ಕ್ಲಪ್ತ ಸಮಯದಲ್ಲಿ ಸಿಬ್ಬಂದಿ ಕಚೇರಿಯಲ್ಲಿ ಇರಬೇಕು, ಅವ್ಯವಹಾರದ ದೂರು ಬಂದಲ್ಲಿ ಕ್ರಮ: ಲೋಕಾಯುಕ್ತ ಅಧೀಕ್ಷಕ

ಉಳ್ಳಾಲ : ಲೋಕಾಯುಕ್ತ ಸಂವಿಧಾನದ ಎರಡನೇ ಆಕ್ಟ್ ನಡಿ ಕೆಲಸ ಮಾಡುತ್ತಿದ್ದು, ಅವ್ಯವಹಾರ, ಅನುದಾನ ದುರುಪಯೋಗ,ಕಳೆಪೆ ಕಾಮಗಾರಿ, ಮಧ್ಯವರ್ತಿಗಳ ಕಾಟ ಲೋಕಾಯುಕ್ತ ಕಾಯಿದೆ ಯಡಿ ಬರುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹೇಳಿದರು.
ಅವರು ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಇದರ ಆಶ್ರಯದಲ್ಲಿ ನಗರ ಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಅಹವಾಲು ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಲೋಕಾಯುಕ್ತ ಇಲಾಖೆ ಮಾಹಿತಿಯ ಬೋರ್ಡ್ ಇರಬೇಕು. ಕಚೇರಿಗೆ ಕ್ಲಪ್ತ ಸಮಯದಲ್ಲಿ ಸಿಬ್ಬಂದಿ ಹಾಜರಾಗಬೇಕು.ಸಿಬ್ಬಂದಿ ಯ ಹಾಜರಾತಿಯ ದಾಖಲಾತಿ, ಹಣದ ವ್ಯವಹಾರ ದಾಖಲಾತಿ ಇರಬೇಕು. ಕೆಲಸ ಮುಗಿಸಿ ಹೋಗುವಾಗ ಕಚೇರಿಯ ಲೆಕ್ಕ ಪತ್ರ ವಿಭಾಗದಲ್ಲಿ ಉಳಿದ ಹಣದ ಲೆಕ್ಕಾಚಾರವನ್ನು ಮುಖ್ಯಾಧಿಕಾರಿ ಪರಿಶೀಲಿಸಿ ವರದಿಗೆ ಸಹಿ ಹಾಕಬೇಕು. ವೈಯಕ್ತಿಕ ಚೆಕ್,ಹಣ ಪಡೆದರೆ ಪ್ರಕರಣ ದಾಖಲಾಗುತ್ತದೆ. ಡೋರ್ ನಂಬರ್ ನೀಡುವುದರಲ್ಲಿ ಹಣ ಪಡೆದು ಕೊಳ್ಳಬಾರದು. ಈ ಬಗ್ಗೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಕಾರುಬಾರು ಜಾಸ್ತಿ ಆಗುತ್ತಿದೆ.ಇದು ಅಪರಾಧ. ಬಂಟ್ವಾಳ ದಲ್ಲಿ ಒಬ್ಬ ಮಧ್ಯವರ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದರು.
ಭ್ರಷ್ಟಾಚಾರ, ಅಧಿಕಾರ, ಹಣಕಾಸು ದುರುಪಯೋಗ ಮುಂತಾದ ಕಾನೂನು ಬಾಹಿರ ಕಾರ್ಯಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಆಧರಿಸಿ ದೂರು ಕೊಡಬಹುದು. ಇಲಾಖೆಗಳಲ್ಲಿ ಲಂಚ ಕೇಳಿ ತೊಂದರೆ ಕೊಟ್ಟರೆ ದೂರು ಕೊಡಲು ಅವಕಾಶ ಇದೆ. ದ.ಕ. ಜಿಲ್ಲೆಯಿಂದ ಕೆಲವು ದೂರುಗಳು ಬಂದಿವೆ.ಕೊಡುವ ದೂರು ಸ್ಪಷ್ಟ ಆಗಿರಬೇಕು. ಸುಳ್ಳು ದೂರು ಕೊಟ್ಟರೆ ದೂರು ಕೊಟ್ಟವರ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಎಚ್ಚರಿಸಿದರು.
ಶಿಕ್ಷಣ ಇಲಾಖೆಯಲ್ಲಿ ಲಂಚದ ಹಾವಳಿ ಮಿತಿ ಮೀರಿ ಇದೆ.ಪತಿ ತೀರಿಹೋದ ಕಾರಣಕ್ಕೆ ಶಿಕ್ಷಕಿಗೆ ರಜೆ ಸಿಗಲು ಹಣ ಕೊಡಬೇಕು. ಉಡುಪಿಯಲ್ಲಿ ನಿವೃತ್ತ ಶಿಕ್ಷಕ 500 ರೂ. ಲಂಚ ಪಡೆದಿದ್ದಕ್ಕೆ ಐದು ವರ್ಷಗಳ ಶಿಕ್ಷೆ ಅನುಭವಿಸಿದ್ದು , ಅವರಿಗೆ ಈಗ ಪೆನ್ಶನ್ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಅನ್ಯಾಯ ಆದರೆ ಲೋಕಾಯುಕ್ತ ಕ್ಕೆ ದೂರು ಕೊಡಲು ಹೆದರಬೇಡಿ. ದೂರು ಕೊಟ್ಟಷ್ಟು ಒಳ್ಳೆಯದು. ಇದರಿಂದ ಬಹಳಷ್ಟು ಜನರಿಗೆ ನ್ಯಾಯ ಸಿಗುತ್ತದೆ. ಕಚೇರಿ ಸಿಬ್ಬಂದಿಗಳು ಕೆಲಸದ ಸಮಯದಲ್ಲಿ ಕೆಲಸ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಇಟ್ಟ ಫಂಡ್ ಅವರಿಗೆ ಸಿಗುವ ರೀತಿಯಲ್ಲಿ ಕೆಲಸ ಇರಬೇಕು. ಅರ್ಜಿ ಸರಿಯಿಲ್ಲ ಎಂದು ಅರ್ಜಿದಾರರನ್ನು ವಾಪಸ್ ಕಳುಹಿಸುವ ಬದಲು ಅರ್ಜಿ ಹೇಗಿರಬೇಕು , ಯಾರಿಗೆ ನೀಡಬೇಕು ಎಂಬ ಬಗ್ಗೆ ಸಮರ್ಪಕ ಮಾಹಿತಿ ಕಚೇರಿ ಸಿಬ್ಬಂದಿಗಳು ನೀಡಬೇಕು ಎಂದು ಸಲಹೆ ನೀಡಿದರು.
ಲೋಕಾಯುಕ್ತ ಕಚೇರಿಯಿಂದ ಯಾರಿಗೂ ಕೇಸ್ ಗೆ ಸಂಬಂಧಿಸಿ ಕರೆ ಬರುವುದಿಲ್ಲ. ಲೋಕಾಯುಕ್ತ ಕಚೇರಿಯ ಕರೆ ಎಂದು ಹೇಳಿ ಮೋಸ ಮಾಡುವವರು ಜಾಸ್ತಿ ಇದ್ದಾರೆ. ಲೋಕಾಯುಕ್ತ ಕಚೇರಿಯ ಕರೆಯ ಆರಂಭದ ಸಂಖ್ಯೆ 93640 ಆಗಿರುತ್ತದೆ ಕೆಲವರು ಹಣ ಮಾಡುವ ದೃಷ್ಟಿಯಿಂದ ಹೆದರಿಸಿ ಹಣ ಕೇಳುವವರು ಇದ್ದಾರೆ.ಈ ರೀತಿ ಕರೆ ಬಂದರೆ ಹೆದರಬಾರದು ಎಂದು ಮಾಹಿತಿ ನೀಡಿದರು.
ಈಗಾಗಲೇ ಲೋಕಾಯುಕ್ತ ಕ್ಕೆ ಮೆಸ್ಕಾಂ ನಿಂದ 1, ನಗರಸಭೆ ಯಿಂದ ಏಳು, ಜಲಜೀವನ್ ಮಿಷನ್,ಗ್ರಾಪಂ. ನಿಂದ ದೂರುಗಳು ಬಂದಿದ್ದು ,ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಲೋಕಾಯುಕ್ತ ಕರ್ತವ್ಯ ಅಚ್ಚುಕಟ್ಟಾಗಿ ಇರುತ್ತದೆ. ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಬೇಕು. 9/11 ನಕ್ಷೆಯಲ್ಲಿ ಕೆಲವು ಗೊಂದಲ ಇವೆ. ಈ ನಕ್ಷೆಗಳು ಪೆಂಡಿಂಗ್ ಇದ್ದರೂ,ಸಕಾಲದಲ್ಲಿ ಕ್ಲಿಯರ್ ಆಗಿರುತ್ತದೆ. ಈ ಕಾರಣದಿಂದ ಬಹಳಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ.ಕುಡಿಯುವ ನೀರು, ನಿವೇಶನ, ದಾರಿದೀಪ ಅರ್ಹರಿಗೆ ನೀಡಬೇಕು. ಕೆಲವು ಬಾರಿ ಫಲಾನುಭವಿಗಳನ್ನು ಗುರುತಿಸದೇ ಫಂಡ್ ಬಾಕಿ ಇಡುವುದು ಕಾನೂನಿಗೆ ವಿರುದ್ಧವಾಗಿದೆ. ಈ ಬಗ್ಗೆ ದೂರು ಬಂದರೆ ಕ್ರಮ ಆಗುತ್ತದೆ ಎಂದರು.
ಗ್ರಾಮಗಳಲ್ಲಿ ಸಮಸ್ಯೆ ಜಾಸ್ತಿ ಇರುತ್ತದೆ.ತೊಂದರೆ ಅನುಭವಿಸುವವರು ಜಾಸ್ತಿ ಇದ್ದಾರೆ.ಪ್ರತಿ ಗ್ರಾಮ ಗಳ ಗ್ರಾಮ ಸಭೆಯಲ್ಲಿ ಮಾತನಾಡಲು ಲೋಕಾಯುಕ್ತ ಕ್ಕೆ ಒಂದು ಗಂಟೆ ಕಾಲಾವಕಾಶ ಸಿಗಬೇಕು. ಈ ಸಮಯದಲ್ಲಿ ಗ್ರಾಮೀಣ ಜನರಿಗೆ ಎಲ್ಲಾ ಮಾಹಿತಿ ನೀಡುವ ಜೊತೆಗೆ ಅವರ ಅಹವಾಲು, ದೂರು ಸ್ವೀಕರಿಸಲು ಅವಕಾಶ ಸಿಗುತ್ತದೆ.ಪಿಡಿಒಗೆ ಗುತ್ತಿಗೆದಾರರು, ಸದಸ್ಯರು ಟೆಂಡರ್ ಗುತ್ತಿಗೆ ಕೊಡುವ ವಿಚಾರದಲ್ಲಿ ಒತ್ತಡ ಹಾಕುವಂತಿಲ್ಲ. ಒತ್ತಡ ಹಾಕಿದ ಬಗೆ ದೂರು ಬಂದರೆ ದೂರು ದಾಖಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕುಂದು ಕೊರತೆಗಳಿಗೆ ಸಂಬಂಧಿಸಿ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಯಾರಿಗೂ ಅನಗತ್ಯ ಚರ್ಚೆ ಗೆ ಅವಕಾಶ ಇಲ್ಲ. ಸಮಸ್ಯೆ ಗಳು ಇದ್ದರೆ ಡ್ರಾಪ್ಸ್ ನಲ್ಲಿ ಬರೆದು ಸಲ್ಲಿಸಬೇಕು. ಚರ್ಚೆ ಮಾಡಲು ಇದು ಚರ್ಚಾ ವೇದಿಕೆ ಅಲ್ಲ ಎಂದು ಇನ್ಸ್ಪೆಕ್ಟರ್ ಭಾರತಿ ಸಭೆಗೆ ಸಲಹೆ ನೀಡಿದರು.
ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಪೊಲೀಸ್ ಉಪ ಅಧೀಕ್ಷಕಿ ಡಾ. ಗಾನ ಪಿ.ಕುಮಾರ್, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ, ಉಳ್ಳಾಲ ತಾಲೂಕು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಉಳ್ಳಾಲ ನಗರಸಭೆಯ ಪೌರಾಯುಕ್ತ ನವೀನ್ ಹೆಗ್ಡೆ,ಕಂದಾಯ ನಿರೀಕ್ಷಕ ಪ್ರಮೋದ್, ತೆರಿಗೆ ವಿಭಾಗದ ನಿರೀಕ್ಷಕ ಚಂದ್ರ ಹಾಸ್, ತುಳಸಿ ದಾಸ್,ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ , ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು







