ಸಮುದ್ರಕ್ಕೆ ಬಿದ್ದು ಮೀನು ಕಾರ್ಮಿಕ ನಾಪತ್ತೆ

ಮಂಗಳೂರು, ಆ.18: ನಗರದ ಬಂದರ್ ದಕ್ಷಿಣ ಮೀನುಗಾರಿಕಾ ದಕ್ಕೆಯ ಬೋಟ್‌ನಲ್ಲಿ ಮೀನು ಅನ್‌ಲೋಡ್ ಮಾಡುತ್ತಿದ್ದಾಗ ಕಾರ್ಮಿಕನೊಬ್ಬ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರ ಪ್ರದೇಶದ ನೆಲ್ಲೂರು ಮೂಲದ ವಾಯಿಲ ಯೇಸುರತ್ನಂ (29) ನಾಪತ್ತೆಯಾಗಿರುವ ಕಾರ್ಮಿಕ. ಆ.3ರಂದು ಆಂಧ್ರಪ್ರದೇಶದಿಂದ ರತನ್ ಮೇರಿ ಮತ್ತು ವಾಯಿಲ ಯೇಸುರತ್ನಂ ಎಂಬವರು ಕೆಲಸ ಹುಡುಕಿಕೊಂಡು ಮಂಗಳೂರಿನ ದಕ್ಷಿಣ ದಕ್ಕೆಗೆ ಬಂದಿದ್ದರು. ಆ.4ರಂದು ಇಕ್ರಾ ಎನ್ನುವ ಬೋಟ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಆ.6ರಂದು ಈ ಇಬ್ಬರಲ್ಲದೆ ಇತರ 10 ಮಂದಿ ಮೀನು ಹಿಡಿಯಲು ಬೋಟ್‌ನಲ್ಲಿ ಸಮುದ್ರಕ್ಕೆ ತೆರಳಿದ್ದರು. ಆ.15ರಂದು ಬೋಟ್ ದಕ್ಕೆಗೆ ವಾಪಸ್ ಆಗಿದೆ. ಬೋಟ್‌ನಿಂದ ಮೀನು ಅನ್‌ಲೋಡ್ ಮಾಡುತ್ತಿದ್ದಾಗ ವಾಯಿಲ ಯೇಸುರತ್ನಂ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಇದನ್ನು ನೋಡಿದ ಇತರ ಕೆಲಸಗಾರರು ಆತನಿಗಾಗಿ ಹುಡುಕಾಟ ನಡೆಸಿದ್ದರೂ ಈವರೆಗೆ ಪತ್ತೆಯಾಗಿಲ್ಲ ಎಂದು ಯಲ್ಲಂಗಿರಿ ಜಾಲಯ್ಯ ದೂರಿನಲ್ಲಿ ತಿಳಿಸಿದ್ದಾರೆ.
Next Story





