ಬೆಳ್ತಂಗಡಿ: ವಿವಿಧ ಸಂಘಟನೆಗಳ ಮುಖಂಡರಿಂದ ಸೌಜನ್ಯ ಪರ ಹೋರಾಟಕ್ಕೆ ಬೆಂಬಲ

ಬೆಳ್ತಂಗಡಿ; ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳು ಬೆಂಗಳೂರಿನಿಂದ ಧರ್ಮಸ್ಥಳದ ಸೌಜನ್ಯ ಮನೆಯ ವರೆಗೆ ವಾಹನಜಾಥಾ ನಡೆಸಿ ಸೌಜನ್ಯ ಮನೆಗೆ ತೆರಳಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರು ಸೌಜನ್ಯ ಪ್ರಕರಣ ಮುಗಿದ ಅಧ್ಯಾಯವಲ್ಲ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಬೇಕಾದ ಅಗತ್ಯವಿದೆ. ಇದಕ್ಕಾಗಿ ರಾಜ್ಯ ಹಾಗು ಕೇಂದ್ರ ಸರಕಾರಗಳನ್ನು ಒತ್ತಾಯಿಸಲು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸರಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ ಅವರು ಸರಕಾರ ಸೂಕ್ತವಾದ ತನಿಖೆಗೆ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾವನ್ನು ಬೆಂಗಳೂರಿನಲ್ಲಿ ಹಾಗೂ ರಾಜ್ಯದಾದ್ಯಂತ ಹಮ್ಮಿಕೊಳ್ಳುವಯದಾಗಿ ಅವರು ತಿಳಿಸಿದರು.
ಹೋರಾಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ನ್ಯಾಯವಾದಿ ಹರಿರಾಂ, ನಟರಾಜ್, ಗುರುಮೂರ್ತಿ, ಕೇಶವ ಮೂರ್ತಿ, ದೇವರಾಜ್, ಚಂದ್ರು, ಜಯಂತಿಗೌಡ, ಚೆನ್ನಕೇಶವ, ಜಾನಕಿ, ಸವಿತ ಹಾಗು ಇತರರು ವಹಿಸಿದ್ದರು. ತಮ್ಮ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.







