ಅಕ್ರಮ ಮಸಾಜ್ ಸೆಂಟರ್‌ಗಳ ಹಾವಳಿ: ಕೇರಳ ಮಾದರಿ ಕಾನೂನು ಜಾರಿಗೆ ಒತ್ತಾಯ

ಮಂಗಳೂರು, ಆ. 21: ಯುನಿಸೆಕ್ಸ್ ಬ್ಯೂಟಿಪಾರ್ಲರ್, ಆಯುರ್ವೇದಿಕ್ ಸೆಂಟರ್ ಸೇರಿದಂತೆ ಕೆಲವೆಡೆ ಮಸಾಜ್ ಹೆಸರಿನಲ್ಲಿ ನಡೆಯುವ ಅನೈತಿಕ ದಂಧೆಗೆ ಕಡಿವಾಣ ಹಾಕಲು ಕೇರಳ ಮಾದರಿಯ ಕಾನೂನು ಜಾರಿಗೊಳಿಸಬೇಕು ಎಂದು ನ್ಯಾಯವಾದಿ ಮನೋರಾಜ್ ರಾಜೀವ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ, ಕಾನೂನು ಸಚಿವರು ಹಾಗೂ ವಿಪಕ್ಷ ನಾಯಕರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸುತ್ತಿದ್ದು, ಜನಪ್ರತಿನಿಧಿಗಳು ಅಧಿವೇಶ ನದಲ್ಲಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದರು.
ಯುನಿಸೆಕ್ಸ್ ಬ್ಯೂಟಿ ಪಾರ್ಲರ್‌ಗಳಲ್ಲಿ ಯುವತಿಯರಿಂದ ಯುವಕರಿಗೆ ಮಸಾಜ್ ನೆಪದಲ್ಲಿ ಅನೈತಿಕ ದಂಧೆ ನಡೆಸಲಾಗುತ್ತಿರುವ ದೂರುಗಳಿವೆ. ಆಯುರ್ವೇದಿಕ್ ಸೆಂಟರ್‌ಗಳಲ್ಲಿಯೂ ಯಾವ ರೀತಿಯಲ್ಲಿ ಮಸಾಜ್ ಮಾಡಬೇಕು, ಅನುಸರಿಸಬೇಕಾದ ನಿಯಮಗಳು, ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ ಯಾವುದೇ ಕಾನೂನು ದೇಶದ ಕೇರಳ ರಾಜ್ಯದಲ್ಲಿ ಹೊರತು ಪಡಿಸಿ ಎಲ್ಲಿಯೂ ಇಲ್ಲ. ಹಾಗಾಗಿ ಕೆಲವೊಂದು ಯುನಿಸೆಕ್ಸ್ ಬ್ಯೂಟಿಪಾರ್ಲರ್ ಗಳಲ್ಲಿ ಯುವತಿಯರಿಂದ ಯುವಕರಿಗೆ ಸೇವೆಯನ್ನು ಒದಗಿಸುವ ನೆಪದಲ್ಲಿ ಪೊಲೀಸರಿಂದ ದಾಳಿ ನಡೆಸಿ ತೊಂದರೆ ನೀಡುವ ಪ್ರಕ್ರಿಯೆಯೂ ನಡೆಯುತ್ತದೆ. ಇದರಿಂದ ಅಲ್ಲಿ ಕೆಲಸ ಮಾಡುವ ಯುವತಿಯರಿಗೆ ಮಾತ್ರವಲ್ಲದೆ, ಅಲ್ಲಿ ತಮ್ಮ ಸೌಂದರ್ಯವರ್ದನೆಗಾಗಿ ಹೋಗುವ ಯುವತಿಯರು ಹಾಗೂ ಅವರ ಕುಟುಂಬದವರ ಮೇಲೂ ಪರಿಣಾಮ ಬೀರುತ್ತದೆ. ಹೊಟ್ಟೆಪಾಡಿಗಾಗಿ ಉದ್ಯೋಗ ನಡೆಸುವ ಅಂತಹ ಸಂಸ್ಥೆಗಳವರೂ ತೊಂದರೆ ಅನುಭವಿಸಬೇಕಾ ಗುತ್ತದೆ. ಇದಕ್ಕಾಗಿ ಸೂಕ್ತ ಕಾನೂನು ರಚನೆ ಕರ್ನಾಟಕ ಸರಕಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮಸಾಜ್ ಹೆಸರಿನಲ್ಲಿ ಕೆಲವರು ನಡೆಸುವ ಅಕ್ರಮ ಚಟುವಟಿಕೆಗಳಿಗೂ ಕಾನೂನು ಜಾರಿಯಾದರೆ ಕಡಿವಾಣ ಬೀಳಲಿದೆ ಎಂದವರು ಹೇಳಿದರು.
ದ.ಕ. ಜಿಲ್ಲೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯವಿದೆ. ಆದರೆ ಅದಕ್ಕೆ ಕನಿಷ್ಟ 40 ಎಕರೆ ಜಾಗ, 300 ಕೋಟಿಯಷ್ಟು ಹಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಪರಿಮಿತಿಯೊಳಗೆ ಕೆಲವೊಂದು ರಿಟ್ ಪಿಟಿಶನ್‌ಗಳ ನ್ಯಾಯದಾನಕ್ಕೆ ಜಿಲ್ಲಾ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಿಗೆ ಹೆಚ್ಚುವರಿ ಅಧಿಕಾರ ನೀಡಿದರೆ ಸಾಕಷ್ಟು ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯದ ಮೂಲಕ ಬಗೆಹರಿಸಬಹುದಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕಾನೂನು ಸಚಿವರು, ವಿಪಕ್ಷದ ನಾಯಕರಿಗೆ ಮನವಿಯನ್ನು ಸಲ್ಲಿಸುತ್ತಿರುವುದಾಗಿ ನ್ಯಾಯವಾದಿ ಮನೋರಾಜ್ ರಾಜೀವ ಹೇಳಿದರು.
ಗೋಷ್ಟಿಯಲ್ಲಿ ಕಿರಿಯ ವಕೀಲರಾದ ನಂದಿನಿ ಅಖಿಲ್, ರೋಶನಿ ಸ್ವರಭ್, ಶಿಶಿರ್ ಭಂಡಾರಿ ಉಪಸ್ಥಿತರಿದ್ದರು.







