ಯತ್ನಾಳ್ ವಿರುದ್ಧ ಯುಎಪಿಎ ಕಾಯ್ದೆಯಡಿ ಕ್ರಮಕ್ಕೆ ವಿಮ್ ಆಗ್ರಹ

ಫಾತಿಮಾ ನಸೀಮಾ
ಮಂಗಳೂರು, ಆ.13: ಕೊಪ್ಪಳದಲ್ಲಿ ಪ್ರೀತಿ ಪ್ರೇಮದ ವಿಚಾರಕ್ಕೆ ನಡೆದ ಕೊಲೆಯನ್ನು ಮುಂದಿಟ್ಟುಕೊಂಡು ಕೋಮುವಾದಿ, ದ್ವೇಷ ಮನಸ್ಥಿತಿ ಹೊಂದಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಯುಎಪಿಎ ಕಾಯ್ದೆಯಡಿ ಕ್ರಮಕ್ಕೆ ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಆಗ್ರಹಿಸಿದ್ದಾರೆ.
ಅತ್ಯಂತ ನೀಚವಾಗಿ, ದ್ವೇಷಪೂರಿತ ಹೇಳಿಕೆ ನೀಡಿ ಹೆಣ್ಣುಮಕ್ಕಳನ್ನು ವ್ಯವಸ್ಥಿತವಾಗಿ ಪ್ರೀತಿಯ ಮೂಲಕ ಮತಾಂತರ ಮಾಡಲು ಕರೆ ಕೊಟ್ಟ ಯತ್ನಾಳ್ ತಾನು ಆ ಕಾರ್ಯಕ್ಕೆ ಆರ್ಥಿಕ ನೆರುವು ನೀಡುವುದಾಗಿ ಘೋಷಿಸಿದ್ದು ಸಂವಿಧಾನ ವಿರೋಧಿ ಹಾಗೂ ಮಹಿಳಾ ವಿರೋಧಿ ಹೇಳಿಕೆಯಾಗಿದೆ. ದ್ವೇಷ ಹರಡುವಿಕೆ, ಪ್ರಚೋದನಾತ್ಮಕ ಹೇಳಿಕೆಗಳನ್ನೇ ಕಸುಬಾಗಿಸಿಕೊಂಡಿರುವ ಯತ್ನಾಳ್ ಸೌಹಾರ್ದ ಸಮಾಜಕ್ಕೆ ಮಾರಕವಾಗಿದ್ದಾರೆ. ಇಂತಹ ಬಾಲಿಶ ಹೇಳಿಕೆ ನೀಡಿ ಮೂರು ದಿನ ಕಳೆದರೂ ರಾಜ್ಯ ಕಾಂಗ್ರೆಸ್ ಸರಕಾರ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಜಾತ್ಯತೀತ ಸರಕಾರದ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಪುರಾವೆಗಳಿಲ್ಲದೆ ಭಯೋತ್ಪಾದನೆ, ಮತಾಂತರದ ಸುಳ್ಳಾರೋಪದ ಮೇಲೆ ಖಿಅಅ ಪ್ರಕರಣಗಳನ್ನು ದಾಖಲಿಸಿ ಅಮಾಯಕರನ್ನು ಜೈಲಿಗಟ್ಟುವ ಸರಕಾರ ಬಹಿರಂಗವಾಗಿ ದ್ವೇಷ ಕಾರುವ ಯತ್ನಾಳ್ ವಿರುದ್ಧ ಮೌನವಾಗಿರುವುದು ಖಂಡನೀಯ.
ಪ್ರಚೋದನೆಗೆ ಒಳಗಾಗಿ ಅಥವಾ ಆಮಿಷಕ್ಕೆ ಒಳಗಾಗಿ ಹಿಂದೂ ಯುವಕರು ಇವರ ಅಸಂಬದ್ಧ ಹೇಳಿಕೆಗಳನ್ನು ಅನುಸರಿಸಿದ್ದೇ ಆದಲ್ಲಿ ರಾಜ್ಯ ಸರಕಾರ ಇದರ ಹೊಣೆಯನ್ನು ಹೊರಲು ತಯಾರಿದೆಯೇ? ಎಂದು ಫಾತಿಮಾ ನಸೀಮಾ ಪ್ರಶ್ನಿಸಿದರು.





