ದ.ಕ. ಜಿಲ್ಲೆ: ಸ್ವಾತಂತ್ರ್ಯೋತ್ಸವ - ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಮಂಗಳೂರು, ಆ.14: ಈ ಬಾರಿ ಸ್ವಾತಂತ್ರ್ಯೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಒಟ್ಟಿಗೆ ಆಚರಿಸುವ ಅವಕಾಶ ಸಿಕ್ಕಿದೆ. ಹಬ್ಬ ಹಾಗೂ ಸ್ವಾತಂತ್ರ್ಯೋತ್ಸವದ ಸಂಭ್ರಮ ದ.ಕ. ಜಿಲ್ಲೆಯಲ್ಲಿ ಮೇಳೈಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಗುರುವಾರ ಹಬ್ಬದ ಖರೀದಿಯೂ ಜೋರಾಗಿಯೇ ಸಾಗಿತ್ತು. ಒಂದೆಡೆ ಸ್ವಾತಂತ್ರ್ಯೋತ್ಸವಕ್ಕಾಗಿ ತ್ರಿವರ್ಣ ಧ್ವಜ ಖರೀದಿ ಜೋರಾಗಿದ್ದರೆ ಇನ್ನೊಂದೆಡೆ ಅಷ್ಟಮಿಗಾಗಿ ಮೂಡೆ, ಹೂವು ಹಣ್ಣುಗಳ ಖರೀದಿ ಭರ್ಜರಿಯಾಗಿ ನಡೆದಿದೆ.
ಎಲ್ಲೆಲ್ಲೂ ತ್ರಿವರ್ಣ ಧ್ವಜ
ನಗರದ ಪ್ರತಿಯೊಂದು ಅಂಗಡಿಗಳು ಆಕರ್ಷಕ ರೀತಿಯ, ವಿವಿಧ ಮಾದರಿಯ ತ್ರಿವರ್ಣ ಧ್ವಜಗಳಿಂದ ಕಂಗೊಳಿ ಸುತ್ತಿವೆ. ವಾಹನ, ಮನೆ, ಕಚೇರಿ, ಮಕ್ಕಳಿಗೆಂದು ಧ್ವಜ ಖರೀದಿಸಿದರು. ಪುಟಾಣಿ ಧ್ವಜದಿಂದ ಹಿಡಿದು ದೊಡ್ಡಗಾತ್ರದ ತ್ರಿವರ್ಣ ಧ್ವಜಗಳು ಮನಸೆಳೆಯುತ್ತಿದ್ದು, ಗ್ರಾಹಕರು ತಮಗಿಷ್ಟದ ಗಾತ್ರದ ತ್ರಿವರ್ಣ ಧ್ವಜವನ್ನು ಖರೀದಿಸುತ್ತಿರುವುದು ಕಂಡುಬಂತು.
ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮ ಆ.15ರಂದು ಬೆಳಗ್ಗೆ 9 ಗಂಟೆಯಿಂದ ನೆಹರೂ ಮೈದಾನದಲ್ಲಿ ನಡೆಯಲಿದ್ದು, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವರು. ಸಮಾರಂಭಕ್ಕೆ ಆಕರ್ಷಕ ವೇದಿಕೆ ಸಿದ್ಧಗೊಂಡಿದೆ.
ಪೊಲೀಸರು ಸ್ವಾತಂತ್ರ್ಯೋತ್ಸವ ಮತ್ತು ಅಷ್ಟಮಿಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದ್ ಬಸ್ತ್ ಮಾಡಲಾಗಿದೆ.
ನಗರದಲ್ಲಿ ವಿಶೇಷ ಕಾರ್ಯಪಡೆ, ಪೊಲೀಸರಿಂದ ಪಥ ಸಂಚಲನ ನಡೆಯಿತು.
ನಗರದ ಮಂಜೇಶ್ವರ ಗೋವಿಂದ ಪೈ ವೃತ್ತದಿಂದ ಪುರಭವನದವರೆಗೆ ಸಾಗಿದ ಪಥಸಂಚಲನದಲ್ಲಿ ಬೃಹತ್ ತಿರಂಗದೊಂದಿಗೆ ವಿಶೇಷ ಕಾರ್ಯ ಪಡೆಯ ಪೊಲೀಸರು ಭಾಗವಹಿಸಿದ್ದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ತಯಾರಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಅಗತ್ಯದ ವಸ್ತುಗಳ ಖರಿದೀಯೂ ಜೋರಾಗಿಯೆ ಸಾಗಿದೆ. ಮಾರುಕಟ್ಟೆಯಲ್ಲಿ ಹೂವು ಮಾರುವವರ ಸಂಖ್ಯೆ ಜಾಸ್ತಿ ಇತ್ತು. ನಗರದ ರಸ್ತೆಯ ಇಕ್ಕೆಲ ಗಳಲ್ಲೂ ಹೂ ಮಾರುವವರಿಂದಾಗಿ ಕಳೆ ಕಟ್ಟಿತ್ತು. ಅಷ್ಟಮಿ ಆಚರಣೆಗಾಗಿ ಮೂಡೆ, ಉಂಡೆ, ಚಕ್ಕುಲಿ ಸೇರಿದಂತೆ ಮನೆಗೆ ಸಾಮಾಗ್ರಿ ಖರೀದಿಸುವಲ್ಲಿ ಜನರು ಮಗ್ನರಾಗಿದ್ದರು.
ಆ.16: ಜಿಲ್ಲಾಡಳಿತದಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ ಆಗಸ್ಟ್ 16 ಬೆಳಗ್ಗೆ 10:30 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಫರೀದ್ ಘನ ಉಪಸ್ಥಿತಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಶಾಸಕ ಡಿ.ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಎಸ್ ವಿ ಪಿ ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಉಪನ್ಯಾಸ ನೀಡಲಿದ್ದಾರೆ.







