ಮಂಗಳೂರು | ಕೊಂಕಣಿ ಮಾನ್ಯತಾ ದಿನಾಚರಣೆ

ಮಂಗಳೂರು, ಆ.20: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮತ್ತು ಮಾಂಡ್ ಸೊಭಾಣ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಶಕ್ತಿನಗರದ ಕಲಾಂಗಣದಲ್ಲಿ ಬುಧವಾರ 34ನೇ ಕೊಂಕಣಿ ಮಾನ್ಯತಾ ದಿನಾಚರಣೆಯ ಉದ್ಘಾಟನೆ ನೆರವೇರಿತು.
ಕೊಂಕಣಿ ಬಾವುಟದೊಂದಿಗೆ ಮೆರವಣಿಗೆ ನಡೆಯಿತು. ನಂತರ ಕೊಂಕಣಿ ಬಾವುಟ ಏರಿಸಿ ಮಾತನಾಡಿದ ಮುಖ್ಯ ಅತಿಥಿ ಮಾಜಿ ಮನಪಾ ಸದಸ್ಯ ರಂಗನಾಥ ಸಿ. ಕಿಣಿ, ಮಕ್ಕಳು ಯುವಕರು ಬಹು ಸಂಖ್ಯೆಯಲ್ಲಿ ಇಲ್ಲಿ ನೆರೆದಿದ್ದು, ಕೊಂಕಣಿ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸ ನಡೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾರತದ ಮಾನ್ಯತೆ ಪಡೆದ ಅಧಿಕೃತ 22 ಭಾಷೆಗಳಲ್ಲಿ ಕೊಂಕಣಿಯೂ ಒಂದು. ನಮ್ಮ ಭಾಷೆಗೆ 1992 ಆ.20ರಂದು ದೊರೆತ ಮಾನ್ಯತೆಯನ್ನು ನಾವು ಕೊಂಕಣಿ ಮಾನ್ಯತಾ ದಿನಾಚರಣೆ ಹೆಸರಲ್ಲಿ ಸಂಭ್ರಮಿಸುತ್ತೇವೆ. ಯುವಜನರಿಗೆ ಇದೊಂದು ಸ್ಫೂರ್ತಿಯಾಗಲಿ ಎಂದವರು ಹೇಳಿದರು.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ಅಕಾಡಮಿ ಸದಸ್ಯರಾದ ನವೀನ್ ಲೋಬೊ, ರೊನಿ ಕ್ರಾಸ್ತಾ, ದಯಾನಂದ ಮಡ್ಕೇಕರ್, ಸಪ್ನಾ ಕ್ರಾಸ್ತಾ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು.
ನಂತರ ವಿವಿಧ ಸ್ಪರ್ಧೆಗಳು ನಡೆದವು. ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಗಳಲ್ಲಿ ಅವಿಭಜಿತ ಜಿಲ್ಲೆಯಿಂದ ಒಟ್ಟು 19 ತಂಡಗಳು ಭಾಗವಹಿಸಿದ್ದವು.
ಅಕಾಡಮಿಯ ಸದಸ್ಯ ಸಮರ್ಥ್ ಭಟ್ ಕಾರ್ಯಕ್ರಮ ನಿರೂಪಿಸಿದರು.







