೀವು ಹೋಗಿ, ಶಾಂತಿ ಕಾಪಾಡಿ, ಎಲ್ಲ ಸರಿ ಮಾಡುವ, ನಾನು ಆತನನ್ನು ಕರೆದು ಮಾತನಾಡುತ್ತೇನೆ’’ ಇನ್‌ಸ್ಪೆಕ್ಟರ್ ಹೇಳಿದರು.
ಮತ್ತೆ ಹಾಡು..
ಪ್ರೇಮ ಚಂದ್ರಮಾ, ಕೈಗೆ ಸಿಗುವುದೇ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ, ಹೃದಯಾನ ಬಿಚ್ಚಿಕೊಡುವೆ
ಈ ಭೂಮಿ ಇರುವರೆಗೂ, ನಾ ಪ್ರೇಮಿಯಾಗಿರುವೆ
.............................................
.............................................
‘‘ನೋಡಿ ಇನ್‌ಸ್ಪೆಕ್ಟರ್, ಇದನ್ನು ಇನ್ನು ನಮಗೆ ಸಹಿಸಲು ಸಾಧ್ಯವಿಲ್ಲ. 48 ಗಂಟೆಯೊಳಗೆ ಇದನ್ನು ನೀವು ನಿಲ್ಲಿಸಬೇಕು. ನಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ಇಲ್ಲಾಂದ್ರೆ ನಾವು ಇಡೀ ನಗರಕ್ಕೆ ಬೆಂಕಿ ಹಚ್ಚುತ್ತೇವೆ. ನಮ್ಮ ಧರ್ಮ ರಕ್ಷಣೆಗಾಗಿ ನಾವು ಜೈಲಿಗೆ ಹೋಗಲೂ ಸಿದ್ಧ, ಪ್ರಾಣ ಕೊಡಲಿಕ್ಕೂ ಸಿದ್ಧ’’ ಮುಖಂಡ ಕೋಪದಿಂದ ಎದ್ದು ನಿಂತು ಇನ್‌ಸ್ಪ್ಪೆಕ್ಟರ್‌ರಿಗೆ ಬೆರಳು ತೋರಿಸಿ ಎಚ್ಚರಿಕೆ ಕೊಟ್ಟು ಬಿರುಗಾಳಿಯಂತೆ ನಡೆದ. ಮಿಕ್ಕವರು ಅವನ ಹಿಂದೆ ಬಾವುಟ ಹಿಡಿದು ಹೊರಟರು.
* * *
ಮರುದಿನ ಕಬೀರನ ಅಂಗಡಿ ತೆರೆಯಲಿಲ್ಲ. ಹಾಡು ಮೊಳಗಲಿಲ್ಲ. ಇಂದು ಯಾವ ಹಾಡು ಬರಬಹುದು ಎಂದು ಕಿವಿಯಾಣಿಸಿ ಕಾಯುತ್ತಾ ಕುಳಿತ ಎಲ್ಲರಿಗೂ ನಿರಾಸೆ. ಇಡೀ ನಗರವೇ ನಿಶ್ಯಬ್ದವಾದಂತೆ. ರಸ್ತೆಯಲ್ಲಿ ನಡೆಯುತ್ತಿರುವ ಎಲ್ಲರೂ ಸಪ್ಪೆ ಮೋರೆ ಹಾಕಿಕೊಂಡು ಸಾಗುವಾಗ ಒಮ್ಮೆ ಕತ್ತೆತ್ತಿ ಅಂಗಡಿಯತ್ತ ನೋಡಿದರೆ ಅಂಗಡಿ ಬಂದ್!
‘‘ಛೇ, ಇವರಿಗೆ ಏನಾಯಿತು. ಅಂಗಡಿ ಯಾಕೆ ಬಂದ್?’’ ಮನಸ್ಸಿನಲ್ಲೇ ಯೋಚಿಸುತ್ತಾ ನಡೆದರು. ಬಾಲ್ಕನಿಗಳಲ್ಲಿ, ಮನೆಗಳ ಜಗಲಿಗಳಲ್ಲಿ, ಅಡುಗೆ ಮನೆಗಳಲ್ಲಿ ಹಾಡಿಗಾಗಿ ಕಾಯುತ್ತಾ ಕುಳಿತಿದ್ದ ವೃದ್ಧರು, ಮಹಿಳೆಯರಿಗೆಲ್ಲ ಏನೋ ಕಳೆದುಕೊಂಡಂತೆ, ಬೆಳಗಿನ ಉಪಾಹಾರವೂ ಸರಿಯಾಗಿ ಸೇರಲಿಲ್ಲ. ಬೇಸರದಿಂದ ಮುಖಕೊಟ್ಟು ಮಾತನಾಡಲು ಸಾಧ್ಯವಾಗಲಿಲ್ಲ.
ಸಮಯವಾದರೂ ಹಾಡು ಕೇಳದ್ದು ಕಂಡು ಗಲ್ಲೆಯಿಂದ ಎದ್ದು ಹೋಟೆಲ್‌ನ ಹೊರಗೆ ಬಂದ ಭಟ್ಟರು ಕಾಮತರ ಅಂಗಡಿ ಜಗಲಿ ಹತ್ತಿ,
‘‘ಏನು ಕಾಮತರೇ, ಇಂದು ಕಬೀರ ಅಂಗಡಿ ತೆರೆಯಲಿಲ್ಲ, ಏನಾದರೂ ಅನಾರೋಗ್ಯ ಇರಬಹುದೇ? ಅವನು ಹೀಗೆ ಯಾವತ್ತೂ ಬಂದ್ ಮಾಡಿದವನಲ್ಲವಲ್ಲ ! ’’ ಎಂದರು.
‘‘ಹೌದು ಭಟ್ಟರೇ, ಏನೋ ಸಂಭವಿಸಿರಬೇಕು’’
‘‘ಬಹಳ ಬೋರಾಗ್ತಿದೆ ಕಾಮತರೇ, ಉತ್ಸಾಹವೇ ಇಲ್ಲ, ಮನಸ್ಸು ಜಡ ಹಿಡಿದಂತಾಗಿದೆ’’
ಅಷ್ಟರಲ್ಲಿ ಸೋಜಾ, ಸುಲೈಮಾನ್, ನಾಗೇಶಣ್ಣ ಬಂದು ಸೇರಿಕೊಂಡರು.
‘‘ಯಾಕೆ ಕಬೀರ ಅಂಗಡಿ ತೆರೆಯಲಿಲ್ಲ? ’’ ಸೋಜಾ ಕೇಳಿದರು.
‘‘ಗೊತ್ತಿಲ್ಲ, ಅದೇ ವಿಷಯ ನಾವು ಮಾತನಾಡುತ್ತಿರುವುದು’’ ಕಾಮತರು ಹೇಳಿದರು.
‘‘ಹಾಡಿಲ್ಲದೆ ಮನಸ್ಸಿಗೆ ಒಂಥರಾ ಮಂಕು ಕವಿದಂತಾಗಿದೆ, ಕೆಲಸ ಮಾಡಲೇ ಮನಸ್ಸಿಲ್ಲ’’ ಸುಲೈಮಾನ್ ಹೇಳಿದ.
ಸಪ್ಪೆ ಮೋರೆ ಹಾಕಿ ಎಲ್ಲರೂ ತಮ್ಮ ತಮ್ಮ ಅಂಗಡಿಯತ್ತ ನಡೆದರು.
ಹೀಗೆ ನಾಲ್ಕು ದಿನಗಳು ಕಳೆದವು. ಅಂಗಡಿ ತೆರೆಯಲೇ ಇಲ್ಲ, ಹಾಡು ಮೊಳಗಲೇ ಇಲ್ಲ. ದಿನಾ ಹಾಡು ಕೇಳಿ ಅಭ್ಯಾಸ ಆದವರಿಗೆಲ್ಲ ಕುತೂಹಲ, ಚಿಂತೆ, ಬೇಸರ. ಯಾಕೆ ಹಾಡು ನಿಂತಿದೆ. ಅಂಗಡಿ ಬಾಗಿಲು ಯಾಕೆ ತೆರೆಯಲಿಲ್ಲ. ಅಂಗಡಿ ಮಾಲಕನಿಗೆ ಏನಾದರೂ ಸಂಭವಿಸಿರಬಹುದೇ? ಈಗ ಎಲ್ಲ ಕಡೆಯೂ ಇದೇ ಚರ್ಚೆ. ಆದರೆ, ಯಾರಲ್ಲೂ ಉತ್ತರವಿಲ್ಲ. ಯಾರಿಗೂ ಗೊತ್ತ್ತೂ ಇಲ್ಲ.
ಅಂದು ಬೆಳಗ್ಗೆ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಬಂದು ಕಾಮತರ ಅಂಗಡಿಯ ಮೆಟ್ಟಿಲು ಹತ್ತಿದರು. ನಮಸ್ಕಾರ ಹೇಳಿ, ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತರು. ಎಂದೂ ಹೀಗೆ ಬಂದು ಕುಳಿತುಕೊಳ್ಳದ ಮುಖ್ಯೋಪಾಧ್ಯಾಯರನ್ನು ಕಂಡು ಕಾಮತರಿಗೆ ಕುತೂಹಲ. ಅವರು ಕನ್ನಡಕದ ಎಡೆಯಿಂದಲೇ ಅನುಮಾನದಿಂದ ಉಪಾಧ್ಯಾಯರನ್ನು ದಿಟ್ಟಿಸಿ ನೋಡಿ
‘‘ಏನು ಮೇಸ್ಟ್ರೇ, ಏನು ವಿಶೇಷ ?’’ ಕೇಳಿದರು.
‘‘ಏನಿಲ್ಲ ಕಾಮತರೇ, 3-4 ದಿನದಿಂದ ಪಕ್ಕದ ಅಂಗಡಿ ಏಕೆ ಬಂದ್?’’
‘‘ಗೊತ್ತಿಲ್ಲ ಮೇಸ್ಟ್ರೇ’’
‘‘ಗೊತ್ತಿಲ್ಲ! ಪಕ್ಕದ ಅಂಗಡಿಯವ, ದಿನಾ ನೋಡುವವ, 3-4 ದಿನಗಳಿಂದ ಅಂಗಡಿ ತೆರೆಯಲಿಲ್ಲ, ಯಾಕೆ ತೆರೆಯಲಿಲ್ಲ ಎಂದು ನಿಮಗೆ ಗೊತ್ತಿಲ್ಲ ಎಂದರೆ ಏನರ್ಥ? ’’
‘‘ನಮಗೆ ಹೇಗೆ ಗೊತ್ತಾಗುವುದು ಮೇಸ್ಟ್ರೇ. ಹಲವಾರು ಜನ ಬಂದು ಇಲ್ಲಿರುವ ಎಲ್ಲ ಅಂಗಡಿಯವರಲ್ಲಿ ಅವರ ಬಗ್ಗೆ ವಿಚಾರಿಸಿದ್ರು, ನಮಗೂ ಈ ಬಗ್ಗೆ ತಿಳಿದುಕೊಳ್ಳಬೇಕೂಂತ ಇದೆ. ಆದರೆ, ಯಾರಲ್ಲಿ ಕೇಳುವುದು? ಅವನ ಮನೆಗೆ ಹೋಗುವ ಎಂದರೆ ಅದು ನಮಗಾರಿಗೂ ಗೊತ್ತಿಲ್ಲ’’
‘‘ಎಂಥ ಹೇಳ್ತೀರಿ ಕಾಮತರೇ, ಒಂದೇ ಕಟ್ಟಡದಲ್ಲಿ, ಅಕ್ಕ-ಪಕ್ಕದಲ್ಲಿ, ಒಂದೇ ಮನೆಯವರಂತೆ ವ್ಯಾಪಾರ ಮಾಡ್ತಾ ಇದ್ದೀರಿ. ಅವನ ಬಗ್ಗೆ ಗೊತ್ತಿಲ್ಲ ಎಂದರೆ ಏನರ್ಥ? ಇದೆಲ್ಲ ಸರಿಯಲ್ಲ್ಲ’’
‘‘ಹಾಗಲ್ಲ ಮೇಸ್ಟ್ರೇ, ನಾವೆಲ್ಲ ಒಂದೇ ಕಟ್ಟಡದಲ್ಲಿದ್ದರೂ, ಆತ ಯಾರೊಡನೆಯೂ ಬೆರೆಯುತ್ತಿರಲಿಲ್ಲ, ಬೆಳಗ್ಗೆ ಒಂದರ್ಧ ಗಂಟೆ ಅಂಗಡಿಯಲ್ಲಿರುತ್ತಿದ್ದ, ಅದೂ ಒಳಗಿನ ಕೋಣೆಯಲ್ಲಿ. ಆಮೇಲೆ ಹೋದರೆ ಬರುವುದು ಮರುದಿನ ಬೆಳಗ್ಗೆ. ಅಂಗಡಿಯಲ್ಲಿ ಒಬ್ಬ ಹುಡುಗ ಇರುತ್ತಿದ್ದ. ಈಗ ಆ ಹುಡುಗನೂ ಇಲ್ಲ. ಏನೋ ಸಂಭವಿಸಿರಬೇಕೂಂತ ನನಗೆ ಡೌಟು’’
ಮೇಸ್ಟ್ರು ಒಂದೆರಡು ಕ್ಷಣ ಸುಮ್ಮನೆ ಯೋಚಿಸುತ್ತಾ ಗಂಭೀರವಾಗಿ ಕುಳಿತು,
‘‘ನಾವೊಮ್ಮೆ ಅವರ ಮನೆಗೆ ಹೋಗಿ ಬರುವನಾ?’’ ಎಂದು ಕೇಳಿದರು.
ಹಾಂ ! ಕಾಮತರು ಬೆಚ್ಚಿ ಬಿದ್ದವರಂತೆ ನೆಟ್ಟಗೆ ಕುಳಿತು ಬಿಟ್ಟರು. ಅವರು ಮೇಸ್ಟ್ರಿಂದ ಈ ಮಾತನ್ನು ನಿರೀಕ್ಷಿಸಿರಲಿಲ್ಲ.
‘‘ಪ್ರತಿ ದಿನ ಬೆಳಗಿನ ಆ ಅರ್ಧಗಂಟೆಯ ಹಾಡುಂಟಲ್ಲ ಕಾಮತರೇ, ಆತ ಎಂಥ ಹೂ ಮನಸ್ಸಿನವಾಂತ ನಿಮಗೆ ಅರ್ಥ ಆಗಿದೆಯೋ ಗೊತ್ತಿಲ್ಲ. ಆದರೆ, ನನಗೆ ಅರ್ಥ ಆಗಿದೆ. ಒಳ್ಳೆಯ ಹುಡುಗ ಆತ. ಆತನಿಗೆ ಏನೋ ಕಷ್ಟ ಬಂದಿರಬೇಕು. ನಮ್ಮನ್ನು ಸಂತೋಷವಾಗಿಟ್ಟಿದ್ದ ಆತನ ಕಷ್ಟಕ್ಕೆ ನಾವು ಸ್ಪಂದಿಸಬೇಕು. ಮತ್ತೆ ಆತನ ಹಾಡು ಈ ಊರಿನಲ್ಲಿ ಮೊಳಗಬೇಕು. ಏನು ಹೇಳ್ತಿರಿ ಕಾಮತರೇ?’’
‘‘ಆಯಿತು... ಆಯಿತು ..... ಹೋಗುವಾ..ಆದರೆ ಮನೆ ಗೊತ್ತು ಬೇಕಲ್ಲಾ ಮೇಸ್ಟ್ರೇ’’
‘‘ನಾನೂ ಒಂದಿಬ್ಬರಲ್ಲಿ ಕೇಳಿದೆ. ಮಸೀದಿಯ ಹತ್ತಿರವಂತೆ. ಅಲ್ಲಿ ಹೋಗಿ ವಿಚಾರಿಸಿದ್ರೆ ಗೊತ್ತಾಗಬಹುದು’’ ಎಂದರು ಮೇಸ್ಟ್ರು.
ಅಷ್ಟರಲ್ಲಿ ಭಟ್ಟರು, ಸೋಜಾ, ಸುಲೈಮಾನ್, ನಾಗೇಶಣ್ಣ ಮತ್ತು 2-3 ಜನ ಸೇರಿದರು.
‘‘ಸರಿ, ಎಲ್ಲರೂ ಒಟ್ಟಿಗೆ ಹೋಗೋಣ’’ ಎಂದರು ಮೇಸ್ಟ್ರು. * * *
ಮೇಸ್ಟ್ರ ತಂಡ ಕಬೀರನ ಮನೆಯ ಕದ ತಟ್ಟಿದಾಗ ವೃದ್ಧರೊಬ್ಬರು ಬಾಗಿಲು ತೆರೆದರು.
‘‘ಇದು ಕಬೀರನ ಮನೆಯಲ್ಲವೇ?’’ ಮೇಸ್ಟ್ರು ಕೇಳಿದರು
‘‘ಹೌದು’’
‘‘ನೀವು’’
‘‘ನಾನು ಅವನ ತಂದೆ’’
‘‘ಕಬೀರ್ ಇದ್ದಾರಾ? ’’
‘‘ಇಲ್ಲ, ಅವನನ್ನು ಬಿಟ್ಟು ಬಿಡಿ ಸ್ವಾಮಿ, ಅವನು ಈಗಾಗಲೇ ನೊಂದಿದ್ದಾನೆ. ಅವನು ಯಾವ ತಪ್ಪೂ ಮಾಡಿಲ್ಲ. ಇನ್ನು ಆತ ಖಂಡಿತಾ ಹಾಡು ಇಡುವುದಿಲ್ಲ. ಅದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ. ಅವನನ್ನು ಕ್ಷಮಿಸಿ ಸ್ವಾಮಿ..’’ ವೃದ್ಧ ಕೈ ಮುಗಿದು ದೈನ್ಯತೆಯಿಂದ ನಿಂತಿದ್ದರು.
‘‘ಇಲ್ಲ ನಾವು ಅದಕ್ಕೆ ಬಂದದ್ದಲ್ಲ. ಕೆಲವು ದಿನಗಳಿಂದ ಅಂಗಡಿ ಬಾಗಿಲು ತೆರೆದಿಲ್ಲ. ಅವರು ಆರೋಗ್ಯವಾಗಿದ್ದಾರಾ ಎಂದು ತಿಳಿದುಕೊಂಡು ಹೋಗುವಾಂತ ಬಂದದ್ದು, ಬೇರೇನಿಲ್ಲ. ಇವರೆಲ್ಲ ಅದೇ ಕಟ್ಟಡದಲ್ಲಿರುವ ಸಹ ವ್ಯಾಪಾರಿಗಳು, ನೀವು ಹೆದರಬೇಡಿ’’
‘‘ಒಳಗೆ ಬನ್ನಿ ’’ ವೃದ್ಧರು ಅವರನ್ನು ಒಳಗೆ ಕರೆದರು.
ಅವರನ್ನು ಕುಳ್ಳಿರಿಸಿ ಒಳಗೆ ಹೋದವರು ಟಿ-ಬಿಸ್ಕಟ್‌ಗಳನ್ನು ತಂದು ಅವರ ಮುಂದಿಟ್ಟರು.
‘‘ಇದೆಲ್ಲ ಯಾಕೆ ಸಾಹೇಬರೇ, ನಾವು ನಿಮ್ಮ ಮಗ ಯಾಕೆ ಅಂಗಡಿ ತೆರೆಯಲಿಲ್ಲ ಎಂದು ತಿಳಿದುಕೊಂಡು ಹೋಗುವಂತ ಬಂದಿದ್ದು ಅಷ್ಟೇ’’
‘‘ನಿಮಗೆ ವಿಷಯ ಗೊತ್ತಿಲ್ಲವಾ? ’’
‘‘ಎಂಥ ವಿಷಯ? ’’
‘‘ಮೊನ್ನೆ ಯಾರೋ ಕೆಲವು ಯುವಕರು ಪೊಲೀಸ್ ಠಾಣೆಗೆ ಹೋಗಿ ಮಗ ದಿನಾ ಬೆಳಗ್ಗೆ ಅಂಗಡಿಯಲ್ಲಿ ಹಾಡು ಇಟ್ಟು ಹಿಂದೂ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿ ಲವ್ ಜಿಹಾದ್ ಮಾಡುತ್ತಿದ್ದಾನೇಂತ ಕಂಪ್ಲೇಂಟ್ ಕೊಟ್ಟಿದ್ದಾರಂತೆ. ಇನ್ನು ಹಾಡು ಹಾಕಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರಂತೆ. ಹಾಡು ಇಟ್ಟರೆ ಅಂಗಡಿಗೆ ಬೆಂಕಿ ಹಚ್ಚುತ್ತೇವೆ, ಬಂದ್ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರಂತೆ. ಅದಕ್ಕೆ ಇನ್‌ಸ್ಪೆಕ್ಟರ್ ಮಗನನ್ನು ಠಾಣೆಗೆ ಕರೆಸಿ ಹಾಡು ಇಡಬಾರದೆಂದು ಹೇಳಿದ್ದಾರಂತೆ. ಸುಮ್ಮನೆ ಗಲಾಟೆ ಆದರೆ ಕಷ್ಟ ಅಲ್ಲವಾ ಅಂತ ಸೂಚನೆ ನೀಡಿದ್ದಾರಂತೆ. ಅದರಿಂದ ಅವನಿಗೆ ತುಂಬಾ ನೋವಾಗಿದೆ, ಅವಮಾನವಾಗಿದೆ. ಅಂದಿನಿಂದ ಅವನು ಅಂಗಡಿಯನ್ನೇ ತೆರೆಯಲಿಲ್ಲ’’ ಎಂದರು.
‘‘ಓ..., ಮೊನ್ನೆ ಘೋಷಣೆ ಕೂಗುತ್ತಾ ಮೆರವಣಿಗೆ ಹೋಗಿದ್ದು ಇದಕ್ಕೇನಾ? ಏನೋ ಷಡ್ಯಂತ್ರ ಇದೇಂತಾ ನಮಗೆ ಅವತ್ತೇ ಅನಿಸಿತ್ತು ’’ ಎಂದು ಕಾಮತರು ಹೇಳಿದಾಗ ಎಲ್ಲರೂ ಮುಖ ಮುಖ ನೋಡಿಕೊಂಡರು.
‘‘ನನ್ನ ಮಗ ಅಂಥವನಲ್ಲ ಇವರೇ. ಅವನು ಈಗಾಗಲೇ ಬಹಳಷ್ಟು ನೊಂದಿದ್ದಾನೆ. ಆ ನೋವು ಮರೆಯಲೆಂದೇ ದಿನಾ ಹಾಡುಗಳನ್ನು ಇಡುತ್ತಿದ್ದಾನೆ. ದಯವಿಟ್ಟು ಯಾರು ಏನೇ ಹೇಳಿದರೂ ನೀವು ತಪ್ಪು ತಿಳಿದುಕೊಳ್ಳಬಾರದು’’ ವೃದ್ಧ ಅಂಗಲಾಚುವಂತೆ ಹೇಳಿದರು.
‘‘ಏನು ಅಂತಹ ನೋವು’’ ಭಟ್ಟರು ಕೇಳಿದರು.
‘‘ಅದೊಂದು ದೊಡ್ಡ ಕಥೆ ಸ್ವಾಮಿ’’ ಎಂದು ವೃದ್ಧರು ತಲೆ ಕೆಳಗೆ ಹಾಕಿ ನೆಲ ನೋಡುತ್ತಾ ಹೇಳುವುದೋ ಬೇಡವೋ ಎಂಬಂತೆ ಸುಮ್ಮನೆ ಕುಳಿತು ಬಿಟ್ಟರು.
‘‘ಏನು ಕಥೆ, ನಮ್ಮಡನೆ ಹೇಳುವಂಥದ್ದಾಗಿದ್ದರೆ ಹೇಳಿ’’ ಕಾಮತರು ಹೇಳಿದರು.
‘‘ಎರಡು ವರ್ಷದ ಹಿಂದೆ ಅವನ ಮದುವೆಯಾಯಿತು. ಹೆಣ್ಣನ್ನು ಅವನೇ ಇಷ್ಟಪಟ್ಟು ಇಬ್ಬರೂ ಪ್ರೀತಿಸಿ ಮದುವೆಯಾದದ್ದು. ಬಹಳ ಒಳ್ಳೆಯ ಹುಡುಗಿ. ಪ್ರೀತಿ ಎಂದರೆ ಏನೆಂದು ಅವಳಲ್ಲಿ ಕಲಿಯಬೇಕು ಅಂತಹ ಗುಣ. ಅವಳಿಗೆ ಹಾಡೆಂದರೆ ಪ್ರಾಣ. ಇವನಿಗೂ ಇಷ್ಟ. ಅವಳಿಗೆ ಒಳ್ಳೆಯ ಶಾರೀರ ಇತ್ತು. ಇಂಪಾಗಿ ಹಾಡುತ್ತಿದ್ದಳು. ಅಡುಗೆ ಮಾಡುವಾಗಲೂ, ನಡೆಯುವಾಗಲೂ, ನಿಂತಾಗಲೂ, ಕುಳಿತಾಗಲೂ ಹಾಡು ಗುಣು ಗುಣಿಸುತ್ತಾ ಇದ್ದಳು. ಅವಳೆಂದರೆ ಹಾಡು, ಹಾಡೆಂದರೆ ಅವಳು ಹಾಗಿದ್ದಳು. ಅವಳ ಹಾಡಿನಿಂದ ನಾವೆಲ್ಲರೂ ಖುಷಿಯಾಗಿದ್ದೆವು. ಒಮ್ಮಾಮ್ಮೆ ನಮ್ಮನ್ನು ಖುಷಿಪಡಿಸಲಿಕ್ಕಾಗಿಯೇ ಅವಳು ಹಾಡುತ್ತಿದ್ದಳು. ಗಂಡನನ್ನು ಮುಂದೆ ಕೂರಿಸಿ ಪ್ರೇಮ, ಪ್ರಣಯ ಗೀತೆಗಳನ್ನು ಹಾಡಿ ನಗುತ್ತಿದ್ದಳು. ಅವಳಿಗೆ ಹೆಚ್ಚಾಗಿ ಮುಹಮ್ಮದ್ ರಫಿಯವರ ಹಾಡು ಇಷ್ಟ. ಕನ್ನಡ ಹಾಡುಗಳನ್ನೂ ಹಾಡುತ್ತಿದ್ದಳು. ಅವಳಿಂದಾಗಿ ಈ ಮನೆ ಸ್ವರ್ಗವಾಗಿತ್ತು. ನಮಗೇನಾದರೂ ಬೇಸರವಾದರೆ, ‘ತುಂಬಾ ಬೋರಾಗುತ್ತ್ತಾ ಇದೆ. ಒಂದು ಹಾಡು ಹೇಳಮ್ಮಾ’ ಎಂದರೆ ಸಾಕು, ನಮ್ಮ ಮುಂದೆ ಕುಳಿತು ಹಾಡುತ್ತಿದ್ದಳು. ಅಂಥ ಸೊಸೆ ಅವಳು. ಈ ಮನೆಯ ಬೆಳಕಾಗಿದ್ದವಳು. ಅನಾರೋಗ್ಯ ಬಂದು ಎರಡೇ ತಿಂಗಳು ಮಲಗಿದ್ದು, ಇದ್ದಕ್ಕಿದ್ದಂತೆ ಎದ್ದು ಹೋಗಿ ಬಿಟ್ಟಳು ಸ್ವಾಮಿ. ಹಾಸಿಗೆ ಹಿಡಿದಿದ್ದಾಗಲೂ ಮೊಬೈಲ್‌ನಲ್ಲಿ ಹಾಡು ಕೇಳುತ್ತಾ ತನ್ನ ನೋವನ್ನು ಮರೆಯುತ್ತಿದ್ದಳು. ಅಂಥ ನಮ್ಮ ಮುದ್ದು ಕಂದ ನಮ್ಮೆಲ್ಲರನ್ನು ಬಿಟ್ಟು ಹೋದಳು ಸ್ವಾಮಿ.. ’’ ಅವರು ಎರಡು ಕೈಗಳಿಂದಲೂ ಮುಖ ಮುಚ್ಚಿ ಅಳತೊಡಗಿದರು.
ಅಷ್ಟರಲ್ಲಿ ಒಳಗಿಂದ ಬಂದ ಅವರ ಪತ್ನಿ ‘‘ಅವನು ದಿನಾ ಅಂಗಡಿಯಲ್ಲಿ ಇಡುವುದು ಹಾಡಲ್ಲ ಅಣ್ಣಂದಿರೇ, ಅದು ಅವನ ಪ್ರಾರ್ಥನೆ. ತನ್ನ ಪ್ರೀತಿಯ ಪತ್ನಿಗೆ ಅವನು ಮಾಡುವ ಪ್ರಾರ್ಥನೆ’’ ಎಂದು ಸೆರಗಿನಿಂದ ಮುಖ ಮುಚ್ಚಿ ಅಳತೊಡಗಿದರು. ವೃದ್ಧ ತನ್ನ ಮಡದಿಯ ಹೆಗಲು ಹಿಡಿದು ಸಮಾಧಾನ ಪಡಿಸಿದರು. ಅವರ ಮಾತುಗಳನ್ನು ಕೇಳಿದ ಎಲ್ಲರ ಕಣ್ಣುಗಳಲ್ಲೂ ನೀರಾಡಿತು.
‘‘ಈಗ ಎಲ್ಲಿದ್ದಾನೆ ನಿಮ್ಮ ಮಗ?’’ ಮೇಸ್ಟ್ರು ಕೇಳಿದರು.
‘‘ಹೊರಗೆ ಹೋಗಿದ್ದಾನೆ’’
‘‘ಈಗ ಹೇಗಿದ್ದಾನೆ? ’’
‘‘ಮಾತಿಲ್ಲ-ಕತೆಯಿಲ್ಲ, ಯಾವಾಗಲೂ ಅವಳ ಗುಂಗಿನಲ್ಲೇ ಹಾಡು ಕೇಳುತ್ತಾ ಇರುತ್ತಾನೆ ’’
‘‘ಮೇಸ್ಟ್ರು ಎದ್ದು ನಿಂತರು. ನೀವೇನೂ ಹೆದರಬೇಡಿ. ನಿಮ್ಮ ಜೊತೆ ನಾವಿದ್ದೇವೆ ’’ಎಂದು ಮನೆಯ ಹೊರಗೆ ಬಂದರು. ಅವರ ಹಿಂದೆ ಎಲ್ಲರೂ ನಡೆಯತೊಡಗಿದರು. ಎಲ್ಲಿಗೆ ಎಂದು ಕೇಳುವ ಮೂಡು ಯಾರಲ್ಲೂ ಇರಲಿಲ್ಲ. ಮೇಸ್ಟ್ರು ಸೀದಾ ಹೋದದ್ದು ಪೊಲೀಸ್ ಠಾಣೆಗೆ. ಇನ್‌ಸ್ಪೆಕ್ಟರ್ ಮುಂದೆ ಕುಳಿತ ಮೇಸ್ಟ್ರು ಕೇಳಿದರು.
‘‘ಇಲ್ಲಿ ಒಂದು ಅಂಗಡಿಯಲ್ಲಿ ದಿನಾ ಹಾಡು ಇಡುತ್ತಿದ್ದರಲ್ಲ, ಅದನ್ನು ನೀವು ಇಡಬಾರದು ಎಂದು ಹೇಳಿದ್ದೀರಂತೆ, ಹೌದಾ ಸರ್?’’
‘‘ಹೌದು’’
‘‘ಯಾಕೆ ? ’’
‘‘ಯುವಕರ ಒಂದು ಗುಂಪು ಬಂದು ಹಾಡು ನಿಲ್ಲಿಸಬೇಕು. ಇಲ್ಲಾಂದ್ರೆ ಆ ಅಂಗಡಿ ಪುಡಿ ಮಾಡುತ್ತೇವೆ. ಇಡೀ ಊರಿಗೆ ಬೆಂಕಿ ಹಚ್ಚುತ್ತೇವೆ ಎಂದರು. ಸುಮ್ಮನೆ ಗಲಾಟೆ ಯಾಕೇಂತ ಹಾಡು ಇಡಬಾರದು ಹೇಳಿದೆ’’
‘‘ಸಾರ್, ನಮಗೆ ಈಗ ಹಾಡು ಬೇಕು. ನಮಗೆ ಮಾತ್ರ ಅಲ್ಲ, ಇಡೀ ಊರಿಗೆ ಹಾಡು ಬೇಕು ಎಂತ ಮಾಡ್ತೀರಿ’’ ಮೇಸ್ಟ್ರು ಕೇಳಿದರು.
‘‘ನನಗೂ ಬೆಳಗಿನ ಆ ಹಾಡು ತುಂಬಾ ಇಷ್ಟ. ನಾನೂ ಅದನ್ನು ಆಸ್ವಾದಿಸುತ್ತಿದ್ದೆ. ಆದರೆ ಸುಮ್ಮನೆ ಗಲಾಟೆ ಯಾಕೆ ಮೇಸ್ಟ್ರೇ? ಆ ಯುವಕರ ಬಗ್ಗೆ ನಿಮಗೆ ಗೊತ್ತಲ್ಲ. ಅವರಿಗೆ ಬುದ್ಧಿ, ವಿವೇಕ ಯಾವುದು ಇಲ್ಲ ’’ ಇನ್‌ಸ್ಪೆಕ್ಟರ್ ಹೇಳಿದರು.
‘‘ಇಡೀ ಊರೇ ನಿಮ್ಮಡನೆ ಇರುವಾಗ ಆ 8-10 ಯುವಕರಿಗೆ ನೀವೇಕೆ ಹೆದರುವುದು. ನೀವು ಈ ರೀತಿ ಇರುವುದರಿಂದಲೇ ಅವರಿಗೆ ಕೊಬ್ಬು ಬಂದಿರುವುದು. ನಮಗೆ ಹಾಡು ಬೇಕೇ ಬೇಕು. ಇಲ್ಲಾಂದ್ರೆ ಇಡೀ ಊರೇ ಬಂದು ಠಾಣೆಯ ಮುಂದೆ ಧರಣಿ ಮಾಡುತ್ತೆ’’ ಮೇಸ್ಟ್ರಿಗೆ ಕೋಪ ಬಂದಿತ್ತು.
‘‘ನಾಳೆ ಬೆಳಗ್ಗೆ ನಾನು ಅವರನ್ನು ಬರ ಹೇಳುತ್ತೇನೆ. ನೀವು ಬನ್ನಿ ನಾವು ಒಟ್ಟಿಗೆ ಕುಳಿತು ಮಾತನಾಡೋಣ, ಅವರಿಗೆ ಬುದ್ಧಿ ಹೇಳೋಣ. ಸುಮ್ಮನೆ ಗಲಾಟೆ ಯಾಕೆ?’’ ಇನ್‌ಸ್ಪೆಕ್ಟರ್ ಸಮಾಧಾನ ಹೇಳಿದರು.
‘‘ಅಂಗಡಿಯ ಆ ಕಬೀರರನ್ನೂ ಕರೆಸಿ’’ ಎಂದ ಮೇಸ್ಟ್ರು ಎದ್ದು ನಿಂತರು.
‘‘ಸರಿ, ನಾಳೆ ಬೆಳಗ್ಗೆ ಎಂಟು ಗಂಟೆಗೆ ನಾವು ಇಲ್ಲಿರುತ್ತೇವೆ. ನಮಗೆ ಹಾಡು ಬೇಕು. ತೀರ್ಮಾನವಾಗದೆ ಹಿಂದಿರುಗುವುದಿಲ್ಲ’’ ಎಂದು ಮೇಸ್ಟ್ರು ಹೊರಟರು.
ವಿಷಯ ಕಾಡ್ಗಿಚ್ಚಿನಂತೆ ಊರೆಲ್ಲ ಹರಡಿತು. ಬೆದರಿಸಿ ಹಾಡು ನಿಲ್ಲಿಸಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಾಗಿತ್ತು. ನಾಳೆ ಬೆಳಗ್ಗೆ ಪೊಲೀಸ್ ಠಾಣೆಯಲ್ಲಿ ಸಭೆ ನಡೆಯಲಿದೆಯೆಂದು ಪ್ರಚಾರವಾಯಿತು. ಊರೆಲ್ಲ ಅಂದು ಇದೇ ಚರ್ಚೆಯ ವಿಷಯವಾಗಿತ್ತು.
ಮರುದಿನ ಏಳು ಗಂಟೆಗೇ ಮೇಸ್ಟ್ರು ಹೊರಟು ಬಂದು ಕಾಮತರ ಅಂಗಡಿ ತಲುಪಿದ್ದರು. ಕಾಮತರು, ಭಟ್ಟರು, ಸೋಜಾ, ಸುಲೈಮಾನ್, ನಾಗೇಶಣ್ಣ ಅದಾಗಲೇ ತಯಾರಾಗಿ ನಿಂತಿದ್ದರು. ಎಲ್ಲರೂ ಹೊರಟರು.
ಮೇಸ್ಟ್ರು ತಂಡದೊಂದಿಗೆ ಠಾಣೆಗೆ ಬಂದಾಗ ನೂರಕ್ಕೂ ಅಧಿಕ ಮಂದಿ ಠಾಣೆಯ ಹೊರಗೆ ಸೇರಿದ್ದು ಕಂಡು ಅವರಿಗೆ ಆಶ್ಚರ್ಯವಾಯಿತು. ಗಾಬರಿಯೂ ಆಯಿತು.
‘‘ಯಾಕೆ ಇಲ್ಲಿ ಸೇರಿದ್ದೀರಿ’’ ಮೇಸ್ಟ್ರು ಕೇಳಿದರು.
‘‘ನಮಗೆ ಹಾಡುಬೇಕು’’ ಒಂದಿಬ್ಬರು ಜೋರು ಧ್ವನಿಯಲ್ಲಿ ಹೇಳಿದರು.
‘‘ಆಯಿತು, ಯಾವುದೇ ಕಾರಣಕ್ಕೂ ನೀವು ಗಲಾಟೆ ಮಾಡಬಾರದು. ಕೋಮು ವಿಷವನ್ನು ಮಟ್ಟ ಹಾಕಬೇಕಾದರೆ, ಅವರು ತಲೆ ಎತ್ತದಂತೆ ಮಾಡಬೇಕಾದರೆ ನಾವು ಒಗಟ್ಟಿನಲ್ಲಿರಬೇಕು.’’ ಎಂದು ಮೇಸ್ಟ್ರು ಹೇಳುತ್ತಿದ್ದಂತೆಯೇ ರಸ್ತೆಯಿಂದ ದೂರದಲ್ಲಿ ಘೋಷಣೆ ಕೇಳಲಾರಂಭಿಸಿತು. ಕಾಮತರು ತಲೆ ಎತ್ತಿ ನೋಡಿದರು. ಅದೇ ಯುವಕರ ಗುಂಪು, ಬಾವುಟ ಹಿಡಿದುಕೊಂಡು, ಹೆಗಲಿಗೆ ಶಾಲು ಹಾಕಿಕೊಂಡು ಬರುತ್ತಿತ್ತು. ಠಾಣೆ ಸಮೀಪಿಸುತ್ತಿದಂತೆಯೇ ಸೇರಿದ್ದ ಜನರನ್ನು ಕಂಡು ಅವರ ಘೋಷಣೆ ನಿಂತಿತು. ಅವರು ಬಾವುಟವನ್ನು ಮಡಚಿ ಕಂಕುಳಲ್ಲಿಟ್ಟುಕೊಂಡು ಒಳಗೆ ಹೋದರು. ಅವರ ಹಿಂದೆ ಮೇಸ್ಟ್ರ ತಂಡ ಹೋಯಿತು. ಅದಾಗಲೇ ಕಬೀರ ಬಂದು ಅಲ್ಲಿ ಕುಳಿತಿದ್ದ.
ಮೇಸ್ಟ್ರು, ಇನ್‌ಸ್ಪೆಕ್ಟರ್, ಕಾಮತರು, ಭಟ್ಟರು ಎಲ್ಲರೂ ಸೇರಿ ಆ ಯುವಕರಿಗೆ ಬುದ್ಧಿ ಹೇಳಿದರು. ಆ ಹಾಡುಗಳಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಕಬೀರನ ಕಥೆಯನ್ನು ಅವರಿಗೆ ಮನದಟ್ಟಾಗುವಂತೆ ವಿವರಿಸಿದರು. ಮೊದ ಮೊದಲು ಆ ಯುವಕರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಮತ್ತೆ ಇನ್‌ಸ್ಪೆಕ್ಟರ್ ‘‘ಇಡೀ ಊರೇ ಹಾಡಿನ ಪರವಾಗಿರುವಾಗ ನೀವು ಹೀಗೆ ಹಠ ಮಾಡಬಾರದು’’ ಎಂದು ಗಟ್ಟಿ ಧ್ವನಿಯಲ್ಲಿ ಖಡಕ್ಕಾಗಿ ಹೇಳಿದಾಗ ಸುಮ್ಮನಾದರು.
ಮಾತುಕತೆ ಮುಗಿಯಿತು. ಮೇಸ್ಟ್ರು ಹೊರ ಬಂದರು. ಅವರ ಜೊತೆ ಎಲ್ಲರೂ ಇದ್ದರು. ಹೊರಗೆ ಸೇರಿದ್ದ ಜನರೆಲ್ಲ ಅವರ ಸುತ್ತ ಸೇರಿದರು. ‘‘ಎಲ್ಲ ಸರಿಯಾಯಿತು. ನಾಳೆ ಬೆಳಗ್ಗೆಯಿಂದ ಹಾಡು ಪ್ರಾರಂಭವಾಗುತ್ತದೆ. ಆ ಯುವಕರಿಗೆ ಬದ್ಧಿ ಹೇಳಿದ್ದೇವೆ. ಅವರೂ ಒಪ್ಪಿದ್ದಾರೆ. ನೀವೆಲ್ಲ ಇನ್ನು ಹೋಗಿ’’ ಎಂದು ಮೇಸ್ಟ್ರು ಹೇಳಿದಾಗ ಎಲ್ಲರೂ ‘ಹೋ...’ ಎಂದು ಕೂಗಿದರು. ಎಲ್ಲರ ಮುಖದಲ್ಲೂ ಮಂದಹಾಸ. ಎಲ್ಲರೂ ಚದುರಿದರು. ನಾಳೆಯಿಂದ ಮತ್ತೆ ಹಾಡು ಪ್ರಾರಂಭವಾಗುತ್ತದೆ ಎಂಬ ವಿಷಯ ತಿಳಿದು ಊರಿಡೀ ಸಂಭ್ರಮಿಸಿತು.
ಮರುದಿನ ತಮ್ಮ ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ಜನ ಹಾಡಿಗಾಗಿ ಕಾತರದಿಂದ ಕಾಯತೊಡಗಿದರು. ಗಂಟೆ 8:30-31-32- ಇಲ್ಲ, ಒಂಭತ್ತು ಗಂಟೆಯಾದರೂ ಹಾಡು ಕೇಳಲೇ ಇಲ್ಲ. ಎಲ್ಲರಲ್ಲೂ ನಿರಾಸೆ, ಬೇಸರ, ಯಾಕೆ ಹೀಗಾಯಿತು. ಇನ್ನು ಹಾಡು ಮೊಳಗುವುದೇ ಇಲ್ಲವೇನೋ ? ಜನ ರಸ್ತೆಯಲ್ಲಿ ನಡೆಯುವಾಗ ಅಂಗಡಿಯತ್ತ ನೋಡಿದರು. ಅದು ತೆರೆದಿರಲಿಲ್ಲ.
ಮೇಸ್ಟ್ರು ಲಗುಬಗೆಯಿಂದ ಕಾಮತರ ಅಂಗಡಿಗೆ ಬಂದರು.
‘‘ಏನು ಕಾಮತರೇ ಕಬೀರ ಅಂಗಡಿ ತೆರೆಯಲಿಲ್ಲವೇ? ’’
‘‘ಇಲ್ಲ’’
‘‘ಯಾಕೆ ಬರಲಿಲ್ಲ? ’’
‘‘ಗೊತ್ತಿಲ್ಲ’’
‘‘ಮತ್ತೆ ಆ ಯುವಕರು ಏನಾದರೂ ಬೆದರಿಕೆ ಹಾಕಿರಬಹುದೇ?’’ ಮೇಸ್ಟ್ರು ಸಂಶಯ ವ್ಯಕ್ತಪಡಿಸಿದರು.
‘‘ಯಾವುದನ್ನೂ ಹೇಳಲಿಕ್ಕಾಗುವುದಿಲ್ಲ ಮೇಸ್ಟ್ರೇ’’
‘‘ಸರಿ, ನಾವು ಇವತ್ತೊಂದು ದಿನ ನೋಡುವ. ನಾಳೆಯೂ ಅಂಗಡಿ ತೆರೆಯದಿದ್ದರೆ ಅವರ ಮನೆಗೆ ಹೋಗಿ ಬರುವ. ಆಗಬಹುದಲ್ಲವೇ. ಅವರು ಹೆದರಿರಬೇಕು ಪಾಪ ’’
‘‘ಸರಿ ಮೇಸ್ಟ್ರೇ, ನಾವು ಬರುತ್ತೇವೆ. ಖಂಡಿತ ಬರುತ್ತೇವೆ’’ ಕಾಮತರು ಹೇಳಿದರು.
ಮೇಸ್ಟ್ರು ತಲೆ ಕೆಳಗೆ ಹಾಕಿ ಯೋಚಿಸುತ್ತಾ ನಡೆದರು.
ಮಾರನೇ ದಿನ ಬೆಳಗ್ಗೆ ಜನ ಕಿವಿಯಾಣಿಸಿ ಹಾಡಿಗಾಗಿ ಕಾಯತೊಡಗಿದರು. ಅವರಿಗೆ ಇಂದೂ ಹಾಡು ಮೊಳಗುತ್ತದೆ ಎಂಬ ವಿಶ್ವಾಸವಿರಲಿಲ್ಲ. ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಮಾತಿಲ್ಲ, ಕತೆಯಿಲ್ಲ. ಮನಸ್ಸು ಭಾರವಾಗಿತ್ತು. ಯಾವುದರಲ್ಲೂ ಉತ್ಸಾಹವೇ ಇರಲಿಲ್ಲ. ಗಂಟೆ 8:25 ಆಯಿತು. ಮಹಿಳೆಯರು ಕಿಟಕಿಗೆ ಮುಖವಿಟ್ಟು ಕುಳಿತರು. ವೃದ್ಧರು ಜಗಲಿಗೆ ಬಂದರು. ಕೆಲಸ, ಶಾಲೆ-ಕಾಲೇಜಿಗೆ ಹೋಗುವವರು ಬ್ಯಾಗ್ ಹೆಗಲಿಗೇರಿಸಿ ನಿಂತರು. 8:30 ಆಯಿತು.
ಮುಜೆ ಇಶ್ಕ್ ಹೇ ತುಜಿ ಸೇ
ಮೆರಿ ಜಾನ್‌ಎ ಝಿಂದಗಾನಿ
ತೆರಿ ಪಾಸ್ ಮೇರಾ ದಿಲ್ ಹೇ
ಮೆರಾ ಪ್ಯಾರ್ ಕಿ ನಿಶಾನಿ
ಮೆರಿ ಝಿಂದಗೀ ಮೆ ತೂ ಹೈ
ಮೆರಿ ಪಾಸ್ ಕ್ಯಾ ಕಮೀ ಹೈ
ಜಿಸೆ ಘಂ ನಹೀ ಕಿಝಾಕಾ ವೊ ಬಹಾರ್ ತೂನೆ ದೀ ಹೈ
....................................
....................................
ಹೋ..
ದೇವರೇ..
ಜನರ ಬಾಯಿಯಿಂದ ಅವರಿಗೆ ಅರಿವಿಲ್ಲದಂತೆಯೇ ಉದ್ಗಾರ ಹೊರಬಿತ್ತು. ಆಕಾಶದಿಂದ ಮಂಜು ಸುರಿದಂತೆ, ತಂಪು ಗಾಳಿ ಬೀಸಿ ಬಂದು ಕಚಗುಳಿ ಇಟ್ಟಂತೆ ಹಾಡು ಮೊಳಗಿತು. ಸಂತೋಷ, ಸಂಭ್ರಮ, ಖುಷಿಯಿಂದ ಎಲ್ಲರೂ ರೋಮಾಂಚನಗೊಂಡರು. ರಸ್ತೆಯಲ್ಲಿ ಜನರು ಹಾಡಿಗೆ ಮನಸ್ಸಿನಲ್ಲಿಯೇ ಕುಣಿಯುತ್ತಾ ಹೆಜ್ಜೆ ಹಾಕತೊಡಗಿದರು. ಅಡುಗೆ ಕೋಣೆಯಲ್ಲಿ ಗೃಹಿಣಿಯರು ಕಣ್ಣೀರೊರೆಸಿಕೊಂಡರು. ವೃದ್ಧರು ಪುಳಕಿತರಾಗಿ ತಾಳ ಹಾಕತೊಡಗಿದರು.
ಮನೆಯಿಂದ ಹೊರಟ ಮೇಸ್ಟ್ರ ಕಾಲುಗಳು ಸಂಭ್ರಮದಿಂದ ಹೆಜ್ಜೆ ತಪ್ಪ ತೊಡಗಿತ್ತು. ಅವರು ಹಾಡನ್ನು ಎದೆ ತುಂಬಿಕೊಳ್ಳುತ್ತಾ ಆಕಾಶದತ್ತ ನೋಡಿದರು. ಅಲ್ಲಿ ಮೋಡಗಳು ಹಿಂಡು ಹಿಂಡಾಗಿ ನರ್ತಿಸುತ್ತಿದ್ದವು.
‘‘ಅಯ್ಯೋ ದೇವರೇ.. ಹಾಡಿಗೆ ಎಷ್ಟೊಂದು ಶಕ್ತಿ ಇದೆ. ಎಷ್ಟೊಂದು ಅರ್ಥವಿದೆ. ಎಷ್ಟೊಂದು ಸಾಂತ್ವನ ಇದೆ. ದೇವರೇ ಕಬೀರರ ಈ ಪ್ರಾರ್ಥನೆ ಈಡೇರಿಸು. ಅವರು ಒಳ್ಳೆಯವರು..’’ ಅವರ ಹೃದಯ ಭಾರವಾಗಿ ಕಣ್ಣಿಂದ ನೀರು ಹನಿಯತೊಡಗಿತು.







