ಸಣ್ಣ ಭಾಷೆಗಳು ತಲೆ ಎತ್ತಿ ನಿಲ್ಲಬೇಕಾದರೆ ...

ಡಾ. ಕೆ. ಚಿನ್ನಪ್ಪ ಗೌಡ
ತುಳು ಜಾನಪದ ಲೋಕದ ಐಸಿರಿಯಾಗಿ ಗುರುತಿಸಲ್ಪಡುವ ಡಾ. ಕೆ. ಚಿನ್ನಪ್ಪ ಗೌಡರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಪ್ರಸ್ತುತ ನಿವೃತ್ತರು. ಮಂಗಳೂರು ವಿವಿ ಕುಲಸಚಿವರಾಗಿ ಮತ್ತು ಹಾವೇರಿಯ ಕರ್ನಾಟಕ ಜಾನಪದ ವಿವಿ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸಾರಾಂಗ ಹಾಗೂ ಯಕ್ಷಗಾನ, ತುಳು ಮೊದಲಾದ ಅಧ್ಯಯನ ಕೇಂದ್ರಗಳ ನಿರ್ದೇಶಕರಾಗಿ, ತುಳು ಸಾಹಿತ್ಯ, ಜಾನಪದ ಅಕಾಡಮಿಗಳ ಸದಸ್ಯರಾಗಿ ದುಡಿದಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ತುಳುವಿನಲ್ಲಿ ಒಟ್ಟು ಇಪ್ಪತ್ತೆರಡು ಕೃತಿಗಳನ್ನು, ಎಪ್ಪತ್ತೈದಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಐವತ್ತಕ್ಕಿಂತ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ. ಜಾಲಾಟ, ಭೂತಾರಾಧನೆ-ಜಾನಪದೀಯ ಅಧ್ಯಯನ ಸಂಸ್ಕೃತಿ ಸಿರಿ ಇವರ ಮಹತ್ವದ ಸಂಶೋಧನಾ ಕೃತಿಗಳು. ಸಣ್ಣ ಭಾಷೆಗಳು ತಮ್ಮ ಒಡಲೊಳಗೆ ಬಚ್ಚಿಟ್ಟುಕೊಂಡ ಜೀವದ್ರವ್ಯಗಳ ಬನಿಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಜಗತ್ತಿನ ಸಣ್ಣ ಸಣ್ಣ ಭಾಷೆಗಳಲ್ಲಿ ಕೆಲವು ಈಗಾಗಲೇ ಸತ್ತಿವೆ, ಇನ್ನು ಕೆಲವು ಕಣ್ಮರೆಯಾಗುವ ಹಂತಕ್ಕೆ ತಲುಪಿವೆ ಎಂಬುದು ಭಾಷೆಗಳನ್ನು ಮಾತನಾಡುವ ಜನರ ಅರಿವಿಗೆ ಬಂದಿದೆ. ಉದಾಹರಣೆಗೆ ಕುಂದಾಪುರ ಪರಿಸರದಲ್ಲಿ ಬಳಕೆಯಲ್ಲಿದ್ದ ಬೆಳಾರಿ ಭಾಷೆ ಮಾತನಾಡುವವರು ಬೆರಳೆಣಿಕೆಯಷ್ಟು ಇದ್ದವರು ಇವತ್ತು ಯಾರೂ ಇಲ್ಲ. ಆ ಭಾಷೆ ಗೊತ್ತಿದ್ದ ಒಬ್ಬರು ಎರಡು ವರ್ಷಗಳ ಹಿಂದೆ ನಿಧನರಾದಾಗ ದೊಡ್ಡ ಸುದ್ದಿಯಾಗಿತ್ತು. ಕೊರಗರ ಜನಸಂಖ್ಯೆ ಕಡಿಮೆಯಾಗುತ್ತಾ ಬಂದು ಬಹುಶಃ ಇವತ್ತು ಹತ್ತು ಹನ್ನೆರಡು ಸಾವಿರಕ್ಕೆ ಬಂದು ನಿಂತಿದೆ. ಆದರೆ ಕೊರಗ ಭಾಷೆಯನ್ನು ಬಲ್ಲವರ ಮತ್ತು ಅದನ್ನು ಮಾತನಾಡುವವರ ಸಂಖ್ಯೆ ಐದಾರು ಸಾವಿರಕ್ಕೆ ಇಳಿದಿದೆ. ತುಳುವರು ಎಂದು ಹೇಳಿಕೊಳ್ಳುವವರ ಸಂಖ್ಯೆ ಹೆಚ್ಚಿಗಿದೆ, ಆದರೆ ತುಳುವನ್ನು ಎಲ್ಲ ಹಂತಗಳಲ್ಲಿ ಬಳಸುವ ತುಳುವರ ಸಂಖ್ಯೆ ಕಡಿಮೆಯಾಗಿದೆ. ಈ ಮಾತು ಬ್ಯಾರಿ, ಹವ್ಯಕ, ಮರಾಟಿ, ಅರೆಬಾಸೆ ಮೊದಲಾದ ಭಾಷೆಗಳನ್ನು ಮಾತನಾಡುವ ಜನರ ಸಂಖ್ಯೆಗೂ ಅನ್ವಯವಾಗುತ್ತದೆ. ಒಂದೆರಡು ತಲೆಮಾರುಗಳ ಹಿಂದೆ ತುಳುವರು ತುಳುವನ್ನೇ, ಬ್ಯಾರಿಗಳು ಬ್ಯಾರಿ ಭಾಷೆಯನ್ನೇ, ಅದೇ ರೀತಿ ಇತರ ಸಣ್ಣ ಭಾಷೆಗಳನ್ನು ಮಾತನಾಡುತ್ತಿದ್ದ ಜನರು ಅವರ ಭಾಷೆಗಳನ್ನೇ ಬಳಸುತ್ತಿದ್ದರು. ಆಮೇಲೆ ತುಳುವಿನ ಅನೇಕ ಕುಟುಂಬಗಳು ಮನೆಯಲ್ಲಿ ಕನ್ನಡ ಮಾತನಾಡಲು ಆರಂಭಿಸಿದ್ದನ್ನು ನಾವೆಲ್ಲ ಕಂಡಿದ್ದೇವೆ. ಶಾಲೆಗಳಲ್ಲಿ ಕಲಿಯುವ ಮತ್ತು ಕಲಿಸುವ ಭಾಷೆ ಕನ್ನಡ ಆದದ್ದರಿಂದ ಮಕ್ಕಳು ಮನೆಯಲ್ಲಿ ಕನ್ನಡವನ್ನು ಮಾತನಾಡುವ ಒಂದು ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಆಮೇಲೆ ಇದೇ ಕನ್ನಡ ಭಾಷೆ ಇಂಗ್ಲಿಷ್‌ಗೆ ಅನುಕೂಲಕರ ಸ್ಥಳಾವಕಾಶವನ್ನು ಮನೆ ಮತ್ತು ಶಾಲೆಗಳಲ್ಲಿ ಕಲ್ಪಿಸಿಕೊಟ್ಟದ್ದನ್ನೂ ನಾವು ನೋಡಿದ್ದೇವೆ. ಹೀಗೆ ಸಣ್ಣ ಭಾಷೆಗಳು ಅವುಗಳಿಗಿಂತ ದೊಡ್ಡ ಯಜಮಾನ ಭಾಷೆಗಳಿಗೆ ಜಾಗ ಬಿಟ್ಟುಕೊಟ್ಟದ್ದು ಒಂದು ಚಾರಿತ್ರಿಕ ಬೆಳವಣಿಗೆ. ತುಳು, ಬ್ಯಾರಿ ಮೊದಲಾದ ಸ್ಥಳೀಯ ಭಾಷೆಗಳು ಹಿಂಜರಿಕೆಗೆ ಒಳಗಾಗಲು ಹಲವಾರು ಕಾರಣಗಳಿವೆ. ಅದರಲ್ಲಿ ಬಹಳ ಮುಖ್ಯವಾದುದು ಇವುಗಳೆಲ್ಲ ಸಣ್ಣ ಭಾಷೆಗಳು, ಅಭಿವೃದ್ಧಿ ಹೊಂದದ ಭಾಷೆಗಳು, ಜ್ಞಾನ ಹೊಂದಿರದ ಭಾಷೆಗಳು, ನಗರಕೇಂದ್ರಿತ ಉದ್ಯಮಾವಕಾಶಗಳನ್ನು ಕಲ್ಪಿಸಲಾರದ ಭಾಷೆಗಳು ಎಂಬುದಾಗಿದೆ. ಮನೆಯಲ್ಲಿ ಕನ್ನಡ ಅಥವಾ ಇಂಗ್ಲಿಷ್ ಮಾತನಾಡಿದರೆ ಈ ಭಾಷೆಗಳು ಶಿಕ್ಷಣ ಮಾಧ್ಯಮ ಹೊಂದಿರುವ ಶಾಲೆಗಳಲ್ಲಿ ಮಕ್ಕಳಿಗೆ ಕಲಿಕೆ ಸುಲಭವಾಗುತ್ತದೆ ಎಂಬ ಕಾರಣವೂ ಇತ್ತು. ಕರಾವಳಿಯ ಒಂದು ಕಾಲದ ಪರಿಸರವನ್ನು ಗಮನಿಸಿ ಹೇಳುವುದಾದರೆ ಇಲ್ಲಿನ ಸ್ಥಳೀಯ ಸಣ್ಣ ಭಾಷೆಗಳ ಸಮ್ಮುಖದಲ್ಲಿ ಕನ್ನಡ ತಲೆ ಎತ್ತಿ ನಿಂತ ಭಾಷೆಯಾಗಿ ಬೆಳೆದಿತ್ತು. ಸಣ್ಣ ಭಾಷೆಗಳಿಗೆ ತಲೆ ಎತ್ತಿ ನಿಲ್ಲುವ ಶಕ್ತಿ ಇರಲಿಲ್ಲ, ಅಥವಾ ಆ ಶಕ್ತಿಯನ್ನು ಗುರುತಿಸಿರಲಿಲ್ಲ.
ಸಣ್ಣ ಭಾಷೆಗಳು ಅಂತ ನಾವು ಹೇಳುವುದಕ್ಕೆ ಅವುಗಳನ್ನು ಮಾತನಾಡುವ ಜನರ ಸಂಖ್ಯೆ ಇತರ ಭಾಷೆಗಳಿಗೆ ಹೋಲಿಸಿದರೆ ಅಥವಾ ಕನ್ನಡಕ್ಕೆ ಹೋಲಿಸಿದರೆ ಕಡಿಮೆ ಎಂದು ಮಾತ್ರ ಅರ್ಥ. ಭಾಷೆಯ ವ್ಯಾಖ್ಯಾನದ ದೃಷ್ಟಿಯಿಂದ ಎಲ್ಲ ಭಾಷೆಗಳು ಸರಿ ಸಮಾನ. ಸಂವಹನ ಮಾಡುವವರ ನಡುವೆ ಸಂವಹನ ಸಾಮರ್ಥ್ಯವನ್ನು ಒಂದು ಭಾಷೆ ಹೊಂದಿದ್ದರೆ ಸಾಕು. ಒಬ್ಬ ಮಾತನಾಡುವುದು ಮತ್ತೊಬ್ಬನಿಗೆ ಅರ್ಥವಾದರೆ ಭಾಷೆಯ ಒಂದು ಹಂತದ ಕೆಲಸ ನೆರವೇರಿದಂತೆ. ಭಾಷೆಗಳನ್ನು ಇಂದು ಸುಸಂಸ್ಕೃತ - ಅಸಂಸ್ಕೃತ, ಮುಂದುವರಿದ - ಹಿಂದುಳಿದ, ಮೇಲಿನ- ಕೆಳಗಿನ, ಶಕ್ತ- ದುರ್ಬಲ, ಶ್ರೀಮಂತ- ಬಡವ ಹೀಗೆ ವರ್ಗೀಕರಿಸುವ ಕ್ರಮ ಇಲ್ಲ. ಒಂದು ನಿರ್ದಿಷ್ಟ ಭಾಷೆಯನ್ನು ವಿವರಿಸಬೇಕೆಂದಿದ್ದರೆ ಹೆಚ್ಚು ಜನರು ಮಾತನಾಡುವ -ಕಡಿಮೆ ಜನರು ಮಾತನಾಡುವ, ಹೆಚ್ಚು ಪದಗಳಿರುವ - ಕಡಿಮೆ ಪದಗಳಿರುವ, ದೀರ್ಘ ಸಾಹಿತ್ಯ ಪರಂಪರೆಯಿರುವ - ಕಡಿಮೆ ಅವಧಿಯ ಸಾಹಿತ್ಯ ಪರಂಪರೆಯಿರುವ...ಹೀಗೆಲ್ಲ ವಿವರಣೆ ಕೊಡಬಹುದು. ಆದರೆ ಈ ವಿವರಣೆ ಭಾಷೆಯ ಮೌಲ್ಯ ನಿರ್ಣಯದ, ಸ್ಥಾನ ನಿರ್ದೇಶನದ ಮಾನದಂಡವಾಗಬಾರದು. ಇಂಥದ್ದು ಇದ್ದರೆ ಅದು ಶ್ರೇಷ್ಠ ಭಾಷೆ, ಇಲ್ಲದಿದ್ದರೆ ಅದು ಕನಿಷ್ಠ ಭಾಷೆ ಎಂಬ ತೀರ್ಮಾನ ನೀಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಕಡಿಮೆ ಜನರು ಮಾತನಾಡುವ, ಭಾಷೆ ಎಂದು ಕರೆಸಿಕೊಳ್ಳುವ ಎಲ್ಲ ಅರ್ಹತೆಗಳಿರುವ, ಅದರ ಮಟ್ಟಿಗೆ ಸ್ವಾಯತ್ತವೂ ಶ್ರೀಮಂತವೂ ಆಗಿರುವ, ಲಿಖಿತ ಮತ್ತು ಅಲಿಖಿತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಸ್ಥಳೀಯ ಸಣ್ಣ ಭಾಷೆಗಳನ್ನು ಉಳಿಸಲು ಬೆಳೆಸಲು ಏನು ಮಾಡಬಹುದು ಎಂಬುದು ನಮ್ಮ ಮುಂದಿರುವ ಪ್ರಶ್ನೆ.
ಭಾಷೆಗಳು ವ್ಯವಹರಿಸುವ ನೆಲೆಗಳು ಎರಡು. ಮೊದಲನೆಯದು ಮಾತಿನ ನೆಲೆ. ಎರಡನೆಯದು ಬರಹದ ನೆಲೆ. ಇದನ್ನು ಧ್ವನಿ ಪಾತಳಿ ಮತ್ತು ಅಕ್ಷರ ಪಾತಳಿ ಎಂದು ಕರೆಯುತ್ತೇವೆ. ಜನರು ಅವರ ಭಾಷೆಯಲ್ಲಿ ಮಾತನಾಡಿದರೆ ಆ ಭಾಷೆ ಉಳಿಯುತ್ತದೆ, ಬೆಳೆಯುತ್ತದೆ. ಓದು ಬರಹ ಬಲ್ಲವರು ಅವರ ಭಾಷೆಯಲ್ಲಿ (ಅಕ್ಷರ ಮತ್ತು ವ್ಯಾಕರಣ ನಿಯಮದಂತೆ) ಕಲಾತ್ಮಕತೆಯಿಂದ ಬರೆದರೆ ಅಂದರೆ ಲಿಖಿತಗೊಳಿಸಿದರೆ ಸಾಹಿತ್ಯ ನಿರ್ಮಾಣವಾಗುತ್ತದೆ. ಧ್ವನಿಯ ನೆಲೆಯಲ್ಲಿ ಹಾಡುಗಳನ್ನು ಕತೆಗಳನ್ನು ಪುರಾಣಗಳನ್ನು ಕಟ್ಟಿದರೆ ಅದು ಮೌಖಿಕ/ ಕಂಠಸ್ಥ/ ಅಲಿಖಿತ ಸಾಹಿತ್ಯವಾಗುತ್ತದೆ. ಒಂದು ಸಮುದಾಯದ ಜನರು ಅವರಿಗೆ ಸೇರಿದ, ಬಳುವಳಿಯಾಗಿ ಬಂದ ಭಾಷೆಯಲ್ಲಿ ಮಾತನಾಡುವುದು ಆ ಭಾಷೆಯ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗುತ್ತದೆ. ಭಾಷೆಯ ಉಳಿವಿಗೆ ಸಾಹಿತ್ಯ ರಚನೆಯೇ ಆಗಬೇಕಾಗಿಲ್ಲ, ಅನಿವಾರ್ಯ ಅಲ್ಲ . ಒಂದು ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುವವರ ಸಂಖ್ಯೆ ಕಡಿಮೆ ಇರುತ್ತದೆ. ಹಾಗೆ ರಚನೆಯಾದ ಸಾಹಿತ್ಯವನ್ನು ಓದುವವರ ಸಂಖ್ಯೆಯೂ ಕಡಿಮೆ ಇರುತ್ತದೆ. ಸಾಹಿತ್ಯವು ಭಾಷೆಯ ಕಲಾತ್ಮಕ ಬಳಕೆಗೆ ಸಂಬಂಧಿಸಿದೆ. ಸಿದ್ಧಗೊಂಡಿರುವ ಮತ್ತು ಬದಲಾವಣೆಗೆ ಒಳಗಾಗುತ್ತಿರುವ ಭಾಷೆಯ ಎರಡನೆಯ ಹಂತದ ವಿನಿಯೋಗವನ್ನು ಸಾಹಿತ್ಯ ರಚನೆಯ ಸಂದರ್ಭದಲ್ಲಿ ಕಾಣಬಹುದು. ಇದರ ಅರ್ಥ ಮಾತಿನಲ್ಲಿ ಕಲಾತ್ಮಕತೆ ಇಲ್ಲ ಎಂದಲ್ಲ. ಜನರ ಮಾತೇ ಕಾವ್ಯದಂತಿದೆ, ಮಾತಿನಲ್ಲಿ ಸಾಹಿತ್ಯ ಇದೆ ಎಂಬ ಮಾತೇ ಇದೆಯಲ್ಲ. ಭಾಷೆಯನ್ನು ಆ ಭಾಷಾ ಗುಂಪಿಗೆ ಸೇರಿದ ಎಲ್ಲರೂ ಮಾತನಾಡುವವರೇ ಆಗಿರುತ್ತಾರೆ, ಆಗಿರಬೇಕು. ಭಾಷೆಯನ್ನು ಜನರು ಮಾತನಾಡಲು ನಿರಂತರವಾಗಿ ಬಳಸುತ್ತಿದ್ದರೆ ಆ ಭಾಷೆ ಉಳಿಯಿತೆಂದೇ ಅರ್ಥ. ಹೀಗೆ ಬಳಸುವ ಭಾಷೆಯನ್ನು ಮಾತೃ ಭಾಷೆ ಎನ್ನುತ್ತೇವೆ. ತಾಯಿಯಿಂದ ಬಂದ ಭಾಷೆ, ತಾಯಿ ಕಲಿಸಿದ ಭಾಷೆ, ಹುಟ್ಟಿನೊಂದಿಗೆ ಅಂಟಿಕೊಂಡು ಬಂದ ಭಾಷೆ, ಬದುಕಲು ಕಲಿಸಿದ ಭಾಷೆ, ತಾಯ್ತನದ ಪ್ರೀತಿಯ ಭಾಷೆ, ಸೌಹಾರ್ದದ ಭಾಷೆ ಹೀಗೆ ಮಾತೃಭಾಷೆ / ತಾಯ್ನುಡಿ ಎಂಬುದು ಏಕಾರ್ಥಸೂಚಿಯಲ್ಲ. ಸಂವೇದನೆಗಳ ಬಹುಮಾದರಿಸೂಚಿ! ಹುಟ್ಟಿನೊಂದಿಗೆ ಬಂದ ಭಾಷೆ ಅಂದರೆ ಹುಟ್ಟುವಾಗಲೇ ಮಗುವಿಗೆ ಬರುತ್ತಿದ್ದ ಭಾಷೆ ಎಂದಲ್ಲ. ಭಾಷೆ ಕೇಳಿ ಕಲಿತು ಬರುವಂಥದ್ದು. ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳಲು ನೆರವಾದ ಒಂದು ಭಾಷೆಯನ್ನು ಕರ್ತವ್ಯದ ದೃಷ್ಟಿಯಿಂದಲೋ, ನೈತಿಕ ಜವಾಬ್ದಾರಿಯ ದೃಷ್ಟಿಯಿಂದಲೋ ಆ ಭಾಷೆಯಲ್ಲಿ ಹುಟ್ಟಿಬೆಳೆದ ಜನರೇ ಉಳಿಸಬೇಕಲ್ಲದೆ, ಬೆಳೆಸಬೇಕಲ್ಲದೆ ಉಳಿದವರಲ್ಲ. ನಮ್ಮ ಭಾಷೆಯನ್ನು, ನಮ್ಮ ಪರಿಸರವನ್ನು, ನಮ್ಮ ಸಂಸ್ಕೃತಿಯನ್ನು, ನಮ್ಮ ಜೀವನ ಮೌಲ್ಯಗಳನ್ನು ತಿರಸ್ಕರಿಸದೆ, ಕಾಲಕಾಲಕ್ಕೆ ಪರಿಷ್ಕರಿಸಿ ಸಮಾಜದ ಒಳಿತಿಗಾಗಿ ಸಂರಕ್ಷಿಸಿಕೊಳ್ಳಬೇಕಾದವರು ನಾವು ನಾವೇ ಹೊರತು ಅನ್ಯರಲ್ಲ.
ನಮ್ಮ ಭಾಷೆ ನಮ್ಮ ಪಾಲಿಗೆ ಸಮೃದ್ಧವಾಗಿರುತ್ತದೆ. ನಮ್ಮ ಬದುಕನ್ನು ಅನುಸರಿಸಿ ಮತ್ತು ಅವಲಂಬಿಸಿ ನಮ್ಮ ಭಾಷೆ ಬೆಳೆದಿರುತ್ತದೆ. ತುಳು, ಬ್ಯಾರಿ, ಕನ್ನಡದ ಹಲವು ಉಪಭಾಷೆಗಳು ಇಂಗ್ಲಿಷ್ ಭಾಷೆಯ ಹಾಗೆ ಸಮೃದ್ಧವಾಗಿ ಬೆಳೆದ ಭಾಷೆಯಲ್ಲ ಎಂದು ಕೊರಗುವುದಕ್ಕೆ ಅರ್ಥವಿಲ್ಲ. ಸೂಕ್ಷ್ಮವಾಗಿ ನೋಡಿದರೆ ನಮ್ಮ ಸ್ಥಳೀಯ ಭಾಷೆಗಳು ಸಮೃದ್ಧ ಭಾಷೆಗಳೇ ಆಗಿವೆ. ನಮ್ಮ ಭಾಷೆಗಳ ಎಷ್ಟೋ ಪದಗಳಿಗೆ ಇಂಗ್ಲಿಷ್‌ನಲ್ಲಿ ಸಮಾನಾರ್ಥ ಕೊಡುವ ಪದಗಳೇ ಇಲ್ಲ. ನಮ್ಮ ಭಾಷೆಗಳು ಸ್ವಾಯತ್ತವೂ ಸಮರ್ಥವೂ ಆಗಿರುತ್ತವೆ ಎಂಬುದಕ್ಕೆ ನಮ್ಮ ಭಾಷೆಗಳಲ್ಲಿ ಇರುವ ಕೌಟುಂಬಿಕ, ಆಚರಣಾತ್ಮಕ, ಆರಾಧನೆಗಳಿಗೆ ಸಂಬಂಧಿಸಿದ, ಕುಲಕಸುಬುಗಳಿಗೆ ಸಂಬಂಧಿಸಿದ, ಸಸ್ಯ ಮತ್ತು ಪ್ರಾಣಿ ಜಗತ್ತಿನ ಜೀವ ವೈವಿಧ್ಯ ಹೆಸರುಗಳಿಗೆ ಸಂಬಂಧಿಸಿದ, ಆಹಾರ ಪದಾರ್ಥಗಳಿಗೆ ಸಂಬಂಧಿಸಿದ, ಜನಪದ ವೈದ್ಯಕ್ಕೆ ಸಂಬಂಧಿಸಿದ, ವೇಷಭೂಷಣಗಳಿಗೆ ಸಂಬಂಧಿಸಿದ, ಮಣ್ಣು ನೀರು ವೈವಿಧ್ಯಕ್ಕೆ ಸಂಬಂಧಿಸಿದ, ಕೃಷಿಗೆ ಸಂಬಂಧಿಸಿದ ಪದಗಳನ್ನಷ್ಟೇ ನೋಡಿದರೂ ಸಾಕು, ನಮ್ಮ ಮನೆಮಾತಿನ ಶಕ್ತಿ ಸಾಮರ್ಥ್ಯ ಮತ್ತು ವೈವಿಧ್ಯಗಳ ಅರಿವು ನಮಗಾಗಬಹುದು. ಇಂತಹ ಪದಗಳಿಗೆ ಇಂಗ್ಲಿಷ್‌ನಲ್ಲಿ ನಿರ್ದಿಷ್ಟ ಪದಗಳೇ ಇಲ್ಲ. ಇರಬೇಕೆಂದು ನಾನು ಹೇಳುತ್ತಲೂ ಇಲ್ಲ. ಇರುವುದಕ್ಕೆ ಸಾಧ್ಯವೂ ಇಲ್ಲ. ಸ್ಥಳೀಯ ಭಾಷೆಗಳನ್ನು ಆಡುವ ನಮ್ಮ ಜನರ ಅಗತ್ಯಗಳೇ ಬೇರೆ. ವಿದೇಶೀ ಭಾಷೆಗಳನ್ನು ಮಾತನಾಡುವವರ ಅಗತ್ಯಗಳೇ ಬೇರೆಯಾಗಿರುತ್ತವೆ. ಭತ್ತದ ವ್ಯವಸಾಯವೇ ಇಲ್ಲದ, ತೆಂಗು ಕಂಗು ಬಾಳೆ ಬಸಳೆ ಬೆಳೆಯದ ಒಂದು ನಾಡಿನಲ್ಲಿ ಅವುಗಳಿಗೆ ಸಂಬಂಧಿಸಿದ ಪದಗಳು ಇರುವುದಾದರೂ ಹೇಗೆ. ವೃತ್ತಿ ಸಂಪ್ರದಾಯಗಳು ಬೇರೆ ಇರುವ ದೇಶಗಳ ವೃತ್ತಿ ಪದಕೋಶ ನಮ್ಮಲ್ಲಿ ಇರಲು ಸಾಧ್ಯವಿಲ್ಲ. ದೈವಾರಾಧನೆ, ಯಕ್ಷಗಾನ, ಪಾಡ್ದನ ಪಾಟ್ಟುಗಳು ಇವುಗಳ ಸ್ವರೂಪವನ್ನು ನಿರೂಪಿಸುವ ಪದಗಳು ಇಂತಹ ಪ್ರಕಾರಗಳೇ ಇಲ್ಲದ ದೇಶ ಭಾಷೆಗಳಲ್ಲಿ ಇರಲು ಸಾಧ್ಯವಿಲ್ಲ. ನಮ್ಮ ಊಹೆಗೂ ಮೀರಿದ ವೈವಿಧ್ಯ ಇರುವ ಜಗತ್ತುಗಳ ಭಾಷೆಗಳು ಆಯಾ ದೇಶ ಮತ್ತು ಕಾಲಮಾನದ ಅಗತ್ಯಗಳನ್ನು ಪೂರೈಸುತ್ತಾ ಬಂದಿವೆ. ಈ ಎಚ್ಚರದಿಂದಲೇ ನಾವು ನಮ್ಮ ಭಾಷೆಗಳನ್ನು ಅನನ್ಯ ಸಂಪತ್ತು ಎಂದು ಪರಿಗಣಿಸಿ ಕಾಯ್ದುಕೊಳ್ಳಬೇಕು. ಇಂತಹ ಹಲವು ಭಾಷೆಗಳು ಇರುವುದು ನಮ್ಮ ನಾಡಿನ ಸೌಭಾಗ್ಯವೇ ಹೊರತು ದೋಷವಲ್ಲ. ಹಾಗಾಗಿ ಹಲವು ಭಾಷೆಗಳು ಇರುವುದು ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕು.
ಕರಾವಳಿ ಪ್ರದೇಶದ ಸಮುದಾಯಗಳ ಜನರು ಮಾತನಾಡುವ ಭಾಷೆಗಳಲ್ಲಿ ಇರುವ ಪದಸಂಪತ್ತು ಅಚ್ಚರಿ ತರುವಷ್ಟು ಸಮೃದ್ಧವಾಗಿದೆ. ತುಳುವಿನ ಪಾಡ್ದನಗಳಲ್ಲಿ, ಅಜ್ಜಿಕತೆಗಳಲ್ಲಿ, ಕಬಿತಗಳಲ್ಲಿ , ದೈವದ ನುಡಿಕಟ್ಟು ಪಾರಿ ಅಭಯದ ನುಡಿಗಳಲ್ಲಿ, ಗಾದೆ ಒಗಟುಗಳಲ್ಲಿ, ಆಚರಣೆಗಳ ಪಾರಿಭಾಷಿಕ ಪ್ರಯೋಗಗಳಲ್ಲಿ ಬಳಕೆಯಾಗುವ ಪದಗಳ ಜಗತ್ತು ಅದ್ಭುತವಾಗಿದೆ. ಬ್ಯಾರಿ, ಹವ್ಯಕ, ಗೌಡ ಕನ್ನಡ, ಕುಂದಾಪ್ರ ಕನ್ನಡ, ಕೊರಗ ಭಾಷೆಗಳು ಅನನ್ಯ ಪದಸಂಪತ್ತನ್ನು ಹೊಂದಿವೆ. ಮಾತನಾಡುವ ಜನರ ಸಂಖ್ಯೆ ಕಡಿಮೆಯಾದರೂ ಪದಗಳ ಸೃಷ್ಟಿ ನಿರಂತರವಾಗಿ ನಡೆದಿದೆ. ಹಿಂದಿನ ಕಾಲದಲ್ಲಿ ಜನರು ಮಾತುಗಳನ್ನು ಸಾವಧಾನದಿಂದ ಕೇಳುವ ಪರಿಪಾಠವಿತ್ತು. ಅದುವೇ ಮಾತಿಗೆ ಕಿವಿ ಕೊಡುವ ಸಂಪ್ರದಾಯ. ಮಾತುಗಳಿಗೆ ಪ್ರದರ್ಶನಗಳ ಆಯಾಮ ಬಹಳ ದೊಡ್ಡದಿತ್ತು. ಮಾತಿನ ಅರ್ಥಗಳನ್ನು ದಾಟಿಸುವ ಸಲುವಾಗಿ ಕುಣಿತ, ಅಭಿನಯ, ವಾಚನ, ಗಮಕ ಹೀಗೆ ಹಲವು ಕಲೆಗಳನ್ನು ಜನರು ರೂಪಿಸುತ್ತಾ ಬಂದರು. ಇವು ಮಾತಿನ ಶಕ್ತಿಯನ್ನು ಹೊರಗೆಡಹುವ ದಾರಿಗಳಾಗಿವೆ. ಬಹುಶಃ ಇಂದಿನ ನಮ್ಮ ಸಣ್ಣ ಸಣ್ಣ ಭಾಷೆಗಳ ಮಾತಿನ ಲಯಗಳನ್ನು ವಿವಿಧ ವಿನ್ಯಾಸಗಳಲ್ಲಿ ಕೇಳಿಸುವ ಕೆಲಸ ಹೆಚ್ಚು ಆಗಬೇಕಾಗಿದೆ. ತುಳುವಿನ ಸಿರಿ ಮಹಾಕಾವ್ಯದ ಒಂದು ನಿದರ್ಶನವನ್ನು ನೀಡಿ ಸ್ಥಳೀಯ ಭಾಷೆಯ ಅನನ್ಯತೆಯನ್ನು ತಿಳಿಸುವ ಪ್ರಯತ್ನ ಮಾಡುತ್ತೇನೆ.
ತುಳುವಿನಲ್ಲಿ ಬಹಳ ದೀರ್ಘವಾದ ಜನಪದ ಕಾವ್ಯಗಳಿವೆ. ದೈವಗಳ ಹುಟ್ಟು, ಕಾರಣಿಕ ಮತ್ತು ಪ್ರಸರಣವನ್ನು ವಿವರಿಸುವ ನೂರಾರು ಪಾಡ್ದನಗಳಿವೆ. ಸಿರಿ ಮತ್ತು ಕೋಟಿಚೆನ್ನಯ ಸಂಧಿಗಳು ಹತ್ತು ಸಾವಿರ ಸಾಲುಗಳನ್ನು ಮೀರುವಷ್ಟು ದೀರ್ಘವಾಗಿವೆ. ಒಂದು ಅಂದಾಜಿನ ಲೆಕ್ಕದ ಪ್ರಕಾರ ಸುಮಾರು ಐವತ್ತು ಸಾವಿರದಷ್ಟು ತುಳು ಜನಪದ ಕತೆಗಳ ಸ್ವತಂತ್ರ ಮೂಲಪಠ್ಯಗಳಿವೆ. ಬೇಸಾಯದ ಗದ್ದೆಗಳಲ್ಲಿ ಹೆಂಗಸರು ಹಾಡುವ ಕಬಿತಗಳು ಇನ್ನೂರು ದಾಟಬಹುದು. ಇವುಗಳ ಪಠ್ಯಪ್ರಭೇದಗಳನ್ನು ಪರಿಗಣಿಸಿದರೆ ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಆರಾಧನೆ, ಆಚರಣೆ, ಕುಣಿತ, ಸಾಮಾಜಿಕ ಮತ್ತು ಧಾರ್ಮಿಕ ಸಂಪ್ರದಾಯಗಳು ಹೀಗೆ ನೂರಾರು ಸಂದರ್ಭಗಳಲ್ಲಿ ಬಳಕೆಯಾಗುವ ಇಂತಹ ಭಾಷಿಕ ರೂಪಗಳನ್ನು ಕೇಳಿ ನಮ್ಮ ಜನರು ಮಾತಿನ ಆಳ ಅಗಲವನ್ನು ಅರಿತಿದ್ದರು. ಇಂತಹ ಮಾತುಗಳನ್ನು ಕೇಳುವ ಹಾಗೆ ಮಾಡಿದರೆ ಭಾಷೆ ತಲೆಎತ್ತಿ ನಿಲ್ಲುತ್ತದೆ, ನಡೆದಾಡುತ್ತದೆ. ಸಿರಿ ಸಂಧಿಯ ಕತೆ ಬಹಳ ದೊಡ್ಡದು. ತುಳು ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟವಾದ ಸಿರಿ ಪಠ್ಯದಲ್ಲಿ 15,683 ಸಾಲುಗಳಿವೆ. ಈ ಕಾವ್ಯ ಕಥನದ ನಡಿಗೆಯ ಮುಖ್ಯ ಘಟನೆಗಳು ಹೀಗಿವೆ. ಕಾವ್ಯದಲ್ಲಿರುವ ನೂರಾರು ಘಟನೆಗಳು ಸನ್ನಿವೇಶಗಳನ್ನು ನಿರೂಪಿಸಬೇಕಾದರೆ ಒಂದು ಭಾಷೆಯ ಪದಸಂಪತ್ತು ಸಮೃದ್ಧವಾಗಿರಬೇಕು. ಸಿರಿ ಸಂಧಿಯ ಆರಂಭ, ಅಜ್ಜೆರು ಆರ್ಯ ಬನ್ನಾರು ಬಿರ್ಮು ಪಾಲವರ ದೈನಂದಿನ ಚಟುವಟಿಕೆ, ಸತ್ಯನಾಪುರಕ್ಕೆ ಬಡಬ್ರಾಹ್ಮಣ ಪ್ರವೇಶ, ಆದಿ ಆಲಡೆಯ ಜೀರ್ಣೋದ್ಧಾರ, ಸಿರಿಯ ಜನನ, ಬಾಲ್ಯ, ಮದುವೆಯ ಪ್ರಸ್ತಾವ, ಜ್ಯೋತಿಷ್ಯ, ಸಿರಿಯ ಜೀವನಾವರ್ತನ ಆಚರಣೆಗಳು, ಅಜ್ಜೆರು ಮರಣ ಮತ್ತು ಸಾವು ಸಂಬಂಧೀ ಆಚರಣೆಗಳು, ಪಂಚಾಯ್ತಿ ಕಟ್ಟೆ, ಸಿರಿ ಅರಮನೆ ತೊರೆಯುವುದು, ವಿವಾಹ ವಿಚ್ಛೇದನ, ಈರಬದ್ರ ಪ್ರಕರಣ, ಹರಕೆ ಸಂದಾಯ, ಬೋಳದರಮನೆ ಕೊಟ್ಟರಡಿ ಕೊಡ್ಸರಾಳ್ವ, ಮರುಮದುವೆ, ಕುಮಾರನ ಜನನ, ಸಿರಿ ಸಾಮು ಸಂಘರ್ಷ, ಸೊನ್ನೆಯ ಹುಟ್ಟು, ಸಿರಿಯ ಅಂತ್ಯ, ಸಾಮುವಿನ ನಿಧನ, ದುರ್ಗಲ್ಲ ಪೆರ್ಗಡೆ, ಗಿಳಿರಾಮು ಪಡ್ಡೊಂತಾಯ ದಂಪತಿ, ಬಬ್ಬು ಪ್ರಕರಣ, ಸೊನ್ನೆ ಗಿಂಡ್ಯೆ ಬಾಲ್ಯ, ಮದುವೆ, ಸೊನ್ನೆಗೆ ಶಿಕ್ಷೆ, ಕನಸು, ಸೊನ್ನೆ ಗರ್ಭ ಧರಿಸಿ ಅಬ್ಬಯ ದಾರಯರ ಜನನ, ಚೆನ್ನೆಮಣೆ ಆಟ, ಮದುವೆಯ ಪ್ರಸ್ತಾವ, ಮದುವೆಯ ಸಂಭ್ರಮ, ಬೆರ್ಮನ ಆಗಮನ, ಚೆನ್ನೆ ಮಣೆ ಆಟ, ಮಕ್ಕಳ ಮರಣ, ಸಾವಿನ ಆಚರಣೆಗಳು, ಮರಣೋತ್ತರ ಮದುವೆ, ಹರಕೆ ಸಂದಾಯ, ಅಲೌಕಿಕ ಶಕ್ತಿಗಳಾಗಿ ನೆಲೆನಿಲ್ಲುವುದು - ಹೀಗೆ ಸಿರಿ ಸಂಧಿಯಲ್ಲಿ ನಾಲ್ಕು ತಲೆಮಾರುಗಳ ಬದುಕು ಮತ್ತು ಸಂಘರ್ಷದ ಕಥನವಿದೆ. ಈ ಕಾವ್ಯದಲ್ಲಿ ಲಕ್ಷಕ್ಕಿಂತ ಹೆಚ್ಚು ಪದಗಳಿವೆ. ನಮ್ಮ ಗಮನ ಸೆಳೆಯುವ ಸಾವಿರಾರು ಪದಗಳಿವೆ. ತುಳುವಿನ ಹೊಸ ಪ್ರಯೋಗಗಳಿವೆ. ಪ್ರಾಚೀನ ಕಾಲ ಘಟ್ಟದ ತುಳು ಪ್ರದೇಶದ ಸಾಂಸ್ಕೃತಿಕ ವಿವರಗಳನ್ನು ಇಲ್ಲಿನ ಎಲ್ಲ ಭಾಷೆಗಳ ಮೌಖಿಕ ಮತ್ತು ಲಿಖಿತ ಸಾಹಿತ್ಯ ಪರಂಪರೆಗಳಲ್ಲಿ ಕಾಣಬಹುದು. ಇಂತಹ ಕಾವ್ಯಗಳಿಗೆ ಕಿವಿಕೊಡುವ ಮೂಲಕ ನಮ್ಮ ಶಬ್ದ ಸಂಪತ್ತು ಬೆಳೆಯುತ್ತದೆ. ಈ ಬಗೆಯ ಕಾವ್ಯಗಳು ಕೇವಲ ಪದಗಳ ಮೂಟೆಯಲ್ಲ. ಅದರಲ್ಲಿ ಜನರ ಅರಿವಿನ ಬೆಳಕಿದೆ. ತಿಳುವಳಿಕೆಯ ಲೋಕ ದೃಷ್ಟಿ ಇದೆ. ಇಂತಹ ಅನುಭವ ಕಥನಗಳ ಮೂಲಕ ಸಣ್ಣ ಭಾಷೆಗಳು ತಲೆ ಎತ್ತಿ ನಿಲ್ಲುವಂತೆ ನಮ್ಮ ಹಿರಿಯರು ಮಾಡಿದ್ದಾರೆ. ಸಣ್ಣ ಭಾಷೆಗಳನ್ನು ತಲೆಎತ್ತಿ ನಿಲ್ಲುವಂತೆ ಹಿರಿಯರು ಮಾಡಿದ ಪ್ರಯತ್ನಗಳ ಬೆಳಕಿನಲ್ಲಿ ಸದ್ಯ ನಮ್ಮ ತಾಯ್ನುಡಿಗೆ ಶಕ್ತಿಯನ್ನು ತುಂಬಬೇಕು. ನಮ್ಮ ತಾಯ್ನುಡಿಯ ಇತಿಹಾಸವನ್ನು ಅರಿತು ಅದರ ಭವಿಷ್ಯವನ್ನು ರೂಪಿಸಬೇಕು.
ಇವತ್ತು ಮಾತಿನ ಶಕ್ತಿ ಏನೆಂಬುದು ಜನರಿಗೆ ತಿಳಿದಿದೆ. ಭಾಷೆಗಳಲ್ಲಿ ಸ್ಥಳೀಯ ಜನರು ಅವರ ಅನನ್ಯತೆಯ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ. ಸಾರ್ವಜನಿಕ ವೇದಿಕೆಗಳಲ್ಲಿ ಜನರು ಅವರ ತಾಯ್ನುಡಿಯಲ್ಲಿ ಅಂಜಿಕೆಯಿಲ್ಲದೆ ಮಾತನಾಡುತ್ತಿದ್ದಾರೆ. ತುಳುವಿನಲ್ಲಿ ಬ್ಯಾರಿ ಭಾಷೆಯಲ್ಲಿ, ಅರೆಭಾಸೆಯಲ್ಲಿ ಮಾತನಾಡುವುದೆಂದರೆ ಅದು ಸ್ವಾಭಿಮಾನದ ಸಂಗತಿಯಾಗಿದೆ. ಇದು ಸಣ್ಣ ಭಾಷೆಗಳು ತಲೆ ಎತ್ತಿ ನಿಂತದ್ದರ ಪರಿಣಾಮವೇ ಆಗಿದೆ. ಈ ಭಾಷೆಗಳಲ್ಲಿ ಸಾಹಿತ್ಯ ರಚನೆಯಾಗುತ್ತಿದೆ. ವಿಚಾರ ಸಂಕಿರಣ, ಕವಿಗೋಷ್ಠಿಗಳು ನಡೆಯುತ್ತಿವೆ. ಭಾಷೆಗಳ ನಡುವೆ ಅನುವಾದಗಳ ಕೆಲಸವೂ ನಡೆಯುತ್ತಿದೆ. ಶಬ್ದ ಕೋಶಗಳ ರಚನೆಯಾಗುತ್ತಿವೆ. ಸಣ್ಣ ಭಾಷೆಗಳ ಸ್ಥಿತಿ ಗತಿ ಚೆನ್ನಾಗಿದೆ ಅಂತ ಅನ್ನಿಸಿದರೂ ಉದ್ಯೋಗ, ಉನ್ನತ ಶಿಕ್ಷಣ, ತಂತ್ರಜ್ಞಾನ ಮತ್ತು ಸಂಶೋಧನೆಯ ಭಾಷೆಯಾಗುವ ಸ್ಪರ್ಧೆಯಲ್ಲಿ ನಮ್ಮ ಸಣ್ಣ ಭಾಷೆಗಳು ಎದುರಿಸಬೇಕಾದ ಸವಾಲುಗಳು ಬಹಳಷ್ಟಿವೆ. ಭಾಷೆ, ಮಾತು ಮತ್ತು ಅದರ ಬಳಕೆಯ ವಿಷಯದಲ್ಲಿ ಆಯಾ ಸಮುದಾಯಗಳ ಜನರು ಸದಾ ಜಾಗೃತ ಸ್ಥಿತಿಯಲ್ಲಿ ಇರಬೇಕು. ಇದು ಆಡುವ ಮಾತಿನ ಮೇಲೆ ನಾವು ಹೊಂದಿರಬೇಕಾದ ಉತ್ತರದಾಯಿತ್ವ. ಭಾಷೆಯ ವಿಚಾರದಲ್ಲಿ ನಾವು ಅಸಡ್ಡೆ ತೋರಿದರೆ ಬೆಳಾರಿ ಭಾಷೆಗೆ ಒದಗಿದ ದುರ್ಗತಿ ನಮ್ಮ ಭಾಷೆಗೂ ಆಗಬಹುದು. ಸಾಯುತ್ತಿರುವ ಭಾಷೆಗಳ ಪಟ್ಟಿ ಬೆಳೆಯುತ್ತಿದೆ. ಅವನತಿಯತ್ತ ಸಾಗುತ್ತಿರುವ ಭಾಷೆಗಳ ಸಂಖ್ಯೆ ಹೆಚ್ಚಾಗುತ್ತದೆ. ಭಾಷೆಗಳ ನಡುವೆ ಯುದ್ಧವೂ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ನಮ್ಮ
ಭಾಷೆಯನ್ನು ನಾವು ಕೈಹಿಡಿದು ಮುನ್ನಡೆಸಿದರೆ ಅದು ನಮ್ಮನ್ನು ತಲೆಯೆತ್ತಿ ನಡೆಯುವಂತೆ ಮುನ್ನಡೆಸುತ್ತದೆ.







