ಸಾಹಿತಿ ವಿಜೆಪಿ ಸಲ್ಡಾನ ಸಾಹಿತ್ಯ ಕೃತಿಗಳಲ್ಲಿ ಜನರ ನೋವು ಬಿಂಬಿತವಾಗಿದೆ: ಡಾ. ಶ್ರೀನಿವಾಸ್ ರಾವ್

ಮಂಗಳೂರು, ಆ.13: ಕೊಂಕಣಿ ಸಾಹಿತಿ ವಿಜೆಪಿ ಸಲ್ಡಾನ ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಕೃತಿಗಳಲ್ಲಿ ಜನರ ನೋವು ಪ್ರತಿಬಿಂಬಿತವಾಗಿದೆ ಹೊಸದಿಲ್ಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಡಾ. ಕೆ .ಶ್ರೀನಿವಾಸ್ ರಾವ್ ಹೇಳಿದ್ದಾರೆ.
ಖ್ಯಾತ ಕೊಂಕಣಿ ಬರಹಗಾರ ವಿಜೆಪಿ ಸಲ್ಡಾನ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಹೊಸದಿಲ್ಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮತ್ತು ವಿಷನ್ ಕೊಂಕಣಿ ಸಹಯೋಗದೊಂದಿಗೆ ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ಬುಧವಾರ ಆರಂಭಗೊಂಡ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿ ದರು. ಬಹುಮುಖಿ ಸಾಧಕರಾಗಿರುವ ವಿಜೆಪಿ ಅವರು ಕಾದಂಬರಿಕಾರರಲ್ಲದೆ, ಪತ್ರಿಕೋದ್ಯಮ, ನಾಟಕ ಮತ್ತು ಸಾಮಾಜಿಕ ರಂಗಕ್ಕೆ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಉಪಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಲ್ಡಾನ ಅವರು ಸೈಂಟ್ ಅಲೋಶಿಯಸ್ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿದ್ದು, ಅವರ ಸಾಹಿತ್ಯ ಕೃತಿಗಳ ಕುರಿತು ಈ ವಿಚಾರ ಸಂಕಿರಣವನ್ನು ನಮಗೆ ಆಯೋಜಿಸಲು ಅವಕಾಶ ಸಿಕ್ಕಿರುವುದು ಅದೊಂದು ಗೌರವವಾಗಿದೆ ಎಂದರು.
ವಿದ್ಯಾರ್ಥಿಗಳು ಮತ್ತು ಯುವ ಬರಹಗಾರರಿಗೆ ಸಲ್ಡಾನಾ ಅವರ ಸಾಹಿತ್ಯ ಮತ್ತು ಬರವಣಿಗೆಯ ಕೌಶಲ್ಯಗಳನ್ನು ಅರಿಯಲು ಈ ವಿಚಾರ ಸಂಕಿರಣವು ಉತ್ತಮ ಅವಕಾಶವನ್ನು ಒದಗಿಸಿದೆ ಎಂದು ಮಾರ್ಟಿಸ್ ತಿಳಿಸಿದರು.
ದಿಕ್ಚೂಚಿ ಭಾಷಣ ಮಾಡಿದ ಸಂಶೋಧಕ ವಂ. ಪ್ರವೀಣ್ ಪಿಂಟೊ ಅವರು ಎಸ್.ಜೆ. ಸಲ್ಡಾನ ತಮ್ಮ ಕಾದಂಬರಿ ಗಳಿಗೆ ಇತಿಹಾಸವನ್ನು ಹಿನ್ನೆಲೆಯಾಗಿ ಬಳಸಿಕೊಂಡರು, ಆದರೆ ಅವರ ಪ್ರಾಥಮಿಕ ಗುರಿ ಸಾಹಿತ್ಯವನ್ನು ರಚಿಸುವುದು, ಇತಿಹಾಸವನ್ನು ಬರೆಯುವುದು ಆಗಿರಲಿಲ್ಲ ಎಂದರು.
ಈ ಕಾರ್ಯಕ್ರಮವನ್ನು ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ. ಮೆಲ್ವಿನ್ ಜೋಸೆಫ್ ಪಿಂಟೊ ಎಸ್.ಜೆ. ಉದ್ಘಾಟಿಸಿದರು.
ಕೊಂಕಣಿ ಸಾಹಿತ್ಯ ಅಕಾಡೆಮಿ, ದಿಲ್ಲಿಯ ಕೊಂಕಣಿ ಭಾಷಾ ಸಮಿತಿಯ ಮುಖ್ಯಸ್ಥ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕ ವಾಗಿ ಮಾತನಾಡಿ ವಿಜೆಪಿ ಸಲ್ಡಾನ ಅವರ ಕಾದಂಬರಿಗಳು ಕೇವಲ ಇತಿಹಾಸದ ದಾಖಲೀಕರಣವಲ್ಲ. ಅವರು ತಮ್ಮ ಕಲ್ಪನೆಯ ಆಧಾರದ ಮೇಲೆ ಕಾದಂಬರಿಗಳನ್ನು ಬರೆದರು, ಸಂಪೂರ್ಣವಾಗಿ ಕಾಲ್ಪನಿಕ ಪಾತ್ರಗಳು ಮತ್ತು ಸಂಭಾಷಣೆಗಳನ್ನು ರಚಿಸಿದರು. ಸಲ್ಡಾನ ಓರ್ವ ಶ್ರೇಷ್ಠ ಸಾಹಿತಿ ಎಂದು ಬಣ್ಣಿಸಿದರು.
ಕೊಂಕಣಿ ಸಂಸ್ಥೆಗಳ ಸಂಚಾಲಕ ಜೋಕಿಮ್ ಪಿಂಟೊ ಸ್ವಾಗತಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಂಬೈ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ.ಓಂ ಪ್ರಕಾಶ್ ನಾಗರ್ ವಂದಿಸಿದರು, ಮನೋಜ್ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.







