ಅಂಗಾಂಗ ದಾನಕ್ಕಿಂತ ಮಿಗಿಲಾದ ದಾನವಿಲ್ಲ: ಡಾ. ಸಿ.ಪಿ.ಹಬೀಬ್ ರಹ್ಮಾನ್

ಮಂಗಳೂರು, ಆ.9: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಮಂಗಳೂರು ವಿ.ವಿ. ಯೂತ್ ರೆಡ್‌ಕ್ರಾಸ್ ಘಟಕದ ವತಿಯಿಂದ ವಿಶ್ವ ಅಂಗಾಂಗ ದಾನ ದಿನಾಚರಣೆ ಬುಧವಾರ ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಯುನಿಟಿ ಕೇರ್ ಅಂಡ್ ಹೆಲ್ತ್ ಸರ್ವಿಸಸ್‌ನ ಚೇರ್ಮನ್ ಡಾ.ಸಿ.ಪಿ.ಹಬೀಬ್ ರಹಿಮಾನ್ ಮಾತನಾಡಿ ‘ ಸಾವಿನ ನಂತರವೂ ಬದುಕು ನೀಡುವ ಅಂಗಾಂಗ ದಾನಕ್ಕಿಂತ ಮಿಗಿಲಾದ ದಾನವಿಲ್ಲ. ಜನತೆ ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ನೋಂದಣಿಯಾಗುವ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅವಶ್ಯ ಎಂದರು.
ಬೆಂಗಳೂರಿನ ಜೀವಸಾರ್ಥಕತೆಯ ಮುಖ್ಯ ಸಂಯೋಜಕ ನೌಶಾದ್ ಪಾಶ ಅವರು ಅಂಗಾಂಗ ದಾನದ ನೋಂದಣಿ ಹಾಗೂ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಅಂಗಾಂಗ ದಾನ ಮಾಡುವ ಮೂಲಕ ಪರರ ಜೀವ ಉಳಿಸಿದ 7 ಮಂದಿ ದಾನಿಗಳ ಕುಟುಂಬದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಮಂಗಳೂರು ವಿ.ವಿ. ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ಗಾಯತ್ರಿ.ಎನ್ .ದಾನಿಗಳ ವಿವರ ನೀಡಿದರು.
ಅಂಗಾಂಗ ದಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಪೋಸ್ಟ್ ಮೇಕಿಂಗ್ ಮತ್ತು ರೀಲ್ಸ್ ಸ್ಪರ್ಧೆಯ ವಿಜೇತರಿಗೆ ಮುಖ್ಯ ಅತಿಥಿ ರೋಟರಿ ಜಿಲ್ಲೆ 3181 ಇದರ ಚುನಾಯಿತ ಗರ್ವರ್ನರ್ ಸತೀಶ್ ಬೋಳಾರ್ ಬಹುಮಾನ ವಿತರಿಸಿದರು.
ಬೆಸೆಂಟ್ ಮಹಿಳಾ ಕಾಲೇಜಿನ ಯೂತ್ ರೆಡ್‌ಕ್ರಾಸ್ ಅಧಿಕಾರಿ ದೀಕ್ಷಿತಾ ಬಹುಮಾನ ವಿಜೇತರ ವಿವರ ನೀಡಿದರು.
ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ.ಸತೀಶ್ ರಾವ್, ಖಜಾಂಜಿ ಕೆ.ಮೋಹನ ಶೆಟ್ಟಿ, ನಿರ್ದೇಶಕ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ಉಪ ಸಮಿತಿಯ ನಿರ್ದೇಶಕ ಡಾ.ಬಿ.ಸಚ್ಚಿದಾನಂದ ರೈ ಸ್ವಾಗತಿಸಿ, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ವಂದಿಸಿದರು. ನಿರ್ದೇಶಕಿ ಡಾ.ಸುಮನಾ ಬೋಳಾರ್ ಕಾರ್ಯಕ್ರಮ ನಿರೂಪಿಸಿದರು.
*ಕೆಲವರ ಜೀವ ಉಳಿದಿದೆ: ದಾನಿಗಳ ಕುಟುಂಬದ ಪರವಾಗಿ ವೈಶ್ಣವಿ ಮಾತನಾಡಿ ‘ ಮನೆಯ ಆಧಾರವಾಗಿದ್ದ ತಂದೆಯನ್ನು ಕಳಕೊಂಡೆವು. ಅವರ ಅಂಗಾಗ ದಾನ ಮಾಡಿದ ಕಾರಣ ಕೆಲವರ ಜೀವ ಉಳಿದಿದೆ. ತಂದೆ ನಮ್ಮನ್ನು ಅಗಲಿದ ನೋವಿನ ನಡುವೆಯೂ ಇನ್ನೊಬ್ಬರ ಜೀವ ಉಳಿಸಿದ ಧನ್ಯತೆ ಇದೆ ಎಂದರು.
ಅಂಗಾಂಗ ದಾನ ಪಡೆದ ಗಿರೀಶ್ ಐತಾಳ್ ಮಾತನಾಡಿ ‘ ಲಿವರ್ ವೈಫಲ್ಯದಿಂದ ಜೀವಕ್ಕೆ ಆತಂಕವಿತ್ತು. ಪತ್ನಿ, ಮಗು ಅನಾಥರಾಗುತ್ತಿದ್ದರು. ದಾನಿಗಳ ನೆರವು ದೊರೆಯಿತು. ಈಗ ಆರೋಗ್ಯವಾಗಿದ್ದೇನೆ. ಸಕಾಲದಲ್ಲಿ ಅಂಗಾಂಗ ದಾನ ಮಾಡಿದವರು ನನಗೆ ಮರುಜನ್ಮ ನೀಡಿದರು’ ಎಂದರು.







