ಜನಸಾಮಾನ್ಯರ ಧ್ವನಿ

ಕಳೆದ 23 ವರ್ಷಗಳಿಂದ ‘ವಾರ್ತಾಭಾರತಿ’ ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಮತ್ತು ಗಟ್ಟಿಯಾದ ಛಾಪು ಮೂಡಿಸಿದೆ. ಪ್ರಸಕ್ತ ಮಾಧ್ಯಮ ರಂಗದಲ್ಲಿ ನಿಷ್ಪಕ್ಷ ಹಾಗೂ ನೈಜ ಸುದ್ದಿಗಳನ್ನು ಬಿತ್ತರಿಸುವುದು, ಪ್ರಸಾರ ಮಾಡುವುದು ಸವಾಲಾಗಿರುವಾಗ ‘ವಾರ್ತಾಭಾರತಿ’ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ನನಗೆ ವಾರ್ತಾಭಾರತಿ ಪತ್ರಿಕೆ ಇಷ್ಟವಾಗಿರುವುದು ಅದರ ನಿಷ್ಠುರ ಸತ್ಯಸಂಧತೆ ಮತ್ತು ಜನಪರ ಕಾಳಜಿಗಾಗಿ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ, ಪೂರ್ವಾಗ್ರಹ ಪೀಡಿತವಲ್ಲದ ಸುದ್ದಿಗಳನ್ನು ತಲುಪಿಸುವಲ್ಲಿ ಹಾಗೂ ಸೌಹಾರ್ದ ಕಾಯ್ದುಕೊಳ್ಳುವಲ್ಲಿ ಪತ್ರಿಕೆಯ ಬದ್ಧತೆ ಅನನ್ಯ. ಧರ್ಮ, ಜಾತಿ ಮತ್ತು ವರ್ಗಗಳ ಗೆರೆಗಳನ್ನು ಮೀರಿ ಮಾನವೀಯತೆ ಮತ್ತು ಸಾಮಾಜಿಕ ನ್ಯಾಯವನ್ನು ಮುನ್ನೆಲೆಗೆ ತಂದದ್ದು ಪತ್ರಿಕೆಯ ದೊಡ್ಡ ಸಾಧನೆ. ತುಳಿತಕ್ಕೊಳಗಾದವರ, ಶೋಷಿತರ ಮತ್ತು ಅನ್ಯಾಯಕ್ಕೊಳಗಾಗಿ ಮೌನಕ್ಕೆ ಶರಣಾದವರ ಪರವಾಗಿ ಗಟ್ಟಿ ಧ್ವನಿಯಾಗಿ ನಿಲ್ಲುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದೆ. 24ನೇ ವರ್ಷಕ್ಕೆ ಕಾಲಿಡುತ್ತಿರುವ ‘ವಾರ್ತಾಭಾರತಿ’ ಬಳಗಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.




