Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
  4. ಮುನಿತಿಮ್ಮಕ್ಕನ ವೈಚಾರಿಕ ಗೂಂಡಾಗಿರಿ

ಮುನಿತಿಮ್ಮಕ್ಕನ ವೈಚಾರಿಕ ಗೂಂಡಾಗಿರಿ

ಗಂಗಪ್ಪ ತಳವಾರ್ಗಂಗಪ್ಪ ತಳವಾರ್26 Dec 2025 4:11 PM IST
share
ಮುನಿತಿಮ್ಮಕ್ಕನ ವೈಚಾರಿಕ ಗೂಂಡಾಗಿರಿ

ಮುನಿತಿಮ್ಮಕ್ಕ ತುಂಬಾ ಖರಾಮತ್ ಹೆಂಗಸಾಗಿದ್ದಳು. ಸ್ವಲ್ಪ ಒರಟಾಗಿ ಮಾತಾಡಿದರೂ ಆಕೆಯ ಮಾತುಗಳಲ್ಲಿ ಖಚಿತತೆ ಇರುತ್ತಿತ್ತು. ಎಂಥಾ ಕಷ್ಟ ಬಂದರೂ ಅಕ್ಕಪಕ್ಕದವರ ಸಹಾಯ ಕೋರುತ್ತಿರಲಿಲ್ಲ. ಕೆಲವೊಮ್ಮೆ ತುಂಬಾ ವಿಕ್ಷಿಪ್ತವಾಗಿ ವರ್ತಿಸುತ್ತಿದ್ದಳು. ಸಮರಾತ್ರಿ, ಬೆಳಕುಹರಿಯುವವರೆಗೂ ತನಗೆ ತಾನೆ ಏನೇನೋ ಮಾತಾಡುತ್ತಿದ್ದಳು. ಕೆಲವೊಮ್ಮೆ ಈಕೆ ಉರ್ದು, ತಮಿಳು ಇನ್ನೂ ಅರ್ಥವಾಗದ ಭಾಷೆಗಳಲ್ಲಿ ಏಕಾಂಗಿಯಾಗಿ ತನಗೆ ತಾನೇ ಆರೋಪಿಸಿಕೊಂಡು ಮಾತನಾಡುತ್ತಿದ್ದಳು.


ಗಂಗಪ್ಪ ತಳವಾರ್

ತನ್ನ ಬರಹಗಳ ಮೂಲಕ ಜಗದ ನೋವಿನ ತಂಬೂರಿಯನ್ನು ಮೀಟುವ ಗಂಗಪ್ಪ ತಳವಾರ್ ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದವರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ‘ಧಾವತಿ’ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಚಿರಪರಿಚಿತರು. ‘ಮೋಹನ ಗಾನ’ ವ್ಯಕ್ತಿ ಬರಹ. ಗಟ್ಟಹಳ್ಳಿ ಅಂಜನಪ್ಪನವರ ಸುಜ್ಞಾನ ಬೋಧ ತತ್ವ ಪದಗಳ ಸಂಪುಟವನ್ನು ಇವರು ಪ್ರಕಟಿಸಿದ್ದಾರೆ. ಆದಿಮ ಸಂಸ್ಥೆಯ ಜೊತೆಗೆ ಕರುಳ ಸಂಬಂಧ ಬೆಸೆದಿರುವ ಇವರ ‘ಜಗದ ತಂಬೂರಿ’ ಪದ್ಯ ದ್ವಿತೀಯ ಬಿ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ.

ಮುನಿತಿಮ್ಮಕ್ಕ ಎನ್ನುವ ಮಹಿಳೆಯ ವರ್ಣರಂಜಿತ ವ್ಯಕ್ತಿತ್ವವನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮೀಣ ಬದುಕಿನ ನೋವು ಸಂಕಟಗಳನ್ನು ತಳವಾರ್ ಇಲ್ಲಿ ಕಟ್ಟಿಕೊಡುತ್ತಾರೆ.

ಮುನಿತಿಮ್ಮಕ್ಕ ಪ್ರಾಯದಲ್ಲೇ ಗಂಡನನ್ನು ಕಳಕೊಂಡವಳು. ಯಾರ ಹಂಗಿಗೂ ಬೀಳದೆ ಸೊಪ್ಪುಸೊದೆ, ಕಾಯಿಕಸರು ಮಾರಿ ಹೊಟ್ಟೆಹೊರುತ್ತಿದ್ದಳು. ಈಕೆ ಈ ಹಿಂದೆ ನಮ್ಮೂರಿನ ಅವಧೂತ ಕೃಷ್ಣಸ್ವಾಮಿ ಮಠದಲ್ಲಿ ವಾಸವಾಗಿದ್ದಳು. ಆಕೆಯ ಬಳಿ ಅವರ ತಾಯಿಂದ ಬಳುವಳಿಯಾಗಿ ಬಂದಿದ್ದ ಮರದ ಪೆಟ್ಟಿಗೆ ಇತ್ತು. ಆಕೆ ಸಂಸಾರದ ಎಲ್ಲಾ ಪಾತ್ರೆ ಪಗಾರ, ತಟ್ಟೆ, ಗ್ಲಾಸನ್ನು ಈ ಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಳು. ನನಗೆ ಬುದ್ಧಿ ಹುಟ್ಟಿದಂದಿನಿಂದ ಈಕೆ ಶಾಶ್ವತವಾಗಿ ಎಲ್ಲೂ ನೆಲೆಯೂರಿರಲಿಲ್ಲ. ಪಾಳುಬಿದ್ದ ಮಂಟಪ, ಊರಾಚೆಗಿನ ಗುಡಿಗಳೇ ಈಕೆಯ ಮೆಚ್ಚಿನ ತಾಣಗಳಾಗಿದ್ದವು. ಈಕೆ ಸದಾ ಅಲೆಮಾರಿಯಂತೆ ಊರೂರು, ಹಳ್ಳಿ ಕಡೆ ಹಣ್ಣು ತರಕಾರಿ ಮಾರುತ್ತಿದ್ದಳು. ಒಂದು ಸರ್ತಿ ಗಂಟುಮೂಟೆ ಕಟ್ಟಿ ಊರು ಬಿಟ್ಟರೆ ಮತ್ತೆ ಹಲವು ತಿಂಗಳುಗಳ ಕಾಲ ಊರಿಗೆ ವಾಪಸ್ ಆಗುತ್ತಿರಲಿಲ್ಲ. ಈಕೆಯ ಅಣ್ಣನ ಹೆಸರು ವೆಂಕಟಗಿರೆಪ್ಪ. ಈತನ ಮನೆ ನಮ್ಮ ಮನೆ ಪಕ್ಕದಲ್ಲಿತ್ತು. ಆ ಕಾಲಕ್ಕೆ ಈತ ಏಳನೇ ಇಯತ್ತೆಯನ್ನು ಪಾಸ್ ಮಾಡಿದ್ದ. ಕೇರಿಯ ಮೊದಲ ಅಕ್ಷರಸ್ಥನಾಗಿದ್ದ. ಈತ ಪ್ರತಿ ದಿನವೂ ದಿನಪತ್ರಿಕೆ, ಹಲವು ಪುಸ್ತಕಗಳನ್ನು ಓದುತ್ತಿದ್ದ. ಈತನು ಕೂಲಿ ಮಾಡಿದ್ದನ್ನು ನಾನು ಕಂಡಿದ್ದಿಲ್ಲ. ಮೊದಲ ಅಕ್ಷರಸ್ಥ ಸೊಂಬೇರಿ.

ಈತ ಸೀಮೆ ಹಸು ಮೇಯಿಸಿಕೊಂಡಿದ್ದ. ಈತನ ಹೆಂಡತಿ ಬೀರಮ್ಮ ಸದಾ ಹುಲ್ಲು ತರುವುದರ ಜೊತೆ ಬಿಡುವಿದ್ದಾಗ ಕೂಲಿಗೆ ಹೋಗುತ್ತಿದ್ದಳು. ಈ ಮುನಿತಿಮ್ಮಕ್ಕಳಿಗೂ ಇವರ ಅಣ್ಣ ವೆಂಕಟಗಿರಿಗೂ ಮೊದಲಿನಿಂದಲೂ ಆಗಿಬರುತ್ತಿರಲಿಲ್ಲ. ಪ್ರತಿದಿನವೂ ಇವರ ಮಧ್ಯೆ ತಂಟೆ ತಗಾದೆಗಳು ಸಾಮಾನ್ಯವೆಂಬಂತೆ ಇದ್ದವು. ಕೆಲವೊಮ್ಮೆ ನನ್ನಪ್ಪ ಅವರ ಮನೆ ಎದುರು ನಿಂತು ‘ನಾವು ನೆಮ್ಮದಿಯಾಗಿ ನಿದ್ದೆ ಮಾಡ್ಬೇಕಾ ಬ್ಯಾಡವಾ’ ಅಂತ ಗದುರುತ್ತಿದ್ದ. ಈ ವೆಂಕಟಗಿರಿ ನಮ್ಮಪ್ಪನಿಗೂ ಆಪ್ತನಾಗಿದ್ದ. ಹೀಗೆ ಅಣ್ಣನಿಂದ ಮುನಿತಿಮ್ಮಕ್ಕ ದೂರವಾಗಿ ದಿಕ್ಕುದೆಸೆಯಿಲ್ಲದೋರು, ಭಿಕ್ಷುಕರು, ಕುರುಡರು, ಕುಂಟರು ವಾಸಿಸಲು ಯೋಗ್ಯವಿದ್ದ ಅವಧೂತ ಕೃಷ್ಣಸ್ವಾಮಿ ಮಠದಲ್ಲಿ ಮಲಗುತ್ತಿದ್ದಳು. ಈ ಮಠಕ್ಕೆ ಈಕೆ ಖಾಯಂ ಸದಸ್ಯೆಯಾಗಿದ್ದಳು. ಈ ಮಠದಲ್ಲಿ ಕೆಲವು ಜನ ಭಂಗಿ ಸೇದುತ್ತಿದ್ದರು. ಕೆಲ ಯುವಕರು ಈ ಮಠದಲ್ಲಿ ಪ್ರಾಯದ ಹೆಂಗಸರನ್ನು ಕೆಣಕಲೆಂದೇ ಬರುತ್ತಿದ್ದರು. ಇವರ ಪುಂಡತನ, ನಿಲ್ಲದ ತೊಂದರೆಗಳಿಂದಾಗಿ ಮುನಿತಿಮ್ಮಕ್ಕ ತುಂಬಾ ಹಿಂಸೆಯನ್ನು ಅನುಭವಿಸುತ್ತಿದ್ದಳು.

ಮಠದ ದಾರಿಯಲ್ಲಿ ಸಾಗಿ ಹೋಗುವ ಕೆಲ ಊರ ಹಿರೀಕರು ‘‘ಏನು ತಿಮ್ಮಕ್ಕ ಅಷ್ಟೋ ಇಷ್ಟೋ ಮನೆ, ಹೊಲ ಐತೆ. ಎಲ್ಲಾ ಇದ್ದೂ ಈ ಥರ ಅನಾಥಳಂತೆ ಇದ್ದೀಯಲ್ಲೆ’’ ಎಂದಾಗ ‘‘ಇಲ್ಲ ಸ್ವಾಮೆ ಇಲ್ಲಿರುವಂಥವರು ನನ್ನ ಬಂಧುಗಳೇ’’ ಅಂತ ಅವರ ಬಾಯಿ ಮುಚ್ಚಿಸುತ್ತಿದ್ದಳು. ಈಕೆ ನಿತ್ಯವೂ ಹಳ್ಳಿ, ಸಂತೆ ಸುತ್ತಿ ಒಂದಿಷ್ಟು ಪುಡಿಗಾಸನ್ನು ಕೂಡಾಕುತ್ತಿದ್ದಳು. ತನ್ನ ಸಂಪಾದನೆಯ ಕಾಸನ್ನು ತನ್ನ ಮರದ ಪೆಟ್ಟಿಗೆಯಲ್ಲಿ ಇಡುತ್ತಿದ್ದಳು. ಈ ಮಠದ ಸುತ್ತಲಿದ್ದ ಕೆಲವು ಪುಂಡು ಪೋಕರಿಗಳು ಈಕೆಯ ಪೆಟ್ಟಿಗೆ ಒಡೆದು ಅದರಲ್ಲಿದ್ದ ಪಾತ್ರೆಪಗಡೆ, ಕಾಸು, ಧಾನ್ಯಗಳನ್ನು ಎಗರಿಸಿಕೊಂಡು ಹೋಗಿದ್ದರು.

ಈಕೆಯ ಈ ಪಡಿಪಾಟಲು ನೋಡಿದ ಊರ ಹಿರಿಯರು ‘‘ಅಲ್ಲಮ್ಮಾ ನಿಮ್ಮನೆ ಹತ್ರ ಸಾಯೋ ಅಷ್ಟು ಜಾಗ ಐತೆ. ನಿಮ್ಮಣ್ಣನ ಜಮೀನಿನಲ್ಲಿ ನಿನಗೂ ಹಕ್ಕು ಐತೆ, ಇದನ್ನು ಕೇಳಾಕ ಊರಾಗ ಚಿಕ್ಕೋರು ದೊಡ್ಡೋರು ಯಾರು ಇಲ್ವಾ?’’ ಇಂತಹ ಮಾತುಗಳನ್ನು ಸಹಿಸದೆ ಮತ್ತೆ ಅವರಿಗಿದ್ದ ಸ್ವಲ್ಪ ಜಾಗದಲ್ಲಿ ಚಪ್ಪರ ಹಾಕಿಕೊಂಡಳು. ಸಹಾಯಕ್ಕೆ ಯಾರೊಬ್ಬರನ್ನೂ ಕರೆಯುತ್ತಿರಲಿಲ್ಲ. ಮರದ ಪೆಟ್ಟಿಗೆಯನ್ನು ಚಪ್ಪರದ ಕೆಳಗಿಟ್ಟು ಪ್ಲಾಸ್ಟಿಕ್ ಕವರನ್ನು ಪೆಟ್ಟಿಗೆಗೆ ಹೊದಿಸಿ ಅಲ್ಲೇ ಮಲಗುತ್ತಿದ್ದಳು. ಮಳೆ ಹತ್ತಿರವಾಗುತ್ತಿದ್ದಂತೆ ಮುನಿತಿಮ್ಮಕ್ಕ ಒಬ್ಬಳೇ ಮಂಕರಿ, ಸನಿಕೆ ಹೆಗಲಿಗೇರಿಸಿಕೊಂಡು ಪ್ರತಿನಿತ್ಯವೂ ಮಣ್ಣನ್ನು ತಂದು ಗುಡ್ಡೆ ಮಾಡಿ, ಸಣ್ಣಗೆ ಹಂದಿಗೂಡಿನಂತಹ ಗುಡಿಸಲು ಕಟ್ಟಿಕೊಂಡಿದ್ದಳು.

ಮುನಿತಿಮ್ಮಕ್ಕ ತುಂಬಾ ಖರಾಮತ್ ಹೆಂಗಸಾಗಿದ್ದಳು. ಸ್ವಲ್ಪ ಒರಟಾಗಿ ಮಾತಾಡಿದರೂ ಆಕೆಯ ಮಾತುಗಳಲ್ಲಿ ಖಚಿತತೆ ಇರುತ್ತಿತ್ತು. ಎಂಥಾ ಕಷ್ಟ ಬಂದರೂ ಅಕ್ಕಪಕ್ಕದವರ ಸಹಾಯ ಕೋರುತ್ತಿರಲಿಲ್ಲ. ಕೆಲವೊಮ್ಮೆ ತುಂಬಾ ವಿಕ್ಷಿಪ್ತವಾಗಿ ವರ್ತಿಸುತ್ತಿದ್ದಳು. ಸಮರಾತ್ರಿ, ಬೆಳಕುಹರಿಯುವವರೆಗೂ ತನಗೆ ತಾನೆ ಏನೇನೋ ಮಾತಾಡುತ್ತಿದ್ದಳು. ಕೆಲವೊಮ್ಮೆ ಈಕೆ ಉರ್ದು, ತಮಿಳು ಇನ್ನೂ ಅರ್ಥವಾಗದ ಭಾಷೆಗಳಲ್ಲಿ ಏಕಾಂಗಿಯಾಗಿ ತನಗೆ ತಾನೇ ಆರೋಪಿಸಿಕೊಂಡು ಮಾತನಾಡುತ್ತಿದ್ದಳು. ಈಕೆಯ ಈ ವಿಕ್ಷಿಪ್ತ ನಡತೆಯಿಂದ ಕೇರಿ ಜನ ಇವಳಿಗೆ ‘ದೆವ್ವ ಮೆಟ್ಕೊಂಡಿದೆ ಅಂತಲೂ... ಇವಳು ಒಂಟಿಯಾಗಿ ಇದ್ದೂಇದ್ದೂ ಹುಚ್ಚಿ ಆಗಿದ್ದಾಳೆ’ ಎಂದೂ ಮಾತನಾಡಿಕೊಂಡರು. ಕೇರಿ ಜನ ಈಕೆಯನ್ನು ಯೆರ್ರಿ ತಿಮ್ಮಕ್ಕ (ಹುಚ್ಚು ತಿಮ್ಮಕ್ಕ) ಅಂತ ಕರೆಯುತ್ತಿದ್ದರು. ಈಕೆ ಬಾಯಲ್ಲಿ ಕೆಟ್ಟ ಮಾತುಗಳನ್ನು ಬಳಸಿ ಮಾತನಾಡುತ್ತಿದ್ದುದರಿಂದ ಕೇರಿ ಜನ ಇವಳೊಟ್ಟಿಗೆ ಮಾತು ಮುರಿದುಕೊಂಡಿದ್ದರು. ಇಲ್ಲಿ ಮಾತು ಮುರಿದುಕೊಂಡಿದ್ದು ತಿಮ್ಮಕ್ಕನೋ ಕೇರಿಯೋ ನನಗಂತೂ ಇದು ಅಸ್ಪಷ್ಟವೇ. ಇಲ್ಲಿಂದ ಈಕೆಯ ಮಾತು ಗೆಳತನ ಇದ್ದುದ್ದು, ಕೇರಿಯಲ್ಲಿ ಸಾಕಿಕೊಂಡಿದ್ದ ನಾಯಿ, ಕೋಳಿ, ಬೆಕ್ಕುಗಳ ಜೊತೆಯಲ್ಲಿ ಮಾತ್ರ. ಒಮ್ಮೆ ಹೀಗೆ ಜೋರು ಮಳೆ ಸುರಿತಿತ್ತು. ಮುನಿತಿಮ್ಮಕ್ಕ ಮಲಗಿದವಳು ಮಲಗಿದ ಹಾಗೆಯೇ ಇದ್ದಳು. ಪಕ್ಕದ ಮನೆ ಮುದುಕಿಯೊಬ್ಬಳು ‘ಯಾಕೆ ತಿಮ್ಮಿ ನೆನಿತಾ ಇದ್ದಿಯಾ; ನಮ್ಮ ವಪ್ಪಾರಿಗಾದ್ರೂ ಬಾ’.. ಅಂತ ಕರೆದಿದ್ದೇ ತಡ, ಇದನ್ನ ಕೇಳಿಸಿಕೊಂಡ ತಿಮ್ಮಕ್ಕ ಉಗ್ರಪ್ರತಾಪ ಶುರುವಿಟ್ಟು ‘‘ಲೇ ಸೂಳೆಮುಂಡೆ, ವರಾಂಡಾ ನಿನ ಮಿಂಡನದಲ್ಲ: ನೆನಿತಾ ಇರೋದು ನಾನು. ನನ್ನ ಹೆತ್ತಮಕ್ಕಳು (ನಾಯಿಗಳು) ಏನು ಮಾಡಿದ್ರು ಕರಿಬೇಕಿರೋದು ಮಕ್ಕಳನ್ನ... ತಿರುಬೋಕಿ ಮುಂಡೆ ನಿನ್ ಸೀರೆ ಕಿತ್ತಾಕ್ತೀನಿ’’ ಅಂತ ಗುಡುಗಿದಳು. ಮುದುಕಿ ಎದ್ದೂಬಿದ್ದೂ ಬಾಗಿಲು ಹಾಕಿಕೊಂಡಳು. ಈಕೆಗೆ ಸಮಾಧಾನವಿದ್ದರೆ ಮಾತ್ರ ಪ್ರತಿಕ್ರಿಯಿಸುತ್ತಿದ್ದಳು. ಇಲ್ಲವೆಂದರೆ ಕೆಟ್ಟಬೈಗುಳಗಳಿಂದ ಬೈಯುತ್ತಿದ್ದಳು. ಇದಕ್ಕೆಂದೇ ಈಕೆಯ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ.

‘‘ಈಕೆ ಸಂತೆಮಾಳದಲ್ಲಿ ಯಾಪಾರ ಅದೆಂಗೆ ಮಾಡ್ತಾಳೋ; ಇವಳತ್ರ ಯಾರು ತರಕಾರಿ ತಗೋತಾರೆ; ನಮ್ಮ ಕೇರಿಯಲ್ಲಿ ಮಾಡಿದ ರೀತಿ ಬೇರೆ ಕಡೆ ಮಾಡಿದರೆ ಇವಳ ಸೀರೆ ಕಿತ್ತಾಕ್ತಾರೆ’’ ಅಂತ ಕೇರಿಯ ಕೆಲ ಹೆಂಗಸರ ಗುಂಪು ಮಾತಾಡುತ್ತಿತ್ತು.

ಈಕೆಯ ದಿನಚರಿ ತುಂಬಾ ವಿಶಿಷ್ಟವಾಗಿತ್ತು. ತಾನೇ ಕೈಯಾರೆ ಕಟ್ಟಿಕೊಂಡಿದ್ದ ಹಂದಿಗೂಡಿನಂತಹ ಪುಟ್ಟ ಮನೆಯಲ್ಲಿ ಮರದ ಪೆಟ್ಟಿಗೆ ಇಟ್ಟುಕೊಂಡಿದ್ದಳು. ಅದರಲ್ಲಿ ಕೇವಲ ಒಬ್ಬರು ಮಾತ್ರ ಮಲಗುವಷ್ಟು ಜಾಗವಿತ್ತು. ನಿತ್ಯವೂ ಈಕೆ ಊಟವನ್ನು ಸಮರಾತ್ರಿಗೆ ಮಾಡುತ್ತಿದ್ದಳು. ಊಟ ರೆಡಿ ಆದ್ಮೇಲೆ ಅದನ್ನು ತಟ್ಟೆಗೆ ಹಾಕ್ಕೊಂಡು ಗುಡಿಸಿಲಿನಿಂದ ‘ಪಿಳ್ಳಿ ಪಿಳ್ಳಿ, ಸಣ್ಣಿ ಸಣ್ಣಿ, ರಾಮಿ ರಾಮಿ, ದೇಕಾ ದೇಕಾ, ಚಿಕ್ಕು ಚಿಕ್ಕು, ಈರ.. ಈರ..... ಗೌರಿ ಗೌರಿ’ ಅಂತ ಹೆಸರಿಟ್ಟು, ನಾಯಿಗಳನ್ನು ಎಳೆ ಮಕ್ಕಳಂತೆ ಕರೆಯುತ್ತಿದ್ದಳು. ಹೆಸರು ಕಿವಿಗೆ ಬಿದ್ದಾಗ ಅವು ಕೇರಿಯ ಯಾವ ಭಾಗದಲ್ಲಿದ್ದರೂ ಈಕೆಯೆದುರು ಬಂದು ನಿಲ್ಲುತ್ತಿದ್ದವು. ನಾಯಿಗಳು, ನಾಯಿಮರಿಗಳು ತಿಂದ ನಂತರ ಈಕೆ ಉಣ್ಣುತ್ತಿದ್ದಳು. ಕೇರಿಯ ಎಲ್ಲಾ ನಾಯಿಗಳು ತುತ್ತು ಅನ್ನ ನೀಡುವ ಈಕೆಯ ಜೀವಕಾರುಣ್ಯ ಕಂಡ ನನ್ನ ಮನಸ್ಸು ‘ಹುಚ್ಚು ಇರುವುದು ಕೇರಿಗೆ ಹೊರತು ಈಕೆಗಲ್ಲ’ ಎಂದು ಆಗಾಗ ಯೋಚಿಸುತ್ತಿತ್ತು. ಈಕೆ ಎಂದಿಗೂ ಪೂಜೆ ಪುನಸ್ಕಾರ, ಹಬ್ಬ ಹರಿದಿನಗಳನ್ನು ಮಾಡಿದವಳಲ್ಲ. ಮಣ್ಣಗೋಡೆಗೆ ಕೈವಾರ ತಾತಯ್ಯನ ಪಟವನ್ನು ಸಿಕ್ಕಿಸಿದ್ದಳು. ಹಾಗಂತ ಆಕೆ ಯಾವುದೇ ಭಜನೆಗಳಿಗೆ ಹೋದವಳಲ್ಲ. ಈಭೂತಿ ಹಚ್ಚಿದವಳಲ್ಲ. ಊರಲ್ಲಿ ಜಾತ್ರೆ, ಕರಗ, ದೇವರ ಮೆರವಣಿಗೆ, ತೇರು ಅಂತಂದ್ರೆ ತನ್ನ ಮನೆಗೆ ಚಿಲಕ ಹಾಕಿ ಅದೇನೇನೋ ಬಾಯಿಗೆ ಬಂದ ಪದಗಳನ್ನು ನುಲಿಯುತ್ತಿದ್ದಳು. ಆ ಭಾಷೆಯಂತೂ ನನಗೆ ಅರ್ಥವಾಗುತ್ತಿರಲಿಲ್ಲ. ಈಕೆ ಮನೆ ಮುಂದೆ ತಲೆಮ್ಯಾಲೆ ದೇವರನ್ನು ಹೊತ್ತು ಯಾರಾದರೂ ಭಿಕ್ಷೆ ಕೇಳಿದಾಗ ತಲೆಮ್ಯಾಲೆ ಇರೋ ದೇವರ ಮೈಯಲ್ಲೂ ಬೆವರು ಕಿತ್ಕೊಂಡು ಬರೋ ಹಾಗೆ ಬೈಯುತ್ತಿದ್ದಳು. ಸದಾ ದೇವರಿಗೆ ಬೈಯುತ್ತಿದ್ದಳು. ಪರಿಚಿತ ಭಿಕ್ಷುಕರ್ಯಾರೂ ಈಕೆಯ ಮನೆ ಬಾಗಿಲ ಕಡೆ ಹೆಜ್ಜೆ ಹಾಕುತ್ತಿರಲಿಲ್ಲ.

ಒಮ್ಮೆ ಗೌಡರ ಕೇರಿಯಲ್ಲಿ ಸೊಪ್ಪಿನ ಮೂಟೆ ಹೊತ್ತು ಹೋಗುತ್ತಿದ್ದಾಗ ಅಲ್ಲಿದ್ದ ಹೆಂಗಸೊಬ್ಬಳು ‘ಇದು ದೊಡ್ಡತಿರುಪತಿ ಪ್ರಸಾದ ತಗೋ ಕಣ್ಣಿಗೊತ್ತಿಕೊಂಡು ತಿನ್ನು ಒಳ್ಳೆಯದಾಗುತ್ತೆ’ ಅಂದಾಗ, ಕೆಂಡಾಮಂಡಲವಾದ ತಿಮ್ಮಕ್ಕ ‘ಏನೇ ಬೋಸುಡಿ ನೀನು ನನಗೆ ಯೇಲು ಕೊಡ್ತಿಯಾ! ನಿನ್ ಸೀರೆ ಕಿತ್ತಾಕ್ತೀನಿ’ ಅಂತ ಪ್ರಸಾದವನ್ನು ಆಕೆ ಮೇಲೆ ಎರಚಿ ಮನೆ ಕಡೆ ತಿರುಗಿದಳು. ಆ ಹೆಂಗಸಿನ ಯಜಮಾನ ಕೇರಿಗೆ ಬಂದು ತಿಮ್ಮಕ್ಕನನ್ನು ಜಾತಿ ಪದವನ್ನು ಬಳಸಿ ಹಿಗ್ಗಾಮುಗ್ಗಾ ಬಯ್ದು ಹೋದನು. ಇದರಿಂದ ಕೇರಿ ತುಂಬಾ ಮುಜುಗರ ಪಡುವಂತಾಯಿತು. ‘ಇವಳು ಮಾಡೋ ಹೇಲು ತಿನ್ನೋ ಕೆಲ್ಸಕ್ಕೆ ಅವನು ಜಾತಿಗೆ ಬಯ್ದು ಹೋದ’ ಅಂತ ತಿಮ್ಮಕ್ಕನಿಗೆ ಹಿಡಿ ಶಾಪ ಹಾಕುತ್ತಿದ್ದರು. ಹೀಗೆ... ಮುನಿ ತಿಮ್ಮಕ್ಕ ಊರು ಕೇರಿಗೆ ಬೇಡದವಳಾಗಿದ್ದಳು. ಈಕೆ ಎಂದಿಗೂ ಒಳ್ಳೆ ಸೀರೆ ಉಟ್ಕೊಂಡು ಬೀದಿಗೆ ಬಂದವಳಲ್ಲ. ಈಕೆಯ ಈ ವಿಕ್ಷಪ್ತ ನಡತೆ ಕೇರಿ ಗಂಡಸರಲ್ಲಿ ಅಸಹ್ಯ ಹುಟ್ಟಿಸಿತ್ತು. ಹಸಿದಾಗ ಮಾತ್ರ ಉಂಡು ತಿನ್ನುತ್ತಿದ್ದಳು. ಇಲ್ಲವೆಂದರೆ ರಾತ್ರಿಯಿಡೀ ಅಪರಿಚಿತ ಭಾಷೇಲಿ ಸುಪ್ರಭಾತ ಶುರುವಾಗುತ್ತಿತ್ತು. ಈ ಭಾಷೆ ಅವಳದೇ ಬೆಡಗಿನ ಭಾಷೆಯಾಗಿರುತ್ತಿತ್ತು.

‘ಕೋತಿ ತಿಮ್ಮಕ್ಕ’ ಆಗಿದ್ದು...

ಒಮ್ಮೆ ಈಕೆ ಕೈವಾರ ಕ್ಷೇತ್ರ ನೋಡಲು ಹೋಗಿದ್ದಾಗ ಕೈವಾರ ಬೆಟ್ಟ ಇಳಿಯುವಾಗ ಅನಾಥವಾಗಿ ಬಿದ್ದಿದ್ದ ಕೋತಿಮರಿಯನ್ನು ಮನೆಗೆ ತಂದು ಸಾಕಿಕೊಂಡಿದ್ದಳು. ಈ ಕೋತಿ ತನ್ನ ತಾಯಿಯನ್ನು ಕಳೆದು ತಬ್ಬಲಿ ಆಗಿತ್ತು. ನಾವು ಇಸ್ಕೂಲು ಬಿಟ್ಟಾಗ ಈ ಕೋತಿಯನ್ನು ನೋಡಲು ಒಂದಿಷ್ಟು ಹುಡುಗರು ಆಕೆಯ ಗುಡಿಸಿಲ ಬಳಿ ನಿಂತು ಇಣುಕಿ ನೋಡುತ್ತಿದ್ದೆವು. ಬಾಗಿಲಿನಿಂದ ಹೊರಗೆ ಬಂದ ತಿಮ್ಮಕ್ಕ ‘ಲೇ ರಾಮಾ.. ನಿನ್ನ ನೋಡಾಕ ಕೋತಿಗಳು ಬಂದಿವೆ. ಹೊರಗೆ ಕಾಲಿಟ್ಟರೆ ನಿನ್ ಚರ್ಮ ಸುಲೀತಿನಿ’ ಅಂತ ಬಾಗಿಲು ಹಾಕುತ್ತಾ.. ನಮ್ಮನ್ನು ಕೋಲಿನಿಂದ ಓಡಿಸುತ್ತಿದ್ದಳು. ಕೆಲವೊಮ್ಮೆ ಈ ಕೋತಿಮರಿಯ ಮುಂದೆ ನಾವು ಕೂಡ ಸಣ್ಣ ಕೋತಿಗಳಾಗಿಬಿಡುತ್ತಿದ್ದೆವು. ಈಕೆ ಸಂತೆ ಕಡೆ ಹೋಗುವಾಗ ಈ ಕೋತಿ ಆಕೆಯ ಭುಜದ ಮೇಲೆ ಕೂರುತ್ತಿತ್ತು. ಅದಕ್ಕೆ ಮಗುವಿನಂತೆ ಬಟ್ಟೆ ತೊಡಿಸಿದ್ದಳು. ಈಕೆ ಬಸ್ಟಾಂಡ್, ಅಂಗಡಿ ಕಡೆ ಹೊರಟಾಗ ಸುತ್ತಲ ಜನರು ಅಚ್ಚರಿಯಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಬೀದಿಯಲ್ಲಿನ ಮಕ್ಕಳು ಬೆಲ್ಲಕ್ಕೆ ಬಿದ್ದ ಇರುವೆಗಳ ಹಾಗೇ ತಿಮ್ಮಕ್ಕನ ಹಿಂದೆ ಬೀಳುತ್ತಿದ್ದರು. ದಿನೇದಿನೇ ಸ್ಕೂಲು ಮಕ್ಕಳೆಲ್ಲಾ ತಿಮ್ಮಕ್ಕನ ಮನೆ ಹುಡುಕಿ ಬರುತ್ತಿದ್ದರು. ಪುಟಾಣಿ ಮಕ್ಕಳಿಗೆ ನಮ್ಮ ಕೇರಿ ಪ್ರವಾಸಿ ತಾಣವಾಗಿ ಬದಲಾಗಿತ್ತು. ತಿಮ್ಮಕ್ಕನ ಬಗ್ಗೆ ಗೊತ್ತಿಲ್ಲದವರು ಈಕೆ ಕೋತಿ ಆಡಿಸುವವಳೆಂದು ನಂಬುತ್ತಿದ್ದರು. ಯಾರಾದರೂ ಕೋತಿ ಕೈಗೆ ನೋಟನ್ನೋ ಕಾಸನ್ನೋ ಕೊಟ್ಟರೆ ಅದನ್ನು ಕಿತ್ತು ಅವರತ್ತ ಎಸೆಯುತ್ತಿದ್ದಳು.

ಹೀಗೆ ಮುನಿ ತಿಮ್ಮಕ್ಕ ಕೋತಿ ಸಾಕಿಕೊಂಡಿದ್ದರಿಂದ ಕೇರಿಯಲ್ಲಿ ‘ಕೋತಿ ತಿಮ್ಮಕ್ಕ’ ಅಂತಲೇ ಹೆಸರಾದಳು. ಕೆಲವೊಮ್ಮೆ ತಿಮ್ಮಕ್ಕನ ಮಾತುಗಳು ದಾರ್ಶನಿಕವಾಗಿರುತ್ತಿದ್ದವು. ಕೋಳಿಜಾವದ ಹೊತ್ತಿಗೆ ತಾತಯ್ಯ ಮತ್ತು ವೀರಬ್ರಹ್ಮಯ್ಯನವರ ಕಾರ್ಣಿಕಗಳನ್ನು ಹೇಳುತ್ತಿದ್ದಳು. ನಮಗಾಗ ಈಕೆಯ ಭಾಷೆಯನ್ನು ಹಿಡಿಯುವುದೇ ಕಷ್ಟವಾಗಿತ್ತು.

ಒಮ್ಮೆ ಈಕೆ ಕೆ.ಆರ್. ಪುರ (ಕೃಷ್ಣರಾಜಪುರ)(ಸಂತೆ)ಕ್ಕೆೆ ಹೋಗಿದ್ದಾಗ ಪ್ರಾಣಿ ದಯಾ ಸಂಘದವರು ಈಕೆಯ ಹತ್ರ ಇದ್ದ ಕೋತಿಯನ್ನು ಕಿತ್ಕೊಂಡು ಹೋದ್ರಂತೆ. ಅಂದಿನಿಂದ ಈಕೆ ದೈಹಿಕವಾಗಿ ಕುಗ್ಗಿ ಹೋಗಿದ್ದಳು. ಕೇರಿಯಲ್ಲಿ ಭೌತಿಕ ತೆವಲುಗಳಲ್ಲಿದ್ದಂಥ ಕಣ್ಣುಗಳಿಗೆ ತಿಮ್ಮಕ್ಕ ತೀರಾ ಅಸಹ್ಯಳಾಗಿಯೇ ಕಾಣುತ್ತಿದ್ದಳು. ಯಾವುದೇ ಆಡಂಬರಗಳಿಲ್ಲದೆ, ಭಿನ್ನ ದಾರಿ ಆದರೂ ಸರಳವಾಗಿ ಬದುಕುತ್ತಿದ್ದಳು.

ಹೀಗೆ.. ಒಂದು ದಿನ ಈಕೆ ಗುಡಿಸಿಲಿನಿಂದ ಹೊರಗೆ ಬಾರದಿದ್ದಾಗ ಈಕೆಯ ಅತ್ತಿಗೆ ಸಣ್ಣ ಕೋಲಿನಿಂದ ಬಾಯಿ ತೆರೆದುಕೊಂಡೇ ಮಲಗಿದ್ದ ತಿಮ್ಮಕ್ಕಳನ್ನು ಕೋಲಲ್ಲಿ ಕದಲಿಸಿ ನೋಡಿದಳು. ಆಕೆ ತುಟಿಕ್ ಪಿಟಿಕ್ ಅನ್ನದೇ ಇದ್ದಾಗ ತಡಿಕೆ ಸರಿಸಿ ಗುಡಿಸಿಲ ಒಳಹೊಕ್ಕಿ ನೋಡಿದಾಗ ಆಗಲೇ ಮುನಿ ತಿಮ್ಮಕ್ಕಳ ಉಸಿರು ನಿಂತಿತ್ತು. ಆಕೆ ಎದೆಯ ಮೇಲೆ ಕೈವಾರ ತಾತಯ್ಯನ ಪಟವಿಟ್ಟುಕೊಂಡೇ ಉಸಿರು ಬಿಟ್ಟಿದ್ದಳು. ಈಕೆ ಸತ್ತಿದ್ದ ದೃಶ್ಯವನ್ನು ನಾನು ಕಣ್ಣಾರೆ ಕಂಡಿದ್ದೆ. ಕೇರಿಯ ಜನರೆದುರು ಬಂಡಾಯ ಸಾರಿದ್ದ ತಿಮ್ಮಕ್ಕಳ ಸಾವು ಅಷ್ಟೇ ನಿಕೃಷ್ಟವಾಗಿತ್ತು.

ಆ ದಿನ ಊರಲ್ಲಿ ಶಿವನ ತೇರು. ಊರಿಗೆ ದೊಡ್ಡೋರು ‘‘ಆದಷ್ಟು ಬೇಗ ರಾತ್ರಿಯೊಳಗೆ ಮಣ್ಣು ಮಾಡಬೇಕೆಂದು’’ ಆದೇಶ ರವಾನಿಸಿದರು. ಇಲ್ಲವೆಂದರೆ ತೇರಿಗೆ ಕೇಡು ಅಂತ ಮಾತಾಡಿಕೊಂಡರು. ಕೇರಿಯ ಒಂದಿಷ್ಟು ಯುವಕರು ಆಕೆಯ ಹೆಣವನ್ನು ಗುಡಿಸಿಲಿನಿಂದ ಹೊರಕ್ಕೆ ಸಾಗಿಸಿದರು. ಆಕೆ ಉಟ್ಟಿದ್ದ ಸೀರೆ ಆಕೆಯ ಚರ್ಮಕ್ಕೆ ಫೆವಿಕೋಲಿನಂತೆ ಅಂಟಿಕೊಂಡಿತ್ತು. ಅರ್ಜೆಂಟಾಗಿ ತಂದಿದ್ದ ಸಾವಿನ ಬಟ್ಟೆ ವ್ಯರ್ಥವಾಯಿತು. ಅಲ್ಲಿದ್ದ ಹಿರಿತಲೆಗಳು ಸೀರೆ ಚರ್ಮಕ್ಕೆ ಅಂಟಿಕೊಂಡಿದ್ದರಿಂದ ಸೀರೆ ಕಳಚಿದರೆ ಮಾಂಸದ ಸಮೇತ ನೆಲಕ್ಕೆ ಉದುರುವುದೆಂದು ಅನಾಮತ್ತಾಗಿ ಹೆಗಲ ಮೇಲೆ ಹೊತ್ತು ಸ್ಮಶಾನದ ಕಡೆ ನಡೆದರು. ಕಟ್ಟಿದ ಪಾಡಿಯನ್ನು ಸೈಕಲ್ಲಿಗೆ ಕಟ್ಟಿಕೊಂಡರು. ಗುಣಿ ಸಿದ್ಧವಾಗಿತ್ತು. ಯಾವುದೇ ಹೂವಿನ ಹಾರಗಳ್ಯಾವು ಆಕೆಯ ಮೇಲಿರಲಿಲ್ಲ. ಹೂ ಹಾಕುವಂತಹ ಗೆಳೆಯರು ತಿಮಕ್ಕಳಿಗೆ ಇರಲಿಲ್ಲ. ಈಕೆಯ ಅಣ್ಣ ವೆಂಕಟಗಿರಿ ಗುಣಿ ಸಾಂಗ್ಯಗಳನ್ನು ನೆರವೇರಿಸಿದ. ಯಾವುದೇ ತಮಟೆ, ನಗಾರಿಗಳ ಸದ್ದು ಅಲ್ಲಿರಲಿಲ್ಲ. ಕೇವಲ ನೀರವತೆಯಲ್ಲಿಯೇ ಸ್ಮಶಾನಕ್ಕೆ ತಂದರು. ಕೇರಿಯಿಂದ ಯಾವೊಬ್ಬ ಹೆಂಗಸೂ ಸಾವಿಗೆ ಬಂದಿರಲಿಲ್ಲ.

ಕಣ್ಣು ಮಬ್ಬಾಗುತ್ತಿತ್ತು. ಬಹುಶಃ ಈ ಮಣ್ಣಿಗೆ ಹತ್ತಾರು ಜನ ಮಾತ್ರ ಇದ್ದರು. ನನ್ನಪ್ಪ ಸಾರಾಯಿ ಖರ್ಚಿಗೆ ಏನಾದರೂ ಸಿಗಬಹುದೆಂದು ಬಂದಂಗಿತ್ತು. ಕೇರಿಯ ತೋಟಿ ವೆಂಕಟ್ರೋಣಪ್ಪ ಕಣಗಿಲೆ ಗಿಡ ತಂದು ಗುಣಿ ಮೇಲೆ ನೆಟ್ಟು ನೀರುಣಿಸಿದ. ಅಷ್ಟೊತ್ತಿಗೆ ಯಾರೊಬ್ಬರ ಮುಖವನ್ನು ಗುರುತಿಸಲಾರದಷ್ಟು ಕತ್ತಲಾಗಿತ್ತು. ಗುಣಿ ಅಗೆದವರು ಮೋಟು ಬೀಡಿ ತುಟಿಗೆ ತಗಲಿಸಿ ಬೆಂಕಿಕಡ್ಡಿ ಗೀಚಿದರು. ಆ ಬೀಡಿ ಕಿಚ್ಚಿನ ಬೆಳಕಲ್ಲಿಯೇ ಮಣ್ಣು ಮಾಡಿ ಮನೆಗಳ ಕಡೆ ಹೆಜ್ಜೆ ಹಾಕಿದರು. ನಾನು ಅಪ್ಪನ ಹೆಜ್ಜೆಗಳ ಮೇಲೆ ಹೆಜ್ಜೆ ಹಾಕುತ್ತಾ ಮನೆ ಸೇರಿದೆ. ಯಾಕೋ ಆ ರಾತ್ರಿ ಊರ ಪರಸೆ ಸುತ್ತುವಂಥ ಸಂಭ್ರಮಗಳೇನೂ ನನ್ನಲ್ಲಿರಲಿಲ್ಲ. ಮುನಿತಿಮ್ಮಕ್ಕ ಮತ್ತಾಕೆಯ ಕೋತಿ ನನ್ಮಲೆ ನೆಗೆದು ಬಿದ್ದಂತಹ ಚಿತ್ರವೊಂದು ಕಣ್ಮುಂದೆ ಸರಿದು ಹೋಗುತ್ತಿತ್ತು.

share
ಗಂಗಪ್ಪ ತಳವಾರ್
ಗಂಗಪ್ಪ ತಳವಾರ್
Next Story
X