ಶ್ರೀಕೃಷ್ಣನ ಆದರ್ಶಗಳನ್ನು ಎಲ್ಲರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ: ಸದಾಶಿವ ಉಳ್ಳಾಲ

ಮಂಗಳೂರು, ಆ.16: ಶ್ರೀ ಕೃಷ್ಣ ಜಯಂತಿಯು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು.ಭಗವಾನ್ ಶ್ರೀಕೃಷ್ಣ ಜೀವನ ಚರಿತ್ರೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಹೇಳಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ ಸಮಾಜ ಸೇವಾ ಸಂಘ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಸಹಕಾರದೊಂದಿಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ನಡೆದ ಶ್ರೀ ಕೃಷ್ಣ ಜಯಂತಿ ಕಾರ‌್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಶ್ರೇಷ್ಠ್ಠ ವ್ಯಕ್ತಿತ್ವ ಮತ್ತು ಸಕಲ ಗುಣ ಸಂಪನ್ನ ಶ್ರೀ ಕೃಷ್ಣ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಧನಂಜಯ್ ಕುಂಬ್ಳೆ ಮಾತನಾಡಿ, ಶ್ರೀಕೃಷ್ಣ ಪರಮಾತ್ಮವನ್ನು ತನ್ನ ಬದುಕಿನುದ್ದಕ್ಕೂ ದುಷ್ಟ್ಟತನವನ್ನು ಅನ್ಯಾಯ ವನ್ನು ಸಹಿಸಿದವನಲ್ಲ. ಅಧರ್ಮ ಹೆಚ್ಚಿದಾಗ ಧರ್ಮದ ಸ್ಥಾಪನೆಗೆ ಶ್ರೀಕೃಷ್ಣ ಜನ್ಮತಾಳಿರುತ್ತಾನೆ. ಸ್ತ್ರೀಯರನ್ನು ದುಷ್ಠರ ಬಲೆಯಿಂದ ವಿಮುಕ್ತಿಗೊಳಿಸುತ್ತಾನೆ. ಗೋವಿನ ಮೇಲೆ ವಿಶೇಷವಾದ ಪ್ರೀತಿಯನ್ನು ತನ್ನ ಬದುಕಿನುದ್ದಕ್ಕೂ ಹೊಂದಿರುತ್ತಾನೆ. ಒಟ್ಟಾರೆಯಾಗಿ ಸ್ತ್ರೀ ವಿಮೋಚನೆ ಮತ್ತು ಗೋಭಕ್ತಿಯನ್ನು ತೋರಿಸುವ ಹೆಗ್ಗಳಿಕೆ ಅವನದ್ದು , ಶ್ರೀ ಕೃಷ್ಣ ಜಯಂತಿ ಆಚರಣೆಯ ಜೊತೆಗೆ ಆತನ ಜೀವನ ಚರಿತ್ರೆ ಸಂದೇಶಗಳನ್ನು ಸ್ಮರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ ಆರ್ ಕುಮಾರಸ್ವಾಮಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ ಎ ಕೆ ಮಣಿಯಾಣಿ ಬೆಳ್ಳಾರೆ ಮತ್ತಿತ ರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.







