ಶೋಷಿತ, ದಲಿತ, ಮಹಿಳೆಯರ ಧ್ವನಿಯಾದ ‘ವಾರ್ತಾಭಾರತಿ’

ಭಾರತದಲ್ಲಿ ಸಾವಿರಾರು ವರ್ಷಗಳಿಂದ ಸನಾತನ ಚಿಂತನೆಯಿದ್ದು, ವರ್ಣ ವ್ಯವಸ್ಥೆ, ಜಾತಿಪದ್ಧತಿ, ಅಸ್ಪಶ್ಯತೆ ಮತ್ತು ಲಿಂಗಭೇದನೀತಿಯಂತಹ ಅಸಮಾನತೆಯ ನಿಯಮಗಳು ಇದ್ದದ್ದು ಸರಿಯಷ್ಟೇ. ಈ ಬಗೆಯ ಅಸಮಾನತೆಗಳ ವಿರುದ್ಧ ಕಾಲ ಕಾಲಕ್ಕೆ ಬುದ್ಧ, ಬಸವ, ಅಲ್ಲಮ, ಅಕ್ಕಮಹಾದೇವಿ, ಕುವೆಂಪು, ಶಿವರಾಮಕಾರಂತ ಮುಂತಾದ ಮಹನೀಯರು ಬಂಡಾಯದ ಬಾವುಟವನ್ನು ಹಾರಿಸಿದರು.
ಈ ಪ್ರಮಾಣದ ತಿಳಿವಳಿಕೆಯೂ ಎರಡು ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯದಲ್ಲಿ ದೊಡ್ಡಪ್ರಮಾಣದಲ್ಲಿದೆ. ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬ ನೀತಿಯೂ ಪಂಪನಿಂದ ಮೊದಲ್ಗೊಂಡು ಇಪ್ಪತ್ತನೆಯ ಶತಮಾನದ ದಾರ್ಶನಿಕ ಕವಿ ಕುವೆಂಪು ಅವರ ‘ವಿಶ್ವದ ಮಾನವರೆಲ್ಲರೂ ಒಂದೇ’ ಎಂಬ ತೀರ್ಮಾನವನ್ನು ಒಳಗೊಂಡಿದೆ. ಹೀಗಾಗಿ ಸರ್ವಜನಾಂಗದ ಶಾಂತಿಯ ತೋಟವಾಗಿ ನಾವೆಲ್ಲರೂ ಬದುಕಬೇಕೆಂಬುದು ಕನ್ನಡದ ಪ್ರಜ್ಞಾವಂತ ಮನಸ್ಸುಗಳ ಬಯಕೆಯಾಗಿದೆ. ಈ ಬಗೆಯ ಸಕಲರ ಏಳಿಗೆಯನ್ನು ಕುರಿತು ಮಾನವೀಯ ಸಿದ್ಧಾಂತವನ್ನು ಹೊಸಕಾಲದಲ್ಲಿ ವಾರ್ತಾಭಾರತಿ ಪತ್ರಿಕೆಯೂ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದೆ.
ಎಲ್ಲಾ ಬಗೆಯ ಅನ್ಯಾಯಗಳನ್ನು ವಿರೋಧಿಸುತ್ತಲೇ ನ್ಯಾಯದ ದಾರಿಯಲ್ಲಿ ನಾವು ನಡೆಯಬೇಕಾದ ಸದ್ಬುದ್ಧಿಯನ್ನು ತನ್ನೆಲ್ಲಾ ವಿವರಗಳಲ್ಲಿ, ಪ್ರತಿನಿತ್ಯವೂ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಸಂಪಾದಕೀಯ, ಅಂಕಣ, ವಿಶ್ಲೇಷಣೆ, ರಾಷ್ಟ್ರೀಯ, ವಿದೇಶ ಮಾಹಿತಿಯ ಕಣಜವಾಗಿದೆ. ತನ್ನ ಸೈದ್ಧಾಂತಿಕ ನೆಲೆಗಟ್ಟಿನ ಮೂಲಕ ಶೋಷಿತ, ದಲಿತ, ಮಹಿಳೆಯರ ಪರ ಬಲವಾಗಿ ನಿಂತಿರುವುದಲ್ಲಿ ಮೊದಲಿನ ಸಾಲು ‘ವಾರ್ತಾಭಾರತಿ’ಗೆ ಸಲ್ಲುತ್ತದೆ.
ಮುದ್ರಣದ ಜೊತೆಗೆ ಡಿಜಿಟಲ್ ನಂ.1 ಆಗಿ ಕರ್ತವ್ಯ ನಿರ್ವಹಿಸುತ್ತಿದೆ. ಕ್ಷಣಾರ್ಧದಲ್ಲಿ ಜಾಗತಿಕ ಮಾಹಿತಿಗಳು ಲಭ್ಯವಾಗುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.
ಪತ್ರಿಕೆ ಕೈಯಲ್ಲಿ ಹಿಡಿದರೆ ಸುದ್ದಿಯ ಹೂರಣವೇ ತುಂಬಿರುತ್ತದೆ ಹೊರತು, ಆಡಂಬರದ ಜಾಹೀರಾತುಗಳಾಗಲಿ, ಶ್ರೀಮಂತರ ಹೊಗಳಿಕೆಯಾಗಲಿ ಇರುವುದಿಲ್ಲ, ಪತ್ರಿಕೆ ತನ್ನ ನೈಜತನಕ್ಕೆ ಬದ್ಧವಾಗಿರುವುದು ಪತ್ರಿಕೆ ಮೇಲಿನ ಪ್ರೀತಿ ಹೆಚ್ಚಿಸಿದೆ.
ಹಲವಾರು ಪತ್ರಿಕೆಗಳು ಬರುತ್ತಿವೆ. ಆದರೆ ‘ವಾರ್ತಾಭಾರತಿ’ ಸುದ್ದಿಗಳ ರೂಪ ಮಾತ್ರ ಭಿನ್ನವಾಗಿರುತ್ತದೆ. ಒಂದು ಸಮಾಜಮುಖಿ ಸುದ್ದಿ ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ತಿಳಿಸುತ್ತದೆ. ಜೆನ್ ಝಿ ಹೋರಾಟದ ಸಂಪೂರ್ಣ ಮಾಹಿತಿ ವಾರ್ತಾಭಾರತಿಯಲ್ಲಿ ಬಿಟ್ಟರೆ ಬೇರೆ ಯಾವ ಮಾಧ್ಯಮಗಳಲ್ಲೂ ಪ್ರಕಟವಾಗಲಿಲ್ಲ.
ಸಮಾಜಮುಖಿಯಾಗಿ ಹೊರಹೊಮ್ಮಬೇಕಾದರೆ ನೈಜ ಚಿತ್ರಣಗಳ ಅನಾವರಣ ಮುಖ್ಯ, ಅಂತಹ ಕೆಲಸವನ್ನು ‘ವಾರ್ತಾಭಾರತಿ’ಯ ಇಡೀ ತಂಡ ಮಾಡುತ್ತಿರುವುದು ಜನರ ಮೆಚ್ವುಗೆಗೆ ಪಾತ್ರವಾಗಿದೆ.
ಕುವೆಂಪು ಅವರ ಆಶಯ ಸರ್ವಜನಾಂಗದ ಶಾಂತಿಯ ತೋಟ. ಅದರಂತೆ ಎಲ್ಲರೂ ಬದುಕಬೇಕಿದೆ. ಮನುವಾದಿಗಳ ತಂತ್ರ, ಕುತಂತ್ರಗಳಿಗೆ ಬಲಿಯಾಗದೆ, ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಬದುಕು ಬಹಳ ಸುಂದರ, ಅಂತಹ ಬದುಕನ್ನು ಹಾಳುಗೆಡವುವವರ ವಿರುದ್ಧ ಜಾಗೃತಿ ಅಗತ್ಯ, ಅಂತಹ ಜಾಗೃತಿ ‘ವಾರ್ತಾಭಾರತಿ’ಯಲ್ಲಿ ಇರುತ್ತದೆ.
ದೇಶದಲ್ಲಿ ಅಕ್ರಮ ಅನ್ಯಾಯಗಳು ನಡೆಯುತ್ತಿದ್ದರೆ ಸಮಗ್ರವಾಗಿ ತೋರಿಸಿ ಸಮಾಜದ ಮುಂದಿಟ್ಟು ಸರಿ ತಪ್ಪುಗಳನ್ನು ಜನರಿಗೆ ಬಿಡಲಾಗುತ್ತಿದೆ. ಸರಕಾರ ನಿಲುವುಗಳಲ್ಲಿ ಅಸಡ್ಡೆತನ, ದಬ್ಬಾಳಿಕೆ, ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಅದನ್ನು ತಡೆಯುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. ಎಂತಹದೇ ಸಂದರ್ಭ ಎದುರಾದರೂ ಅಂಜದೆ, ಕುಗ್ಗದೆ ಮುನ್ನಡೆಯುತ್ತಿದೆ. ಎಲ್ಲಾ ವರ್ಗದ ಸಮಗ್ರ ಸುದ್ದಿಗಳು ಪ್ರಕಟಗೊಳ್ಳುತ್ತಿದೆ.
ವಾರ್ತಾ ಭಾರತಿ ದಿನಪತ್ರಿಕೆಯು ತನ್ನನ್ನು ಜನದನಿಯ ಸಾರಥಿ ಎಂದು ಕರೆದುಕೊಂಡಿದೆ. ವಾಸ್ತವವಾಗಿ ವಾರ್ತಾಭಾರತಿ ಪತ್ರಿಕೋದ್ಯಮ ಕ್ಷೇತ್ರದ ಬಂಡಾಯದ ದನಿಯಾಗಿದೆ. ಬಹುತೇಕ ಮಾಧ್ಯಮ ಸಂಸ್ಥೆಗಳು ವ್ಯವಸ್ಥೆಯ ಪರವಾಗಿರುವಾಗ ವ್ಯವಸ್ಥೆಯ ವಿರುದ್ಧ ನಿಲ್ಲುವ ಎದೆಗಾರಿಕೆ, ಸತ್ಯದ ಪರವಾಗಿ ಬರೆಯುವ ಧೈರ್ಯದ ಕಾರಣಕ್ಕೆ ‘ವಾರ್ತಾಭಾರತಿ’ ಪತ್ರಿಕೋದ್ಯಮದ ಬಂಡಾಯಗಾರನಾಗಿದೆ.
ಕರ್ನಾಟಕದಲ್ಲಿ ದಲಿತ-ಬಂಡಾಯ, ರೈತ-ಕಾರ್ಮಿಕ ಚಳವಳಿಗಳ ಒಟ್ಟೊಟ್ಟಿಗೆ ಬೆಳೆದು ಬಂದ ನಮಗೆಲ್ಲಾ ಪಿ.ಲಂಕೇಶರ ಲಂಕೇಶ್ ಪತ್ರಿಕೆ, ದಲಿತ ಸಂಘಟನೆಯ ಪಂಚಮ ಪತ್ರಿಕೆ, ಸಾಹಿತಿ ಚಂದ್ರಶೇಖರ ಪಾಟೀಲರ ಸಂಕ್ರಮಣ, ಪಾಟೀಲ ಪುಟ್ಟಪ್ಪರ ಮಾಧ್ಯಮ ಕ್ಷೇತ್ರದಲ್ಲಿನ ಪ್ರಯೋಗಗಳು, ಡಿ.ಎಸ್. ನಾಗಭೂಷಣರ ಹೊಸಮನುಷ್ಯ, ಇಂದೂಧರ ಹೊನ್ನಾಪುರ ಅವರ ಸಂವಾದ, ಮೈಸೂರಿನ ಆಂದೋಲನ ದಿನಪತ್ರಿಕೆಗಳಂತಹ ಕೆಲವೇ ಕೆಲವು ಪತ್ರಿಕೆಗಳು ಕರ್ನಾಟಕದಲ್ಲಿ ಬಂಡಾಯದ ದನಿಗಳಾಗಿ ರೂಪುಗೊಂಡು ಪ್ರಭುತ್ವವನ್ನು ಎಚ್ಚರಿಸಿವೆ.
ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾರಂಗ ಬ್ರಿಟಿಷರ ವಿರುದ್ಧವಾಗಿತ್ತು. ಕಠಿಣ ನಿರ್ಬಂಧಗಳ ನಡುವೆಯೂ ಭೂಗತವಾಗಿಯೇ ಜನಜಾಗೃತಿಯಲ್ಲಿ ತೊಡಗಿದ್ದವು. ಪತ್ರಕರ್ತರು ತಮ್ಮ ಜೀವನ ಪಣಕ್ಕಿಟ್ಟು ಸತ್ಯವನ್ನು ಬರೆಯುತ್ತಿದ್ದರು. ಬ್ರಿಟಿಷರ ಶಿಕ್ಷೆಗೆ ಗುರಿಯಾದರು. ಜೈಲು ಶಿಕ್ಷೆ ಅನುಭವಿಸಿದರು. ಆದರೆ, ಭಾರತವನ್ನು ಸ್ವಾತಂತ್ರ್ಯಗೊಳಿಸುವ ಹೋರಾಟದಲ್ಲಿ ರಾಜಿಯಾಗಲಿಲ್ಲ. ತಮ್ಮನ್ನು ಎಂದೂ ಮಾರಿಕೊಳ್ಳಲಿಲ್ಲ. ಇಂದು ಮಾಧ್ಯಮಗಳು ಮಾರಿಕೊಂಡವುಗಳು ಎಂದು ಕುಖ್ಯಾತಿ ಗಳಿಸಿವೆ.
ಯಾವತ್ತಿನಿಂದ ಮಾಧ್ಯಮಗಳೂ ಉದ್ಯಮಿಗಳ ಕೈವಶವಾದವೋ ಅಥವಾ ರಾಜಕೀಯ ಪಕ್ಷಗಳ ವಕ್ತಾರಿಕೆ ಮಾಡಲಾರಂಭಿಸಿದವೋ ಅಂದಿನಿದಲೇ ಮಾಧ್ಯಮಗಳ ಪತನ ಆರಂಭಗೊಂಡಿತು. ಪ್ರಶ್ನಿಸುವ ಮನೋಭಾವವನ್ನೇ ಕಳೆದುಕೊಂಡ ಮಾಧ್ಯಮಗಳು ಜನ ಸಾಮಾನ್ಯರ ಕಳಕಳಿಯನ್ನು ಮರೆತಿವೆ. ಪ್ರಭುತ್ವ ಪ್ರಶ್ನಿಸುವವರನ್ನೇ ಮಾಧ್ಯಮಗಳು ಪ್ರಶ್ನಿಸುತ್ತಿರುವುದು ಕಾಲದ ಕುಚೋದ್ಯ.
ರಿಪೋರ್ಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ ಪ್ರಕಟಿಸಿರುವ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳಲ್ಲಿ ಭಾರತ 157ನೇ ಸ್ಥಾನದಲ್ಲಿದೆ. ಭಾರತ ಅತ್ಯಂತ ಕೆಳ ವರ್ಗದಲ್ಲಿದೆ ಎಂದು ವರದಿಯೂ ಹೇಳುತ್ತಿದೆ. ಆದರೆ, ನಮ್ಮ ಮಾಧ್ಯಮಗಳು ಭಜನೆಯಲ್ಲಿ ತೊಡಗಿರುವುದೂ ಕಳವಳಕಾರಿಯಾಗಿದೆ. ಮಾಧ್ಯಮಗಳ ಅಭೂತಪೂರ್ವ ಬೆಂಬಲದಿಂದಲೇ ನಮ್ಮ ಪ್ರಧಾನ ಮಂತ್ರಿಗಳು ಕಳೆದ 12 ವರ್ಷದಲ್ಲಿ ಒಂದೇ ಒಂದು ಸುದ್ದಿಗೋಷ್ಠಿಯನ್ನು ನಡೆಸಿಲ್ಲ.
ಭಾರತದ ಪತ್ರಿಕೋದ್ಯಮದ ಸ್ಥಿತಿಯೂ ಕುಸಿಯುತ್ತಿರುವಾಗ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಚೆಗೆ ರಾಷ್ಟ್ರಮಟ್ಟದಲ್ಲಿ ನಡೆದ ಎಲ್ಲ ಹೋರಾಟಗಳಲ್ಲಿ ಮಾಧ್ಯಮಗಳಿಗೆ ಧಿಕ್ಕಾರ ಕೂಗಿರುವುದನ್ನು ನೋಡಿದ್ದೇವೆ. ತಮ್ಮ ಪ್ರಚಾರಕ್ಕೆ ಸಾಮಾಜಿಕ ಮಾಧ್ಯಮಗಳನ್ನು ಯುವಜನತೆ ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಅದರರ್ಥ ಮಾಧ್ಯಮಗಳ ಮೇಲಿನ ನಂಬಿಕೆ ಕಳೆದುಕೊಂಡಿವೆ ಮತ್ತು ಅವುಗಳಿಂದ ನ್ಯಾಯ ದೊರೆಯುವುದಿಲ್ಲ ಎಂದು ಅನಿಸಿದೆ. ಇದು ದುರಂತ.
ಈ ದುರಿತ ಕಾಲದಲ್ಲಿ ಸಂವಿಧಾನದ ಪರವಾಗಿ ಭಾರತದ ಬಹುತ್ವವನ್ನು ನಾಶಪಡಿಸುವ ಕೋಮು ಶಕ್ತಿಗಳ ವಿರುದ್ಧವಾಗಿ ವಾರ್ತಾಭಾರತಿ ಪತ್ರಿಕೆ ತನ್ನನ್ನು ಸಮರ್ಪಿಸಿಕೊಂಡಿದೆ. ಈ ಹಾದಿಯಲ್ಲಿ ಎದುರಾಗುವ ಎಲ್ಲ ಸವಾಲುಗಳಿಗೆ ಮುಖಾಮುಖಿಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಹೆಗ್ಗಳಿಕೆ ಪತ್ರಿಕೆಯದು. ಪತ್ರಿಕೆಯ ಅಂಕಣ ಬರಹಗಳು ಸತ್ಯಕ್ಕೆ ಕನ್ನಡಿ ಹಿಡಿಯುತ್ತವೆ.
ಎಲ್ಲಾಬಗೆಯ ಅನ್ಯಾಯಗಳನ್ನು ವಿರೋಧಿಸುತ್ತಲೇ ನ್ಯಾಯದ ದಾರಿಯಲ್ಲಿ ನಾವು ನಡೆಯಬೇಕಾದ ಸದ್ಬುದ್ಧಿಯನ್ನು ತನ್ನೆಲ್ಲಾ ವಿವರಗಳಲ್ಲಿ, ಪ್ರತಿನಿತ್ಯವೂ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಪತ್ರಿಕೆ 23 ವಸಂತಗಳನ್ನು ಪೂರೈಸಿ 24ನೇ ವರ್ಷದತ್ತ ದಾಪುಗಾಲು ಹಾಕುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ನಡುವೆ ಇಂತಹದೊಂದು ಪತ್ರಿಕೆ ಜೀವಂತವಾಗಿರುವುದು ನಮ್ಮ ಮುಂದಿನ ಪೀಳಿಗೆಗಳಿಗೆ ಮಾದರಿಯಾಗಿದೆ. ಮುಂದೆ ಬೆಳ್ಳಿ ಹಬ್ಬದ ಜೊತೆಗೆ ಸುವರ್ಣ ಮಹೋತ್ಸವ ಪೂರೈಸಿ ಶತಮಾನೋತ್ಸವದತ್ತ ಸಾಗಲಿ ಎಂದು ಹಾರೈಸುತ್ತೇನೆ.






