ಪ್ರಜಾಪ್ರಭುತ್ವದ ದೊಂದಿ ಹಿಡಿದಿರುವ ‘ವಾರ್ತಾಭಾರತಿ’

‘ವಾರ್ತಾ ಭಾರತಿ’ ನಿಜವಾದ ಅರ್ಥದಲ್ಲಿ ‘ಭಾರತೀಯ’ ವಾರ್ತೆಗಳನ್ನು ಪ್ರಸಾರ ಮಾಡುತ್ತಿರುವ ಪತ್ರಿಕೆಯೆಂದೇ ಅದು ತನ್ನ ವಿಶ್ವಾಸಾರ್ಹತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ವಸ್ತು ನಿಷ್ಠತೆ ಮತ್ತು ಒಳಗೊಳ್ಳುವಿಕೆಯನ್ನು ತನ್ನ ತಳಹದಿಯಾಗಿಸಿಕೊಂಡಿರುವ ‘ವಾರ್ತಾಭಾರತಿ’ ಅದನ್ನೇ ವೇದಿಕೆಯಾಗಿಸಿಕೊಳ್ಳುವ ಸಣ್ಣ ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ. ಅಂಚಿನಲ್ಲಿರುವವರನ್ನು ಕುರಿತ ಯಾವುದೇ ಸಂಗತಿಗೆ ಇಲ್ಲಿ ಜಾಗ ಸಿಗುತ್ತದೆ ಎನ್ನುವುದು ಪ್ರಜಾಪ್ರಭುತ್ವವೇ ಅಪಾಯದಲ್ಲಿರುವ ನಮ್ಮ ದೇಶದಲ್ಲಿ ಸಣ್ಣ ಸಂಗತಿಯಲ್ಲ. ಸಮಸಮಾಜವನ್ನು ಉದ್ದಕ್ಕೂ ವಿರೋಧಿಸುತ್ತಲೇ ಬಂದಿರುವ ಭಾರತೀಯ ಸಮುದಾಯದಲ್ಲಿ ಅರಿವಿನ ಬೆಳಕು ಮೂಡಿಸುವ ಕಷ್ಟ ಮತ್ತು ಸವಾಲುಗಳ ಸಂಕೀರ್ಣ ಸ್ಥಿತಿ ಎಲ್ಲರಿಗೂ ಗೊತ್ತಿರುವುದೇ. ಈ ಬೆಳಕಿನ ದೊಂದಿಯನ್ನು ಹಿಡಿದಿರುವ ‘ವಾರ್ತಾಭಾರತಿ’ ನಮ್ಮ ಕಾಲದ ತುರ್ತನ್ನು ಗ್ರಹಿಸಿದೆ.
ಕಲೆ ಮತ್ತು ಪತ್ರಿಕೋದ್ಯಮದ ಹೊಣೆಗಾರಿಕೆಗಳ ಬಗೆಗೆ ಎಂದಿನಿಂದಲೂ ಚರ್ಚೆಯಾಗುತ್ತಲೇ ಇದೆ. ಪ್ರತೀ ಕಾಲದಲ್ಲೂ ಇವುಗಳ ಪ್ರಭಾವಿ ಪಾತ್ರಗಳ ಬಗೆಗೆ ಉತ್ಸಾಹದಿಂದ ಮಾತನಾಡುತ್ತಲೇ ಇರುತ್ತೇವೆ. ಕುತೂಹಲದ ಸಂಗತಿ ಎಂದರೆ ಎಲ್ಲ ಕಾಲಘಟ್ಟಗಳಲ್ಲಿಯೂ ಕಲೆಯ ಪಾತ್ರ ಹೆಚ್ಚಾಗುತ್ತಲೇ ಇದೆ ಎನ್ನುವ ಸತ್ಯವನ್ನು ನಾವು ಪುನರುಚ್ಚರಿಸುತ್ತಲೇ ಇರುತ್ತೇವೆ. ಸಮುದಾಯದ ಎಲ್ಲ ಬಗೆಯ ಆರೋಗ್ಯಗಳನ್ನು ಕಾಪಾಡಲು ಇವು ಉದ್ದಕ್ಕೂ ತಮ್ಮ ನೈತಿಕ ಬಲವನ್ನು ಉಳಿಸಿಕೊಳ್ಳಲೇ ಬೇಕು. ಈ ಎರಡು ಕ್ಷೇತ್ರಗಳೇನಾದರೂ ತಮ್ಮ ನೈತಿಕತೆಯನ್ನು ಕಳೆದುಕೊಂಡರೆ ಅಥವಾ ಹೊಣೆಗಾರಿಕೆಯನ್ನು ಕೈಬಿಟ್ಟರೆ ಆ ಸಮುದಾಯಗಳು ಎದುರಿಸುವ ದುರಂತ ಭೀಕರ. ಅಂತಹ ಹೊತ್ತಿನಲ್ಲೆಲ್ಲಾ ಸಾಮಾಜಿಕ, ಸಾಂಸ್ಕೃತಿಕ ವಿಪ್ಲವಗಳು ಸಮುದಾಯವನ್ನು ಅದೆಷ್ಟೋ ಕಾಲ ಹಿಂದಕ್ಕೆ ಒಯ್ಯುತ್ತವೆ. ಮತ್ತೆ ಪ್ರಯಾಣ, ಪ್ರಯತ್ನ ಹೊಸದಾಗಿಯೇ ಆರಂಭವಾಗಬೇಕಾಗುತ್ತದೆ. ಪ್ರಯತ್ನದ ಸ್ವರೂಪ ಎಷ್ಟೇ ಸಣ್ಣದಾಗಿರಲಿ ಪ್ರಯತ್ನ ನಿರಂತರವಾಗಿರಲೇ ಬೇಕು. ‘ವಾರ್ತಾಭಾರತಿ’ಯ ಬಗೆಗೆ ಕನ್ನಡ ಜಗತ್ತು ಆಸಕ್ತವಾಗಿರುವುದು ಮೂಲತಃ ಈ ಕಾರಣಕ್ಕೆ ಎದು ನಾನು ತಿಳಿದಿದ್ದೇನೆ.
ಯಾವುದೇ ಘಟನೆಯ ಬಗೆಗೆ ಇತರ ಪತ್ರಿಕೆಗಳ ವರದಿಗಳಿಗೂ ‘ವಾರ್ತಾಭಾರತಿ’ಯ ವರದಿಗಳಿಗೂ ಇರುವ ವ್ಯತ್ಯಾಸದ ಮೂಲ ಎಲ್ಲಿದೆ? ಮಿಕ್ಕ ಬಹುತೇಕ ಪತ್ರಿಕೆಗಳಿಗೆ ಎರಡು ಆಯ್ಕೆಗಳಿರುತ್ತವೆ. ಒಂದೋ ಅದನ್ನು ರೋಚಕವಾಗಿಸುತ್ತಲೇ ತಮ್ಮ ಅಡಗಿದ ಅಜೆಂಡಾದ ಪರವಾದ ಧ್ವನಿಯನ್ನು ಆ ವರದಿಯಲ್ಲಿ ಸ್ಥಾಪಿಸುವುದು. ಮತ್ತೊಂದು ಅಮಾನವೀಯವೆನ್ನಬಹುದಾದ ನಿರ್ಲಿಪ್ತತೆ ಮತ್ತು ಜಡತ್ವದಲ್ಲಿ ಅದನ್ನು ವರದಿ ಮಾಡುವುದು. ಎರಡೂ ಪ್ರಜಾತಾಂತ್ರಿಕತೆಗೆ ಮಾರಕವಾದವುಗಳೇ. ವಾರ್ತಾಭಾರತಿ ಆದಷ್ಟೂ ಆ ಘಟನೆಯ ಹಿನ್ನೆಲೆ ಮತ್ತು ಪರಿಣಾಮಗಳನ್ನು ಸೂಕ್ಷ್ಮವಾಗಿ, ಧರ್ಮಾತೀತವಾದ, ಮನುಷ್ಯ ಸಹಜ ನೆಲೆಯಲ್ಲಿ ಗ್ರಹಿಸಲು ಪ್ರಯತ್ನಿಸುತ್ತದೆ. ದುರ್ಬಲರ, ಅಲ್ಪಸಂಖ್ಯಾತರ ಪರವಾಗಿ ಶೇಕಡಾ ಒಂದರಷ್ಟು ಒಲವಿರುತ್ತದೆ ಖರೆ, ಆದರೆ ಅದು ಅವರ ಪರವಾದ ವಕಾಲತ್ತು ಎನ್ನುವ ವಾಲುವಿಕೆಗೆ ಅಲ್ಲಿ ಅವಕಾಶವಿರಬಾರದು ಎನ್ನುವ ಎಚ್ಚರವನ್ನು ಉಳಿಸಿಕೊಳ್ಳಲು ‘ವಾರ್ತಾಭಾರತಿ’ ಆದಷ್ಟು ಪ್ರಯತ್ನಿಸುತ್ತದೆ ಎನ್ನುವುದೇ ಇದರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿರುವುದರ ಹಿಂದಿನ ಕಾರಣಗಳಲ್ಲಿ ಮುಖ್ಯವಾದುದು ಎನ್ನಿಸುತ್ತದೆ. ಮರುದಿನದ ಪತ್ರಿಕೆಯಲ್ಲಿ ಹೆಡ್ ಲೈನ್ ಆಗುವ ಹಾಗೆ, ಕಾರ್ಯಕ್ರಮವನ್ನು ಕುರಿತ ಘೋಷ ವಾಕ್ಯವೋ ಆಗಿ ವರದಿ ಆಗುವಂತೆ ಮುಂಚೆಯೇ ಪ್ರಾಸ ಬದ್ಧವಾಗಿ, ಆಕರ್ಷಕವಾಗಿ ಯೋಚಿಸಿಕೊಂಡು ಬಂದು ಭಾಷಣ ಮಾಡುವ ಭಾಷಣ ವೀರರ ಹುನ್ನಾರಗಳು ತಲೆಕೆಳಗಾಗುವುದು ಇಲ್ಲಿ ಮಾತ್ರ!
ಮಿಕ್ಕವರಿಗೆ ವರದಿಯಾಗಬೇಕು ಎಂದೇ ಭಾಸವಾಗದ ಸಂಗತಿಗಳಿಗೆ ಇಲ್ಲಿ ಜಾಗ ಸಿಗುತ್ತದೆ. ನಿಜವೆಂದರೆ ಅಂತಹ ವರದಿಗಳೇ ಈ ಸಮುದಾಯವನ್ನು ಕಾಡಬೇಕಾದ ಸಂಗತಿಗಳಾಗಿರುತ್ತವೆ. ಸಮುದಾಯ ಎಚ್ಚರ ವಹಿಸಬೇಕಾದ ಇಂತಹ ಸಣ್ಣ ಸಣ್ಣ ಸಂಗತಿಗಳನ್ನು ಗ್ರಹಿಸುವ ಒಳಗಣ್ಣು ಮಾತ್ರ ಪತ್ರಿಕೋದ್ಯಮವನ್ನು ಜೀವಂತವಾಗಿ ಇರಿಸುತ್ತವೆ.
ಪತ್ರಿಕಾ ಮಾಧ್ಯಮವೂ ಇತರ ಮಾಧ್ಯಮಗಳಂತೆ ಆಮಿಷಗಳ ಕಾಲದ ಸುಳಿಯಲ್ಲಿ ಸಿಕ್ಕಿರುವ ಸನ್ನಿವೇಶದಲ್ಲಿ ನಾವಿದ್ದೇವೆ. ಸತ್ಯವನ್ನು ಎತ್ತಿ ಹಿಡಿಯುವುದು ಎನ್ನುವ ಮಾತೇ ಅಸಂಗತವಾಗಿ, ನಮ್ಮ ಸ್ವಾರ್ಥ ಮತ್ತು ಅಜೆಂಡಾಗಳೇ ಸತ್ಯದ ವೇಷ ಧರಿಸಿ ಮೆರೆಯುತ್ತಿವೆ. ವಸ್ತುನಿಷ್ಠತೆ ಎಂದರೆ ತನ್ನ ಮೂಗಿನ ನೇರದ ವಿಶ್ಲೇಷಣೆ ಎನ್ನುವುದನ್ನು ತಾತ್ವಿಕ ಸಮರ್ಥನೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಒಂದರ ಪರ ಎನ್ನುವುದು ಇನ್ನೊಂದರ ವಿರೋಧವೇ ಆಗಬೇಕೇ ಎನ್ನುವ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ಸೈದ್ಧಾಂತಿಕತೆಗೂ, ರಾಜಕೀಯ, ಸಾಂಸ್ಕೃತಿಕ ರಾಜಕಾರಣಕ್ಕೂ ಬಿಡಿಸಲಾಗದ ನಂಟು ಏರ್ಪಟ್ಟು ಸರಿ ತಪ್ಪುಗಳ ಗೆರೆಯೇ ಮಸುಕಾಗುತ್ತಿರುವ ಆತಂಕಕಾರಿ ಸನ್ನಿವೇಶ ದೇಶದ ಶ್ರೀಸಾಮಾನ್ಯರನ್ನು ಕೊನೆಯೇ ಇಲ್ಲದ ಗೊಂದಲಗಳಲ್ಲಿ ಮುಳುಗಿಸಿ ಬಿಟ್ಟಿದೆ. ಕನ್ನಡದ ಹಿರಿಯ ವಿದ್ವಾಂಸರೊಂದಿಗೆ ಮಾತನಾಡುತ್ತಿದ್ದಾಗ ಅವರು ಹೇಳಿದರು, ‘‘ಅಯ್ಯೋ ನನಗೂ ತುಂಬಾ ಆಘಾತ ಆಯ್ತಮ್ಮಾ, ಸತ್ಯ ಗೊತ್ತಾಗಿ. ನಾವೆಲ್ಲರೂ ಈ ವಿಷಯವನ್ನು ಗಂಭೀರವಾಗಿ ತೊಗೊ ಬೇಕು. ನೋಡಿ ಮುಸಲ್ಮಾನರ ಜನ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗ್ತಾ ಇದೆ, ಇದು ಹೀಗೇ ಮುಂದುವರಿದರೆ ಏನಾಗುತ್ತೆ ಅನ್ನೋದನ್ನ ಒಂದು ಲೆಕ್ಕಾಚಾರದಲ್ಲಿ ನನ್ನ ಗೆಳೆಯರೊಬ್ಬರು ಹೇಳಿದರು, ಇನ್ನೊಂದು ಹತ್ತು ವರ್ಷಗಳಲ್ಲಿ ಅವರ ಸಂಖ್ಯೆಯೇ ಹೆಚ್ಚಾಗಿ ಹಿಂದೂಗಳೇ ಅಲ್ಪಸಂಖ್ಯಾತರಾಗಿ ಬಿಡ್ತಾರಂತೆ, ವರ್ಷಕ್ಕೆ ಸುಮಾರು ಹತ್ತು ಪರ್ಸೆಂಟ್‌ನಷ್ಟು ಹೆಚ್ಚಾಗ್ತಾ ಹೋದರೂ.’’ ಅಂತೆಲ್ಲಾ ಹೇಳುತ್ತಲೇ ಹೋದರು. ತುಂಬಾ ಹಿರಿಯರಾದ್ದರಿಂದ ಅವರ ಮಾತು ಮುಗಿಯುವವರೆಗೂ ಕಾದಿದ್ದು ಆ ಮೇಲೆ ಕೇಳಿದೆ, ‘‘ಸರ್ ನೀವು ಇಷ್ಟು ವರ್ಷ ಸಾರ್ವಜನಿಕ ರಂಗದಲ್ಲಿಯೇ ಇದ್ದವರು, ಶರಣರನ್ನು ನಿಮ್ಮ ಆದರ್ಶ ಅಂತ ತಿಳಿದು ಕೊಂಡವರು, ಮುಸಲ್ಮಾನರು ಭಾರತೀಯರಲ್ಲವೆ?’’. ಸ್ವಲ್ಪ ಹೊತ್ತು ಮೌನವಾಗಿ ಕುಳಿತರು. ಅವರ ಒದ್ದಾಟ ಗೊತ್ತಾಗುತ್ತಿತ್ತು ನನಗೆ. ಆಮೇಲೆ ಅವರು ಹೇಳಿದರು, ‘‘ನಿಮ್ಮ ಮಾತು ತಪ್ಪು ಅಂತ ಹೇಳ್ತಾ ಇಲ್ಲ ನಾನು, ಆದರೆ ಅವರ ಬಗ್ಗೆ ಅಪನಂಬಿಕೆ ಜನರ ಮನಸ್ಸಿನಲ್ಲಿ ಕೂತು ಬಿಟ್ಟಿದೆಯಮ್ಮಾ’’ ಅಂದರು. ‘‘ಅವರ ಮಾತು ಬಿಡೋಣ ಸರ್, ನಿಮಗೆ ಏನು ಅನ್ನಿಸುತ್ತೆ ಹೇಳಿ’’ ಅಂದರೆ, ‘‘ನನಗೆ ಸಿಕ್ಕ ಮುಸಲ್ಮಾನರು ಒಳ್ಳೆಯವರೇ’’ ಎಂದೇನೋ ಅಸ್ಪಷ್ಟವಾಗಿ ಹೇಳುತ್ತಾ ಹೋದರು. ಗಾಢ ವಿಷಾದ ನನ್ನನ್ನು ಮುತ್ತುತ್ತಾ ಹೋಯಿತು. ಇವರು ‘ವಾರ್ತಾಭಾರತಿ’ಯನ್ನು ನಿತ್ಯ ಓದುತ್ತಿದ್ದರೆ ಇವರ ಅಭಿಪ್ರಾಯ ಬದಲಾಗ್ತಾ ಇತ್ತೇನೋ ಎನ್ನುವ ಭಾವ ಸುಳಿದು ಹೋಯಿತು. ಅವರ ಮನೆಯವರಿಗೆ, ‘‘ವಾರ್ತಾ ಭಾರತಿ ತರಿಸಬಹುದು, ತುಂಬಾ ಒಳ್ಳೆಯ ಪತ್ರಿಕೆ’’ ಎಂದೆ, ‘‘ಅಯ್ಯೋ ಈಗ ಬರುವವುಗಳನ್ನೇ ಓದಲಾಗುವುದಿಲ್ಲ’’ ಎಂದು ನನ್ನ ಸಲಹೆಯನ್ನು ತಿರಸ್ಕರಿಸಿದರು.
‘ವಾರ್ತಾಭಾರತಿ’ ಯಾಕೆ ಮುಖ್ಯ ಎನ್ನುವುದು ನನಗೆ ಇನ್ನೂ ಸ್ಪಷ್ಟವಾದ ಸಂದರ್ಭ ಇದು. ಕೋಮುವಾದವು ಈ ದೇಶವನ್ನು ಚೂರುಚೂರು ಮಾಡಬಾರದೆಂದರೆ ‘ವಾರ್ತಾಭಾರತಿ’ಯಂತಹ ಪತ್ರಿಕೆಗಳ ಸಂಖ್ಯೆ ಹೆಚ್ಚಾಗಬೇಕು, ಎಲ್ಲ ಭಾಷೆಗಳಲ್ಲೂ ಇಂತಹ ಪತ್ರಿಕೆಗಳು ಹೆಚ್ಚಾಗಬೇಕು. ಮುಖ್ಯವಾಗಿ ಯುವ ಜನಾಂಗವನ್ನು ತಲುಪುವ ಇನ್ನೂ ಹೆಚ್ಚು ಪರಿಣಾಮಕಾರಿ ದಾರಿಗಳನ್ನು ಪತ್ರಿಕೆ ಹುಡುಕಬೇಕು ಎನ್ನಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಇನ್ನೂ ಸ್ವಲ್ಪ ಆಸೆಯನ್ನು ಉಳಿಸುತ್ತಿರುವ ‘ವಾರ್ತಾಭಾರತಿ’ಗೆ ಧನ್ಯವಾದಗಳು, ಅಭಿನಂದನೆಗಳು ಈ ಎರಡಕ್ಕಿಂತ ಹೆಚ್ಚಾಗಿ ಕೃತಜ್ಞತೆಗಳು.






